ನೋಟು ಬದಲಾವಣೆಯ ಹರಸಾಹಸದಲ್ಲಿರುವ ಜನ, ಡೊನಾಲ್ಡ್ ಟ್ರಂಪ್ ವಿಜಯ ಇವು ಮಾಧ್ಯಮದ ಬಗ್ಗೆ ಹೇಳುತ್ತಿರುವುದೇನು?

author-chaitanyaಈ ತಿಂಗಳಲ್ಲಿ ನಡೆದ ಪ್ರಮುಖ ವಿದ್ಯಮಾನಗಳೆಂದರೆ ನೋಟು ಬದಲಾವಣೆ ಹಾಗೂ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷರನ್ನಾಗಿಸಿದ ಅಮೆರಿಕದ ಚುನಾವಣೆ.

ನೋಟು ಬದಲಾವಣೆ ಕುರಿತಂತೂ ದಿನವೂ ಸುದ್ದಿಜಾತ್ರೆ ನಡೆಯುತ್ತಲೇ ಇದೆ. ಈ ವಿಷಯದಲ್ಲಿ ಮಾಧ್ಯಮ ನಿರೂಪಣೆಯನ್ನು ಎಷ್ಟರಮಟ್ಟಿಗೆ ಆತುಕೊಳ್ಳಬಹುದು ಎಂಬುದು ಬಹುತೇಕರ ಪ್ರಶ್ನೆ. ಈ ಸಂಕ್ರಮಣ ಕಾಲದಲ್ಲಿ ಜನರ ಬವಣೆಯನ್ನು ಬಿಂಬಿಸಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಹುತೇಕ ಮಾಧ್ಯಮಗಳಲ್ಲಿ ತೋರಿಸುತ್ತಿರುವ ಅನುಭವಕ್ಕೂ ವ್ಯಕ್ತಿಗಳ ಅನುಭವಕ್ಕೂ ತಾಳೆ ಏಕಾಗುತ್ತಿಲ್ಲ?

500 ರು. ನೋಟು ಬದಲಾವಣೆ ಹಾಗೂ 1000 ರುಪಾಯಿ ನೋಟಿನ ರದ್ದತಿಗಳಿಂದ ಜನಸಾಮಾನ್ಯನಿಗೆ ಕಷ್ಟವಾಗುತ್ತಿಲ್ಲ ಎಂದು ಯಾರೂ ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗೆಂದು ಇದು ಸರ್ಕಾರದ ನಡೆಗೆ ಅಸಮ್ಮತಿಯೇ ಅಂತ ಪ್ರಶ್ನೆ ಹಾಕಿದರೆ ಶ್ರೇಷ್ಠ ಅಭಿಪ್ರಾಯ ನಿರೂಪಕರೆನಿಸಿಕೊಂಡವರ ನಕಾರಾತ್ಮಕ ಮಾತುಗಳಿಗೂ, ವಾಸ್ತವಕ್ಕೂ ಭಿನ್ನತೆ ಕಂಡುಬರುತ್ತದೆ.

ನವೆಂಬರ್ 8ರ ರಾತ್ರಿ ಈ ಕ್ರಮ ಘೋಷಣೆಯಾದಾಗ ಈ ಲೇಖಕ ಹಿಮಾಚಲ ಪ್ರದೇಶದ ಕಸೋಲ್ ಎಂಬಲ್ಲಿದ್ದ. ಪರ್ವತಗಳ ಮಗ್ಗುಲಿನ ಕಡಿದಾದ ರಸ್ತೆ, ಕಂದರಗಳಿಂದ ಆವೃತವಾಗಿರುವ ಆ ಪ್ರದೇಶದಲ್ಲಿ ಮನೆಯ ಮುಂಭಾಗವನ್ನೇ ಸಣ್ಣ ಅಂಗಡಿಯಾಗಿಸಿಕೊಂಡು ಅಲ್ಲಿ ಪ್ರವಾಸಿಗರಿಗೆ ಚಹಾ-ತಿಂಡಿ ಮಾಡುವವರು, ಸ್ವೆಟರ್ ಅನ್ನೋ ಟೊಪ್ಪಿಯನ್ನೋ ಮಾಡುವುದಕ್ಕೆ ನೇಯ್ಗೆ ಸುತ್ತುತ್ತಿರುವವರು ಇದ್ದಾರೆ. ಹೆಚ್ಚಿನವು ಬೆಚ್ಚಗಿನ ಬಟ್ಟೆಯ ಅಂಗಡಿಗಳು.

ತಖಲೀಫ್ ಹೋಗಾ ಸರ್… ಅಂತಲೇ ಅಂಗಡಿಕಾರರೆಲ್ಲ ಮಾತಿಗಿಳಿಯುತ್ತಿದ್ದರು. ಪ್ರವಾಸಿಗರೇನು ನೂರರ ನೋಟು ಹೊತ್ತು ಬಂದಿರುತ್ತಾರೆಯೇ? ಹಾಗೆಂದೇ ವ್ಯವಹಾರದಲ್ಲಿ ಆತಂಕ, ಇಳಿಮುಖ ಸೂಚನೆ ಎಲ್ಲವೂ ಆ ಸಣ್ಣ ಪಟ್ಟಣವನ್ನಾವರಿಸಿತ್ತು. ಆದರೆ, ಕಷ್ಟವಾಗುತ್ತಿದೆ ಎಂಬ ಮಾತು ಪೀಠಿಕೆ ಮಾತ್ರ. ಮಾತಿಗಿಳಿದ ಐದಾರು ಅಂಗಡಿಕಾರರಲ್ಲಿ ಎಲ್ಲರೂ ಮಾತು ಮುಗಿಸುತ್ತಿದ್ದದ್ದು ‘ತಖಲೀಫ್ ತೊ ಹೋಗಾ, ಲೆಖಿನ್ ಮೋದಿ ನೆ ಅಚ್ಛಾ ಕಿಯಾ’, ಇದು ನಾಲ್ಕೈದು ದಿನಗಳ ಕಷ್ಟ, ಆದರೆ ಮೋದಿ ಒಳ್ಳೆ ಕೆಲಸವನ್ನೇ ಮಾಡಿದ್ದಾರೆ. ನಮ್ಮದು ನ್ಯಾಯದ ದುಡಿಮೆ. ನಾವೇಕೆ ಆತಂಕಗೊಳ್ಳೋಣ ಎಂಬ ಪ್ರಶ್ನೆ ಅವರದ್ದಾಗಿತ್ತು.

