ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಮುಂದಿರುವ ಸವಾಲುಗಳೇನು?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭರ್ಜರಿ ಜಯ ಸಾಧಿಸಿದ್ದಾರೆ. ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಮಂಗಳವಾರ ಸಂಜೆ 4-2ರ ಹಿನ್ನಡೆಯಲ್ಲಿದ್ದ ಟ್ರಂಪ್, ಕ್ರಮೇಣ ಚೇತರಿಸಿಕೊಂಡು ಅಧ್ಯಕ್ಷ ಪಟ್ಟದತ್ತ ಸಾಗಿದರು. ಅತ್ಯುತ್ತಮ ಪ್ರಚಾರದ ಮೂಲಕ ಕ್ಲಿಂಟನ್ ನಿರೀಕ್ಷೆಯಂತೆ ವರ್ಜೇನಿಯಾ, ಕೊಲೊರಾಡೊ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಗೆಲವು ಸಾಧಿಸಿದ್ದರು. ಆದರೆ, ಅಧ್ಯಕ್ಷರ ಆಯ್ಕೆಯಲ್ಲಿ ಮಹತ್ವದ ಪಾತ್ರ ಹೊಂದಿದ್ದ ಫ್ಲೋರಿಡಾ, ಒಹಿಯೊ ಮತ್ತು ಉತ್ತರ ಕ್ಯಾರೊಲಿನ್ ನಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಜಯ ಸಾಧಿಸಿದರು. ಆ ಮೂಲಕ 538 ಸ್ಥಾನಗಳ ಪೈಕಿ 289 ಸ್ಥಾನಗಳನ್ನು ಗೆದ್ದುಕೊಂಡ ಟ್ರಂಪ್ ಅಮೆರಿಕದ ಅಧ್ಯಕ್ಷ ಗದ್ದುಗೆ ಅಲಂಕರಿಸಿದ್ದಾರೆ. ಟ್ರಂಪ್ ಮುಂದಿನ ವರ್ಷ ಜನವರಿ 20ರಂದು ಅಧಿಕೃತವಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ. 218 ಸ್ಥಾನಗಳೊಂದಿಗೆ ಹಿಲರಿ ನಿರಾಸೆ ಅನುಭವಿಸಿದ್ದಾರೆ.

ಈ ಚುನಾವಣೆಯಲ್ಲಿ ಮತ್ತೊಂದು ಗಮನಾರ್ಹ ಅಂಶ ಏನಂದ್ರೆ, ಮೊದಲ ಬಾರಿಗೆ ಇಂಡೊ- ಅಮೆರಿಕನ್ ಪ್ರಜೆ ಅಮೆರಿಕ ಸಂಸತ್ತನ್ನು ಪ್ರವೇಶಿಸಿರುವುದು. ಕಮಲ ಹ್ಯಾರಿಸ್ ಈ ಐತಿಹಾಸಿಕ ಸಾಧನೆ ಮಾಡಿದ ಇಂಡೊ- ಅಮೆರಿಕನ್ ಆಗಿದ್ದಾರೆ.

ಟ್ರಂಪ್ ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಈ ಪೈಕಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಚಟುವಟಿಕೆ ಪ್ರಮುಖವಾಗಿದೆ. ಸದ್ಯಕ್ಕೆ ಕುಸಿತ ಕಂಡಿರುವ ಷೇರು ಮಾರುಕಟ್ಟೆ ಜತೆಗೆ ಚಿನ್ನದ ಮೌಲ್ಯವೂ ಕಳೆದ 6 ವಾರಗಳಿಗಿಂತ ಮತ್ತಷ್ಟು ಕೆಳಮುಖವಾಗಿ ಸಾಗಿದೆ. ಇನ್ನು ಟ್ರಂಪ್ ಆಯ್ಕೆಯಾದ್ರೆ ಏಷ್ಯಾದ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅದರಂತೆಯೇ ಶಾಂಘೈ ಹಾಗೂ ಇತರೆ ಪ್ರಮುಖ ಷೇರು ಮಾರುಕಟ್ಟೆಗಳಲ್ಲೂ ಚಟುವಟಿಕೆ ಇಳಿಮುಖ ಕಾಣುತ್ತಿವೆ. ಇದು ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಕುತೂಹಲ ಕಾಯ್ದುಕೊಂಡಿದೆ.

ತಮ್ಮ ಚುನಾವಣಾ ಪ್ರಚಾರದ ವೇಳೆ ‘ಭಾರತೀಯರು ಮತ್ತು ಚೀನಾದವರು ಕಿತ್ತುಕೊಂಡಿದ್ದ ಉದ್ಯೋಗ ಅವಕಾಶವನ್ನು ಮತ್ತೆ ಅಮೆರಿಕನ್ನರಿಗೆ ದೊರಕಿಸಿಕೊಡುತ್ತೇನೆ’ ಎಂದು ಟ್ರಂಪ್ ಭರವಸೆ ನೀಡಿದ್ದರು. ಅದನ್ನು ಎಷ್ಟರ ಮಟ್ಟಿಗೆ ಈಡೇರಿಸಲಿದ್ದಾರೆ ಹಾಗೂ ಸಿರಿಯಾದಿಂದ ಬರುತ್ತಿರುವ ಅಕ್ರಮ ವಲಸಿಗರ ಸಮಸ್ಯೆಯನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದು ಸಹ ಕುತೂಹಲಕ್ಕೆ ಕಾರಣವಾಗಿದೆ.

ಈ ಎಲ್ಲದರ ನಡುವೆ ಟ್ರಂಪ್ ಆಯ್ಕೆಯಿಂದ ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ಹೇಗಿರಲಿದೆ ಎಂಬ ಪ್ರಶ್ನೆ ಮೂಡಿದೆ. ತಜ್ಞರ ಪ್ರಕಾರ ಟ್ರಂಪ್ ಆಯ್ಕೆಯಿಂದ ಭಾರತೀಯ ಐಟಿ ಕ್ಷೇತ್ರದ ಮೇಲೆ ಪರಿಣಾಮ ಆಗುವ ಸಾಧ್ಯತೆ ಇದೆ. ಇದನ್ನು ಹೊರತು ಪಡಿಸಿದರೆ, ಭಾರತ ಮತ್ತು ಅಮೆರಿಕ ಜತೆಗಿನ ಮಿಲಿಟರಿ ಹಾಗೂ ವ್ಯಾಪಾರ ಒಪ್ಪಂದಗಳು ಉತ್ತಮವಾಗಿ ಸಾಗುವ ನಿರೀಕ್ಷೆ ಇದೆ. ಭಾರತದ ಜತೆಗಿನ ಸಂಬಂಧ ಅಮೆರಿಕಕ್ಕೆ ಮಹತ್ವದ್ದಾಗಿದೆ ಎಂಬುದು ಗೊತ್ತಿದ್ದರೂ ಭವಿಷ್ಯದಲ್ಲಿ ಇದನ್ನು ಟ್ರಂಪ್ ಯಾವ ರೀತಿ ತೆಗೆದುಕೊಂಡು ಹೋಗಲಿದ್ದಾರೆ ಎಂಬುದು ಕೌತುಕಕ್ಕೆ ಕಾರಣವಾಗಿದೆ.

