ಪತ್ತೆಯಾಯ್ತು ನಟ ಉದಯ್ ಮೃತದೇಹ, ದುನಿಯಾ ವಿಜಿ ಸೇರಿ ನಾಲ್ವರಿಗೆ ತಾತ್ಕಾಲಿಕ ನಿಷೇಧ, ಟಿಪ್ಪು ಜಯಂತಿ ಶಾಂತಿ ರಕ್ಷಣೆ ಹೊಣೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ರಿಯಲ್ ಎಸ್ಟೇಟ್ ಷೇರು ಕುಸಿತ

ಡಿಜಿಟಲ್ ಕನ್ನಡ ಟೀಮ್:

ಪತ್ತೆಯಾಯ್ತು ಉದಯ್ ದೇಹ

ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ವೇಳೆ ಹೆಲಿಕಾಪ್ಟರ್ ನಿಂದ ನೀರಿಗೆ ಹಾರಿ ಪ್ರಾಣ ಕಳೆದುಕೊಂಡ ಇಬ್ಬರು ಖಳನಟರ ಪೈಕಿ ರಾಘವ್ ಉದಯ್ ಅವರ ದೇಹ ಪತ್ತೆಯಾಗಿದೆ. ಘಟನೆ ಸಂಭವಿಸಿ 48 ಗಂಟೆಗಳ ನಂತರ ಉದಯ್ ಮೃತದೇಹ ಸಿಕ್ಕಿದ್ದು, ಜಲಾಶಯದ ಪಕ್ಕದಲ್ಲೇ ಪೆಂಡಾಲ್ ಹಾಕಿ ಅವರ ಶವಪರೀಕ್ಷೆ ನಡೆಸಲಾಗಿದೆ.

ಈ ಇಬ್ಬರು ನೀರಿಗೆ ಬಿದ್ದ ಜಾಗದ ಸಮೀಪದಲ್ಲೇ ಉದಯ್ ದೇಹ ಸಿಕ್ಕಿದೆ. ಬುಧವಾರ ಮಧ್ಯಾಹ್ನ ವೇಳೆಗೆ ಉದಯ್ ದೇಹ ಮೇಲಕ್ಕೆ ತೇಲಿ ಬಂತು. ಅದನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ದೇಹವನ್ನು ದಡಕ್ಕೆ ತಂದರು. ಎರಡು ದಿನಗಳ ಕಾಲ ನೀರಿನಲ್ಲಿದ್ದ ಪರಿಣಾಮ ದೇಹ ಸ್ವಲ್ಪ ಕೊಳೆತ ಸ್ಥಿತಿಯಲ್ಲಿತ್ತು. ಹೀಗಾಗಿ ಅದು ಯಾರದು ಎಂದು ಪತ್ತೆ ಮಾಡಲು ಕೆಲ ಕಾಲ ಹಿಡಿಯಿತು. ನಂತರ ಸ್ನೇಹಿತರು ಮತ್ತು ದುನಿಯಾ ವಿಜಿ ಅದು ಉದಯ್ ದೇಹ ಎಂದು ಖಚಿತಪಡಿಸಿದರು. ಮರಣೋತ್ತರ ಪರೀಕ್ಷೆ ನಂತರ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಉದಯ್ ದೇಹ ಪತ್ತೆಯಾಗುತ್ತಿದ್ದಂತೆ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ನಟ ಅನಿಲ್ ದೇಹಕ್ಕಾಗಿ ಶೋಧ ಮುಂದುವರಿದಿದೆ.

ಮಾಸ್ತಿಗುಡಿ ಚಿತ್ರ ತಂಡದ ಪ್ರಮುಖರಿಗೆ ವಾಣಿಜ್ಯ ಮಂಡಳಿಯಿಂದ ತಾತ್ಕಾಲಿಕ ನಿಷೇಧ

ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ನಡೆಯಿಂದಾಗಿ ಇಬ್ಬರು ಉದಯೋನ್ಮುಖ ಖಳನಟರ ಪ್ರಾಣ ಬಲಿ ಪಡೆದ ಮಾಸ್ತಿಗುಡಿ ಚಿತ್ರತಂಡದ ಪ್ರಮುಖ ನಾಲ್ವರ ಮೇಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಾತ್ಕಾಲಿಕ ನಿಷೇಧ ಹೇರಿದೆ. ಬುಧವಾರ ಸಭೆ ನಡೆಸಿದ ನಂತರ ಮಾತನಾಡಿದ ಸಾ.ರಾ ಗೋವಿಂದು ಅವರು, ‘ಸದ್ಯಕ್ಕೆ ಚಿತ್ರದ ನಿರ್ಮಾಪಕ ಸುಂದರ್ ಗೌಡ, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮಾ ಮತ್ತು ನಾಯಕ ದುನಿಯಾ ವಿಜಯ್ ಅವರಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಅನಿಲ್ ದೇಹದ ಶೋಧ ಕಾರ್ಯ ನಡೆಯುತ್ತಿದ್ದು, ಅದು ಪತ್ತೆಯಾದ ನಂತರ ಈ ನಾಲ್ವರೊಂದಿಗೆ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದುನಿಯಾ ವಿಜಯ್, ‘ವಾಣಿಜ್ಯ ಮಂಡಳಿ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ’ ಎಂದು ಹೇಳಿದ್ದಾರೆ.

ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು…

ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಈ ಬಗ್ಗೆ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ ಜಯಚಂದ್ರ ನೀಡಿರುವ ಮಾಹಿತಿ ಹೀಗಿವೆ:

–      ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಎತ್ತಿನ ಹೊಳೆ ಯೋಜನೆ ಜಾರಿಗೆ ಅಗತ್ಯವಿರುವ 255 ಹೆಕ್ಟೇರ್ ಜಮೀನು ಖರೀದಿ ಸಂಬಂಧ ರೈತರ ಜತೆ ಮಾತುಕತೆ ನಡೆಸಿ, ಅವರಿಂದ ಖರೀದಿಸುವ ಭೂಮಿಗೆ ಮಾರುಕಟ್ಟೆ ಬೆಲೆ ನೀಡಲು ನಿರ್ಧರಿಸಲಾಗಿದೆ.

–      ಬಸವ ವಸತಿ ಯೋಜನೆಯಡಿ ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ಕಟ್ಟಲು ತೀರ್ಮಾನಿಸಲಾಗಿತ್ತು. ಆ ಪೈಕಿ 9,61,863 ಮನೆಗಳನ್ನು ನಿರ್ಮಿಸಲಾಗಿದೆ. ಉಳಿದ ಮನೆಗಳನ್ನು ಶಾಸಕರ ಅಧ್ಯಕ್ಷತೆಯ ವಿಜಿಲೆನ್ಸ್ ಕಮಿಟಿಗಳ ನಿಗಾದಲ್ಲಿ ತ್ವರಿತ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ.

–      ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗುವ ಹಿನ್ನೆಲೆಯಲ್ಲಿ ಬಗಾಸ್ ಬಳಕೆಯ ಮೂಲಕ ವಿದ್ಯುತ್ ಉತ್ಪಾದಿಸುವ 28 ಸಕ್ಕರೆ ಕಾರ್ಖಾನೆಗಳಿಂದ ಮುಂದಿನ ಐದು ವರ್ಷಗಳ ಕಾಲ 501 ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ನಿರ್ಧಾರ. ಆರಂಭದಲ್ಲಿ ಸಕ್ಕರೆ ಕಾರ್ಖಾನೆಗಳು 10 ವರ್ಷ ಖರೀದಿಸಬೇಕೆಂಬ ಷರತ್ತು ಹಾಕಿದ್ದವಾದರೂ, ಈಗ ಐದು ವರ್ಷಗಳಿಗೆ ಇಳಿಸಿವೆ.

–      ಅರಣ್ಯ ಇಲಾಖೆಯಲ್ಲಿ ಇನ್ನು ಮುಂದೆ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲು ನಿರ್ಧರಿಸಿದೆ.

–      ಕಾವೇರಿ ಹೋರಾಟ ಸಂದರ್ಭ ಹಲವರ ಮೇಲೆ ದಾಖಲಿಸಲಾಗಿದ್ದ 91 ಮೊಕದ್ದಮೆಗಳನ್ನು ಹಿಂಪಡೆಯಲು ಸಂಪುಟ ಒಪ್ಪಿಗೆ ನೀಡಿದೆ.

–      ವೀರಯೋಧ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಅವರಿಗೆ ಧಾರವಾಡ ಜಿಲ್ಲೆ ಕುಂದಗೋಳದ ಮತಿಘಟ್ಟ ಗ್ರಾಮದಲ್ಲಿ 4 ಎಕರೆ ಭೂಮಿ ನೀಡಲು ತೀರ್ಮಾನ.

–      ರಾಜ್ಯದ 48 ಕಾಲೇಜುಗಳಲ್ಲಿ ಎಕ್ಸ್ ರೇ, ವೈದ್ಯ ವರದಿ ತಂತ್ರಜ್ಞರು, ಡಿಪ್ಲೋಮಾ ಇನ್ ಮೆಡಿಕಲ್ ಸೇರಿದಂತೆ ವಿವಿಧ ಪ್ಯಾರಾ ಮೆಡಿಕಲ್ ಕಾಲೇಜುಗಳ ಪ್ರಾರಂಭಕ್ಕೆ ಒಪ್ಪಿಗೆ.

