ಚೀನಾ ಹೊಟ್ಟೆಯಲ್ಲಿ ಕಳ್ಳಿಹಾಲು ಸುರಿದಿರುವ ಮೋದಿ ಟೊಕಿಯೊ ಪ್ರವಾಸ, ಅಣ್ವಸ್ತ್ರ, ರೈಲ್ವೆ ಒಪ್ಪಂದಗಳಲ್ಲಿ ಗಟ್ಟಿ ಆಗುತ್ತಿದೆ ಭಾರತ- ಜಪಾನ್ ಸಹವಾಸ!

ಡಿಜಿಟಲ್ ಕನ್ನಡ ಟೀಮ್:

ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಪಾನಿಗೆ ಪ್ರವಾಸ ಬೆಳೆಸಿದ್ದು, ಅಲ್ಲಿನ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿ ಮಾಡಿ ಅಣ್ವಸ್ತ್ರ ಸಹಕಾರ, ರೈಲ್ವೆ ಒಪ್ಪಂದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಮಧ್ಯೆ ಚೀನಾ ಈ ಇಬ್ಬರು ನಾಯಕರ ಭೇಟಿಯನ್ನು ಓರೆಗಣ್ಣಿಂದ ನೋಡುತ್ತಿದೆ.

ಭಾರತ ಮತ್ತು ಜಪಾನ್ ಸ್ನೇಹ ವೃದ್ಧಿಯಾದಲ್ಲಿ ಚೀನಾಕ್ಕೆ ಏನು ಕಷ್ಟ ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವಣ ಗುದ್ದಾಟ ಜಾಗತಿಕ ಮಟ್ಟದಲ್ಲಿ ಎಷ್ಟು ಗಮನ ಸೆಳೆದಿದೆಯೋ, ಅಷ್ಟೇ ಪ್ರಮಾಣದಲ್ಲಿ ದಕ್ಷಿಣ ಚೀನಾ ಸಮುದ್ರದ ಮೇಲಿನ ಹಕ್ಕು ಸಾಧನೆಗೆ ಚೀನಾ ಮತ್ತು ಜಪಾನ್ ಕಿತ್ತಾಟ ಸದ್ದು ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಭಾರತ- ಜಪಾನ್ ನಡುವಣ ಪ್ರಮುಖ ಒಪ್ಪಂದಗಳು ಚೀನಾದ ಚಿತ್ತ ಕೆಡಲು ಕಾರಣವಾಗಿವೆ.

ಪ್ರಬಲ ಚೀನಾ ವಿರುದ್ಧ ಜಪಾನ್ ಮೇಲುಗೈ ಸಾಧಿಸಬೇಕಾದರೆ ತಾಂತ್ರಿಕ ಪೈಪೋಟಿ ನೀಡಬೇಕು. ಈ ವಿಚಾರದಲ್ಲಿ ಜಪಾನ್ ಪಾಲಿಗಿರುವ ದೊಡ್ಡ ಅಸ್ತ್ರವೆಂದರೆ ಭಾರತದ ಜತೆಗಿನ ಹೈಸ್ಪೀಡ್ ರೈಲು ಒಪ್ಪಂದ. ಕಳೆದ ವರ್ಷ ಮುಂಬೈ ಮತ್ತು  ಅಹ್ಮದಾಬಾದ್ ನಡುವಣ ಹೈಸ್ಪೀಡ್ ರೈಲು ಮಾರ್ಗ ನಿರ್ಮಾಣಕ್ಕೆ ಭಾರತವು ಜಪಾನ್ ಅನ್ನು ಪ್ರಮುಖ ಸಹಭಾಗಿ ರಾಷ್ಟ್ರವಾಗಿ ಪರಿಗಣಿಸಿದೆ. ಈ ಕಾಮಗಾರಿಯ ಒಟ್ಟು ವೆಚ್ಚ ₹ 98 ಸಾವಿರ ಕೋಟಿ (15 ಬಿಲಿಯನ್ ಅಮೆರಿಕನ್ ಡಾಲರ್). ಇದು ಕೇವಲ ಆರಂಭ ಅಷ್ಟೇ… ಭಾರತ ಇದೇ ರೀತಿಯ ಇನ್ನು ನಾಲ್ಕು ಹೈಸ್ಪೀಡ್ ಮಾರ್ಗ ನಿರ್ಮಾಣದ ಉದ್ದೇಶ ಹೊಂದಿದ್ದು, ಈ ಒಪ್ಪಂದದಿಂದ ಇತರೆ ಯೋಜನೆಗಳೂ ತಮ್ಮ ಮಡಿಲಿಗೆ ಬೀಳುತ್ತವೆ ಎಂಬುದು ಅಬೆ ಅವರ ನಿರೀಕ್ಷೆ.

