‘ಕೋಟ್ಯಾಂತರ ಹಣ ಕೊಳ್ಳೆ ಹೊಡೆದವರು ಇಂದು ₹4 ಸಾವಿರಕ್ಕಾಗಿ ಬ್ಯಾಂಕಿನ ಮುಂದೆ ಕ್ಯೂ ನಿಂತಿದ್ದಾರೆ..’ ಕಾಂಗ್ರೆಸ್ಸಿಗರಿಗೆ ಮೋದಿ ಲೇವಡಿ

ಡಿಜಿಟಲ್ ಕನ್ನಡ ಟೀಮ್:

‘ಕಳೆದ 70 ವರ್ಷಗಳಿಂದ ಕಪ್ಪು ಹಣ ಎಂಬ ರೋಗ ದೇಶವನ್ನು ಕುಗ್ಗಿಸುತ್ತಿದೆ. ಈ ರೋಗದ ನಿರ್ಮೂಲನೆ ಆಗಲೇಬೇಕು. ಇಷ್ಟುದಿನಗಳ ಕಾಲ 2ಜಿ, ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದವರು ಈಗ ಕೇವಲ ₹ 4 ಸಾವಿರ ಪಡೆಯಲು ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದಾರೆ…’ ಎಂಬುದು ಕಾಂಗ್ರೆಸ್ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇರ ವಾಗ್ದಾಳಿ.

ಮೂರು ದಿನಗಳ ಜಪಾನ್ ಪ್ರವಾಸ ಮುಗಿಸಿದ ಗೋವಾಗೆ ಭೇಟಿ ನೀಡಿರುವ ಮೋದಿ, ಎರಡು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ವೇದಿಕೆಯನ್ನು ಕೇವಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿಗೆ ಮಾತ್ರ ಸೀಮಿತವಾಗಿಸದೇ ಗೋವಾ ಚುನಾವಣ ಪ್ರಚಾರಕ್ಕೂ ಬಳಸಿಕೊಂಡರು.

ತಮ್ಮ ಭಾಷಣದುದ್ದಕ್ಕೂ ದೇಶ ಸೇವೆಗೆ ತಮ್ಮ ಸಮರ್ಪಣೆ, ಕಪ್ಪುಹಣ ವಿರುದ್ಧದ ಸಮರ, ಆ ಮೂಲಕ ದೇಶದ ಆರ್ಥಿಕ ಪ್ರಗತಿ ಹಾಗೂ ದೇಶ ಶುದ್ಧಿಕಾರ್ಯ ವಿರೋಧಿಸುತ್ತಿರುವ ವಿರೋಧ ಪಕ್ಷಗಳ ಜನ್ಮ ಜಾಲಾಡಿದರು.

ಮೋದಿ ಅವರ ಭಾಷಣದ ಪ್ರಮುಖ ಅಂಶಗಳು ಹೀಗಿವೆ:

