ಭಾರತ- ಜಪಾನ್ ನಡುವೆ ಐತಿಹಾಸಿಕ ಪರಮಾಣು ಒಪ್ಪಂದ, ನಿವೃತ್ತ ನ್ಯಾಯಮೂರ್ತಿ ಕಾಟ್ಜು ವಿರುದ್ಧ ನ್ಯಾಯಾಂಗ ನಿಂದನೆ ನೊಟೀಸ್, ವಿಪಕ್ಷಗಳಿಗೆ ಟಾಂಗ್ ಕೊಟ್ರು ಅಮಿತ್ ಶಾ..

People waiting in long queue to exchange 500 and 1000 rupees currency notes at GPO in Bengaluru on Friday.

ಬೆಂಗಳೂರು ಅಂಚೆ ಕಚೇರಿ ಮುಖ್ಯ ಶಾಖೆಯಲ್ಲಿ (ಜಿಪಿಒ) ಶುಕ್ರವಾರ ಹಳೆ ನೋಟುಗಳನ್ನು ಬದಲಿ ಮಾಡಿಕೊಳ್ಳಲು ಸರದಿ ಸಾಲಿನಲ್ಲಿ ನಿಂತಿದ್ದ ಜನರು ಮಾಧ್ಯಮಗಳ ಕ್ಯಾಮೆರಾಕ್ಕೆ ಪೋಸ್ ಕೊಟ್ಟಿದ್ದು ಹೀಗೆ…

ಡಿಜಿಟಲ್ ಕನ್ನಡ ಟೀಮ್:

ಭಾರತ-ಜಪಾನ್ ಒಪ್ಪಂದ

ಸುದೀರ್ಘ ಆರು ವರ್ಷಗಳ ಪ್ರಯತ್ನದ ನಂತರ ಜಪಾನ್ ಜತೆ ನಾಗರೀಕ ಪರಮಾಣು ಒಪ್ಪಂದ ಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಇದೊಂದು ಐತಿಹಾಸಿಕ ಒಪ್ಪಂದ ಎಂದು ಪರಿಗಣಿಸಲಾಗಿದೆ. ಕಾರಣ, ಜಪಾನ್ ಇದೇ ಮೊದಲ ಬಾರಿಗೆ ಅಣ್ವಸ್ತ್ರ ಪ್ರಸರಣ ವಿರೋಧಿ ಒಪ್ಪಂದ (ಎನ್ ಪಿಟಿ) ಸಹಿ ಹಾಕದ ರಾಷ್ಟ್ರವೊಂದರ ಜತೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿರುವುದು. ಇದು ಭಾರತದ ಮೇಲೆ ಜಪಾನ್ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಮೂಲತಃ ಜಪಾನ್ ಅಣ್ವಸ್ತ್ರ ದಾಳಿಯಿಂದ ತತ್ತರಿಸಿದ ದೇಶ. ಹೀಗಾಗಿ ಯಾವುದೇ ದೇಶದ ಜತೆ ಅದು ಪರಮಾಣು ಒಪ್ಪಂದ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಈ ಒಪ್ಪಂದದ ಮೂಲಕ ಭಾರತ ಪರಮಾಣು ಪೂರೈಕೆ ಸಮೂಹದ ಸದಸ್ಯತ್ವ ಪಡೆಯಲು ಜಪಾನ್ ಬೆಂಬಲ ಕೊಟ್ಟಂತಾಗಿದೆ. ಇದು ನಾಗರೀಕ ಪರಮಾಣು ಒಪ್ಪಂದವಾಗಿದ್ದು, ರಕ್ಷಣಾ ಕ್ಷೇತ್ರ ಹೊರತುಪಡಿಸಿದ ಉದ್ದೇಶಗಳಿಗೆ ಅದರ ಪೂರೈಕೆಗೆ ಸಹಾಯವಾಗಲಿದೆ. ಈ ಒಪ್ಪಂದದ ಮೂಲಕ ಜಪಾನ್ ಭಾರತಕ್ಕೆ ಪರಮಾಣು ಇಂಧನ ಪೂರೈಸಲಿದೆ.

ಈ ವೇಳೆ ಮಾತನಾಡಿದ ಮೋದಿ ಹೇಳಿದಿಷ್ಟು: ‘ನಾನು ಜಪಾನ್ ಪ್ರಧಾನಿ ಅಬೆ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಇಂದಿನ ಸಭೆಯಿಂದ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಆರ್ಥಿಕ-ವ್ಯಾಪಾರ ಸಂಬಂಧಗಳ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉತ್ಪನ್ನ ವಿನಿಮಯ, ಶುದ್ಧ ಇಂಧನ ಪೂರೈಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ’.

