ಟಿಪ್ಪು ಜಯಂತಿಯಲ್ಲಿ ಅಶ್ಲೀಲ ಚಿತ್ರ ನೋಡಿದ ಸಚಿವ ತನ್ವೀರ್ ಸೇಠ್, ಬಿಜೆಪಿ-ಆರೆಸ್ಸೆಸ್ ನಿಜವಾದ ಮತಾಂತರಿಗಳು ಅಂದ್ರು ಸಿಎಂ, ಅಂಚೆ ಕಚೇರಿ-ಬ್ಯಾಂಕುಗಳತ್ತ ಮುಗಿಬಿದ್ದ ಜನ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಟಿಪ್ಪು ಜಯಂತಿ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಕೆ.ಜೆ ಜಾರ್ಜ್ ಮತ್ತು ರೋಶನ್ ಬೇಗ್.

ಡಿಜಿಟಲ್ ಕನ್ನಡ ಟೀಮ್:

ಶಿಕ್ಷಣ ಸಚಿವರ ಅಶ್ಲೀಲ ಚಿತ್ರ ವೀಕ್ಷಣೆ

ಒಂದೆಡೆ ಟಿಪ್ಪು ಬಗ್ಗೆ ಉಪನ್ಯಾಸ ನಡೆಯುತ್ತಿದ್ದರೆ, ಇನ್ನೊಂದೆಡೆ ಅದೇ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರನೋಡುತ್ತಾ ಕಾಲ ಸವೆಸುತ್ತಿದ್ದರು.

ರಾಯಚೂರಿನ ರಂಗಮಂದಿರದಲ್ಲಿ ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದ ತನ್ವೀರ್ ಸೇಠ್ ಈ ರೀತಿ ಅಸೀಮ ಬೇಜವಾಬ್ದಾರಿತನ ಮೆರೆದಿದ್ದಾರೆ.

ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಟಿಪ್ಪು ಜಯಂತಿ ಅಚರಿಸಿಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದಿತ್ತು ಸರ್ಕಾರ. ಆದರೆ, ಅದೇ ಸರ್ಕಾರದ ಸಚಿವರೊಬ್ಬರು, ಅದರಲ್ಲೂ ಟಿಪ್ಪು ಸುಲ್ತಾನ್ ಸಮುದಾಯದವರೇ ಆಗಿ ಈ ರೀತಿ ಅಪಮಾನ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ 2012 ರಲ್ಲಿ ವಿಧಾನಸಭೆ ಅಧಿವೇಶನ ನಡೆಯುವಾಗ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿ ಇದೇ ರೀತಿ ಸಿಕ್ಕಿಬಿದ್ದ ಬಿಜೆಪಿಯ ಮೂವರು ಶಾಸರು ರಾಜೀನಾಮೆ ನೀಡುವವರೆಗೂ ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ನವರು ಬಿಟ್ಟಿರಲಿಲ್ಲ. ಈಗ ಅದೇ ಕಾಂಗ್ರೆಸ್ ಸರಕಾರದ ಸಚಿವರೊಬ್ಬರು ಸಾರ್ವಜನಿಕ ಸಮಾರಂಭದಲ್ಲಿ ಬ್ಲೂಫಿಲಂ ನೋಡಿ ಸಿಕ್ಕಿಬಿದ್ದಿರುವುದು ಪ್ರತಿಪಕ್ಷಗಳ ಕೈಗೆ ಹೋರಾಟದ ಅಸ್ತ್ರವನ್ನು ಕೊಟ್ಟಿದೆ.

ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ದೇಶ ಪ್ರೇಮ, ಬ್ರಿಟೀಷರ ವಿರುದ್ಧ ಅವರ ಹೋರಾಟ ಕುರಿತಂತೆ ಉಪನ್ಯಾಸ ನೀಡಲಾಗುತ್ತಿತ್ತು. ಆ ಸಮಯದಲ್ಲಿ ತನ್ವೀರ್ ಸೇಠ್ ತಮ್ಮ ಮೊಬೈಲ್ ನಲ್ಲಿ ಹುಡುಗಿಯರ ಅರೆನಗ್ನ ಚಿತ್ರದ ಮೇಲೆ ಕಣ್ಣು ಮತ್ತು ಬೆರಳಾಡಿಸುತ್ತಿದ್ದರು. ಈ ಸಂದರ್ಭವನ್ನು ದೃಶ್ಯ ಮಾಧ್ಯಮದ ಕ್ಯಾಮೆರಾ ಕಣ್ಣುಗಳು ಸೆರೆ ಹಿಡಿದವು. ಸ್ವಲ್ಪ ಹೊತ್ತಿನ ನಂತರ ಇದು ಗಮನಕ್ಕೆ ಬಂದ ತನ್ವೀರ್ ಸೇಠ್ ಲಘುಬಗೆಯಿಂದ ತಮ್ಮ ಮೊಬೈಲ್ ಆಫ್ ಮಾಡಿಕೊಂಡರು.

