ಮುಸ್ಲಿಂ ವಿರೋಧಿ ಟ್ರಂಪ್ ಭಾರತದ ಜತೆ ಕೈಜೋಡಿಸಿದರೆ ಏನು ಗತಿ ಅನ್ನೋದೆ ಪಾಕಿಸ್ತಾನದ ಆತಂಕ

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಚ್ಚರಿ ಆಯ್ಕೆಯನ್ನು ಅರಗಿಸಿಕೊಳ್ಳಲು ಅಮೆರಿಕನ್ನರಿಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅಮೆರಿಕದ ಭವಿಷ್ಯದ ನಡೆ ಬಗ್ಗೆ ಜಾಗತಿಕ ಮಟ್ಟದಲ್ಲು ಕೌತುಕ, ಆತಂಕ, ಚಿಂತೆ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಭಾರತ ವೈರಿ ಪಾಕಿಸ್ತಾನ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದೆ.

ಟ್ರಂಪ್ ಆಯ್ಕೆ ಎಲ್ಲಿ ಭಾರತ ಮತ್ತು ಅಮೆರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಬಿಡುತ್ತದೋ ಎಂಬುದು ಪಾಕಿಸ್ತಾನದ ಭಯ. ಬರೀ ಅಮೆರಿಕ ಮಾತ್ರವಲ್ಲ, ವಿಶ್ವದ ಯಾವುದೇ ರಾಷ್ಟ್ರ ಭಾರತದ ಜತೆ ಕೈ ಕುಲುಕಿದರೂ ಪಾಕಿಸ್ತಾನಕ್ಕೆ ಸಹಿಸಿಕೊಳ್ಳಲು ಆಗುವುದಿಲ್ಲ. ಅಂತಹುದರಲ್ಲಿ ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕ ಮತ್ತು ಭಾರತ ಪರಸ್ಪರ ಹೆಗಲ ಮೇಲೆ ಕೈ ಹಾಕಿದರೆ ಸಹಿಸಿಕೊಳ್ಳು ಪಾಕಿಸ್ತಾನಕ್ಕೆ ಸಹಿಸಿಕೊಳ್ಳಲು ಸಾಧ್ಯವೇ? ಇದಕ್ಕಿಂತಲೂ ಮುಖ್ಯವಾಗಿ ಎಲ್ಲಿ ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವಣ ಸಂಬಂಧ ಹದಗೆಡುತ್ತದೋ ಎಂದು ಭಯಗೊಂಡಿದೆ.

‘ಅಮೆರಿಕಕ್ಕೆ ಮುಸ್ಲಿಮರ ಪ್ರವೇಶ ನಿರ್ಬಂಧಿಸಬೇಕು’ ಎಂದು ಟ್ರಂಪ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ನಂತರ ಟ್ರಂಪ್ ಅವರನ್ನು ಮುಸ್ಲಿಂ ವಿರೋಧಿ ಅಂತಲೇ ಪರಿಗಣಿಸಲಾಗಿದೆ.

ಇನ್ನೊಂದೆಡೆ ಉಗ್ರರಿಗೆ ಆಶ್ರಯ ನೀಡಿರುವ ಬಗ್ಗೆ ಪಾಕಿಸ್ತಾನಕ್ಕೆ ಅಮೆರಿಕ ಸತತ ಎಚ್ಚರಿಕೆ ಕೊಡುತ್ತಲೇ ಬಂದಿದೆ. ‘ನೀವು ಉಗ್ರರ ವಿರುದ್ಧ ಹೋರಾಡದಿದ್ದರೆ, ಆ ಕೆಲಸವನ್ನು ನಾವು ಮಾಡಬೇಕಾಗುತ್ತದೆ’ ಎಂದು ಖಡಕ್ ಸೂಚನೆಯನ್ನೂ ಕೊಟ್ಟಿದೆ. ಹೀಗಿರುವಾಗ ಮುಸ್ಲಿಂ ವಿರೋಧಿ ನೀತಿ ಹೊಂದಿರುವ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

‘ಟ್ರಂಪ್ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅಮೆರಿಕ- ಪಾಕಿಸ್ತಾನ ಸಂಬಂಧ ಸಂಪೂರ್ಣ ಕಿತ್ತುಕೊಂಡು ಹೋಗುತ್ತದೆ ಎಂದೆನ್ನಲು ಸಾಧ್ಯವಿಲ್ಲ. ಆದರೂ ಹಿಲರಿ ಕ್ಲಿಂಟನ್ ಬದಲು ಟ್ರಂಪ್ ಆಯ್ಕೆಯಾಗಿರುವುದು ಪಾಕಿಸ್ತಾನದ ತಲೆಬಿಸಿ ಮಾಡಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಅಮೆರಿಕ ಜತೆ ಸಂಬಂಧ ವೃದ್ಧಿ ಅವಕಾಶ ಭಾರತಕ್ಕೆ ಹೆಚ್ಚು’ ಎಂದು ಲಾಹೋರ್ ಮೂಲದ ಅಂತಾರಾಷ್ಟ್ರೀಯ ನೀತಿ ತಜ್ಞ ಹಸನ್ ಅಸ್ಕಾರಿ ರಿಜ್ವಿ ಅಭಿಪ್ರಾಯಪಟ್ಟಿದ್ದಾರೆ ಎಂದು ದ ಹಿಂದು ವರದಿ ಮಾಡಿದೆ.

ಈಗಾಗಲೇ ಟ್ರಂಪ್ ಆಯ್ಕೆ ಬಗ್ಗೆ ರಷ್ಯಾ ಹಾಗೂ ಚೀನಾಗೆ ತೃಪ್ತಿ ವ್ಯಕ್ತಪಡಿಸಿವೆ. ಇನ್ನು ಟ್ರಂಪ್ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಬಂಧ ಕುರಿತು ಯಾವುದೇ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ಆದರೂ ಕಾಶ್ಮೀರ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಮಾತುಕತೆ ಮಧ್ಯಸ್ಥಿಕೆ ವಹಿಸಿಸುವುದಾಗಿ ಅವರು ನೀಡಿರುವ ಹೇಳಿಕೆ ಗಮನಾರ್ಹ.

ಈ ಎಲ್ಲ ಆತಂಕಗಳ ನಡುವೆ ಪಾಕಿಸ್ತಾನದ ಹಿತಾಸಕ್ತಿ ರಕ್ಷಿಸುವುದಾಗಿ ಅಲ್ಲಿನ ಅಮೆರಿಕ ರಾಯಭಾರಿಗಳು ಭರವಸೆ ನೀಡಿದ್ದಾರೆ. ‘ಸರ್ಕಾರ ಬದಲಾದಂತೆ ಅಮೆರಿಕದ ವಿದೇಶಾಂಗ ನೀತಿ ಬದಲಾಗುವುದಿಲ್ಲ’ ಎಂದೂ ಸಮಾಧಾನ ಮಾಡಿದ್ದಾರಾದರೂ ಈಗಾಗಲೇ ಬಟಾಬಯಲಾಗಿರುವ ಟ್ರಂಪ್ ಮುಸ್ಲೀಂ ವಿರೋಧಿ ನೀತಿ ಈ ಮಾತುಗಳನ್ನು ನಂಬಲು ಬಿಡುತ್ತಿಲ್ಲ.

ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಇಬ್ಬರೂ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply