ಆಸ್ತಿ ಮತ್ತು ಠೇವಣಿ ನಡುವೆ ವ್ಯತ್ಯಾಸವಿದ್ರೆ ಕಠಿಣ ಕ್ರಮ: ಜೇಟ್ಲಿ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಇದೇ ಸಂದರ್ಭದಲ್ಲಿ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ. ಅದೇನಂದ್ರೆ, ‘ಇನ್ನು ಮೇಲೆ ಜನ ಬ್ಯಾಂಕಿನಲ್ಲಿ ಇಡುವ ಠೇವಣಿ ಮೇಲೆ ತೆರಿಗೆ ಇಲಾಖೆ ಕಣ್ಣಿಟ್ಟಿರಲಿದೆ. ಈಗಾಗಲೇ ಘೋಷಿಸಿರುವ ಆಸ್ತಿಗೂ ಮತ್ತು ಖಾತೆಯಲ್ಲಿ ಜಮಾ ಆದ ಹಣಕ್ಕೂ ವ್ಯತ್ಯಾಸ ಕಂಡು ಬಂದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಅರುಣ್ ಜೇಟ್ಲಿ ನೀಡಿದ ವಿವರ ಹೀಗಿದೆ…
‘ಸರ್ಕಾರದ ನಿರ್ಧಾರದಿಂದ ಜನ ಹಣ ವೆಚ್ಚ ಮಾಡುವ ಹವ್ಯಾಸವೇ ಬದಲಾಗಲಿದೆ. ಕೆಲ ದಿನ ಅವರಿಗೆ ತೊಂದರೆಯಾಗಬಹುದು. ಆದರೆ, ಭವಿಷ್ಯದಲ್ಲಿ ಉತ್ತಮ ಪ್ರತಿಫಲ ಪಡೆಯಲಿದ್ದಾರೆ. ಕಪ್ಪುಹಣ ಹೊಂದಿರುವವರಿಗೆ ಮಾತ್ರ ಹಿನ್ನಡೆಯಾಗಿದ್ದು, ಆರ್ಥಿಕ ಕ್ಷೇತ್ರದಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚಲಿದೆ. ಇದರಿಂದ ಬೇನಾಮಿ ಹಣಕಾಸು ವ್ಯವಹಾರಗಳನ್ನು ಪತ್ತೆ ಹಚ್ಚಬಹುದು. ತಮ್ಮ ಆಸ್ತಿ ಬಹಿರಂಗ ಪಡಿಸದೇ ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಹೊಂದಿರುವವರು ಈಗ ತಕ್ಕ ಬೆಲೆ ತೆರಬೇಕಿದೆ. ಹೀಗಾಗಿ ಇನ್ನು ಮುಂದೆ ಬ್ಯಾಂಕಿಲ್ಲಿ ಹಣ ಹಾಕುವವರ ಮೇಲೆ ತೆರಿಗೆ ಇಲಾಖೆ ಕಣ್ಣಿಡಲಿದೆ.’

ಶೇ.200 ರಷ್ಟು ದಂಡ: ಈಗ ನೀಡಿರುವ 50 ದಿನಗಳ ಗಡವು ಕಾಲಾವಧಿಯಲ್ಲಿ ₹ 2.50 ಲಕ್ಷಕ್ಕೂ ಹೆಚ್ಚು ಠೇವಣಿ ಮಾಡಿದರೆ ಜನರು ಅದಕ್ಕೆ ತೆರಿಗೆ ಕಟ್ಟಬೇಕು. ಈ ಹಂತದಲ್ಲಿ ಆಸ್ತಿ ಘೋಷಣೆಗೂ ಹಾಗೂ ಬ್ಯಾಂಕ್ ಖಾತೆಗೆ ಸೇರುವ ಠೇವಣಿಗೂ ಯಾವುದೇ ವ್ಯತ್ಯಾಸ ಕಂಡುಬಂದರೂ ಶೇ.30 ರಷ್ಟು ತೆರಿಗೆ ಬೀಳುವುದು. ಜತೆಗೆ ಶೇ.200 ರಷ್ಟು ತೆರಿಗೆ ದಂಡ ವಿಧಿಸಲಾಗುವುದು. ಅಲ್ಲದೆ ಅವರನ್ನು ತೆರಿಗೆ ವಂಚಕ ಎಂದು ಪರಿಗಣಿಸಲಾಗುವುದು.

