ನಾವೇಕೆ ಹೆಚ್ಚೆಚ್ಚು ಹಣ ಮುದ್ರಿಸಿ ಎಲ್ಲರಿಗೂ ಹಂಚಿ ಬಡತನ ಹೋಗಲಾಡಿಸಲು ಆಗುವುದಿಲ್ಲ ಅಂದರೇ…

FB_IMG_1479105198284
authors-rangaswamyಸೆಂಟ್ರಲ್ ಬ್ಯಾಂಕ್ ಏಕೇ ಹೆಚ್ಚು ಹಣ ಮುದ್ರಿಸಬಾರದು? ದೇಶದಲ್ಲಿನ ಬಡತನ ಒಂದೇ ಕ್ಷಣದಲ್ಲಿ ಹೋಗಲಾಡಿಸಬಹದು ಅಲ್ಲದೆ ವಿದೇಶಿ ಸಾಲವನ್ನು ಕೂಡ ತೀರಿಸಿ ಬಿಡಬಹುದು. ಜಗತ್ತಿನ ಯಾವುದೇ ದೇಶದ ಮೇಲೆ ಇಷ್ಟೇ ಹಣ ಮುದ್ರಿಸಬೇಕು ಎನ್ನುವ ಯಾವುದೇ ನಿಯಮವಿಲ್ಲ. ಹೀಗಿದ್ದೂ ಬಹುಪಾಲು ಸರಕಾರಗಳು ಮಿತಿಯಲ್ಲೇ ನೋಟುಗಳ ಮುದ್ರಣ ಏಕೆ ಮಾಡುತ್ತವೆ? ಇಂತಹ ಪ್ರಶ್ನೆಗಳು ಬಹಳ ಸಲ ಕಾಡಿರುತ್ತದೆ.

ಕಳೆದ ಮೂರು ವಾರದಿಂದ ಹಣಕ್ಲಾಸು ಅಂಕಣಕ್ಕೆ ಬಂದ ನೂರಾರು ಮಿಂಚಂಚೆಗಳಲ್ಲಿ ಮುಕ್ಕಾಲು ಪಾಲು ಜನ ಇದೆ ಪ್ರಶ್ನೆ ಕೇಳಿದ್ದರು! ಇದಕ್ಕೆ ಉತ್ತರ ಬಹಳ ಸರಳ. ಸರಕಾರ ಅಥವಾ ಸೆಂಟ್ರಲ್ ಬ್ಯಾಂಕ್ ಹಾಗೆ ಇಚ್ಛೆ ಬಂದಂತೆ ಹಣ ಮುದ್ರಿಸಿದರೆ ಸಮಾಜದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಅಂದರೆ ಒಂದು ವಸ್ತುವಿಗೆ ನೀವು ಕೊಡುತ್ತಿದ್ದ ಬೆಲೆ ಹೆಚ್ಚಾಗುತ್ತದೆ. ಅಂದರೆ ನಿಮ್ಮ ಬಳಿ ಹೆಚ್ಚಿನ ಹಣವೇನೋ ಬಂದಿತು ಆದರೆ ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಒಂದು ಕೈಲಿ ಪಡೆದು ಇನ್ನೊಂದು ಕೈಯಲ್ಲಿ ಕೊಟ್ಟಿರಿ ಅಷ್ಟೇ. ಇದು ವಿಪರೀತವಾದರೆ ಒಂದು ಕಾಫಿ ಪಡೆಯಲು ಒಂದು ಚೀಲದ ತುಂಬಾ ಹಣ ತುಂಬಿಕೊಂಡು ಹೋಗಬೇಕಾದೀತು.

ಹೌದ ಏನಿದು ಅದೇಕೆ ಹೀಗಾಗುತ್ತೆ ಎನ್ನುವುದನ್ನ ಒಂದು ಸಣ್ಣ ಉದಾಹರಣೆಯ ಮೂಲಕ ನೋಟೋಣ ಬನ್ನಿ.