ಸಚಿವರ ಈ ವರ್ತನೆ ಖಂಡಿಸಿ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳ ನಾಯಕರು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕಾಂಗ್ರೆಸ್ ಕೆಲವು ಹಿರಿಯ ನಾಯಕರು ಮಾತ್ರ ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ನನ್ನ ಗಮನಕ್ಕೆ ಬಂದಿಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದರೆ, ಗೃಹ ಸಚಿವನಾಗಿ ಯಾವಾಗಲೂ ಟಿವಿ ನೋಡಿಕೊಂಡು ಕುಳಿತಿರಲು ಆಗುವುದಿಲ್ಲ. ಹಾಗಾಗಿ ಆ ವಿಷಯ ನನಗೆ ಗೊತ್ತಿಲ್ಲ ಅಂತ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಮಾತ್ರ ತನ್ವೀರ್ ಸೇಠ್ ಅವರ ಬೆಂಬಲಕ್ಕೆ ನಿಂತರು. ಸೇಠ್ ಅವರನ್ನು ಅವರು ಸಮರ್ಥಿಸಿಕೊಂಡಿದ್ದು ಹೀಗೆ – ‘ಅವರು ತಮ್ಮ ಮೊಬೈಲ್ ನೋಡುವಾಗ ವಾಟ್ಸಪ್ ನಲ್ಲಿ ಅಶ್ಲೀಲ ಚಿತ್ರಗಳು ಬಂದಿವೆ. ಅವುಗಳನ್ನು ಅವರು ಡೌನ್ ಲೋಡ್ ಮಾಡಿಲ್ಲ. ಬಿಜೆಪಿ ನಾಯಕರಂತೆ ಅಶ್ಲೀಲ ವಿಡಿಯೋಗಳನ್ನು ನೋಡಿಲ್ಲ.’

ಈ ಹಿಂದೆ ಬಿಜೆಪಿ ನಾಯಕರು ಮಾಡಿದ್ದಾಗ ಆಡಿಕೊಂಡು ನಕ್ಕಿದ್ದ, ಅವರನ್ನು ವಜಾಗೊಳಿಸುವಂತೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ ನಾಯಕರು ಈಗ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಪಲಾಯನ ಮಾಡುತ್ತಿದ್ದಾರೆ.

ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರು ಮತಾಂತರಿಗಳು: ಸಿಎಂ

‘ಹಜರತ್ ಟಿಪ್ಪು ಸುಲ್ತಾನ್ ಮತಾಂತರಿಯಲ್ಲ. ಬಿಜೆಪಿ, ಆರೆಸ್ಸೆಸ್ ಮತ್ತು ಭಜರಂಗದ ಕಾರ್ಯಕರ್ತರು ನಿಜವಾದ ಮತಾಂತರಿಗಳು…’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಸಿಎಂ, ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್ ಅವರನ್ನು ಏಕವಚನದಲ್ಲೇ ಜರಿದರು. ಜತೆಗೆ ಬಿಜೆಪಿಯ ತತ್ವ-ಸಿದ್ಧಾಂತದ ಬಗ್ಗೆ ಹರಿಹಾಯ್ದರು.

‘ಟಿಪ್ಪು ಹಿಂದು ವಿರೋಧಿಯಲ್ಲ. ಅವರೊಬ್ಬ ರಾಷ್ಟ್ರ ಪ್ರೇಮಿ. ಮುಂದಿನ ವರ್ಷವೂ ಟಿಪ್ಪು ಜಯಂತಿಯನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸುತ್ತೇವೆ. 2018ರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಕೋಮು ರಾಜಕೀಯ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಬಿಜೆಪಿ ಟಿಪ್ಪು ಜಯಂತಿ ವಿರೋಧಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದೂ ದೂರಿದರು.