ಟಿಪ್ಪು ಜಯಂತಿ: ಶಾಂತಿ ವ್ಯವಸ್ಥೆ ಕಾಪಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ

ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಈ ಆಚರಣೆ ವೇಳೆ ರಾಜ್ಯದ ಯಾವುದೇ ಭಾಗದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಸಣ್ಣ ಅಹಿತಕರ ಘಟನೆ ಸಂಭವಿಸಿದರೂ ವಿರೋಧ ಪಕ್ಷ ಬಿಜೆಪಿ ಅದನ್ನು ದೊಡ್ಡದು ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. 2018ರಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಈಗಿನಿಂದಲೇ ಕೋಮು ಭಾವನೆ ಕೆರಳಿಸಿ ಮತ ಗಟ್ಟಿ ಮಾಡಿಕೊಳ್ಳಲು ಹೊರಟಿದೆ. ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಲಾಗಿದೆ.

ಶೇ.10- 20 ರಷ್ಟು ಕುಸಿತ ಕಂಡ ರಿಯಲ್ ಎಸ್ಟೇಟ್ ಷೇರು

ಕಪ್ಪು ಹಣ, ಕಾಳಧನ ನಾಶ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿದ ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮದ ಮೇಲಾಗಿದೆ. ಕೇಂದ್ರ ಸರ್ಕಾರ ನಿರ್ಧಾರದ ಮರುದಿನವೇ ರಿಯಲ್ ಎಸ್ಟೇಟ್ ಉದ್ಯಮದ ಷೇರಿನ ಮೌಲ್ಯ ಶೇ.10 ರಿಂದ 20 ರಷ್ಟು ಕುಸಿತ ಕಂಡಿದೆ. ಡಿಎಲ್ಎಫ್, ಯುನಿಟೆಕ್, ಗೊಡ್ರೆಜ್ ಪ್ರಾಪರ್ಟೀಸ್, ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್, ಶೋಭಾ, ಒಬೆರಾಯ್, ಎಚ್.ಡಿ.ಐ.ಎಲ್ ಮತ್ತು ಯುನಿಟೆಕ್ ಕಂಪನಿಗಳು ಈ ನಷ್ಟ ಅನುಭವಿಸಿವೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ‘ಸರ್ಕಾರದ ಈ ನಿರ್ಧಾರ ಪ್ರಕಟವಾದ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರುಗಳನ್ನು ಮಾರಲು ಮುಂದಾಗಿದ್ದಾರೆ. ಹೀಗಾಗಿ ಷೇರು ಮೌಲ್ಯ ಕುಸಿತ ಕಂಡಿದೆ’ಎಂದು ನೈಟ್ ಫ್ರಾಂಕ್ ಪ್ರೈ.ಲಿ ನ ಮುಖ್ಯ ಆರ್ಥಿಕ ತಜ್ಞ ಸಮಂತಕ್ ದಾಸ್ ಮಾಹಿತಿ ನೀಡಿದ್ದಾರೆ.

ಇನ್ನುಳಿದಂತೆ ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

–      500 ಮತ್ತು 1000 ರು. ನೋಟುಗಳನ್ನು ರದ್ದು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ನಾಯಕರು ವಿರೋಧಿಸಿದ್ದಾರೆ. ‘ಸರ್ಕಾರದ ಈ ನಿರ್ಧಾರದಿಂದ ಬಡ ಮತ್ತು ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಅಲ್ಲದೆ ಸರ್ಕಾರ 1000 ರುಪಾಯಿ ನೋಟು ಬದಲು 2000 ಸಾವಿರ ರುಪಾಯಿ ನೋಟು ಜಾರಿಗೆ ತರುತ್ತಿದೆ. ಇದರಿಂದ ಕಪ್ಪು ಹಣ ಹೇಗೆ ತಡೆಯಲಾಗುತ್ತದೆ ಎಂದು ಅರ್ಥವಾಗುತ್ತಿಲ್ಲ. ಈ ನಿರ್ಧಾರದಿಂದ ಪ್ರಧಾನಿ ಮೋದಿಯವರು ಸಾಮಾನ್ಯ ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂಬುದು ಮತ್ತೆ ಸಾಬೀತಾಗಿದೆ’ ಎಂದು ಟೀಕೆ ಮಾಡಿದ್ದಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.

–      ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದೆ. ಬುಧವಾರ ರಾಜ್ಕೋಟ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿ ಪಂದ್ಯದಲ್ಲಿ ಶುಭಾರಂಭ ಮಾಡಿದೆ. ಇಂಗ್ಲೆಂಡ್ ತಂಡದ ಪರ ಆಕರ್ಷಕ ಬ್ಯಾಟಿಂಗ್ ನಡೆಸಿದ ಜೋ ರೂಟ್ 124 ರನ್ ಗಳಿಸಿ ಔಟಾದರೆ, ಮೊಯೀನ್ ಅಲಿ ಅಜೇಯ 99 ರನ್ ದಾಖಲಿಸಿದ್ದಾರೆ. ಭಾರತದ ಪರ ಅಶ್ವಿನ್ 2, ಉಮೇಶ್ ಯಾದವ್ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು.

Leave a Reply