ತನ್ವೀರ್ ಸೇಠರೇ.. ಕತೆ ಕಟ್ಟೋದು ಬಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಷ್ಟು ಬೇಕಾದ್ರೂ ಬ್ಲೂಫಿಲಂ ನೋಡ್ಕಳಿ..

ಡಿಜಿಟಲ್ ಕನ್ನಡ ವಿಶೇಷ

‘ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ..’ ಅಂತಾರಲ್ಲ ಹಂಗಾಗಿದೆ ಟಿಪ್ಪು ಜಯಂತಿಯಲ್ಲಿ ಬ್ಲೂಫಿಲಂ ನೋಡಿ, ನಾನೇನೂ ಮಾಡಿಯೇ ಇಲ್ಲ ಅಂತಿರೋ ಸನ್ಮಾನ್ಯ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಕತೆ.

ಸುಳ್ಳು ಹೇಳಿದ್ರೂ ಸತ್ಯದ ತಲೆ ಮೇಲೆ ಹೊಡೆದಂತಿರಬೇಕು ಅನ್ನೋದನ್ನು ಸ್ವಲ್ಪ ಹೆಚ್ಚೇ ಅರ್ಥ ಮಾಡಿಕೊಂಡಿರೋ ತನ್ವೀರ್ ಸೇಠ್ ಮೊಬೈಲ್ ನಲ್ಲಿ ಅರೆಬೆತ್ತಲೆ ಹುಡುಗಿ ಚಿತ್ರ ನೋಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡರೂ ಸುಳ್ಳಿನ ಮೇಲೆ ಸುಳ್ಳಿನ ಸರ ಪೋಣಿಸಿ ಟಿಪ್ಪು ಜಯಂತಿಗೇ ಹಾರ ಹಾಕಲು ನೋಡುತ್ತಿದ್ದಾರೆ. ಇವರು ಬರೀ ತಾವು ವಹಿಸಿಕೊಂಡಿರುವ ಮಂತ್ರಿ ಪದವಿಗಷ್ಟೇ ಅಲ್ಲ, ‘ಸಮರ ಪ್ರೇಮಿ ಟಿಪ್ಪು’ವಿಗೂ ಅಪಮಾನ ಮಾಡುತ್ತಿದ್ದಾರೆ.

ಸತ್ಯವನ್ನು ಸತ್ಯದಿಂದ ಗೆಲ್ಲೋದೇ ಕಷ್ಟ ಆಗಿರೋ ಈ ಕಾಲದಲ್ಲಿ ಮಾನ್ಯ ಮಂತ್ರಿಗಳು ಸುಳ್ಳುಗಳಿಂದ ಸುಳ್ಳನ್ನು ಜಯಿಸಲು ವಿಫಲ ಯತ್ನ ಮಾಡುತ್ತಿದ್ದಾರೆ. ಹಿಂದೆ ಇದೇ ರೀತಿ ಸದನದಲ್ಲಿ ಬ್ಲೂಫಿಲಂ ನೋಡುವಾಗ ಸಿಕ್ಕಿಬಿದ್ದ ಡಿ.ವಿ. ಸದಾನಂದಗೌಡ ಸಂಪುಟ ಸಹೋದ್ಯೋಗಿಗಳಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಹಾಗೂ ಕೃಷ್ಣ ಪಾಲೇಮಾರ್ ರಾಜೀನಾಮೆ ನೀಡುವವರೆಗೂ ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಬಿಟ್ಟಿರಲಿಲ್ಲ. ಈಗ ಪಾತ್ರಗಳು ಅದಲು ಬದಲಾಗಿವೆ. ಅವರದೇ ಸಂಪುಟದ ಸಹೋದ್ಯೋಗಿ ಸೇಠ್ ಅವರಿಂದ ರಾಜೀನಾಮೆ ಪಡೆಯಬೇಕಾದ ಸ್ಥಾನದಲ್ಲಿ ಅವರಿದ್ದಾರೆ. ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಏನೂ ಬೇಕಾದರೂ ಸಬೂಬು ಹೇಳಿಕೊಳ್ಳಬಹುದು. ಆದರೆ ಅವರ ಆತ್ಮಸಾಕ್ಷಿಯನ್ನು ಅವರೇ ಕೇಳಿಕೊಂಡಾಗ ತನ್ವೀರ್ ರಾಜೀನಾಮೆ ಪಡೆಯದೆ ಗತ್ಯಂತರವಿಲ್ಲ. ಈಗಾಗಲೇ ಖಾಸಗಿಯಾಗಿ ಅವರು ತನ್ವೀರ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ. ಇದು ಶ್ಲಾಘನೀಯವೇ. ಆದರೆ ಕ್ರಮ ಇಷ್ಟಕ್ಕೇ ಸೀಮಿತವಾಗಬಾರದು. ಏಕೆಂದರೆ ಸಿದ್ದರಾಮಯ್ಯನವರು ಸುಮ್ಮಸುಮ್ಮನೆ ತರಾಟೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಅವರಿಗೆ ತನ್ವೀರ್ ಮಾಡಿದ್ದು ತಪ್ಪು ಎಂದು ಅನಿಸಿದ್ದರಿಂದಲೇ ಹೀಗೆ ತರಾಟೆಗೆ ತೆಗೆದುಕೊಳ್ಳಲು ಸಾಧ್ಯವಾಗಿದ್ದು. ತಪ್ಪು ಮಾಡಿದ ಮೇಲೆ ರಾಜೀನಾಮೆ ಪಡೆಯಬೇಕಲ್ಲ. ಆ ಮೂಲಕ ಹಿಂದೆ ತಾವೇ ನೀರೆರದ ಪರಂಪರೆಯನ್ನು ಎತ್ತಿ ಹಿಡಿಯಬೇಕಲ್ಲ. ಆಗಷ್ಟೇ ಅವರ ಮಾತು ಮತ್ತು ಕೃತಿಯಲ್ಲಿ ಸಾಮ್ಯ ಕಾಣಬಹುದು.