ಕಾಟ್ಜು ಅವರಿಗೆ ನ್ಯಾಯಾಂಗ ನಿಂದನೆ ನೊಟೀಸ್

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೆಯ ಕಾಟ್ಜು ಅವರಿಗೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿಯಾಗಿದೆ. ಸೌಮ್ಯ ಅತ್ಯಾಚಾರ ಪ್ರಕರಣದ ತೀರ್ಪು ಕುರಿತು ಕಾಟ್ಜು ಟೀಕೆ ಮಾಡಿದ್ದರು. ಅಲ್ಲದೇ ತೀರ್ಪು ಕೊಟ್ಟ ನ್ಯಾಯಮೂರ್ತಿಗಳ ಬಗ್ಗೆ ಕಿಡಿಕಾರಿದ್ದರು. ಸುಪ್ರೀಂ ಕೋರ್ಟಿನಿಂದ ನೊಟೀಸ್ ಪಡೆದ ನಂತರ ಕಾಟ್ಜು ಅವರು ಪ್ರತಿಕ್ರಿಯಿಸಿರೋದು ಹೀಗೆ – ‘ನ್ಯಾ. ಗೊಗೊಯ್ ಅವರೇ ನನ್ನನ್ನು ಹೆದರಿಸಲು ಬರಬೇಡಿ. ನಿಮಗೇನು ತೋಚುತ್ತದೊ ಅದನ್ನೇ ಮಾಡಿ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ.’

ವಿಪಕ್ಷಗಳಿಗೆ ಅಮಿತ್ ಶಾ ಟಾಂಗ್

‘ಕಾಳಧನ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ₹500, 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದೆ. ಇದರಿಂದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಆ ಆದ್ಮಿ ಪಕ್ಷದ ನಾಯಕರು ಏಕೆ ಹೆದರುತ್ತಿದ್ದಾರೋ ಗೊತ್ತಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಿಚಾಯಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಬಡವರಿಗೆ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ವಿಪಕ್ಷಗಳು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಶಾ, ‘ಸರ್ಕಾರದ ನಿರ್ಧಾರದಿಂದ ಕಪ್ಪು ಹಣ ಹೊಂದಿರುವವರು ಗಾಬರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿಪಕ್ಷಗಳು ಏಕೆ ಆಕ್ರೋಶಗೊಳ್ಳುತ್ತಿವೆ. ಇದರಿದಲೇ ಅವುಗಳ ನಿಜ ಬಂಡವಾಳ ಗೊತ್ತಾಗುತ್ತದೆ’ ಎಂದು ಟಾಂಗ್ ನೀಡಿದರು.

ಕ್ಯೂನಲ್ಲಿ ನಿಂತ ರಾಹುಲ್…

ನವದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾರ್ವಜನಿಕರ ಜತೆ ಸರದಿ ಸಾಲಿನಲ್ಲಿ ನಿಂತು ಹಣ ಬದಲಾವಣೆ ಮಾಡಿಕೊಳ್ಳಲು ಮುಂದಾದರು. ಈ ವೇಳೆ ಕೇಂದ್ರವನ್ನು ಖಂಡಿಸಿದ ರಾಹುಲ್, ‘ಸರ್ಕಾರದ ನಿರ್ಧಾರದಿಂದ ಬಡವರಿಗೆ ತೊಂದರೆಯಾಗುತ್ತಿದೆ. ಕಪ್ಪು ಹಣ ಕೊಳ್ಳೆ ಹೊಡೆದವರು ಇಲ್ಲಿಗೆ ಬಂದು ಕ್ಯೂನಲ್ಲಿ ನಿಂತು ಹೆಣಗಾಡುತ್ತಿಲ್ಲ. ಬದಲಿಗೆ ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ. ಇದು ಸೂಟ್-ಬೂಟ್ ಹಾಕುವ ಜನರಿಗೆ ನೆರವಾಗುವ ಸರ್ಕಾರ’ ಎಂದು ಟೀಕಿಸಿದರು. ಆದರೆ ಆಡಳಿತ ಪಕ್ಷ ಬಿಜೆಪಿ ರಾಹುಲ್ ಹೇಳಿಕೆಯನ್ನು ತಳ್ಳಿಹಾಕಿದ್ದು, ರಾಹುಲ್ ಅವರು ಮಾಧ್ಯಮಗಳ ಮುಂದೆ ಪೋಸ್ ನೀಡಲು ಈ ಅವಕಾಶ ಬಳಸಿಕೊಂಡಿದ್ದಾರೆ ಎಂದಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಗಳು…

  • ₹ 500, 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನು ರಾಜ್ಯ ಹೈಕೋರ್ಟ್ ಶ್ಲಾಘಿಸಿದೆ. ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಮಹಮದ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠ ಕೇಂದ್ರದ ಈ ನಿರ್ಧಾರ ಮಾಸ್ಟರ್ ಸ್ಟ್ರೋಕ್ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
  • ಬದಲಿ ನೋಟು ಪಡೆಯಲು ಹಾಗೂ ಹಣ ಜಮಾ ಮಾಡಲು ಬ್ಯಾಂಕುಗಳು ಮತ್ತು ಅಂಚೆ ಕಚೇರಿ ಮುಂದೆ ದೊಡ್ಡ ಪ್ರಮಾಣದಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಕೆಲವೆಡೆ ನೂಕುನುಗ್ಗಲು ಸಂಭವಿಸಿತು. ಕೆಲವರು ಬದಲಿ ನೋಟು ಸಿಗದೆ ನಿರಾಸೆಯಿಂದ ಮರಳಿದರು.
  • ಟಿಪ್ಪು ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆಯೇ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಪ್ರಾಥಮಿಕ ಮತ್ತು ಪ್ರೊಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಸಂಪುಟದಿಂದ ಕೈಬಿಟ್ಟು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ.

Leave a Reply