 ನಮ್ಮ ದೇಶದಲ್ಲಿ ನೂರು ಜನರಿದ್ದಾರೆ ಎಂದು ಕೊಳ್ಳಿ. ಅವರಲ್ಲಿ ಪ್ರತಿಯೊಬ್ಬರ ಹತ್ತಿರ ಹತ್ತು ರೂಪಾಯಿ ಇದೆ ಎಂದಿಟ್ಟುಕೊಳ್ಳಿ ಅಂದರೆ ನಮ್ಮ ದೇಶದಲ್ಲಿ ಇರುವ ಒಟ್ಟು ಹಣದ ಮೊತ್ತ ಸಾವಿರ. ಸೆಂಟ್ರಲ್ ಬ್ಯಾಂಕ್ ಮತ್ತೊಂದು ಸಾವಿರ ಮುದ್ರಿಸಿ ಪ್ರತಿಯೊಬ್ಬರಿಗೂ ತಲಾ ಹತ್ತು ರೂಪಾಯಿ ವಿತರಿಸಿತು ಎಂದುಕೊಳ್ಳಿ. ಮೌಲ್ಯವಿರುವುದು ಸರಕುಗಳಿಗೆ ಅದನ್ನ ಕೊಳ್ಳುವ ನೋಟಿಗಲ್ಲ! ನೀವೇನೋ ದಿನಒಪ್ಪೊತ್ತಿನಲ್ಲಿ ಹಣವನ್ನು ಮುದ್ರಿಸಿಬಿಡಬಹದು. ಆದರೆ ಜಗತ್ತಿನಲ್ಲಿ ಲಭ್ಯವಿರುವ ಸರಕುಗಳನ್ನು ಹೇಗೆ ಹೆಚ್ಚಿಸುವಿರಿ? ಹೀಗಾಗಿ ನಿನ್ನೆ ಒಂದು ರುಪಾಯಿಗೆ ಸಿಗುತ್ತಿದ್ದ ಕಾಫೀ ಇಂದು ಎರಡು, ನಾಳೆ ಮೂರು ರೂಪಾಯಿ ಆಗಬಹದು. ಹೀಗೆ ಹೆಚ್ಚುವ ಬೆಲೆಯನ್ನ ಇನ್ಫ್ಲೇಶನ್ ಅಥವಾ ಹಣದುಬ್ಬರ ಎನ್ನುತ್ತಾರೆ. ಈ ಕಾರಣದಿಂದ ಬ್ಯಾಂಕುಗಳು ಮಿತಿ ಇಲ್ಲದೆ ಹಣವನ್ನ ಮುದ್ರಿಸುವುದಿಲ್ಲ, ಮುದ್ರಿಸುವಂತೆಯೂ ಇಲ್ಲ. ಮತ್ತೊಂದು ಕಾರಣ ಯಾವುದೇ ವಸ್ತು ಹೇರಳವಾಗಿ ಸಿಕ್ಕರೆ ಅದರ ಮೌಲ್ಯ ಕುಸಿಯುತ್ತದೆ. ವಿರಳವಾದಷ್ಟು ಮೌಲ್ಯ ಹೆಚ್ಚುತ್ತದೆ. ಹೇರಳವಾಗಿ ಸಿಗುವ ಟೊಮೊಟೊ ಬೆಲೆ ಕಡಿಮೆ. ವಿರಳವಾಗಿರುವ ವಜ್ರ, ಚಿನ್ನದ ಬೆಲೆ ಹೆಚ್ಚು. ಇದೆ ನಿಯಮ ಇಲ್ಲೂ ಲಾಗೂ ಆಗುತ್ತದೆ. ಹಣದ ಚಲಾವಣೆ ಹೆಚ್ಚಿದಷ್ಟು ಮೌಲ್ಯ ಕುಸಿಯುತ್ತದೆ.

ಜಿಂಬಾಬ್ವೆ ಮತ್ತು ವೆನುಜುಲಾ ದೇಶಗಳು ಇಂತಹ ತಪ್ಪನ್ನ ಮಾಡಿದ ದೇಶಗಳು. ಒಂದು ಬಾಟೆಲ್ ಬೀರ್ ಕೊಳ್ಳಲು ಮೂಟೆಗಟ್ಟಲೆ ಹಣ ಹೊತ್ತೊಯ್ಯ ಬೇಕಾದ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಚಳಿ ಹೆಚ್ಚಾದಾಗ ಬೆಂಕಿ ಕಾಯಿಸಲು ಕಟ್ಟಿಗೆ ಕೊಳ್ಳುವ ಬದಲು ಹಣವನ್ನೇ ಉರಿಸಿ ಬೆಂಕಿ ಕಾಯಿಸುವುದು ಅಗ್ಗ ಎನ್ನುವ ಸ್ಥಿತಿ ಈ ದೇಶಗಳಲ್ಲಿ ಇತ್ತು. ವೆನಿಜುಲಾ ದೇಶ ಇಂದಿಗೂ ಹೆದರಿಸುತ್ತಿರುವ ಹಣದುಬ್ಬರ ಸಮಸ್ಯೆ ಅಲ್ಲಿನ ಜನರ ಬದುಕಿನ ಬವಣೆಗಳು ಬರೆಯಲು ಇದು ಸ್ಥಳವಲ್ಲ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

2 COMMENTS

  1. ವೆನಿಜುಲಾ ದೇಶ ಇಂದಿಗೂ ಹೆದರಿಸುತ್ತಿರುವ ಹಣದುಬ್ಬರ
    request digital kannada team to pay attention to spellings.

Leave a Reply