ಮಾಸ್ತಿಗುಡಿ ತಂಡದ ಮೂವರು ಆರೋಪಿಗಳ ಶರಣು, ನೋಟು ಬದಲು ಸಮಸ್ಯೆ 2-3 ವಾರದಲ್ಲಿ ಕಡಿಮೆ ಅಂದ್ರು ಜೇಟ್ಲಿ, ಹೊಸ ನೋಟು ಝೆರಾಕ್ಸ್ ಮೋಸ, ಹಳೇ ನೋಟಲ್ಲೇ ಆಸ್ತಿ ತೆರಿಗೆ ಪಾವತಿ ಅವಕಾಶ

ಮಾಸ್ತಿಗುಡಿ ದುರಂತ ಪ್ರಕರಣದ ಆರೋಪಿಗಳಾಗಿವ ಚಿತ್ರ ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ದು ಹಾಗೂ ಸಾಹಸ ನಿರ್ದೇಶಕ ರವಿವರ್ಮಾ ಅವರನ್ನು ಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಶರಣಾಗುವಂತೆ ಮಾಡಿದ ನಟ ದುನಿಯಾ ವಿಜಯ್.

ಡಿಜಿಟಲ್ ಕನ್ನಡ ಟೀಮ್:

ಮಾಸ್ತಿಗುಡಿ ದುರಂತ: ಶರಣಾದ ಆರೋಪಿಗಳು

ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ಖಳನಟರಾದ ಉದಯ್ ಮತ್ತು ಅನಿಲ್ ಪ್ರಾಣ ಕಳೆದುಕೊಂಡ ಪ್ರಕರಣದ ಪ್ರಮುಖ ಆರೋಪಿಗಳಾದ ನಿರ್ದೇಶಕ ನಾಗಶೇಖರ್, ಸಹನಿರ್ದೇಶಕ ಸಿದ್ದು ಮತ್ತು ಸಾಹಸ ನಿರ್ದೇಶಕ ರವಿವರ್ಮಾ ಶನಿವಾರ ಮಾಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ನಂತರ ಅವರನ್ನು ಮಾಗಡಿ 2ನೇ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ದುರ್ಘಟನೆ ನಂತರ ತಲೆಮರೆಸಿಕೊಂಡಿದ್ದ  ಈ ಮೂವರು ಆರೋಪಿಗಳು ಶನಿವಾರ ನಟ ದುನಿಯಾ ವಿಜಯ್ ಮನೆಗೆ ಆಗಮಿಸಿದ್ದರು. ಈ ವೇಳೆ ಅವರ ಮನವೊಲಿಸಿದ ವಿಜಯ್ ಪೊಲೀಸ್ ಠಾಣೆಗೆ ಕರೆತಂದರು.

ಪೊಲೀಸರ ನಿರ್ಲಕ್ಷ್ಯ ಖಂಡಿಸಿದ ದುನಿಯಾ ವಿಜಯ್…

ಈ ಮೂವರು ಆರೋಪಿಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ದುನಿಯಾ ವಿಜಯ್, ತಾವರೆಕೆರೆ ಪೊಲೀಸರ ನಿರ್ಲಕ್ಷ್ಯವನ್ನು ಖಂಡಿಸಿದರು. ‘ಈ ಪ್ರಕರಣದಲ್ಲಿ ನಿರ್ಮಾಪಕ ಸುಂದರ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಅವರು ಚಿತ್ರಕ್ಕೆ ದುಡ್ಡು ಮಾತ್ರ ಹಾಕಿದ್ದಾರೆ. ಹೀಗಾಗಿ ಅವರನ್ನು ಮೊದಲ ಆರೋಪಿ ಎಂದು ಪರಿಗಣಿಸಿ ಅವರನ್ನು ಬಂಧಿಸಿರುವುದು ಸರಿಯಲ್ಲ. ಅಷ್ಟೇ ಯಾಕೆ, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಇದೊಂದು ನಿರ್ಲಕ್ಷ್ಯದ ಪ್ರಕರಣ ಎಂದು ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ, ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಮೊದಲ ಆರೋಪಿ ಸಂದೇಶ ಪಿ ಗೌಡ ಎಂದು ಹೆಸರಿಸಲಾಗಿದೆ. ಆದರೆ ಅವರು ಸುಂದರ್ ಎಂಬುವವರನ್ನು ಬಂಧಿಸಿದ್ದಾರೆ’ ಎಂದು ಪೊಲೀಸರ ತಪ್ಪನ್ನು ಪ್ರಶ್ನಿಸಿದರು.