ಇವನ್ನೆಲ್ಲ ಕೇವಲ ಪರ-ವಿರೋಧದಲ್ಲಿ ಹಿಡಿದಿಡಲು ಹೋದಾಗ ಎಡವಟ್ಟಾಗುತ್ತದೆ ಅಷ್ಟೆ. ಆ ಸಣ್ಣ ಪಟ್ಟಣದಲ್ಲೇ ನಾಲ್ಕು ಅಂಗಡಿ ಹೊಂದಿರುವ ನೇಪಾಳಿ ಶರ್ಮನ ಮಾತು- ‘500ರ ಹಳೆ ನೋಟು ಕೊಟ್ಟೇ ಏನು ಬೇಕೋ ಖರೀದಿ ಮಾಡಿ. ನನ್ನದು ಪ್ರಾಮಾಣಿಕ ದುಡಿಮೆ. ಡಿಸೆಂಬರ್ 30ರವರೆಗೆ ಸಮಯವಿದೆಯಲ್ಲ. ನೋಟು ಬದಲಿಸಿಕೊಳ್ಳುತ್ತೇನೆ. ಮಾಹಿತಿ ಕೊರತೆ ಇದ್ದರೆ ಹೆದರಬೇಕಿತ್ತು, ಇಲ್ಲವೇ 500-1000ಗಳ ನೋಟನ್ನು ಅದಾಗಲೇ ಭಾರಿ ಸಂಖ್ಯೆಯಲ್ಲಿ ಇಟ್ಟುಕೊಂಡಿದ್ದರೆ, ಅಯ್ಯೋ ಮತ್ತೆ ಸಂಗ್ರಹವಾಗಿಬಿಟ್ಟರೆ ಏನು ಮಾಡೋದು ಅಂತ ತಲೆ ಕೆಡಿಸಿಕೊಳ್ಳಬೇಕಿತ್ತು. ಅಂಥ ಪರಿಸ್ಥಿತಿ ಯಾವುದೂ ನನ್ನದಲ್ಲವೆಂದಾದಾಗ ನಾನೇಕೆ ಹೆದರಲಿ?’ ಎಂದವನಿಗೆ ವಾಸ್ತವದ ಅರಿವೂ ಇತ್ತು. ‘ನಾಲ್ಕು ದಿನಗಳಲ್ಲಿ ಎಲ್ಲ ಸರಿಯಾಗುತ್ತೆ, ಎಟಿಎಂನಲ್ಲಿ ನಗದು ಬರುತ್ತೆ ಅಂತಿದ್ದಾರೆ. ಆದರೆ ಹೇಳಿಕೇಳಿ ಇದು ಪರ್ವತ ಪ್ರದೇಶ. ಇಲ್ಲಿ ವ್ಯವಸ್ಥೆ ಸರಿಹೊಂದುವುದಕ್ಕೆ ತಿಂಗಳೇ ತಗಲುತ್ತದೆ. ಕಷ್ಟದ ದಿನಗಳಿವೆ. ಆದರೆ ಭವಿಷ್ಯ ಯೋಚಿಸಿದಾಗ ಈ ಯೋಜನೆ ಸರಿಯಾಗಿಯೇ ಇದೆ’ ಎಂದನಾತ.

ಅಲ್ಲೂ ಸ್ಯಾಂಪಲ್ಲಿಗೆಂದು ಯೋಜನೆಯ ಕಟ್ಟರ್ ವಿರೋಧಿಗಳು ಸಿಕ್ಕರು. ಅಹಮದಾಬಾದಿನಿಂದ ಬಂದು ನೆಲೆನಿಂತ ವ್ಯಾಪಾರಿಯೊಬ್ಬ ಮೋದಿಗೆ ಮಾ-ಬೆಹನ್ ಶಬ್ದಪ್ರಯೋಗದಿಂದ ನಿಂದಿಸಿದನಲ್ಲದೇ, ಉತ್ತರ ಪ್ರದೇಶ ಚುನಾವಣೆಯಲ್ಲಿ ಸರಿಯಾಗಿ ಬೀಳುತ್ತೆ ಮೋದಿಗೆ ಲತ್ತೆ ಅಂತ ಉದ್ವಿಗ್ನನಾದ. ಅವನ ಒಡಲುರಿ ಏನಿತ್ತೋ ಏನೋ?

ಮಣಿಕರಣ್ ನ ಸ್ಥಳೀಯ ಬ್ಯಾಂಕಿನಲ್ಲಿ ನಾಲ್ಕು ಸಾವಿರ ಮೌಲ್ಯದ ನೋಟಿನ ಬದಲಾವಣೆಯೂ 20 ನಿಮಿಷದ ಸರದಿಯಲ್ಲಿ ಸುಸಂಪನ್ನವಾಯಿತು. ಶನಿವಾರ ಚಂಡೀಗಢದಲ್ಲಿಳಿದಾಗ ಬೆಳಗಿನ ಪತ್ರಿಕೆಗಳಲ್ಲಿ ಬ್ಯಾಂಕುಗಳ ಮುಂದಿನ ಸರತಿ ಸಾಲಿನದ್ದೇ ಆತಂಕದ ಸುದ್ದಿ. ಆದರೆ ಭಾನುವಾರ ನಗರವನ್ನೆಲ್ಲ ಸುತ್ತಿದ ನಮಗೆ ಕಂಡಿದ್ದು ಐದಾರು ಬ್ಯಾಂಕುಗಳ ಮುಂದೆ 15 ಮಂದಿಗೆ ಮೀರಿರದಿದ್ದ ಸಾಲಷ್ಟೆ. ಗೆಳೆಯ ಕೈಲಾಸ್ ನಗರದ ಕೇಂದ್ರಭಾಗದ ಮಾರುಕಟ್ಟೆಯ ಎಟಿಎಂನಲ್ಲಿ ಯಾವ ಸಾಲುಗಳ ಹಂಗಿಲ್ಲದೇ ಹಣ ಡ್ರಾ ಮಾಡಿದರು. ನಾವುಳಿದುಕೊಂಡಿದ್ದ ಹೊಟೇಲಿನವ ಸಹ ಹಳೆ ನೋಟಲ್ಲಿ ಪಾವತಿಸಿದರೂ ತೆಗೆದುಕೊಳ್ಳುತ್ತೇನೆಂದ. ಕಾರ್ಡಲ್ಲಿ ವ್ಯವಹಾರವಾಯಿತೆಂಬುದು ಬೇರೆ ಮಾತು.

ಬೆಂಗಳೂರಿಗೆ ಬಂದಿಳಿದಾಗ ಮಹಾನಗರದ ನಗದು ಅವ್ಯವಸ್ಥೆ ಎಲ್ಲರ ಮಾತುಗಳಲ್ಲಿ ಪ್ರತಿಧ್ವನಿಸುತ್ತಿದ್ದದ್ದು ಸುಳ್ಳಲ್ಲ. ಆದರೆ ಅದಷ್ಟೇ ಬಿಂಬವನ್ನು ಹಿಡಿದು ಸಾಗಿದರೆ ಅರ್ಧಸತ್ಯವಷ್ಟೇ ಸಿಕ್ಕೀತು. ಟ್ಸಾಕ್ಸಿ ಚಾಲಕ, ಟೀ ಅಂಗಡಿ ಎದುರಿನ ಜನ ಇವರು ಬೆಂಗಳೂರಿಗೆ ಕಾಲಿಟ್ಟಾಗ ಮೊದಲ ಸಂಪರ್ಕ ಬಿಂದುಗಳಾದರು. ಆರುತಾಸು ಸರದಿಯಲ್ಲಿ ನಿಂತು 2 ಸಾವಿರವಷ್ಟೇ ಸಿಕ್ಕಿತೆಂಬ ಹತಾಶ ಧ್ವನಿಗಳು ಅಲ್ಲಿದ್ದವು. ಆದರೆ ಯೋಜನೆ ಮಾತ್ರ ಸರಿಯಾಗಿಯೇ ಇದೆ ಎಂದರೆಲ್ಲ. ‘ನಮಗೆಲ್ಲ ತೀರ ಕಷ್ಟ ಏನಾಗಿಲ್ಲ ಸಾರ್. ಆದರೆ ಈ ಗಾರ್ಮೆಂಟ್ ವಲಯದಲ್ಲಿರೋರು, ಪ್ರತಿದಿನದ ಕೂಲಿ ಪಡೆಯುವವರಿಗೆ ಕಷ್ಟವಾಗಿರುತ್ತೆ. ಯಾಕಂದ್ರೆ ಚೇಂಜು ಹೊಂದಿಸೋದು ಕಷ್ಟ. ಹೊಡೆತ ಬಿದ್ದಿರೋದು ರಿಯಲ್ ಎಸ್ಟೇಟು-ರಾಜಕೀಯಕ್ಕೆ. ಮೋದಿಯವರು ಕರೆಕ್ಟಾಗೇ ಮಾಡಿದಾರೆ’ ಅನ್ನೋದು ಟ್ಯಾಕ್ಸಿ ಚಾಲಕ ಕುಮಾರ ಗೌಡರ ಅಭಿಮತ.