  • ನವೆಂಬರ್ 8 ರ ರಾತ್ರಿ ದೇಶದ ಬಡವರು ನೆಮ್ಮದಿಯ ನಿದ್ರೆಗೆ ಜಾರಿದರೆ ಮತ್ತೆ ಕೆಲವರು ಮಲಗಲು ಸಾಧ್ಯವಾಗದೇ ನಿದ್ದೆ ಮಾತ್ರೆ ಹುಡುಕುತ್ತಿದ್ದರು. ಈ ದೇಶದ ಜನ ಕಪ್ಪುಹಣ ನಿರ್ಮೂಲನೆಗಾಗಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರು. ದೇಶದ ಜನ ಕೊಟ್ಟ ಜವಾಹಬ್ದಾರಿಯನ್ನು ಪ್ರಾಮಾಣಿಕವಾಗಿ ನೆರವೇರಿಸುತ್ತಿದ್ದೇವೆ. ದೇಶದ ಪ್ರಾಮಾಣಿಕ ಪ್ರಜೆಗಳಿಗೆ ನೆರವಾಗಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ.
  • ಸರ್ಕಾರದ ಈ ನಿರ್ಧಾರ ರಾಜಕೀಯ ಪ್ರೇರಿತ ಎಂಬ ಆರೋಪಗಳು ಕೇಳಿ ಬಂದಿವೆ. ನಾನು ಅಧಿಕಾರದ ಗದ್ದುಗೆಯಲ್ಲಿ ಕೂರಲು ಹುಟ್ಟಿದವನಲ್ಲ. ದೇಶ ಸೇವೆಗಾಗಿ ನನ್ನ ಕುಟುಂಬವನ್ನೇ ತ್ಯಜಿಸಿದ್ದೇನೆ. ರಾಜಕೀಯ ಮಾಡುವವರು ಮಾಡಲಿ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ.
  • ಈ ದೇಶದ ಸಂಪತ್ತು ಕೊಳ್ಳೆ ಹೊಡೆದಿರುವವರನ್ನು ಪತ್ತೆಹಚ್ಚುವುದು ನಮ್ಮ ಕೆಲಸ. ಕಪ್ಪುಹಣ ತಡೆಗೆ ಭವಿಷ್ಯದಲ್ಲಿ ಮತ್ತಷ್ಟು ಕಠಿಣ ನಿರ್ಧಾರ ಕೈಗೊಳ್ಳಲಾಗುವುದು. ನಮ್ಮ ಸಮರ ಕೇವಲ ಕಪ್ಪು ಹಣ ಪತ್ತೆಗೆ ಮಾತ್ರ ಸೀಮಿತವಾಗಿಲ್ಲ, ಬೇನಾಮಿ ಹೆಸರಲ್ಲಿ ಅಪಾರ ಸಂಪತ್ತು ಮಾಡಿರುವವರನ್ನು ಸದೆಬಡಿಯಲು ವಿಸ್ತರಣೆ ಆಗಲಿದೆ.
  • ಹಿಂದಿನ ಸರ್ಕಾರಗಳು ಕಪ್ಪು ಹಣ ತಡೆಯಲು ವಿಫಲವಾಗಿವೆ. ಈ ಸರ್ಕಾರ ಅದನ್ನು ಮಾಡುತ್ತಿದೆ. 2ಜಿ, ಕಲ್ಲಿದ್ದಲು ಹಾಗೂ ಇತರೆ ಹಗರಣಗಳಲ್ಲಿ ಭಾಗಿಯಾಗಿದ್ದವರೂ ಕೂಡ ಇಂದು ಬ್ಯಾಂಕುಗಳ ಮುಂದೆ ಕ್ಯೂನಲ್ಲಿ ನಿಂತು ₹ 4 ಸಾವಿರ ಹಣ ಎಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
  • ₹ 500 ಮತ್ತು 1000 ಹಳೆ ನೋಟು ರದ್ದತಿ ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಕೊನೆ ಅಸ್ತ್ರವಲ್ಲ. ನಮ್ಮ ಹೋರಾಟಕ್ಕೆ ಪೂರ್ಣವಿರಾಮ ಬಿದ್ದಿಲ್ಲ. ನನ್ನ ತಲೆಯಲ್ಲಿ ಇನ್ನು ಸಾಕಷ್ಟು ಯೋಜನೆಗಳಿವೆ. ಅವುಗಳನ್ನು ಒಂದೊಂದಾಗೆ ಪ್ರಯೋಗಿಸುವೆ. ಡಿ.30ರ ನಂತರವೂ ಸರ್ಕಾರದಿಂದ ಮತ್ತಷ್ಟು ಕಠಿಣ ತೀರ್ಮಾನಗಳು ಹೊರಹೊಮ್ಮಲಿವೆ.
  • ಆಭರಣ ಖರೀದಿಗೆ ತೆರಿಗೆ ಹಾಗೂ ಪ್ಯಾನ್ ಕಾರ್ಡ್ ದಾಖಲೆ ಒದಗಿಸುವ ನಿರ್ಧಾರಕ್ಕೆ ಹಲವು ಸಂಸದರೇ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಅದಕ್ಕೆಲ್ಲ ನಾನು ಕ್ಯಾರೆ ಎನ್ನಲಿಲ್ಲ. ಹೀಗಾಗಿ ಕೆಲವರು ಪ್ರಶ್ನಿಸುತ್ತಿದ್ದಾರೆ.
  • ಈ ದೇಶದ ಜನರ ಆಶೋತ್ತರಗಳನ್ನು ಈಡೇರಿಸಲು ಈ ಸರ್ಕಾರ ಅಧಿಕಾರದಲ್ಲಿದೆ. ಜನರಿಗೆ ನಾವು ನೀಡಿದ್ದ ಭರವಸೆಗಳನ್ನು ಖಂಡಿತವಾಗಿಯೂ ಪೂರ್ಣಗೊಳಿಸುತ್ತೇವೆ. ಕಪ್ಪು ಹಣವನ್ನು ಮರಳಿ ತರುತ್ತೇವೆ. ಒಂದು ವೇಳೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ನಮ್ಮನ್ನು ಶಿಕ್ಷಿಸಿ.
  • ವಿರೋಧ ಪಕ್ಷಗಳು ನಮ್ಮ ನಿರ್ಧಾರವನ್ನು ಟೀಕಿಸಿದರೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ದೇಶದ ಅಭಿವೃದ್ಧಿಗೆ ನಮ್ಮ ದಿಟ್ಟ ಕ್ರಮಗಳನ್ನು ತಡೆಯಲು ಅವರಿಗೆ ಸಾಧ್ಯವಿಲ್ಲ. ಇದಕ್ಕಾಗಿ ಅವರು ನನ್ನನ್ನು ಬೆಂಕಿಗೆ ತಳ್ಳಿದರೂ ನಾನು ಹೆದರುವುದಿಲ್ಲ
  • ನೋಟು ಹಿಂಪಡೆಯುವ ನಿರ್ಧಾರ ಒಂದೆರಡು ದಿನಗಳಲ್ಲಿ ತೆಗೆದುಕೊಂಡಿದ್ದಲ್ಲ. ಅದು ಸುದೀರ್ಘ ಪ್ರಕ್ರಿಯೆ. ಜನಧನ ಹಾಗೂ ಇತರೆ ಕಾರ್ಯಕ್ರಮಗಳ ಮೂಲಕ ಕಪ್ಪುಹಣ ಎಂಬ ಕಾಯಿಲೆಗೆ ಸುಮಾರು 10 ತಿಂಗಳಿನಿಂದ ಮದ್ದು ಅರೆಯುತ್ತಲೇ ಬಂದಿದ್ದೆವು. ಈ ಅವಧಿಯಲ್ಲಿ ನಾವು ಹೊಸ ನೋಟುಗಳ ಮುದ್ರಣ ಸೇರಿದಂತೆ ಇತರೆ ತಯಾರಿಗಳನ್ನು ಮಾಡಿಕೊಂಡಿದ್ದೆವು.
  • ನಮ್ಮ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಆರಂಭದಲ್ಲಿಅನಾನುಕೂಲಗಳಾಗುತ್ತಿವೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಇಲ್ಲಿ ಜನನಮ್ಮ ನಿರ್ಧಾರವನ್ನು ಸ್ವಾಗತಿಸಿ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ.ಹೀಗಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

Leave a Reply