‘ಭಾರತ ಜಪಾನಿನ ದಾಳವಾಗೋದಿಲ್ಲ’ ಅಂತು ಚೀನಾ, ಜನರಿಗೆ ಅಭಯ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್, ಡ್ರಾನಲ್ಲಿ ಅಂತ್ಯವಾಯ್ತು ಮೊದಲ ಟೆಸ್ಟ್, ಎಎಪಿ ಸೇರಿದ ಕೀರ್ತಿ ಅಜಾದ್ ಪತ್ನಿ

ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಕಬ್ಬನ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ಹಬ್ಬ-2016’ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಂಟೆ ಬಿಲ್ಲೆ ಆಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ.

ಡಿಜಿಟಲ್ ಕನ್ನಡ ಟೀಮ್:

ಭಾರತ-ಜಪಾನ್ ಸ್ನೇಹದ ಬಗ್ಗೆ ಚೀನಾ ಮಾತು

‘ಚೀನಾ ಮತ್ತು ಜಪಾನ್ ನಡುವಣ ಪೈಪೋಟಿಯಲ್ಲಿ ಭಾರತ ಜಪಾನಿನ ದಾಳವಾಗುವುದಿಲ್ಲ…’ ಹಿಗೊಂದು ಅಭಿಪ್ರಾಯ ವ್ಯಕ್ತವಾಗಿರೋದು ಚೀನಾ ಸರ್ಕಾರ ನಿಯಂತ್ರಿತ ಮಾಧ್ಯಮದ ವರದಿಯಲ್ಲಿ. ಭಾರತದ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸದ ಕೈಗೊಂಡ ಸಮಯದಲ್ಲಿ ರೈಲ್ವೆ ಒಪ್ಪಂದ ಕುರಿತು ಚರ್ಚೆ ಹಾಗೂ ಪರಮಾಣು ಸಹಕಾರ ಒಪ್ಪಂದ ಸಹಿ ಹಾಕುತ್ತಿದ್ದಂತೆ ಭಾರತದೊಂದಿಗಿನ ಸ್ನೇಹ ಗಟ್ಟಿ ಮಾಡಿಕೊಳ್ಳುತ್ತಿರುವ ಜಪಾನ್ ಚೀನಾಗೆ ಪರೋಕ್ಷವಾಗಿ ಸವಾಲೆಸೆಯುತ್ತಿದೆ ಎಂಬ ಚರ್ಚೆ ನಡೆದಿತ್ತು. ಈ ಕುರಿತಂತೆ ಚೀನಾದ ಮಾಧ್ಯಮ ಅಭಿಪ್ರಾಯಪಟ್ಟಿರುವುದು ಹೀಗೆ: ‘ಸದ್ಯ ಭಾರತ ಮತ್ತು ಚೀನಾ ನಡುವಣ ಭಿನ್ನಾಭಿಪ್ರಾಯವನ್ನು ಜಪಾನ್, ದಕ್ಷಿಣ ಚೀನಾ ಸಮುದ್ರ ಬಿಕ್ಕಟ್ಟಿನ ವಿಷಯದಲ್ಲಿ ಬಳಸಿಕೊಳ್ಳಲು ಎದುರು ನೋಡುತ್ತಿದೆ. ಭಾರತವನ್ನು ಚೀನಾ ವಿರುದ್ಧ ಎತ್ತಿಕಟ್ಟಿ ಅಂತಾರಾಷ್ಟ್ರೀಯ ನ್ಯಾಯಾಧಿಕರಣದಲ್ಲಿ ತಮ್ಮ ಪರವಾಗಿ ನಿಲ್ಲುವಂತೆ ಮಾಡುವುದು ಜಪಾನಿನ ಉದ್ದೇಶ. ಅದಕ್ಕಾಗಿಯೇ ಜಪಾನ್ ಭಾರತದೊಂದಿಗೆ ಪರಮಾಣು ಸಹಕಾರ ಒಪ್ಪಂದ ಮಾಡಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತನಗೆ ಮಹತ್ವವಾಗಿರುವ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಜಪಾನಿನ ಹಿತಾಸಕ್ತಿಗಾಗಿ ತನ್ನ ನಿಲುವು ಬದಲಿಸಿಕೊಳ್ಳುವುದಿಲ್ಲ. ಭಾರತ ಜಪಾನ್ ಜತೆಗಿನ ಸ್ನೇಹ ಗಟ್ಟಿ ಮಾಡಿಕೊಂಡರೂ ಚೀನಾ ಜತೆಗಿನ ಸಂಬಂಧವನ್ನು ಕಿತ್ತುಕೊಳ್ಳಲು ಬಯಸುವುದಿಲ್ಲ.’