—–

ನೋಟು ಬದಲಾವಣೆ ಪರ್ವದಲ್ಲಿ ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲಿಸುತ್ತಿದ್ದಾರೆ. ಹಿಮಾಚಲ- ಚಂಡೀಗಢ- ಬೆಂಗಳೂರು ಹೀಗೆ ಹಲವು ಬಿಂದುಗಳ ಅನುಭವ ಒಳಗೊಂಡಿದೆ ಎಂಬ ಕಾರಣಕ್ಕೆ ನಾನು ಕಂಡ ಚಿತ್ರಣಗಳನ್ನೂ ಇಲ್ಲಿ ದಾಖಲಿಸಿದ್ದೇನಷ್ಟೆ. ಮೋದಿ ನಿರ್ಧಾರದ ಅನುಷ್ಠಾನದಲ್ಲಿ ಕಷ್ಟ ಎದುರಾಗಿದೆ, ಆದರೆ ಉದ್ದೇಶ ಮಾತ್ರ ಉದಾತ್ತವೇ ಎಂಬುದು ನನ್ನ ವ್ಯಾಪ್ತಿಯಲ್ಲಿ ಜನರಿಂದ ನನಗೆ ಸಿಕ್ಕ ಸಂದೇಶ. ಈ ಸಹಾನುಭೂತಿ ಹಿಡಿದಿಟ್ಟುಕೊಳ್ಳಬೇಕೆಂದರೆ ಸರ್ಕಾರ ಬೆಂಗಳೂರು, ದೆಹಲಿ, ಮುಂಬೈಗಳಂಥ ನಗರಗಳಲ್ಲಿ ನಗದು-ಎಟಿಎಂ ವ್ಯವಸ್ಥೆ ಚುರುಕುಗೊಳಿಸಿ ಹತಾಶೆ ಮಡುಗಟ್ಟದಂತೆ ನೋಡಿಕೊಳ್ಳಬೇಕಷ್ಟೆ.

