ಟಿಪ್ಪು ಜನ್ಮದಿನ ವಿರೋಧಿಸಿ ನ.10ರಂದು ಕೊಡಗು-ಚಿತ್ರದುರ್ಗ ಬಂದ್ ಕರೆದ ಬಿಜೆಪಿ, ಮದ್ಯದ ವಿಷಯದಲ್ಲಿ ಸಿದ್ದರಾಮಯ್ಯನವರ ದ್ವಂದ್ವ ನೀತಿ, ಇಂಗ್ಲೆಂಡ್ ಪ್ರಧಾನಿ ಬಳಿ ಸಿಎಂ ಮನವಿ ಏನು?, ಟೆಸ್ಟ್ ಪಂದ್ಯಕ್ಕೆ ಹಣ ನೀಡಲು ಸುಪ್ರೀಂ ಸಮ್ಮತಿ

Former, Chief Minister, B.S.Yediyurappa with others stage protest against Tippu Jayanthi Celebrations at Maurya Circle in Bengaluru on Tuesday.

ನವೆಂಬರ್ 10 ರಂದು ಟಿಪ್ಪು ಸುಲ್ತಾನ್ ಜನ್ಮದಿನ ಆಚರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಂಗಳವಾರ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು.

ಡಿಜಿಟಲ್ ಕನ್ನಡ ಟೀಮ್:

ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಭಾರತೀಯ ಜನತಾ ಪಕ್ಷ ಮಂಗಳವಾರ ಬೀದಿಗಿಳಿದಿತ್ತು. ‘ಟಿಪ್ಪು ಜಯಂತಿ ಆಚರಣೆ ದಿನವೇ ಕೊಡಗು- ಚಿತ್ರದುರ್ಗ ಬಂದ್ ಕರೆ ನೀಡಲಾಗಿದೆ. ಅಂದು ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸಿಎಂ ಸಿದ್ದರಾಮಯ್ಯನವರೆ ಕಾರಣ’ ಎಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ.

ಟಿಪ್ಪು ಜನ್ಮದಿನ ಆಚರಣೆ ವಿರೋಧಿಸಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಭಾಗಿಯಾಗಿದ್ದು, ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸುತ್ತೇವೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಕೋಮು ಸೌಹಾರ್ದ ಕದಡುತ್ತಿರುವ ಕೆಎಫ್ ಡಿ ಮತ್ತು ಪಿಎಫಐ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ’ ಎಂದರು. ಈ ವೇಳೆ ಮಾತನಾಡಿದ ಯಡಿಯೂರಪ್ಪನವರು ಹೇಳಿದಿಷ್ಟು…

‘ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನವೆಂಬರ್ 10ರಂದು ಧ್ವಜ ಸತ್ಯಾಗ್ರಹ ಮತ್ತು ಜೈಲ್ ಭರೋ ಚಳವಳಿ ಮೂಲಕ ಪ್ರತಿಭಟನೆ ಮಾಡುತ್ತೇವೆ. ಅಲ್ಲದೆ ಅಂದು ಕೊಡಗು-ಚಿತ್ರದುರ್ಗ ಬಂದ್ ಕರೆ ನೀಡಿದ್ದೇವೆ. ಅಂದು ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಹೊಣೆ. ಸಂಶೋಧಕ ಚಿದಾನಂದ ಮೂರ್ತಿ, ಚಂದ್ರಶೇಖರ ಕಂಬಾರರು ಸಹ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುತ್ತಿದ್ದು, ಬೀದರ್, ಪಿರಿಯಾಪಟ್ಟಣದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಗಳ ಬಗ್ಗೆ ವಿವರಣೆ ನೀಡುತ್ತೇನೆ.’

