ಬದುಕಿಗೆ ಬೆಲೆಯಿಲ್ಲ, ಸಾವಿಗೆ ಗೌರವವಿಲ್ಲ.. ಆದರೂ ನಮ್ಮದು ಅತ್ಯುತ್ತಮ ಸಂಸ್ಕೃತಿ

author-geetha‘ಹೆಣ್ಣಿಗ! ಗಂಡು ಹುಡುಗ ಆಗಿ ಅಳ್ತಿಯಾ? ನಾಚಿಕೆ ಆಗೊಲ್ವೇ?’

‘ಅತ್ತರೆ ಜುಟ್ಟು ಕಟ್ಟಿ, ಫ್ರಾಕ್ ಹಾಕಿಬಿಡ್ತೀನಿ ಅಷ್ಟೇ..’

‘ಅವ್ನು ಹೊಡ್ದಾ ಅಂತ ಅತ್ಕೊಂಡು ಬಂದ್ರೆ ನಾನೂ ಹೊಡಿತೀನಿ ಅಷ್ಟೇ. ಗಂಡು ಹುಡುಗ ಅಲ್ಲವೇ ನೀನು? ವಾಪಸ್ ನಾಲ್ಕು ಹಾಕಿ ಬರಬೇಕಿತ್ತು.’

‘ಛೇ.. ಹೆದರಿಕೆ ಅಂದ್ರೆ ಏನು? ಗಂಡು ಹುಡುಗ ನೀನು ಯಾವುದಕ್ಕೂ ಹೆದರಬಾರದು. ಕತ್ತಲೆಯಿದ್ದರೆ ಇರುತ್ತೆ. ಹೋಗು ಸುಮ್ಮನೆ.’

‘ಮೀಸೆ ಬೊಳಿಸಿ, ಬಳೆ ತೊಟ್ಕೊ ಹೋಗು..’

‘ಅಮ್ಮನ ಸೆರಗ್ಹಿಂದೆ ಬಚ್ಚಿಟ್ಕೊ ಹೋಗು…’

‘ನಾನು ಗಂಡು ಮಗ ಅಂತ ಹೆತ್ತು ಬೆಳೆಸಿದ್ದೇನೆ. ನೀನು ಹೀಗೆ ಹಿಂಜರಿತಾ ಇರೋದು ನೋಡಿದ್ರೆ ನಂಗೇ ಅನುಮಾನ ಈಗ…’

‘ಅದೇನೋ ಹಾಗೆ ನಾಚಿಕೆ, ಹಿಂಜರಿಕೆ ಅಂತ ಆಡ್ತ್ಯಾ? ನೀನು ಗಂಡು ಅನ್ನೋದು ನೆನಪಿರಲಿ.’

‘ನಾವು ಗಂಡಸರು. ಕೈಗೆ ಬಳೆ ತೊಟ್ಟುಕೊಂಡಿಲ್ಲ. ಅದೇನು ಬರುತ್ತೊ ಎದುರಿಸಬೇಕು..’

‘ಹೆಣ್ ಹೆಂಗಸಿನ ಹತ್ತಿರ ಅದೇನೋ ಮಾತು? ಗುಸುಗುಸು ಅಂತ… ಗಂಡು ದನಿಯಲ್ಲಿ ಗಂಡಸರ ಜೊತೆ ಮಾತನಾಡು.’

‘ಒಳ್ಳೆ ಹೆಣ್ಣು ಹುಡುಗಿ ತರಹ ನಾಚ್ಕೊಳ್ತಿಯಲ್ಲೋ.. ನೀನು ಗಂಡಸು.. ಬಾ ಆಚೆಗೆ..’

‘ನಗೋ ಹೆಂಗಸನ್ನ, ಅಳೋ ಗಂಡಸನ್ನು ನಂಬಬಾರದಂತೆ… ಅತ್ತರೆ ನಿನ್ನ ಗಂಡಸು ಅಂತಾರಾ?’