ದೇಶದ ಜನರಿಗೆ ಜೇಟ್ಲಿ ಭರವಸೆ

ರದ್ದಾಗಿರುವ ನೋಟು ಬದಲಾವಣೆಗೆ ಜನರ ಪಡಿಪಾಟಲು 2-3 ವಾರಗಳಲ್ಲಿ ಕಡಿಮೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭರವಸೆ ಕೊಟ್ಟಿದ್ದಾರೆ.

ಸುದ್ದಿಗೋಷ್ಠಿಯನ್ನು ಶನಿವಾರ ಅವರು ಹೇಳಿದಿಷ್ಟು: ‘ಸರ್ಕಾರದ ನಿರ್ಧಾರದಿಂದ ಜನರಿಗೆ ಸಮಸ್ಯೆ ಆಗಿರುವುದು ನಿಜ. ಆದರೆ ಇದು 2-3 ವಾರ ಮಾತ್ರ. ಉದ್ದೇಶಪೂರ್ವಕವಾಗಿಯೇ ಈ ನಿರ್ಧಾರ ಪ್ರಕಟಿಸುವ ಮೊದಲೇ ಎಟಿಎಂಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ. ಒಂದು ವೇಳೆ ಕ್ರಮಕ್ಕೆ ಮುಂದಾಗಿದ್ದರೆ, ಕಾಳಧನ ಹೊಂದಿರುವವರು ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದರು. ಆಗ ಸರ್ಕಾರದ ಗುಟ್ಟು ಗುಟ್ಟಾಗಿ ಉಳಿಯುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಎಟಿಎಂಗಳಲ್ಲೂ ಹೊಸ ನಗದು ತುಂಬಲಾಗುವುದು. ಆಗ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಈಗ ಎಲ್ಲರೂ ತಕ್ಷಣ ಹಣ ಠೇವಣಿ ಮಾಡಲು ಮುಗಿಬಿದ್ದಿರುವುದರಿಂದ ಸಮಸ್ಯೆ ಆಗುತ್ತಿದೆ. ಕಳೆದ ಎರಡೂವರೆ ದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಸಮೂಹದಲ್ಲಿಯೇ 2.28 ಲಕ್ಷ ಕೋಟಿ ಮೌಲ್ಯದಷ್ಟು ವಹಿವಾಟು ನಡೆದಿದೆ. ಆ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ ಒಂದರಲ್ಲಿ 54,370 ಕೋಟಿ ವಹಿವಾಟು ನಡೆದಿದ್ದು, ಒಟ್ಟು 47,868 ಕೋಟಿ ಠೇವಣಿಯಾಗಿದೆ.’