ನಿತ್ಯ 2.3 ಕೋಟಿ ಜನಯಾನದ ಭಾರತೀಯ ರೈಲ್ವೆ ವಿಶ್ವದಲ್ಲೇ ಅತಿದೊಡ್ಡ ಸಾರಿಗೆ ವ್ಯವಸ್ಥೆ. ಬ್ರಿಟೀಷರ ಕಾಲದ ರೈಲ್ವೆ ಮಾರ್ಗ, ಮಂದಗತಿಯ ರೈಲು ಸಂಚಾರ ಸೇರಿದಂತೆ ಹಲವಾರು ಸವಾಲುಗಳನ್ನುಭಾರತೀಯ ರೈಲ್ವೆ ಹೊಂದಿದೆ. ಮೋದಿ ಸರ್ಕಾರವು 2020ರ ವೇಳೆಗೆ ಹೊಸ ರೈಲ್ವೆ ಮಾರ್ಗಗಳು, ಹೈಸ್ಪೀಡ್ ರೈಲುಗಳು, ಆಧುನಿಕ ರೈಲ್ವೆ ನಿಲ್ದಾಣ, ಬುಲೆಟ್ ಟ್ರೈನ್ ಸೇರಿದಂತೆ ಅನೇಕ ಪ್ರಮುಖ ಯೋಜನೆಗಳಿಗೆ ಒಟ್ಟು ₹ 8.5 ಟ್ರಿಲಿಯನ್ (8.50 ಲಕ್ಷ ಕೋಟಿ) ಅನ್ನು ಖರ್ಚು ಮಾಡಲು ಯೋಜಿಸಿದೆ. ಹೀಗಾಗಿ ಭಾರತದ ಈ ಎಲ್ಲಾ ಯೋಜನೆಗಳ ಒಪ್ಪಂದವನ್ನು ತಾನು ಬಾಚಿಕೊಳ್ಳಬೇಕು ಎಂಬುದು ಜಪಾನ್ ಗುರಿ. ಪ್ರಸ್ತುತ ಏಷ್ಯಾದಲ್ಲಿ ರೈಲ್ವೆ ಸಾಧನ ಸರಬರಾಜಿಗೆ ಸಂಬಂಧಪಟ್ಟಂತ ಚೀನಾ ಮತ್ತು ಜಪಾನ್ ನಡುವೆ ಪ್ರಬಲ ಪೈಪೋಟಿ ಇದೆ. ಹೀಗಾಗಿ ಜಪಾನ್ ಪಾಲಿಗೆ ಭಾರತದ ಈ ಒಪ್ಪಂದಗಳು ಅತ್ಯಂತ ಮಹತ್ವದ್ದಾಗಿದೆ.

ಭಾರತ ಮತ್ತು ಜಪಾನ್ ನಡುವಣ ಒಪ್ಪಂದವನ್ನು ಜಪಾನಿನ ಟೆಂಪಲ್ ವಿಶ್ವವಿದ್ಯಾಲಯದ ಏಷ್ಯನ್ ಸ್ಟಡೀಸ್ ನಿರ್ದೇಶಕ ಜೆಫ್ ಕಿಂಗ್ ಸ್ಟನ್ ವಿಶ್ಲೇಷಿಸೋದು ಹೀಗೆ – ‘ಸದ್ಯ ಏಷ್ಯಾದಲ್ಲಿ ಹೈಸ್ಪೀಡ್ ರೈಲಿಗೆ ಸಂಬಂಧಿಸಿದಂತೆ ಚೀನಾ ಹಾಗೂ ಜಪಾನ್ ನಡುವೆ ತೀವ್ರ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ಭಾರತದ ಜತೆಗಿನ ಒಪ್ಪಂದ ಕೇವಲ ವ್ಯಾಪಾರವಾಗಿ ಮಾತ್ರ ಉಳಿದಿಲ್ಲ. ಅದೊಂದು ಪ್ರತಿಷ್ಠೆಯ ಸವಾಲು ಹಾಗೂ ತಂತ್ರಗಾರಿಕೆಯಾಗಿಯೂ ಪರಿಣಮಿಸಿದೆ. ಇಲ್ಲಿ ಭಾರತವು ಪ್ರಧಾನಿ ಮೋದಿ ಅವರು ಈ ಒಪ್ಪಂದವನ್ನು ಯಾರಿಗೆ ಕೊಟ್ದರೆ ಲಾಭ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೋದಿ ಸರ್ಕಾರವು ಅಮೆರಿಕ ಹಾಗೂ ಜಪಾನ್ ಕಡೆ ಹೆಚ್ಚು ಮುಖಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಾಗಿ ಭಾರತ- ಜಪಾನ್ ಸಂಬಂಧ ಗಟ್ಟಿಯಾದರೆ ಚೀನಾಗೆ ಹಿನ್ನಡೆ ಖಚಿತ.’