‘ಹೇ ಯಡಿಯೂರಪ್ಪ ಅಂದು ಟಿಪ್ಪು ಮತಾಂತರಿಯಲ್ಲ, ಕನ್ನಡದ ಕುವರ ಎಂದು ಹಾಡಿ ಹೊಗಳಿದ್ದೆ. ಇಂದು ಆತ ಕ್ರೂರಿ ಎಂದು ಹೇಳ್ತೀಯಾ. ನಿನಗೆ ನಾಚಿಕೆ ಆಗಲ್ವ. ಈ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಗೆ ದೇವರು ಬುದ್ಧಿ ಕೊಟ್ಟಿಲ್ಲ. ಬುದ್ಧಿ ಕೊಟ್ಟಿದ್ದರೆ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಜಗದೀಶ್ ಶೆಟ್ಟರ್ ಸಹ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಬಗ್ಗೆ ಕಿರು ಹೊತ್ತಿಗೆ ತಂದು ಅವರ ದೇಶಪ್ರೇಮ ಹೊಗಳಿದ್ದರು. ಈಗ ಮತಾಂತರಿ ಎಂದು ಹೇಳ್ತಿದ್ದಾರೆ. ಬ್ರಿಟೀಷರನ್ನು ದೇಶದಿಂದ ಓಡಿಸಲು ಟಿಪ್ಪು ನಾಲ್ಕು ಬಾರಿ ಯುದ್ಧ ನಡೆಸಿದ್ದರು. ಆ ಸಂದರ್ಭದಲ್ಲಿ ಬ್ರಿಟೀಷರಿಗೆ ಬೆಂಬಲ ನೀಡಿದವರ ವಿರುದ್ಧ ಟಿಪ್ಪು ಸಮರ ಸಾರಿದ್ದರು. ಅದು ರಾಜನೀತಿಯಾಗಿತ್ತು. ಈ ವಿಚಾರಕ್ಕೆ ಅವರನ್ನು ವಿರೋಧಿಸುವುದು ಸರಿಯಲ್ಲ’ ಎಂದು ಜಾಡಿಸಿದರು.

ಬಿಜೆಪಿಯಿಂದ ಕರಾಳ ದಿನ…

Members of BJP stage protest against celebrations of Tippu Jayanti at Town Hall in Bengaluru on Thursday.Former Chief Minister, Yediyurappa, BJP leader, Shobha Karandlaje with others were also present.

ಮತ್ತೊಂದೆಡೆ ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸಿ ಬಿಜೆಪಿ ಕರಾಳ ದಿನ ಆಚರಿಸಿತು. ಬೆಂಗಳೂರಿನ ಟೌನ್ ಹಾಲ್ ಬಳಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ನಂತರ ಪಕ್ಷದ ಬೆಂಬಲಿಗರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಅವರನ್ನು ಪೊಲೀಸರು ಅವರನ್ನು ಬಂಧಿಸಿದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ. ‘ಎಲ್ಲೋ ಒಂದು ಕಡೆ ಖಡ್ಗ ಹಿಡಿದು ಪೇಟ ಹಾಕಿದರೆ ನಾನು ಟಿಪ್ಪು ಜಯಂತಿ ಬೆಂಬಲಿಸಿದ್ದೆ ಅಂತ ಅಲ್ಲ. ಸಿದ್ದರಾಮಯ್ಯ ತಾಕತಿದ್ದರೆ ನಾನು ಟಿಪ್ಪು ಜಯಂತಿ ಬೆಂಬಲಿಸಿದ್ದೆ ಎಂಬುದನ್ನು ಸಾಬೀತುಪಡಿಸಲಿ. ಗೃಹ ಸಚಿವ ಪರಮೇಶ್ವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಸಿದ್ದರಾಮಯ್ಯ ಅವರೇ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಗೆ ಸಂಚು ಮಾಡಿದ್ದಾರೆ’ ಎಂದರು.