ಬ್ಯಾಂಕುಗಳಲ್ಲಿ ಹಣವಿದೆ, ಭಯ ಬೇಡ: ಆರ್ಬಿಐ
‘ದೇಶದ ಬ್ಯಾಂಕುಗಳಲ್ಲಿ ಸಾಕಷ್ಟು ಹಣವಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕು ಭಯ ಪಡುವ ಅಗತ್ಯವಿಲ್ಲ’ ಎಂದು ಭರವಸೆ ಕೊಟ್ಟಿದೆ ಭಾರತೀಯ ರಿಸರ್ವ್ ಬ್ಯಾಂಕ್. ₹ 500 ಮತ್ತು 1000 ಹಳೇ ನೋಟಿನ ರದ್ದತಿಯಿಂದ ಈಗಾಗಲೇ ಜನರು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಈ ಪರಿಸ್ಥಿತಿಯಲ್ಲಿ ಬ್ಯಾಂಕುಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಹಣವಿಲ್ಲ ಎಂಬ ವದಂತಿ ಸಾಮಾನ್ಯ ಜನರ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್ಬಿಐ, ಬ್ಯಾಂಕುಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಹಣವಿದೆ. ಸಾರ್ವಜನಿಕರಿಗೆ ಅವುಗಳನ್ನು ಸಮರ್ಪಕವಾಗಿ ನೀಡಲಾಗುವುದು. ಈ ಬಗ್ಗೆ ಯಾವುದೇ ಭಯ ಬೇಡ ಎಂದಿದೆ.

ರಾಜ್ಕೋಟ್ ಟೆಸ್ಟ್ ಡ್ರಾ
ಬ್ಯಾಟ್ಸ್ ಮನ್ ಗಳ ಪ್ರಾಬಲ್ಯಕ್ಕೆ ವೇದಿಕೆಯಾಗಿದ್ದ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾ ಫಲಿತಾಂಶ ಕಂಡಿದೆ. ಐದು ದಿನಗಳ ಪಂದ್ಯದಲ್ಲಿ ಒಟ್ಟು 6 ಶತಕಗಳು ದಾಖಲಾಗಿರೋದು ಪಿಚ್ ಬ್ಯಾಟ್ಸ್ ಮನ್ ಗಳಿಗೆ ಸಹಕಾರಿಯಾಗಿದ್ದಕ್ಕೆ ಸಾಕ್ಷಿ. ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 537 ರನ್ ಗಳಿಸಿತ್ತು, ಇದಕ್ಕೆ ಪ್ರತಿಯಾಗಿ ಭಾರತ 488 ರನ್ ಗಳನಷ್ಟೇ ಶಕ್ತವಾಗಿತ್ತು. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ನಂತರ ಎರಡನೇ ಇನಿಂಗ್ಸ್ ನಲ್ಲೂ ಅತ್ಯುತ್ತಮವಾಗಿ ಆಡಿದ ಇಂಗ್ಲೆಂಡ್ 3 ವಿಕೆಟ್ ಗೆ 260 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಭಾರತಕ್ಕೆ 309 ರನ್ ಗಳ ಗುರಿ ನೀಡಿತು. ಅಂತಿಮ ದಿನ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತಾದರೂ ನಂತರ ನಾಯಕ ವಿರಾಟ್ ಕೊಹ್ಲಿ (ಅಜೇಯ 49), ಆರ್.ಅಶ್ವಿನ್ (32), ಜಡೇಜಾ (ಅಜೇಯ 32) ಜತೆಯಾಟದ ಮೂಲಕ ಪಂದ್ಯವನ್ನು ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಸರಣಿಯಲ್ಲಿನ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 17ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ.

ಆಪ್ ಸೇರಿದ ಅಜಾದ್ ಪತ್ನಿ ಪೂನಮ್
ಬಿಜೆಪಿಯ ಸಂಸದ ಕೀರ್ತಿ ಅಜಾದ್ ಅವರ ಪತ್ನಿ ಪೂನಮ್ ಅಜಾದ್ ಭಾನುವಾರ ಆಮ್ ಆದ್ಮಿ ಪಕ್ಷ ಸೇರಿದ್ದಾರೆ. 2003ರಲ್ಲಿ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ ತೀವ್ರ ಪ್ರತಿಸ್ಪರ್ಧೆ ನೀಡಿ ಸೋಲನುಭವಿಸಿದ್ದರು. ಆದರೆ ನಂತರದ ದಿನಗಳಲ್ಲಿ ಪಕ್ಷ ಪೂನಮ್ ಅವರನ್ನು ಕಡೆಗಣಿಸಿದೆ. ಹೀಗಾಗಿ ಪೂನಮ್ ಅವರು ಎಎಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಅವರ ಆಪ್ತ ವಲಯ ಮಾಹಿತಿ ಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೀರ್ತಿ ಅಜಾದ್ ಹೇಳಿದಿಷ್ಟು:
‘ಈ ಹಿಂದೆ ಆಕೆ ಬಿಜೆಪಿ ಪಕ್ಷದಲ್ಲೇ ಉಳಿಯುವಂತೆ ಒತ್ತಡ ಹಾಕಿದ್ದೆ. ಅದೇ ರೀತಿ ಈ ಬಾರಿಯೂ ಒತ್ತಡ ಹಾಕಿದ್ದರೆ ನನ್ನ ವಿರುದ್ಧ ಮಹಿಳೆ ಮೇಲೆ ದೌರ್ಜನ್ಯದ ಆರೋಪ ಬರುತ್ತಿತ್ತು. ನನ್ನ ಪತ್ನಿ ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದಾಳೆ. ಆದರೆ ಆಕೆಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ.’

Leave a Reply