ಇನ್ನು ಹಳ್ಳಿಗರ ಪರವಾಗಿ ಸ್ಥಿತಿ ಹೀಗಿದೆ ಎಂಬ ಫರ್ಮಾನು ಹೊರಡಿಸುವ ಪರಿಣತ ನಾನಲ್ಲವಾದರೂ, ಊರಲ್ಲಿರುವ ತಂದೆ-ತಾಯಿ ಮಾತಲ್ಲಿ ಕೆಲವು ಅಂಶಗಳು ದಕ್ಕಿದವು. ಬಡ ರೈತರು, ಬ್ಯಾಂಕಿಂಗ್ ವ್ಯವಸ್ಥೆ ಇರದ ಹಳ್ಳಿಗಳು ಎಂದೆಲ್ಲ ವರ್ಣರಂಜಿತವಾಗಿ ಕಟ್ಟಿಕೊಡುತ್ತ ಅಲ್ಲೆಲ್ಲ ಸರ್ಕಾರದ ಕ್ರಮದಿಂದ ಬದುಕೇ ಕಮರಿಹೋಗಿದೆ ಎಂಬಂತೆ ಚಿತ್ರಿಸುತ್ತಿರುವವರದ್ದು ಉತ್ಪ್ರೇಕ್ಷೆ ಅಂತಲೂ ಅನಿಸಿದ್ದಕ್ಕೆ ಕಾರಣವಿದೆ. ಅಲ್ಲೂ ಬ್ಯಾಂಕುಗಳ ಮುಂದೆ ದೊಡ್ಡ ಸಾಲುಗಳಿವೆ. ದಿಗಿಲುಗಳಿವೆ. ಆದರೆ ಹಳ್ಳಿ ಮತ್ತು ಸಣ್ಣ ಪಟ್ಟಣಗಳ ಜನಜೀವನ ಸಾಗುವುದಕ್ಕೆ ಕರೆನ್ಸಿಯಷ್ಟೇ ಮುಖ್ಯವಾಗಿ ವಿಶ್ವಾಸವೂ ಕೆಲಸ ಮಾಡಿಕೊಂಡಿದೆ ಎಂಬುದನ್ನು ಮರೆಯಬಾರದು. ‘ಹೆಗಡೇರೆ.. ಐನೂರರ ಹಳೆ ನೋಟಿಗೆ ಚಿಲ್ಲರೆ ಇಲ್ಲ. ಏನು ಬೇಕೋ ತೆಗೆದುಕೊಂಡುಹೋಗಿ. ಹೊಸನೋಟು ಬಂದ ನಂತರ ಕೊಡಿ. ನಾವೂ ಓಡಿಹೋಗಲ್ಲ, ನೀವು ಓಡಿಹೋಗಲ್ಲ..’ ಇದು ಯೋಜನೆ ಜಾರಿಯಾದ ಮರುದಿನ ಸಿದ್ದಾಪುರ ಸಂತೆಯಲ್ಲಿ ಕೇಳಿಬರುತ್ತದ್ದ ಸಹಜ ಮಾತೆಂದರು ಅಪ್ಪ. ಇಂಥ ಪರಿಸ್ಥಿತಿಯಲ್ಲಿ ಅಂತಲ್ಲ, ಮಾಮೂಲಿ ದಿನಗಳಲ್ಲೂ ಇಂಥ ಹೊಂದಾಣಿಕೆಗಳು ಗಾಢವಾಗಿರುವ ಹಳ್ಳಿ ಮತ್ತು ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಎಡಪಂಥೀಯರು ಹೇಳುವ ‘ಆರ್ಥಿಕ ತುರ್ತು ಪರಿಸ್ಥಿತಿ’ ಅಷ್ಟು ಸುಲಭಕ್ಕೆ ರೂಪುಗೊಳ್ಳುವುದಿಲ್ಲ.

ಇವೆಲ್ಲ ಒಂದೆಡೆಯಾದರೆ, ಅಮೆರಿಕದ ಟ್ರಂಪ್ ಆಯ್ಕೆಯನ್ನೇಕೆ ಈ ವಿಷಯದೊಂದಿಗೆ ತಳುಕು ಹಾಕಲಾಯಿತೆಂದಿರಾ? ಮುಖ್ಯವಾಹಿನಿ ಮಾಧ್ಯಮದ ಅಭಿಪ್ರಾಯ ನಿರೂಪಣೆ- ಗ್ರಹಿಕೆಗಳು ಎಷ್ಟು ಟೊಳ್ಳು ಎಂಬುದನ್ನು ನಿರೂಪಿಸಿದ ಇನ್ನೊಂದು ವಿದ್ಯಮಾನವಿದು. ಡೊನಾಲ್ಡ್ ಟ್ರಂಪ್ ದೇವಮಾನವನೇನಲ್ಲ ನಿಜ. ಆದರೆ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಅಭ್ಯರ್ಥಿಗೆ ಒಂದು ಸಮತೋಲಿತ ಜಾಗ ಸಿಗಲೇಬೇಕಲ್ಲ? ಇಲ್ಲ… ವಾಷಿಂಗ್ಟನ್ ಪೋಸ್ಟ್, ಕ್ವಾರ್ಟ್ಜ್ ಸೇರಿದಂತೆ ಅಮೆರಿಕದ ದೈತ್ಯ ಮಾಧ್ಯಮಗಳೆಲ್ಲ ಡೊನಾಲ್ಡ್ ಟ್ರಂಪ್ ರನ್ನು ರಕ್ಕಸನನ್ನಾಗಿ ಚಿತ್ರಿಸಿದವು. ಮೋದಿ ಅಂದರೆ ಹಿಟ್ಲರ್ ಎಂಬ ವ್ಯಾಖ್ಯಾನವನ್ನು ಸೃಷ್ಟಿಸುವುದಕ್ಕೆ ನಮ್ಮ ಮಾಧ್ಯಮಗಳು ಅಹೋರಾತ್ರಿ ಕಷ್ಟಪಟ್ಟು ಕೊನೆಗೆ ಅದ್ಯಾವ ಪರಿ ಮುಖ ಕಳೆದುಕೊಂಡವೋ, ಅದೇ ಅಮೆರಿಕ ಮಾಧ್ಯಮಗಳಿಗೂ ಆಗಿದೆ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ನಿಂತ ವ್ಯಕ್ತಿಯ ಚುನಾವಣಾ ಸಮಾವೇಶಗಳನ್ನೇ ಬಹಿಷ್ಕರಿಸಿ ಉದಾರವಾದದ ಸೈದ್ಧಾಂತಿಕ ಸರ್ಟಿಫಿಕೇಟುಗಳನ್ನು ಕೊಡುವಲ್ಲಿ ಅಲ್ಲಿನ ಮಾಧ್ಯಮಗಳು ಮಗ್ನವಾದವು. ಇವರ ಸಮೀಕ್ಷೆಗಳಲ್ಲೆಲ್ಲ ಲಾಗಾಯ್ತಿನಿಂದಲೂ ಹಿಲರಿ ಕ್ಲಿಂಟನ್ನೇ ದಾಪುಗಾಲಲ್ಲಿದ್ದರು. ಇವರ ಅಭಿಪ್ರಾಯ ನಿಜವೆಂದುಕೊಂಡರೆ ಟ್ರಂಪ್ ಗೆಲ್ಲಬಾರದು ಹಾಗೂ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ! ಇದೀಗ ಫಲಿತಾಂಶ ಜನರ ಮುಂದಿದೆ.