ಪ್ಯಾನ್ ಕಾರ್ಡ್ ಸಲ್ಲಿಕೆ: ₹ 50 ಸಾವಿರಕ್ಕೂ ಹೆಚ್ಚಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವಾಗ ಪ್ರತಿಯೊಬ್ಬರೂ ಪ್ಯಾನ್ ಕಾರ್ಡ್ ದಾಖಲೆ ಸಲ್ಲಿಸಬೇಕು. ಇದರಿಂದ ಬ್ಯಾಂಕಿನಲ್ಲಿ ಮಾಡುವ ಠೇವಣಿ ಮಾಹಿತಿ ತೆರಿಗೆ ಇಲಾಖೆ ಗಮನಕ್ಕೆ ಬರಲಿದೆ. ತಮ್ಮ ಹಣಕ್ಕೆ ಸರಿಯಾದ ದಾಖಲೆ ಹೊಂದಿದ್ದೇ ಆದರೆ ಬ್ಯಾಂಕಿನಲ್ಲಿ ಹಣ ಠೇವಣಿ ಮಾಡಲು ಯಾವುದೇ ಮಿತಿ ಇಲ್ಲ. ಠೇವಣಿ ಇಡುವಾಗ ನೀಡಲಾಗುವ ಪ್ಯಾನ್ ಕಾರ್ಡ್ ದಾಖಲೆ ಮೂಲಕ ತೆರಿಗೆ ಇಲಾಖೆ ಎಲ್ಲರ ಬ್ಯಾಂಕ್ ಖಾತೆಗೆ ಜಮಾ ಆಗುವ ಹಣದ ಮೇಲೆ ನಿಗಾ ವಹಿಸಲಿದೆ.

ಚಿನ್ನ ಖರೀದಿಗೂ ಪ್ಯಾನ್ ಕಾರ್ಡ್: ಚಿನ್ನ ಹಾಗೂ ಆಭರಣ ಅಂಗಡಿ ಮಾಲೀಕರು ಗ್ರಾಹಕರ ಪ್ಯಾನ್ ಕಾರ್ಡ್ ದಾಖಲೆಯನ್ನು ಪಡೆದೇ ಚಿನ್ನವನ್ನು ಮಾರಾಟ ಮಾಡಬೇಕು. ಇದರಿಂದ ಯಾರು ಎಷ್ಟು ಪ್ರಮಾಣದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ ಹಾಗೂ ಅವರ ಆಸ್ತಿಯ ಮೌಲ್ಯಕ್ಕೂ ತಾಳೆಯಾಗುವುದೇ ಎಂದು ತೆರಿಗೆ ಇಲಾಖೆ ಪರಿಶೀಲನೆ ನಡೆಸಲಿದೆ.

ಸದ್ಯದಲ್ಲೇ ಹೊಸ ವಿನ್ಯಾಸದ ಮೂಲಕ ₹ 1000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಆರ್ಥಿಕ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಉಳಿದಂತೆ ಗುರುವಾರ ದೇಶದಾದ್ಯಂತ ಹಲವು ವಿದ್ಯಮಾನಗಳು ನಡೆದಿದ್ದು, ಅವುಗಳು ಹೀಗಿವೆ…

  • ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ‘ಮುಂದಿನ ಕೆಲವೇ ದಿನಗಳಲ್ಲಿ ನೂತನ ಬಣ್ಣ ಹಾಗೂ ವಿನ್ಯಾಸದಲ್ಲಿ ₹ 1000 ಮುಖಬೆಲೆಯ ನೋಟುಗಳು ಬರಲಿವೆ. ಕೆಲವು ತಿಂಗಳಿನಿಂದ ಇದರ ಸಿದ್ಧತೆ ಆರಂಭವಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕಿನ 2-3 ಸಿಬ್ಬಂದಿ ಈ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
  • ಬ್ಯಾಂಕುಗಳು ಹಳೇ ₹ 500 ಮತ್ತು ₹ 1000 ಮುಖಬೆಲೆ ನೋಟುಗಳನ್ನು ಬದಲಾವಣೆ ಮಾಡಲು ಆರಂಭಿಸಿವೆ. ಪರಿಣಾಮ ಎಲ್ಲಾ ಬ್ಯಾಂಕುಗಳ ಮುಂದೆ ಸರದಿ ಸಾಲಿನಲ್ಲಿ ಜನರು ನಿಂತು ಹಳೆ ನೋಟುಗಳನ್ನು ನೀಡಿ ಹೊಸ ನೋಟು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ಮತ್ತೆ ಕೆಲವೆಡೆ ಅಂಚೆ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಹೊಸ ನೋಟು ನೀಡಲು ಸಾಧ್ಯವಾಗದ ಕಾರಣ, ಜನರು ಆಕ್ರೋಶಗೊಂಡ ಚಿತ್ರಣ ಕಂಡು ಬರುತ್ತಿವೆ.
  • ಬ್ಯಾಂಕಿನ ಮುಂದೆ ಅತಿ ಹೆಚ್ಚಿನ ಜನರು ಸೇರುತ್ತಿರುವುದರಿಂದ ದೇಶದೆಲ್ಲೆಡೆ ಬ್ಯಾಂಕುಗಳಿಗೆ ಭದ್ರತೆ ನೀಡಲಾಗಿದ್ದು, ಅದರಲ್ಲೂ ನವದೆಹಲಿಯಲ್ಲಿನ ಬ್ಯಾಂಕುಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಇದಕ್ಕಾಗಿಯೇ 3400 ಪ್ಯಾರಾ ಮಿಲಿಟರಿ, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿ ಹೊಂದಲಾಗಿದೆ.
  • ಗ್ರಾಹಕರು ಎಟಿಎಂಗಳಲ್ಲಿ ಹಣವನ್ನು ಡ್ರಾ ಮಾಡಿಕೊಳ್ಳಲು ವಿಧಿಸಿದ್ದ ಶುಲ್ಕವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ. ಅಲ್ಲದೆ ಬ್ಯಾಂಕಿನ ಕೆಲಸದ ಅವಧಿಯನ್ನು ವಿಸ್ತರಿಸಿದ್ದು, ವಾರಾಂತ್ಯಗಳಲ್ಲೂ ಬ್ಯಾಂಕುಗಳು ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ.
  • ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಎಸ್.ಬಿ.ಐ ವ್ಯವಸ್ಥಾಪಕ ನಿರ್ದೇಶಕಿ ಅರುಂದತಿ ಭಟ್ಟಾಚಾರ್ಯ, ‘ಗ್ರಾಹಕರು ಎಟಿಎಂಗಳಲ್ಲಿ ₹ 4000 ವರೆಗೂ ನಗದು ಡ್ರಾ ಮಾಡಿಕೊಳ್ಳಬಹುದು. ಇನ್ನು ಬ್ಯಾಂಕಿನ ಕೌಂಟರ್ ಗಳಲ್ಲಿ ₹ 10000 ವರೆಗೂ ಡ್ರಾ ಮಾಡಿಕೊಳ್ಳಬಹುದು. ಆದರೆ ವಾರಕ್ಕೆ ಹಣ ಡ್ರಾ ಮಾಡಿಕೊಳ್ಳುವ ಗರಿಷ್ಠ ಮಿತಿ 20000’ ಎಂದು ಮಾಹಿತಿ ನೀಡಿದ್ದಾರೆ.
  • ₹ 500 ಮತ್ತು ₹ 1000 ಮುಖಬೆಲೆ ನೋಟುಗಳ ರದ್ದು ಮಾಡಿರುವ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇಂದು ಆ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Reply