900 ಮದ್ಯದಂಗಡಿಗೆ ಪರವಾನಿಗೆ ನೀಡಿ, ಈಗ ಕುಡಿಬೇಡ್ರಿ ಎನ್ನುತ್ತಿದ್ದಾರೆ ಸಿಎಂ

‘ನೀವು ದುಡಿದ ಹಣವನ್ನು ಕುಡಿದು ಹಾಳು ಮಾಡಬೇಡಿ. ಹಣವನ್ನು ಉಳಿಸಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ವೈದ್ಯರು, ಇಂಜಿನಿಯರ್ ಮತ್ತು ರಾಜಕಾರಣದಲ್ಲಿ ದುಡಿಯುವಂತೆ ಮಾರ್ಗದರ್ಶನ ನೀಡಿ…’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡುವ ಯೋಜನೆಗೆ ಚಾಲನೆ ನೀಡುತ್ತಾ ಹೇಳಿದ ಕಿವಿಮಾತು. ಈ ಕಿವಿ ಮಾತು ಹೇಳುವ ಮುನ್ನ ಇತ್ತೀಚೆಗೆ ತಮ್ಮ ಸರ್ಕಾರ ಎಂಎಸ್ಐಎಲ್ ಮೂಲಕ ರಾಜ್ಯದಲ್ಲಿ 900 ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದನ್ನು ಮುಖ್ಯಮಂತ್ರಿಗಳು ಮರೆತುಬಿಟ್ಟಿದ್ದರು. ಇದರ ಜತೆಗೆ ಒಂದೆಡೆ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಿ, ಇತ್ತ ಜನರಿಗೆ ಕಿವಿ ಮಾತು ಹೇಳುವ ಮೂಲಕ ಸಿಎಂ ದ್ವಂದ್ವ ನೀತಿ ಅನುಸರಿಸಿದ್ದಾರಾ ಎಂಬ ಅನುಮಾನ ಹುಟ್ಟುಕೊಂಡಿದೆ.

ಇದೇ ಸಂದರ್ಭದಲ್ಲಿ ‘ಮುಂದಿನ ವರ್ಷ ಮಾರ್ಚ್ ತಿಂಗಳ ಒಳಗಾಗಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲಾಗುವುದು’ ಎಂಬ ಭರವಸೆಯನ್ನು ನೀಡಿದರು ಸಿಎಂ. ಇವರ ಸೇವೆ ಖಾಯಂಗೊಳ್ಳುವುದರಿಂದ ವೇತನ ಹೆಚ್ಚಳವಾಗುವುದಲ್ಲದೆ, ಸರ್ಕಾರಿ ಸೌಲಭ್ಯಗಳು ಸಿಗಲಿವೆ.

ಇಂಗ್ಲೆಂಡ್ ಪ್ರಧಾನಿ ಜತೆ ಸಿಎಂ ಭೇಟಿ

ಸದ್ಯ ಭಾರತದ ಪ್ರವಾಸದಲ್ಲಿರುವ ಇಂಗ್ಲೆಂಡ್ ಪ್ರಧಾನಿ ಥೆರೆಸ್ಸಾ ಮೇ ಅವರು ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಬಂಡವಾಳ ಹೂಡಿಕೆ ವಿಚಾರವಾಗಿ ಅವರಲ್ಲಿ ಮನವಿ ಮಾಡಿಕೊಂಡ್ರು. ಬಂಡವಾಳ ಹೂಡಿಕೆಗೆ ಕರ್ನಾಟಕ ದೇಶದಲ್ಲೇ ಅತ್ಯಂತ ಪ್ರಶಸ್ತ ರಾಜ್ಯ. ಹೀಗಾಗಿ ಐಟಿ, ಬಿಟಿ, ವಿಮಾನಯಾನ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಆಹ್ವಾನ ಕೊಟ್ಟರು. ಈ ಬಗ್ಗೆ ಮಾತನಾಡಿದ ಸಿಎಂ, ‘ಭಾರತದಲ್ಲಿ ಹೂಡಿಕೆಯಾದ ವಿದೇಶಿ ಬಂಡವಾಳದ ಪೈಕಿ ಶೇ.15 ರಷ್ಟು ಇಂಗ್ಲೆಂಡ್ ನದ್ದಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಇಂಗ್ಲೆಂಡಿನ ಹಲವು ಕಂಪನಿಗಳು ಬಂಡವಾಳ ಹೂಡಿವೆ’ ಎಂದರು. ಜತೆಗೆ ತಮ್ಮ ನೂತನ ವಿಸಾ ನೀತಿಯನ್ನು ಪರಿಶೀಲಿಸಬೇಕು ಎಂದು ಮೇ ಅವರಲ್ಲಿ ಮನವಿ ಮಾಡಿಕೊಂಡರು.