ಇನ್ನು ಜಪಾನ್ ಜತೆಗಿನ ಅಣ್ವಸ್ತ್ರ ಸಹಕಾರ ಒಪ್ಪಂದ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದು. ಮೋದಿ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಜತೆಗಿನ ಭದ್ರತಾ ಒಪ್ಪಂದಗಳು ಹಾಗೂ ಜಪಾನ್ ಜತೆಗಿನ ವ್ಯಾಪಾರಗಳು ಹೆಚ್ಚುತ್ತಲೇ ಇವೆ. ಪಾಕಿಸ್ತಾನದ ಬೆನ್ನಿಗೆ ಚೀನಾ ನಿಂತಿರುವ ಸಂದರ್ಭದಲ್ಲಿ ಭಾರತ ಮತ್ತು ಜಪಾನ್ ಕೈ ಜೋಡಿಸುತ್ತಿರುವುದು ಚೀನಾಗೆ ಮತ್ತೊಂದು ಹಿನ್ನಡೆಯೇ ಸರಿ.

ಇನ್ನು ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ ಭಾರತವು ಜಪಾನ್ ಪರ ನಿಂತರೆ ಕಷ್ಟ ಎಂದು ಚೀನಾ ತಲೆ ಕೆಡಿಸಿಕೊಳ್ಳುತ್ತಿದೆ. ಈಗಾಗಲೇ ಚೀನಾ ಎನ್ಎಸ್ಜಿ ಸಮೂಹಕ್ಕೆ ಭಾರತದ ಸೇರ್ಪಡೆ, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ, ಉಗ್ರ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯಲ್ಲಿ ಉಗ್ರ ಎಂದು ನಿರ್ಧರಿಸುವ ಭಾರತದ ಪ್ರಯತ್ನ ಸೇರಿದಂತೆ ಇತರ ಪ್ರಮುಖ ವಿಚಾರಗಳಲ್ಲಿ ಚೀನಾ ಭಾರತದ ವಿರೋಧ ಕಟ್ಟುಕೊಂಡಿದೆ. ಹೀಗಾಗಿ ಭಾರತ ಪ್ರತಿಕಾರ ತಿರಿಸಿಕೊಳ್ಳಬಹುದೇನೊ ಎಂಬುದು ಅದರ ಆತಂಕ.

ಮೋದಿ ಮೂರು ದಿನಗಳ ಕಾಲ ಟೊಕಿಯೋ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ಅಲ್ಲಿನ ರಾಜ ಅಕಿಹಿಟೊ ಅವರ ಜತೆ ಮಾತಾಡಿದರು. ಅಲ್ಲದೆ ಜಪಾನ್ ಉದ್ದಿಮೆದಾರರಿಗೆ ಭಾರತದಲ್ಲಿ ಬಂಡವಾಳ ಹೂಡಲು ಆಹ್ವಾನ ಕೊಟ್ಟಿದ್ದು, ಭಾರತದಲ್ಲಿ ಮತ್ತಷ್ಟು ಆರ್ಥಿಕ ಸುಧಾರಣೆಯ ಭರವಸೆ ಮೂಡಿಸಿದ್ದಾರೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರ ಪ್ರವಾಸ ಕೇವಲ ಭಾರತ ಮತ್ತು ಜಪಾನ್ ದೇಶಗಳಿಗೆ ಮಾತ್ರವಲ್ಲ, ಚೀನಾ ಪಾಲಿಗೂ ಮಹತ್ವದ್ದಾಗಿ ಪರಿಣಮಿಸಿದೆ.

Leave a Reply