ಹಳೇ ನೋಟು ರದ್ದು ಹಿಂದೆ ಭಾರೀ ಹಗರಣ ಅಡಗಿದೆ ಅಂತಂದಿದ್ದಾರೆ ಅರವಿಂದ ಕೇಜ್ರಿವಾಲ್

ಡಿಜಿಟಲ್ ಕನ್ನಡ ಟೀಮ್:

ಕಪ್ಪುಹಣ ತಡೆಗಟ್ಟಲು ಕೇಂದ್ರ ಸರಕಾರ  ₹ 500 ಮತ್ತು 1000 ಹಳೇ ನೋಟುಗಳನ್ನು ರದ್ದುಪಡಿಸಿರೋದರ ಹಿಂದೆ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ ಚೀಫ್ ಅರವಿಂದ ಕೇಜ್ರಿವಾಲ್ ಅವರಿಗೆ ಭಾರೀ ಹಗರಣ ಕಾಣಿಸಿಕೊಂಡಿದೆ.

ಪ್ರಧಾನಿ ಮೋದಿ ಅವರ ಈ ನಿರ್ಧಾರ ಕಾಳಧನಿಕರಿಗೆ ‘ಮಾಸ್ಟರ್ ಸ್ಟ್ರೋಕ್’ ಅಂತ ಆರ್ಥಿಕ ತಜ್ಞರಿಂದ ಹಿಡಿದು ಜನಸಾಮಾನ್ಯವರೆಗೆ ಬಣ್ಣಿಸುತ್ತಿದ್ದರೆ, ಇದು ಬಡವರನ್ನು ಕಾಡುವ ನಿರ್ಧಾರ ಅಂತ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಬಣ್ಣಿಸುತ್ತಿವೆ. ಇದೀಗ ಕೇಜ್ರಿವಾಲ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ದೊಡ್ಡ ಹಗರಣವನ್ನೇ ಊಹಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಈ ಹಳೇಯ ನೋಟುಗಳನ್ನು ರದ್ದು ಮಾಡುವ ನಿರ್ಧಾರ ಪ್ರಕಟಿಸುವ ಮುನ್ನ ಬಿಜೆಪಿ ಈ ಬಗ್ಗೆ ತಮ್ಮ ಆಪ್ತರಿಗೆ ಮಾಹಿತಿ ಕೊಟ್ಟಿದೆ. ಇದರೊಂದಿಗೆ ಕೇಂದ್ರದ ಈ ನಿರ್ಧಾರದ ಹಿಂದೆ ದೊಡ್ಡ ಹಗರಣವಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು’ ಎಂಬುದು ಕೇಜ್ರಿವಾಲರ ಆರೋಪ.

ಅರವಿಂದ್ ಅವರು ಹೇಳಿರೋದೇನಪ್ಪಾ ಅಂತಂದ್ರೆ: ‘ಸರ್ಕಾರದ ಈ ನಿರ್ಧಾರ ಬಡವರ ಮೇಲಿನ ಸರ್ಜಿಕಲ್ ಸ್ಟ್ರೈಕ್. ಇದರಿಂದ ತೊಂದರೆ ಅನುಭವಿಸುತ್ತಿರುವವರು ಅಲ್ಪಸ್ವಲ್ಪ ಹಣ ಕೂಡಿಟ್ಟಿರುವವರೇ ಹೊರತು ಕಾಳಧನ ಹೊಂದಿರುವ ಶ್ರೀಮಂತರಲ್ಲ. ಮೋದಿ ಅವರು ಈ ಹಳೇ ನೋಟು ರದ್ದು ನಿರ್ಧಾರ ಪ್ರಕಟಿಸುವ ಹಿಂದಿನ ದಿನ ಪಂಜಾಬಿನ ಬಿಜೆಪಿ ಕಾನೂನು ವಿಭಾಗದ ಮುಖ್ಯಸ್ಥ ಸಂಜೀವ್ ಕಾಂಬೋಜ್ ಅವರು ನೂತನ ₹ 2000 ನೋಟುಗಳನ್ನು ಹಿಡಿದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಷ್ಟೇ ಅಲ್ಲ ಜುಲೈನಿಂದ ಸೆಪ್ಟೆಂಬರ್ ನಡುವೆ ಬ್ಯಾಂಕುಗಳಲ್ಲಿನ ಠೇವಣಿ ಪ್ರಮಾಣ ಏಕಾಏಕಿ ಹೆಚ್ಚಾಗಿದೆ. ಇದರ ಅರ್ಥ ಬಿಜೆಪಿ ತನ್ನ ಆಪ್ತರಿಗೆ ಈ ನಿರ್ಧಾರದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿತ್ತು ಎಂದೇ ಆಗಿದೆ. ಹೀಗಾಗಿ ಇದೊಂದು ದೊಡ್ಡ ಹಗರಣ.’

‘ಕಪ್ಪುಹಣ ಬಂದ್ ಹೆಸರಿನಲ್ಲಿ ದೇಶದಲ್ಲಿ ಮತ್ತೊಂದು ದೊಡ್ಡ ಹಗರಣ ನಡೆಯುತ್ತಿದೆ. ಎಟಿಎಂಗಳಲ್ಲಿ ಹಣವಿಲ್ಲದೆ ಜನ ಪರದಾಡುತ್ತಿದ್ದಾರೆ. ಬೆಳಗ್ಗೆಯಿಂದಲೇ ಎಟಿಎಂಗಳ ಮುಂದೆ ದೊಡ್ಡ ಸಾಲು ಕಾಣುತ್ತಿದೆ. ಮೋದಿ ಅವರ ಪ್ರಕಾರ ಕಪ್ಪು ಹಣ ಎಂದರೇನು? ದೇಶದ ಶ್ರೀಮಂತ ಉದ್ದಿಮೆದಾರರಾದ ಅಂಬಾನಿ, ಅದಾನಿ, ಶರದ್ ಪವಾರ್, ಸುಭಾಷ್ ಚಂದ್ರ ಅವರು ಕಪ್ಪು ಹಣ ಹೊಂದಿರುತ್ತಾರೋ ಅಥವಾ ರೈತರು, ಆಟೋ ಚಾಲಕರು, ಚಿಲ್ಲರೆ ಅಂಗಡಿಯವರು ಮತ್ತು ಕಾರ್ಮಿಕರು ಕಪ್ಪು ಹಣ ಹೊಂದಿರುತ್ತಾರೋ?’ ಈಗಿನ ವ್ಯವಸ್ಥೆಯಿಂದ ಕಷ್ಟ, ನೋವು ಪಡುತ್ತಿರುವವರು ಯಾರು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

Leave a Reply