ಇನ್ನು ಅಂತಾರಾಷ್ಟ್ರೀಯ ಸಂಬಂಧದಲ್ಲಿ ಟ್ರಂಪ್ ಜಯ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ನೋಡುವುದಾದರೆ, ಜಾಗತಿಕ ಮಟ್ಟದಲ್ಲಿ ಅಮೆರಿಕಕ್ಕೆ ಪ್ರಬಲ ಪ್ರತಿಸ್ಪರ್ಧಿಗಳಾಗಿರುವ ರಷ್ಯಾ ಮತ್ತು ಚೀನಾ ಟ್ರಂಪ್ ಜಯದಿಂದ ತೃಪ್ತವಾಗಿವೆ. ಟ್ರಂಪ್ ಪ್ರತಿಪಾದಿಸಿರುವ ವಿದೇಶಾಂಗ ನೀತಿ ಹಾಗೂ ಧೋರಣೆ ಈ ಎರಡು ದೇಶಗಳಿಗೆ ಒಂದಷ್ಟು ಒತ್ತಾಸೆಯಾಗಿವೆ. ಹೀಗಾಗಿ ಈ ಎರಡೂ ದೇಶಗಳು ಟ್ರಂಪ್ ಜಯಕ್ಕೆ ಕಾತುರವಾಗಿದ್ದವು. ಅದರಲ್ಲೂ ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಟ್ರಂಪ್ ನಿಲುವು ಚೀನಾ ಮೆಚ್ಚುಗೆಗೆ ಪಾತ್ರವಾಗಿದೆ.

‘ಮೂರನೇ ಜಾಗತಿಕ ಯುದ್ಧ ಬೇಡ ಎನ್ನುವುದು ನಿಮ್ಮ ನಿರೀಕ್ಷೆಯಾಗಿದ್ದರೆ, ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ’ ಎಂದು ರಷ್ಯಾ ಕಳೆದ ತಿಂಗಳು ಅಮೆರಿಕನ್ನರಿಗೆ ಹೇಳಿತ್ತು. ಆ ಮೂಲಕ ಪರೋಕ್ಷವಾಗಿ ಹಿಲರಿ ಕ್ಲಿಂಟನ್ ಬದಲು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಲಿ ಎಂಬ ಬಯಕ್ಕೆ ವ್ಯಕ್ತಪಡಿಸಿತ್ತು.

ಟ್ರಂಪ್ ಮುಂದಿರುವ ಸವಾಲುಗಳನ್ನು ನೋಡುವುದಾದ್ರೆ, ನಮ್ಮ ಕಣ್ಣ ಮುಂದೆ ಬರುವುದು ಇಸಿಸ್ ಉಗ್ರರ ದಮನ, ಕುಸಿಯುತ್ತಿರುವ ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗುತ್ತಿರುವ 3ನೇ ಮಹಾಯುದ್ಧದ ಭೀತಿ ನಿವಾರಣೆ. ಶೀತಲ ಸಮರದ ನಂತರ ಇದೇ ಮೊದಲ ಬಾರಿಗೆ ಪೂರ್ವ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಹೆಚ್ಚಾಗಿದೆ. ರಷ್ಯಾ ತನ್ನ ಪಶ್ಚಿಮ ಗಡಿಯಲ್ಲಿ ಹಾಗೂ ಯೂರೋಪಿನ ಪೂರ್ವ ಗಡಿಯಲ್ಲಿ ಅಮೆರಿಕ ಸೇರಿದಂತೆ ನ್ಯಾಟೊ ಸದಸ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಸಂಗ್ರಹ ಮತ್ತು ಮಿಲಿಟರಿ ಪಡೆ ನಿಯೋಜಿಸಲು ಮುಂದಾಗಿವೆ.

ಈ ಸನ್ನಿವೇಷದಲ್ಲಿ ರಷ್ಯಾ ಹಾಗೂ ಚೀನಾ ನಿರೀಕ್ಷೆಯಂತೆ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದ ಈ ಬಿಕ್ಕಟ್ಟು ಬಗೆಹರಿಯುವ ನಿರೀಕ್ಷೆ ಮೂಡಿದೆ. ಭವಿಷ್ಯದಲ್ಲಿ ರಷ್ಯಾ ಹಾಗೂ ಚೀನಾ ಜತೆಗೆ ಟ್ರಂಪ್ ಯಾವ ರೀತಿ ಸಂಬಂಧ ಹೊಂದಲಿದ್ದಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ.

Leave a Reply