‘ಹೆಂಗಸರೇ ಜಿಮ್ಗೆ ಹೋಗ್ತಾರಂತೆ.. ಗಂಡಸಾಗಿ ಜಿಮ್ಗೆ ಹೋಗಿ ಬಾಡಿ ಬಿಲ್ಡ್ ಮಾಡಿಕೊಳ್ಳಬೇಕು. ಏನೇ ಕಷ್ಟ ಬಂದರೂ ಎದೆ ಕೊಟ್ಟು ನಿಲ್ಲಬೇಕು. ಹೆಂಗಸರ ರಕ್ಷಣೆ ಮಾಡಬೇಕು.’

ಒಂದೇ? ಎರಡೇ? ಬರೆಯುತ್ತಾ ಹೋದರೆ ಇಡೀ ಲೇಖನ ಈ ಬಗೆಯ ವಾಕ್ಯಗಳು ಗಂಡಸನ್ನು ಪ್ರೋತ್ಸಾಹಿಸುತ್ತಿದ್ದೇವೆ… ಎಂದು ಬಳಸುವ ಈ ಬಗೆಯ ವಾಕ್ಯಗಳನ್ನು ಬರೆದು ಮುಗಿಸಿಬಿಡಬಹುದು. ಹೆಣ್ಣನ್ನು ರಕ್ಷಿಸುವ ಭರದಲ್ಲಿ ಅವಳನ್ನು ಬಂಧಿಸುವುದು ಎಷ್ಟು ಅಕ್ಷಮ್ಯವೋ.. ಗಂಡಸನ್ನು ಪ್ರೋತ್ಸಾಹಿಸುತ್ತೇವೆ ಎಂದು ಅವನನ್ನು ದೂಡುವುದು ಅಷ್ಟೇ ಅಕ್ಷಮ್ಯ.

ಚಿಕ್ಕಂದಿನಿಂದ ಮನೆಯಲ್ಲಿ, ನಂತರ ಶಾಲೆಯಲ್ಲಿ, ಅದನಂತರ ಕಾಲೇಜಿನಲ್ಲಿ ಅವನನ್ನು ಪ್ರೋತ್ಸಾಹಿಸುವ ನೆಪದಲ್ಲಿ ಛೇಡಿಸುವಿಕೆ ನಿರಂತರ.

ನಮ್ಮ ದೂರದ ನೆಂಟರೊಬ್ಬರು ತಮ್ಮ ಇಬ್ಬರು (ನಾಲ್ಕು ವರ್ಷದ ಹಾಗೂ ಎರಡು ವರ್ಷದ) ಗಂಡು ಮಕ್ಕಳಿಗೆ ಚಡ್ಡಿ ಹಾಕದೆ ಕರೆದುಕೊಂಡು ಬರುತ್ತಿದ್ದರಂತೆ. ನಮ್ಮತ್ತೆ, ‘ಯಾಕೆ ಚಡ್ಡಿ ಹಾಕಬಾರದೆ?’ ಎಂದು ಹೇಳಿದರೆ.. ‘ಗಂಡು ಮಕ್ಕಳು ಅವರಿಬ್ಬರೂ… ಚಡ್ಡಿ ಯಾಕೆ?’ ಎಂದು ಹೇಳಿದ್ದರಂತೆ.

ಆ ಮಕ್ಕಳಿಗೆ ನಾಚಿಕೆಯಾಗಿರುತ್ತದೆ ಅಥವಾ ಬೆಳೆದು ದೊಡ್ಡವರಾದ ಮೇಲೆ ಗಂಭೀರವಾಗಿ ಇರಬೇಕು, flash ಮಾಡಬಾರದು ಎಂಬ ಪರಿಜ್ಞಾನವೇ ಬರುವುದಿಲ್ಲ.

ಶಾಲೆಯಲ್ಲೂ ಅಷ್ಟೇ. ಛೇಡುವಿಕೆಯಿಂದಲೇ ಸದಾ ಅವರನ್ನು ‘ನೀನು ಗಂಡಸು.. ನೀನು ಗಂಡಸು..’ ಹೀಗಿರಬೇಕು, ಹಾಗಿರಬಾರದು ಎಂದು ಹೇಳುತ್ತಾರೆ.