ಇವತ್ತಿಗೆ ಮೋದಿ ಸರ್ಕಾರದ ನೋಟು ಬದಲಾವಣೆ ಕಾರ್ಯದ ವಿರುದ್ಧ ಪ್ರತಿಪಕ್ಷಗಳೆಲ್ಲ ಒಂದಾಗಿವೆಯೆಂದೂ, ಮಮತಾ ಬ್ಯಾನರ್ಜಿ- ಶಿವಸೇನೆಗಳು ಒಂದಾಗಿ ಗರ್ಜಿಸುತ್ತಿವೆಯೆಂದೂ, ಬಡವರ ಬದುಕು ಇಂಥ ಆಘಾತವನ್ನು ಈ ಶತಮಾನದಲ್ಲೆಲ್ಲೂ ಪಡೆದಿರಲೇ ಇಲ್ಲ ಎಂದೂ ಮಾಧ್ಯಮದ ಒಂದು ವರ್ಗದಲ್ಲಿ ಅಭಿಪ್ರಾಯ ನಿರೂಪಣೆ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಮುಖ್ಯವಾಹಿನಿ ಮಾಧ್ಯಮದ ಅಬ್ಬರದ ಕಿರುಚಾಟಗಳೆಲ್ಲ ನಿಜಕ್ಕೂ ಜನರ ಅಭಿಪ್ರಾಯಗಳನ್ನು ರೂಪಿಸುತ್ತವೆಯಾ ಅಂತ ಪ್ರಶ್ನಿಸಿಕೊಂಡರೆ, ಈ ಹಿಂದಿನ ಮೋದಿ ವಿರೋಧದ ನಂಜು ಮಾಡಿದ್ದಾರೂ ಏನು ಎಂಬ ಅಂಶದಲ್ಲಿ, ಡೊನಾಲ್ಡ್ ಟ್ರಂಪ್ ದಿಗ್ವಿಜಯಗಳತ್ತ ನೋಡಿ ಈ ಎಲ್ಲ ಬೊಬ್ಬೆಗಳ ಯೋಗ್ಯತೆಯನ್ನು ನಿರ್ಧರಿಸಬಹುದು.

Leave a Reply