ಅನಿಲ್-ಉದಯ್ ಅಂತ್ಯ ಸಂಸ್ಕಾರ

ಸೂಕ್ತ ಮುನ್ನೆಚ್ಚರಿಕೆ ಕ್ರಮವಿಲ್ಲದೇ ಸಾಹಸ ದೃಶ್ಯ ಚಿತ್ರೀಕರಣ ಸಂದರ್ಭ ಪ್ರಾಣ ಕಳೆದುಕೊಂಡ ಯುವ ನಟರಾದ ಅನಿಲ್ ಹಾಗೂ ರಾಘವ್ ಉದಯ್ ಅವರ ದೇಹದ ಅಂತ್ಯ ಸಂಸ್ಕಾರವನ್ನು ಗುರುವಾರ ನೆರವೇರಿಸಲಾಯ್ತು. ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಬುಧವಾರ ಮಧ್ಯಾಹ್ನ ಉದಯ್ ದೇಹ ಸಿಕ್ಕಿತ್ತು. ಗುರುವಾರ ಬೆಳಗಿನ ಜಾವ 5.50 ರ ಸುಮಾರಿಗೆ ಅನಿಲ್ ಮೃತದೇಹವೂ ಪತ್ತೆಯಾಯ್ತು. ಉದಯ್ ಅವರ ದೇಹವನ್ನು ಕೆರೆಯ ಪಕ್ಕದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದಂತೆ ಅನಿಲ್ ದೇಹದ ಪರೀಕ್ಷೆಯನ್ನೂ ಮಾಡಲಾಯ್ತು. ನಂತರ ಪಾರ್ಥೀವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಮಧ್ಯಾಹ್ನದ ವೇಳೆಗೆ ಬನಶಂಕರಿಯ ಚಿತಾಗಾರದಲ್ಲಿ ಈ ಇಬ್ಬರು ನಟರ ಅಂತಿಮ ಕ್ರಿಯೆ ನಡೆಸಲಾಯಿತು. ಚಿತ್ರರಂಗಕ್ಕೆ ಒಟ್ಟಿಗೆ ಕಾಲಿಟ್ಟ ಈ ಇಬ್ಬರೂ ಸ್ನೇಹಿತರು ಒಟ್ಟಿಗೆ ಪ್ರಾಣ ಕಳೆದುಕೊಂಡು, ಒಟ್ಟಿಗೆ ಪಂಚಭೂತಗಳಲ್ಲಿ ವಿಲೀನರಾದರು.

ಅಂಚೆ-ಕಚೇರಿ, ಬ್ಯಾಂಕುಗಳ ಮುಂದೆ ಕ್ಯೂ…

bank Banaswadi

₹ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ರಾಜ್ಯಾದ್ಯಂತ ಗುರುವಾರ ಅಂಚೆ ಕಚೇರಿ ಹಾಗೂ ಬ್ಯಾಂಕುಗಳ ಮುಂದೆ ಜನ ಮುಗಿಬಿದ್ದರು. ಅದರಲ್ಲೂ ರಾಜಧಾನಿಯಲ್ಲಿ ಎಲ್ಲಾ ಅಂಚೆ ಕಚೇರಿ ಹಾಗೂ ಬ್ಯಾಂಕುಗಳ ಮುಂದೆ ಗ್ರಾಹಕರ ಸರತಿ ಸಾಲು ಹನುಮಂತನ ಬಾಲದಂತೆ ಬೆಳೆದಿತ್ತು. ಕೇಂದ್ರ ಸರ್ಕಾರ ಈ ಹಿಂದೆ ಇದ್ದ ಈ ಎರಡು ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಅಗತ್ಯ ಖರ್ಚಿಗಾಗಿ ಹೊಸ ನೋಟುಗಳನ್ನು ಪಡೆಯಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದು ಸಾಮಾನ್ಯವಾಗಿತ್ತು. ಮತ್ತೆ ಕೆಲವೆಡೆ ಹೊಸ ನೋಟುಗಳು ಖಾಲಿಯಾದ ಪರಿಣಾಮ ಕೆಲವೆಡೆ ₹ 100 ಮತ್ತು 50 ಮುಖಬೆಲೆಯ ನೋಟು ನೀಡಲಾಯಿತು. ಮತ್ತೆ ಕೆಲವೆಡೆ ಜನರಿಗೆ ಬದಲಿ ಹಣ ಸಿಗದೆ ನಿರಾಸೆಯೂ ಆಯಿತು.

Leave a Reply