ಹೈಸ್ಕೂಲಿನಲ್ಲಿ ನಮ್ಮ ಸಂಸ್ಕೃತ ಟೀಚರ್ ಕಂಠಪಾಠ ಒಪ್ಪಿಸದಿದ್ದರೆ ನಮಗೆಲ್ಲಾ ನೋಡಿಕೊಂಡು ಓದಮ್ಮ ಅನ್ನೋರು… ಗಂಡು ಹುಡುಗರುರಿಗೆ ಅದೇ ತಪ್ಪಿಗೆ ಬೆತ್ತದ ಏಟು ಬೀಳುತ್ತಿತ್ತು. ಅಥವಾ ಶರ್ಟು ಬಿಚ್ಚಿ ಕ್ಲಾಸಿನ ಆಚೆ ನಿಲ್ಲಬೇಕಿತ್ತು.

ಗಣಿತದಲ್ಲಿ ಕಡಿಮೆ ಅಂಕ ತೆಗೆದುಕೊಂಡ ಹುಡುಗರಿಗೆ ಅವರಿಗೆ ಬರದಷ್ಟು ಅಂಕದಷ್ಟು ಏಟು ಬೀಳುತಿತ್ತು. ಅಂದರೆ ನೂರಕ್ಕೆ ಎಪ್ಪತ್ತಾರು ತೆಗೆದುಕೊಂಡ ಹುಡುಗನಿಗೆ ಇಪ್ಪತ್ನಾಲ್ಕು ಏಟು ಬೀಳುತಿತ್ತು.

‘ಹೀಗೆ ಅಂಕ ತೆಗೆದುಕೊಂಡರೆ ನಾಳೆ ಸಂಪಾದಿಸಿ ಹೆಂಡತಿ, ಮಕ್ಕಳನ್ನು ಹೇಗೆ ಸಾಕುತ್ತೀಯಾ?’ ಎಂಬ ಬೈಯ್ಗುಳ ಬೇರೆ. ಅವರಿಗಿಂಥ ಕಡಿಮೆ ಅಂಕ ತೆಗೆದುಕೊಳ್ಳುತ್ತಿದ್ದ ನಮ್ಮತ್ತ ನೋಡುತ್ತಲೂ ಇರಲಿಲ್ಲ. ನಮಗೆ ಆಗ ಅಷ್ಟೇ ಖುಷಿ. ಗಂಡು ಹುಡುಗರ ಮುಖ ಪೆಚ್ಚೊ ಪೆಚ್ಚು.

ಬುದ್ಧಿಶಕ್ತಿ, ದೇಹಶಕ್ತಿ ಎಲ್ಲದರಲ್ಲೂ ಮುಂದಿರಲೇಬೇಕು ಎನ್ನುವ ಒತ್ತಡ, ಸಂಪಾದಿಸಬೇಕು ಎನ್ನುವ ಒತ್ತಡ ಸಾಮಾಜಿಕವಾಗಿ ಗಂಡಸಿಗೆ ಹೆಚ್ಚು.

ಸಾಫ್ಟ್ ವೇರ್ ಇಂಜಿನೀಯರ್ ಆಗಿ ವರ್ಷಕ್ಕೆ ಹದಿನೈದು ಲಕ್ಷ ಸಂಪಾದಿಸುವ ಹೆಣ್ಣು, ಅಷ್ಟೇ ಸಂಪಾದಿಸುವ ಗಂಡನ್ನು ಮದುವೆಯಾಗುವುದಿಲ್ಲ… ಗಂಡು ದೈಹಿಕವಾಗಿ ತನಗಿಂಥ ಉದ್ದವಿರಬೇಕು… ಅವನು ತನಗಿಂಥ ಹೆಚ್ಚು ಸಂಪಾದಿಸಬೇಕು ಎಂದೇ ನೋಡುತ್ತಾಳೆ, ಬಯಸುತ್ತಾಳೆ. ಜೊತೆಗೆ ಗಂಡು ಫೈಟ್ ಮಾಡಬೇಕು. ಹೆಣ್ಣನ್ನು ರಕ್ಷಿಸಬೇಕು.