ನಿಜ, ಬಿಜೆಪಿಯವರ ಪ್ರಬಲ ವಿರೋಧದ ನಡುವೆ ಸಿದ್ದರಾಮಯ್ಯನವರ ಸರಕಾರ ಅಷ್ಟೆಲ್ಲ ಪಡಿಪಾಟಿಲು ಬಿದ್ದು, ಆಚರಿಸಿದ ಟಿಪ್ಪು ಜಯಂತಿಗೆ ತನ್ವೀರ್ ಸಾಹೇಬರು ಕ್ಷಣಮಾತ್ರದಲ್ಲಿ ಮಸಿಸ್ನಾನ ಮಾಡಿಸಿದ್ದಾರೆ. ಸರಕಾರದ ಹಠಕ್ಕೆ ಬಿಜೆಪಿ ವಿರೋಧಕ್ಕಿಂತಲೂ ಹೆಚ್ಚಿನ ಅನಾಹುತ ಸೇಠರ ಬ್ಲೂಫಿಲಂ ವೀಕ್ಷಣೆಯಿಂದ ಆಗಿ ಹೋಗಿದೆ.

ತಪ್ಪು ಮಾಡಿ ಸಿಕ್ಕಿಬಿದ್ದರೂ ತನ್ವೀರ್ ಅವರು ತೆಗೆದ ವರಸೆಗಳು ಅವರು ನೋಡಿದ ನೀಲಿಚಿತ್ರಕ್ಕಿಂತಲೂ ಕಡುಕಪ್ಪಾಗಿತ್ತು. ಒಂದ್ಸಾರಿ ಹೇಳುತ್ತಾರೆ, ನಾನು ಚಿತ್ರ ನೋಡಿಯೇ ಇಲ್ಲ ಅಂತ. ಇನ್ನೊಂದ್ಸಾರಿ ಹೇಳುತ್ತಾರೆ ವಾಟ್ಸಪ್ ನಲ್ಲಿ ಯಾರೋ ಕಳುಹಿಸಿದ್ದರು ಅಂತ. ಮತ್ತೊಂದ್ಸಾರಿ ಮಾರ್ಮಿಕವಾಗಿ ನುಲಿಯುತ್ತಾರೆ ಮನೆ ಬಿಟ್ಟು ಬಂದು ಮೂರ್ನಾಲ್ಕು ತಿಂಗಳಾಗಿತ್ತು ಅಂತ. ದೃಶ್ಯಮಾಧ್ಯಮದವರು ಕಣ್ಣುಕುಕ್ಕುವಂತೆ ಸೇಠ್ ಅವರ ಮುಸುಡಿ ಸಮೇತ, ಯುವತಿಯ ಅರೆಬೆತ್ತಲೆ ಚಿತ್ತವಿದ್ದ ಮೊಬೈಲ್ ಮೇಲೆ ಅವರು ಬೆರಳಾಡಿಸುತ್ತಿದ್ದ ಕಲಾವೈಖರಿಯನ್ನು ಯಥವತ್ತಾಗಿ ಚಿತ್ರಿಸಿ ತೋರಿಸಿದ್ದಾರೆ. ಹೀಗಾಗಿ ಆ ಚಿತ್ರ ನೋಡುತ್ತಿದ್ದ ವ್ಯಕ್ತಿಯನ್ನು ಅಜೀಜ್ ಸೇಠ್ ಎಂದು ಕರೆಯಲು ಸಾಧ್ಯವಿಲ್ಲ. ಇನ್ನು ಎರಡನೆಯದು ಯಾರೋ ಕಳುಹಿಸಿದ್ದು ಅಂತ. ಹಾಗಾದರೆ ಕಳುಹಿಸಿದನು ಯಾರು ಅಂತ ಗೊತ್ತಿರಬೇಕಲ್ಲ. ಹಾಗೆ ಕಳುಹಿಸಿದವರು ಯಾರು, ಅವರೇಕೆ ಕಳುಹಿಸಿದರು, ಅವರ ನಂಬರ್ ಏನು ಅಂತ ಹೇಳಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಯಾವನೋ ಕಳುಹಿಸಿದ ಅಂತಾನೇ ಇಟ್ಟುಕೊಳ್ಳಿ, ಅದನ್ನು ಸರಣಿ ಪ್ರಕಾರ ಉರುಳಿಸಿ (ಸ್ಕ್ರಾಲ್ ಮಾಡಿ) ನೋಡ್ತಾ ಇದ್ದುದರಲ್ಲಿ ಕಳುಹಿಸಿದವನಿಗಿಂತ ತನ್ವೀರ್ ಅವರ ತೆವಲೇ ಢಾಳಾಗಿ ಕಾಣುತ್ತಿತ್ತು. ಅದೇನು ಕಣ್ಕಟ್ ಆಟವೇ ನೋಡುಗರನ್ನು ವಂಚಿಸೋದಿಕ್ಕೆ. ಇನ್ನು ಫೈನಲ್ ಆಗಿ, ಮನೆ ಬಿಟ್ಟು ಬಂದು ಮೂರ್ನಾಲ್ಕು ತಿಂಗಳಾಗಿತ್ತು ಅಂದದ್ದು. ಹಾಗಾದರೆ ಮನೆಯಿಂದ ದೂರ ಇದ್ದುದರ ವಿರಹದ ಬೇಗೆಯನ್ನು ಈ ರೀತಿ ಅರೆಬೆತ್ತಲೆ ಚಿತ್ರ ನೋಡುವ ತೆವಲಿನಿಂದ ತೀರಿಸಿಕೊಂಡೆ ಅಂತ ಅದರ ಅರ್ಥವೇ? ಅವರ ಹೇಳಿಕೆಗಳನ್ನು ಯಾವ ಕೋನದಿಂದ ನೋಡಿದರೂ ಸತ್ಯ ಗೋಚರಿಸುತ್ತಿಲ್ಲ. ಏಕೆಂದರೆ ಸತ್ಯಕ್ಕೆ ಒಂದೇ ಮುಖ. ಸುಳ್ಳಿಗೆ ಹತ್ತಾರು. ಹೀಗಾಗಿ ಅವರು ಒಂದರ ಮೇಲೆ ಒಂದರಂತೆ ಉರುಳಿಸುತ್ತಿರುವ ಸುಳ್ಳಿನ ಬಂಡೆಗಳು ಅವರ ಬುಡಕ್ಕೆ ಬಂದು ನಿಂತಿವೆ.

ಇಷ್ಟೆಲ್ಲ ಆದ ಮೇಲೂ ಅವರು ಯಾವ ಮಟ್ಟಕ್ಕೆ ಸುಳ್ಳು ಹೇಳಿದರೆಂದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾರಕೂಡ ಚನ್ನವೀರ ಶಿವಾಚಾರ್ಯರ ಮುಂದೆಯೇ ಪ್ರಮಾಣ ಮಾಡಿಬಿಟ್ಟರು. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು!

ಎಲ್ಲರ ಕಣ್ಣೆದರು ತಪ್ಪು ಮಾಡಿ, ತಪ್ಪು ಮಾಡಿಯೇ ಇಲ್ಲ ಎಂದು ಸಮರ್ಥಿಸಿಕೊಳ್ಳುವ ಇಂಥವರು ಸಚಿವರಾಗಿ ಮುಂದುವರಿಯುವುದು ನಾಡಿನ ದುರಂತ. ಇದನ್ನು ಮನಗಂಡು ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ತಾವೇ ಪಟ್ಟು ಹಿಡಿದು ಪಡೆಸಿಕೊಂಡ ಬಿಜೆಪಿ ಸರಕಾರದ ಸಚಿವತ್ರಯರ ರಾಜೀನಾಮೆಗೆ ಸಿದ್ದರಾಮಯ್ಯನವರೇ ದ್ರೋಹ ಬಗೆದಂತಾಗುತ್ತದೆ.

Leave a Reply