ನಕಲಿ ನೋಟು ಪತ್ತೆ

ಚಿಕ್ಕಮಗಳೂರು ಈರುಳ್ಳಿ ಮಂಡಿಯಲ್ಲಿ ₹ 2000 ನೋಟಿನ ಕಲರ್ ಝೆರಾಕ್ಸ್ ಕೊಟ್ಟು ವಂಚನೆ ಮಾಡಲಾಗಿದೆ. ಇಲ್ಲಿನ ಎಪಿಎಂಸಿ ಬಳಿಯಿರುವ ಮಂಡಿಯಲ್ಲಿ ಅಪರಿಚಿತನೊಬ್ಬ ಶನಿವಾರ ಬೆಳಗ್ಗೆ ಬಂದು ವ್ಯಾಪಾರ ಮಾಡಿ 2000 ರೂಪಾಯಿ ನೋಟು ಕೊಟ್ಟು ಚಿಲ್ಲರೆ ಪಡೆದ. ಅಂಗಡಿಯಲ್ಲಿ ಮಾಲೀಕನಿರಲಿಲ್ಲ. ಕೆಲಸದವನಿಗೆ ನೋಟಿನ ಬಗ್ಗೆ ಅರಿವಿರಲಿಲ್ಲ. ಮಾಲೀಕ ಬಂದು ನೋಡಿದಾಗ ಅದು ಕಲರ್ ಝೆರಾಕ್ಸ್ ಎಂಬುದು ಗೊತ್ತಾಯಿತು.

ನೋಟು ಬದಲಾವಣೆ ಆರಂಭಿಕ ಹಂತದ ಸಂದರ್ಭ ದುರುಪಯೋಗ ಮಾಡಿಕೊಳ್ಳುವವರು ಸಾಕಷ್ಟು ಮಂದಿ ಸೃಷ್ಟಿ ಆಗಿರುವುದರಿಂದ ಜನ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು.

ಅಶ್ಲೀಲ ಚಿತ್ರ ವೀಕ್ಷಣೆ: ವಿವರಣೆ ನೀಡುವಂತೆ ಸಿಎಂರಿಂದ ತನ್ವೀರ್ ಅವರಿಗೆ ಬುಲಾವ್

ಟಿಪ್ಪು ಜಯಂತಿಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ಹೊತ್ತ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ಬಯಸಿದ್ದಾರೆ. ಸದ್ಯ ಹೈದರಾಬಾದ್-ಕರ್ನಾಟಕ ಪ್ರವಾಸದಲ್ಲಿರುವ ಸೇಠ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಅವರು ಭಾನುವಾರ ಬೆಂಗಳೂರಿಗೆ ಬಂದು ತಮ್ಮನ್ನು ಕಾಣುವಂತೆ ಸೂಚನೆ ನೀಡಿದ್ದಾರೆ. ಮಹತ್ವದ ಶಿಕ್ಷಣದ ಇಲಾಖೆ ಹೊಣೆ ಹೊತ್ತ ಸಚಿವರೇ ಜವಾಬ್ದಾರಿಯಿಂದ ವರ್ತಿಸಿರುವುದು ಕಾಂಗ್ರೆಸ್ ವರಿಷ್ಠಗೂ ಇರಿಸುಮುರಿಸು ಉಂಟು ಮಾಡಿದೆ. ಹೀಗಾಗಿ ಸೇಠ್ ಅವರಿಂದ ವಿವರಣೆ ಪಡೆಯುವಂತೆ ಸಿಎಂಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದ್ಯುತ್, ನೀರಿನ ಬಿಲ್ ರೀತಿ ಆಸ್ತಿ ತೆರಿಗೆಗೆ ಹಳೇ ನೋಟು ಸ್ವೀಕಾರ

₹ 500, 1000 ಹಳೆಯ ನೋಟುಗಳನ್ನು ಮುಂದಿನ ಮೂರು ದಿನಗಳವರೆಗೆ ವಿದ್ಯುತ್, ನೀರು ಬಿಲ್ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಪಾವತಿಗೂ ಬಳಸಲು ಜನರಿಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಇಂದಿನಿಂದಲೇ ನಗರದ ನಿವಾಸಿಗಳು ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಹಳೆಯ ನೋಟುಗಳ ಮೂಲಕವೇ ಪಾವತಿ ಮಾಡಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನ. 14 ರವರೆಗೆ ಈ ಅವಕಾಶ ಕಲ್ಪಿಸಿದೆ.

Leave a Reply