ನಮ್ಮ ಚಲನಚಿತ್ರಗಳೂ ಅಷ್ಟೇ ನಾಯಕಿ ಸುಂದರವಾಗಿರಬೇಕು… ನಾಯಕ ಬಲಶಾಲಿಯಾಗಿರಬೇಕು… ಯಾವುದಕ್ಕೂ ಹೆದರಬಾರದು. ಹಿಂದೆ ಸರಿಯಬಾರದು. ಪೊಲೀಸರಿಗೆ ಫೋನ್ ಮಾಡಬಾರದು, ಕಾನೂನಿನ ಸಹಾಯ ತೆಗೆದುಕೊಳ್ಳಬಾರದು, ಗೂಳಿಯಂತೆ ನುಗ್ಗಬೇಕು, ಕೆಟ್ಟವರ ಸದೆ ಬಡೆಯಬೇಕು. ಹಾಗಾಗಿ ಅವನಿಗೆ ಈಗ six pack ಇರಬೇಕು. Six pack ಇದ್ದ ಮೇಲೆ ತೋರಿಸಿಕೊಳ್ಳಬೇಕು. ತೋಳಿನ ಮಾಂಸಖಂಡ ಹಿಗ್ಗಿಸಿ ತೋರಿಸಬೇಕು. ಬಲಶಾಲಿಯಾದ ಗಂಡಸು ಹೆದರಿಕೊಳ್ಳಬಾರದು. ಈಜು ಬರದಿದ್ದರೂ ನೀರಿಗೆ ಧುಮುಕಬೇಕು, ಹೊಟ್ಟೆ ಕೆಟ್ಟಿದ್ದರೂ ಚೆನ್ನಾಗಿ ತಿನ್ನಬೇಕು.

ಸಿಗರೇಟು ಸೇದುವುದು, ಮದ್ಯ ಕುಡಿಯುವುದು ಕೂಡ ಮ್ಯಾನ್ಲಿ. ಕತ್ತಿ, ಚೂರಿ, ಚಾಕು, ಗನ್ನು ಹ್ಯಾಂಡಲ್ ಮಾಡಲು ಬಂದರೆ ಅವನು ಗಂಡಸು.

ಉಡಾಫೆಯಿಂದ ವರ್ತಿಸಿದರೆ ಅದೇ ಗಂಡಸ್ತನದ ಲಕ್ಷಣ..

ಛೇಡಿಸುವಿಕೆಯಿಂದಲೇ ಬೆಳೆದು ಗಂಡಸ್ತನದ ಬಗ್ಗೆ ಮನುಷ್ಯತನದ ಬಗೆಗಿಂಥ ಹೆಚ್ಚಿನ ಮೋಹ ಬೆಳೆಸಿಕೊಂಡಿರುವ ಗಂಡಸು ತನ್ನ ಸಹಜ ಭಯ ಭೀತಿಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ಭಯಭೀತಿಯಷ್ಟೇ ಅಲ್ಲ, ತನಗೆ ಯಾವುದೇ ಒಂದು ಕೆಲಸ (ಉದಾ:ಈಜು) ಬರುವುದಿಲ್ಲ ಎಂದು ಹೇಳಲೂ ಹಿಂಜರಿಯುತ್ತಾನೆ. ತನ್ನ ಭೀತಿಯನ್ನು ಉಡಾಫೆಯ ಮಾತುಗಳಿಂದ ಮುಚ್ಚಿಹಾಕಲು ಪ್ರಯತ್ನಿಸುತ್ತಾನೆ.. Image building and keeping it up ಬಹಳ ಮುಖ್ಯವಾಗುತ್ತದೆ.

‘ಅಯ್ಯೊ ನಂಗೆ ಗೊತ್ತಿಲ್ಲಪ್ಪ… ನಂಗೆ ಹೆದರಿಕೆಯಪ್ಪ… ನಂಗೆ ಬರುವುದಿಲ್ಲಪ್ಪ…’ ಎಂದು ಹೆಣ್ಣು ಸಲೀಸಾಗಿ ಹೇಳುತ್ತಾಳೆ. ‘ಬರುವುದಿಲ್ಲ ಎನ್ನು… ಹೆದರಿಕೆ ಅನ್ನು… ಗಂಡುಗೋವಿಯ ಹಾಗೆ ಹೋಗಿ ಥೈ ಎಂದು ನಿಲ್ಲಬೇಡ’ ಎಂದು ಅವಳನ್ನು ಹಿಂದೂಡುತ್ತಾರೆ.. ರಕ್ಷಿಸಲು ನಿಲ್ಲುತ್ತಾರೆ ಕೂಡ.