ಮೊದಲ ಟೆಸ್ಟ್ ಪಂದ್ಯಕ್ಕೆ ₹ 58.66 ka’f ಹಣ ಬಿಡುಗಡೆ ಮಾಡುವಂತೆ ಸುಪ್ರೀಂ ಸೂಚನೆ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಆಯೋಜನೆಗಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಗೆ ₹ 58.66 ಕೋಟಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಅನುಮತಿ ನೀಡಿದೆ. ಲೋಧಾ ಸಮಿತಿ ಶಿಫಾರಸ್ಸು ಅಳವಡಿಸಿಕೊಳ್ಳುವವರೆಗೂ ಯಾವುದೇ ಕಾರಣಕ್ಕೆ ರಾಜ್ಯ ಸಂಸ್ಥೆಗಳಿಗೆ ನಯಾ ಪೈಸೆ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಲಾಗಿತ್ತು. ಅಲ್ಲದೆ ಬಿಸಿಸಿಐ ಆರ್ಥಿಕ ವ್ಯವಹಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯುವುದು ಅನುಮಾನವಾಗಿತ್ತು. ಈಗ ಸುಪ್ರೀಂ ಕೋರ್ಟ್ ಹಣ ಬಿಡುಗಡೆ ಮಾಡಲು ಅನುಮತಿ ನೀಡಿರುವುದರಿಂದ ಟೆಸ್ಟ್ ಪಂದ್ಯಕ್ಕೆ ಇದ್ದ ಅಡ್ಡಿ ಆತಂಕ ದೂರವಾಗಿದೆ.

Kanakadasa Jayanthi

ಬೆಂಗಳೂರಿನಲ್ಲಿ ಕನಕದಾಸ ಜಯಂತಿಯಲ್ಲಿ ಭಾಗವಹಿಸಿದ್ದ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಪದ್ಮಾವತಿ ಅವರು ಕನಕದಾಸರ ಪ್ರತಿಮೆಗೆ ಹೂವಿನ ಹಾರಹಾಕಿ ಗೌರವ ಸೂಚಿಸಿದ್ದು ಹೀಗೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಡಿಕ್ಸ್ ವಿಲ್ಲೆ, ನ್ಯೂ ಹ್ಯಾಂಪ್ ಶೈರ್ ಪಟ್ಟಣಗಳಲ್ಲಿ ನಡೆದ ಚುನಾವಣೆಯಲ್ಲಿ ಹಿಲರಿ 4-2 ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿದ್ದಾರೆ.
  • ದೆಹಲಿಯ ಯುವ ಬ್ಯಾಟ್ಸ್ ಮನ್ ರಿಶಬ್ ಪಂತ್ ದೇಶಿ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾನೆ. ಪ್ರತಿಷ್ಠಿತ ರಣಜಿ ಟೂರ್ನಿಯಲ್ಲಿ ಜಾರ್ಖಂಡ್ ವಿರುದ್ಧ ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ್ದು, ಆ ಮೂಲಕ ಭಾರತದ ದೇಶಿಯ ಕ್ರಿಕೆಟ್ ಪಂದ್ಯದಲ್ಲಿ ವೇಗದ ಶತಕ ಬಾರಿಸಿದ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
  • ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ಸಮಸ್ಯೆ ಬಗೆಹರಿಸಲು ಎರಡು ದಿನಗಳಲ್ಲಿ ಉತ್ತಮ ಕಾರ್ಯಯೋಜನೆಯನ್ನು ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಮಧ್ಯೆ ಹೆಲಿಕಾಪ್ಟರ್ ಗಳ ಮೂಲಕ ಕೃತಕ ಮಳೆಯನ್ನು ಸುರಿಸಿ ಇದರ ಪ್ರಮಾಣ ತಗ್ಗಿಸಿ ಹಾಗೂ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಏಳು ದಿನಗಳ ಕಾಲ ನಿಲ್ಲಿಸಿ ಎಂದು ರಾಷ್ಟ್ರೀಯ ಹಸಿರು ನ್ಯಾಯಾಲಯ ದೆಹಲಿ, ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಸೂಚನೆ ನೀಡಿದೆ.

Leave a Reply