ಕೃಷಿ- ವ್ಯಾಪಾರಕ್ಕೆ ನಗದು ಪೂರೈಕೆ ಸುಧಾರಣೆ, ₹2000ಕ್ಕೆ ಸೀಮಿತವಾದ ನೋಟು ವಿನಿಮಯ, ಪ್ರತಿಪಕ್ಷಗಳ ಗಲಾಟೆಯ ನಡುವೆ ಮೋದಿ ನಡೆಗೆ ಗುಡ್ ಅಂದ್ರು ನಿತೀಶ್ ಕುಮಾರ್!

ಡಿಜಿಟಲ್ ಕನ್ನಡ ಟೀಮ್:

ನೋಟು ನವೀಕರಣ ಪರ್ವದಲ್ಲಿರುವ ಭಾರತದಲ್ಲಿ ಗುರುವಾರ ಸರ್ಕಾರ ಒಂದಿಷ್ಟು ಕ್ರಮಗಳನ್ನು ಪ್ರಕಟಿಸಿದೆ. ಗುರುತಿನ ಚೀಟಿ ಒದಗಿಸಿ ಕೌಂಟರಿನಲ್ಲಿಯೇ ವಿನಿಮಯ ಮಾಡಿಕೊಳ್ಳಬಹುದಾದ ಹಣದ ಮೊತ್ತ ಪ್ರಾರಂಭದಲ್ಲಿ ₹4000ಗಳಿದ್ದು ನಂತರ ₹4500ಗಳಿಗೆ ಏರಿತ್ತು. ಶುಕ್ರವಾರದಿಂದ ಈ ವಿಧಾನದಲ್ಲಿ ಕೇವಲ ₹2000ವನ್ನಷ್ಟೇ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದಕ್ಕಿಂತ ಹೆಚ್ಚಿಗೆ ಉಳಿದುಕೊಂಡಿದ್ದರೆ ಖಾತೆಗೆ ಕಟ್ಟಬೇಕು.

ಉಳಿದಂತೆ ಘೋಷಣೆಯಾಗಿರುವ ಪ್ರಮುಖ ಕ್ರಮಗಳು ಹೀಗಿವೆ.

  • ರೈತರು ತಮ್ಮ ಖಾತೆಗೆ ಸಂದಾಯವಾಗಿರುವ ಸಾಲದಲ್ಲಿ ವಾರಕ್ಕೆ ₹25000 ವನ್ನು ಪಡೆದುಕೊಳ್ಳಬಹುದಾಗಿದೆ. ಬೆಳೆ ವಿಮೆ ಮತ್ತು ಕಿಸಾನ್ ಕಾರ್ಡ್ ಕ್ರೆಡಿಟ್ ಪಾವತಿಗಳಿಗೆ 15 ದಿನಗಳ ಅವಧಿ ವಿಸ್ತರಣೆ.
  • ಎಪಿಎಂಸಿ ಜತೆ ನೊಂದಾಯಿಸಿಕೊಂಡಿರುವ ವ್ಯಾಪಾರಿಗಳು ತಮ್ಮ ಖಾತೆಯಿಂದ ವಾರಕ್ಕೆ ₹50000ಗಳವರೆಗೂ ತೆಗೆಯಬಹುದು.
  • ಮದುವೆ ಸಮಾರಂಭ ಇಟ್ಟುಕೊಂಡವರು ವರ, ವಧು ಅಥವಾ ಇವರಿಬ್ಬರ ಪಾಲಕರ ಖಾತೆಯಿಂದ ₹2.5 ಲಕ್ಷ ತೆಗೆದುಕೊಳ್ಳಬಹುದು. ಯಾರಾದರೂ ಒಬ್ಬರ ಖಾತೆಯಿಂದ ಮೊತ್ತ ತೆಗೆದುಕೊಳ್ಳಬೇಕು.
  • ಕೇಂದ್ರ ಸರ್ಕಾರದ ಗ್ರೂಪ್ ಸಿ ವರೆಗಿನ ನೌಕರರು ತಮ್ಮ ಸಂಬಳದ ₹10000ದವರೆಗಿನ ನಗದನ್ನು ಮುಂಚಿತವಾಗಿ ತೆಗೆದುಕೊಳ್ಳಬಹುದು. ಇದನ್ನು ನವೆಂಬರ್ ತಿಂಗಳ ಸಂಬಳದಲ್ಲಿ ಸರಿಹೊಂದಿಸಲಾಗುತ್ತದೆ.
  • ಎಟಿಎಂಗಳನ್ನು ಹೊಸ ನೋಟಿಗೆ ತಕ್ಕಂತೆ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪಡೆಗಳು ಸತತವಾಗಿ ತೊಡಗಿಕೊಂಡಿರುವುದಾಗಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇವೆಲ್ಲ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಮಾತಾದರೆ, ಅತ್ತ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗಿ ಕಲಾಪದಲ್ಲಿ ಗದ್ದಲ ಎಬ್ಬಿಸಿವೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಉತ್ತರಿಸಬೇಕು ಎಂಬುದು ಕಾಂಗ್ರೆಸ್ಸಿನ ಒತ್ತಾಯ. ವಿತ್ತ ಸಚಿವರು ಉತ್ತರಿಸುತ್ತಾರೆ ಎಂಬುದು ಸರ್ಕಾರದ ನಿಲುವು. ಲೋಕಸಭೆಯಲ್ಲಿ ನೋಟು ನವೀಕರಣ ಯೋಜನೆ ಚರ್ಚೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಸಮ್ಮತಿಸಿದರಾದರೂ ಪ್ರತಿಪಕ್ಷಗಳು ಹೇಳಿದ ನಿರ್ದಿಷ್ಟ ನಿಯಮಗಳ ಅಡಿ ಸಾಧ್ಯವಿಲ್ಲವೆಂದಾಗ ಸಭಾತ್ಯಾಗ ನಡೆಯಿತು. ಉಭಯ ಸದನಗಳೂ ಮುಂದೂಡಿಕೆ ಆಗಿವೆ. ಪ್ರತಿಪಕ್ಷಗಳೆಲ್ಲ ಒಟ್ಟಾಗಿ ಸರ್ಕಾರದ ವಿರುದ್ಧ ಪ್ರಹಾರ ಮಾಡುತ್ತಿವೆಯಾದರೂ ದಿಕ್ಕುಗಳು ಬೇರೆ ಇವೆ. ಯೋಜನೆಯನ್ನೇ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂಬುದು ತೃಣಮೂಲದ ಒತ್ತಾಸೆ. ಯೋಜನೆ ಸರಿಯಾಗಿದೆ ಆದರೆ ಅನುಷ್ಠಾನ ವಿಫಲವಾಗಿರುವುದರಿಂದ ಪ್ರಧಾನಿ ಉತ್ತರಿಸಬೇಕು ಎಂಬುದು ಕಾಂಗ್ರೆಸ್ ಒತ್ತಡ.

ಇವೆಲ್ಲದರ ನಡುವೆ ಅಚ್ಚರಿಯ ಬೆಳವಣಿಗೆಯೂ ನಡೆದಿದೆ. ಒಂದೆಡೆ ಎನ್ಡಿಎದ ಭಾಗವಾಗಿರುವ ಶಿವಸೇನೆ ಪ್ರತಿಪಕ್ಷಗಳ ಜತೆ ನಿಂತು, ನೋಟು ನವೀಕರಣ ಯೋಜನೆಯ ಅನುಷ್ಠಾನ ಅಸಮರ್ಪಕವಾಗಿದ್ದು ಬಡವರಿಗೆ ತೊಂದರೆ ಆಗುತ್ತಿದೆ ಎಂಬ ಪ್ರತಿರೋಧ ಎತ್ತಿದೆ. ಆದರೆ ಬಿಹಾರ ಮುಖ್ಯಮಂತ್ರಿ ಹಾಗೂ ನರೇಂದ್ರ ಮೋದಿಯವರ ರಾಜಕೀಯ ಎದುರಾಳಿ ನಿತೀಶ್ ಕುಮಾರ್ ಮಾತ್ರ ಮಧುಬನಿಯ ಸಭೆಯೊಂದರಲ್ಲಿ ಮೋದಿ ಸರ್ಕಾರದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಅವರು ಹೇಳಿರುವುದಿಷ್ಟು- ‘ಎಲ್ಲರಂತೆ ನಾನೂ ಸಹ ತಮ್ಮ ಹಣಕ್ಕಾಗಿ ಸರದಿಯಲ್ಲಿರುವವರ ಬವಣೆಗೆ ಮರುಗಿದ್ದೇನೆ. ಆದರೆ ಪ್ರಧಾನಿ ಮೋದಿಯವರ ಈ ಯೋಜನೆ ಈ ಸುಧಾರಣೆ ಪರಿಣಾಮಕಾರಿಯಾಗಲಿದೆ ಎಂದು ನಂಬಿದ್ದೇನೆ. ಇದು ಖೋಟಾ ನೋಟು, ಕಾಳಧನ ಮತ್ತು ಭ್ರಷ್ಟಾಚಾರದ ಬೇರುಗಳನ್ನು ಸುಡಲಿದೆ. ಮುಂದಿನ ಹಂತದಲ್ಲಿ ಪ್ರಧಾನಿ ಮೋದಿ ಬೇನಾಮಿ ಆಸ್ತಿಗಳ ನಿಗ್ರಹಕ್ಕೆ ಮುಂದಾಗಬೇಕು.’

Leave a Reply