ಅದೇ ಗಂಡಿಗೇ?

ಹೆದರಿಕೆ! ಬರುವುದಿಲ್ಲ..! ಎಂದರೆ ಅವನು ಗಂಡಸೇ ಅಲ್ಲ ಎನ್ನುವಂತೆ ಧಿಕ್ಕರಿಸುತ್ತಾರೆ. ಹಾಸ್ಯ ಮಾಡಿ ನಗುತ್ತಾರೆ.. Ego ಮುಖ್ಯವಾಗುವ ಗಂಡಸು ಹಲವಾರು ತೊಂದರೆಗಳನ್ನು ಎದುರಿಸುತ್ತಾನೆ, ಆದರೆ ಬರುವುದಿಲ್ಲ ಎನ್ನುವುದಿಲ್ಲ!

‘Feed a man’s ego he will carry you on his head’  ಎನ್ನುತ್ತಾರೆ. ‘ಗಂಡಸಿನ ಅಹಂ ಅನ್ನು ಪೋಷಿಸಿದರೆ ಅವನು ಅವಳನ್ನು ತಲೆಯ ಮೇಲೆ ಕೂರಿಸಿಕೊಂಡು ಮೆರೆಸುತ್ತಾನೆ’ ಎಂಬುದು ಕನ್ನಡದ ಅವತರಣಿಕೆ.

‘ಈಜು ಬರುವುದಿಲ್ಲ… ಎಂದೇನಿಲ್ಲ.. ಸ್ವಲ್ಪ ಬರುತ್ತೆ… ಒಪ್ಪಿಕೊಂಡ ಮೇಲೆ ಮಾಡಬೇಕು.. six pack ತೋರಿಸಿದ್ರೆ ಚೆನ್ನಾಗಿರುತ್ತೆ.. life jacket ಹಾಕೊಂಡ್ರೆ ತೋರಿಸೋಕ್ಕಾಗಲ್ಲ ಅಂದ್ರು.. ಡೈರೆಕ್ಟರ್ ಸರ್. ಕಾಪಾಡ್ತಾರೆ ಬಿಡಿ ಸರ್.. ಇಲ್ಲ ಭಗವಂತ ಕ್ಯಾಚ್ ಹಿಡಿತಾನೆ’ ಎಂದು ನಗುತ್ತಾ ಅಹಂ ಭಾವ (ಇಲ್ಲದ್ದು ಪಾಪಾ!) ತೋರಿಸಿಕೊಳ್ಳುತ್ತಾ, ಹೆದರಿಕೆ, ಹಿಂಜರಿಕೆ ಮುಚ್ಚಿಟ್ಟುಕೊಂಡು ತಮ್ಮ ಸಾವಿಗೆ ಹಾರಿದ ಆ ಇಬ್ಬರು ಗಂಡು(!) ಹುಡುಗರ ಮುಖ ಕಣ್ಣ ಮುಂದೆ. ಮಂಜು ಕಣ್ಣು! ಸರಿಯಾಗಿ ಕಾಣುತ್ತಿಲ್ಲ ಎಂದುಕೊಂಡರೆ ಸೋಷಿಯಲ್ ಮಿಡಿಯಾ ಭರ್ತಿ ಹರಿದಾಡುತ್ತಿರುವ ಸಿಕ್ಕ ಶವದಚಿತ್ರ. ಮೊನ್ನೆ ಧುಮುಕಿದ್ದು, ಮುಳುಗಿದ್ದು ತೋರಿಸಿ ತೋರಿಸಿ ಸಾಯಿಸಿದ್ರು. ಈಗ ಶವದ ಚಿತ್ರ ತೋರಿಸಿ ತೋರಿಸಿ ನಮ್ಮನ್ನೂ ದಹನ ಮಾಡಿಬಿಡುತ್ತಾರೆ.

ಬದುಕಿಗೆ ಬೆಲೆಯಿಲ್ಲ. ಸಾವಿಗೆ ಗೌರವವಿಲ್ಲ. ನಮ್ಮದು ಅತ್ಯುತ್ತಮ ಸಂಸ್ಕೃತಿ.

Leave a Reply