ಗೃಹಿಣಿಯ ಸಾಸಿವೆ ಡಬ್ಬಿಯಲ್ಲಿನ ಉಳಿತಾಯ ಬಗೆಗಿನ ಹಾಸ್ಯಕ್ಕಿಂತ, ಸರಿ ದಾರಿ ತೋರುವ ಜವಾಬ್ದಾರಿ ದೊಡ್ಡದು

author-geetha‘ಈ ವಾರ ಪೂರಾ ಬೇರೆ ಸುದ್ದಿನೇ ಇಲ್ಲ… ಬ್ಯಾಂಕು, ಎಟಿಎಂ ಮುಂದೆ ಇರುವ ಕ್ಯೂ.. ಹಾವಿನಂತೆ, ಹರಿಯುವ ನೀರಿನಂತೆ ಕ್ಯೂ…’

‘ಐನೂರು, ಸಾವಿರ ನೋಟುಗಳು ಇಲ್ಲ… ಎರಡು ಸಾವಿರದ ನೋಟು ಇನ್ನು ನೋಟಕ್ಕೆ ಸಿಕ್ಕಿಲ್ಲ..’

‘ಕ್ಯೂನಲ್ಲಿ ನಿಂತವರ ಪೈಕಿ ಹದಿನೇಳು ಜನ ಬಸವಳಿದು ಸಾವನ್ನಪ್ಪಿದ್ದಾರಂತೆ..’

‘ಹೈದರಾಬಾದಿನಲ್ಲಿ ಯಾರೋ ವೃದ್ಧೆ ತಮ್ಮ ಉಳಿತಾಯಕ್ಕೆ ಬೆಲೆ ಇಲ್ಲ ಎಂಬ ಭ್ರಮೆಯಿಂದ ಆತ್ಮಹತ್ಯೆ ಮಾಡಿಕೊಂಡರಂತೆ..’

‘ಮೋದಿ ಈ ದೇಶವನ್ನು ಉದ್ಧಾರ ಮಾಡಲು ಬಂದ ದೇವರು.’

‘ನಿಮ್ಮ ದಿನನಿತ್ಯದ ಪ್ರಾರ್ಥನೆಯಲ್ಲಿ ಅವರಿಗಾಗಿ ಅಂದರೆ ಮೋದಿಗಾಗಿ ಕೂಡ ಪ್ರಾರ್ಥನೆ ಮಾಡಿ.. ತುಂಬಾ ಮಂದಿ ವೈರಿಗಳನ್ನು ಸೃಷ್ಟಿಸಿಕೊಂಡಿದ್ದಾರೆ.’

‘ಲಾರಿಗಟ್ಟಲೇ ನೋಟುಗಳಂತೆ… ನದಿ ನೀರಿಗೆ ನೋಟುಗಳನ್ನು ಎಸೆದರಂತೆ..’

‘ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಮದುವೆ ನಿರ್ವಿಘ್ನವಾಗಿ ನೆರವೇರುತ್ತಿದೆ. ಈ ವಿಷಯಗಳ ಅಭಾವ ಅವರನ್ನು ಕಾಡುತ್ತಿಲ್ಲವೇ?’

‘ಎಲ್ಲಾದಿಕ್ಕಿಂತ ಹೆಚ್ಚಿನ ಕಷ್ಟ ಗೃಹಿಣಿಯರಿಗೆ.. ಗಂಡನಿಂದ ಮುಚ್ಚಿಟ್ಟುಕೊಂಡಿದ್ದ ಸಾಸಿವೆ ಡಬ್ಬಿಯ ಹಣವೆಲ್ಲಾ ಆಚೆ ಬಂತು…’

ಜೋಕುಗಳನ್ನು ಯಾರು ಬರೆಯುತ್ತಾರೋ? ವಾಟ್ಸ್ ಅಪ್ ಭರ್ತಿ ಜೋಕುಗಳು… ಒಂದು ವಾರದಲ್ಲಿ ಒಂದು ಸಾವಿರ ಜೋಕುಗಳು ಸೃಷ್ಟಿಯಾಗಿವೆ. ಮೊನ್ನೆ ಮದುವೆಯಲ್ಲಿ ಕುಳಿತು ಕೇಳಿದ ಮಾತುಗಳಲ್ಲಿ ಕೆಲವಿವು. ಎಲ್ಲೇ ಹೋದರೂ ಇವೇ ಮಾತುಗಳು. ಐನೂರು, ಸಾವಿರ ಮುಚ್ಚಿಟ್ಟಿದ್ದು, ಬಚ್ಚಿಟ್ಟಿದ್ದು… ಕಪ್ಪುಹಣ, ಬಿಳಿಹಣ.. ಆರ್ಥಿಕ ಪರಿಸ್ಥಿತಿ… ಅಷ್ಟೇ.

ದೊಡ್ಡಮ್ಮನ ಮೊಮ್ಮಗಳ ಮದುವೆ.. ರೆಡ್ಡಿ ಮಗಳ ಮದುವೆಯಲ್ಲಿ ಅಲ್ಲ. ‘ಬನ್ನಿ’ ‘ಬನ್ನಿ’ ಎಂದು ಹಾಡಿ ಕುಣಿದು ಕರೆದರೂ ಆ ಮದುವೆಗೆ ಹೋಗಲಿಲ್ಲ.

ಎಲ್ಲಾ ಮಾತುಕಥೆಯಲ್ಲಿ ಹಾಸ್ಯಘಟನೆಗಳಲ್ಲಿ ನನ್ನ ಕಾಡಿದ್ದು ಗೃಹಿಣಿಯ ಸಾಸಿವೆ ಡಬ್ಬದ ಉಳಿತಾಯ.

ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೊರಗೆ ದುಡಿದು ಹಣ ಸಂಪಾದಿಸದ ಹೆಣ್ಣು ಮನೆ ಖರ್ಚಿನಲ್ಲಿ ಉಳಿಸುತ್ತಿದ್ದ ಹಣವೇ ಸಾಸಿವೆ ಡಬ್ಬಿಯ ಉಳಿತಾಯ. ಗಂಡನಿಗೆ ಗೊತ್ತಿಲ್ಲದ ಹಾಗೆ ಉಳಿಸುವ ಆ ಹಣ ಖರ್ಚಾಗುವುದು ಯಾವುದಕ್ಕೆ? ಮನೆಗೆ.. ಮಕ್ಕಳಿಗೆ… ಅಬ್ಬಬ್ಬ ಅಂದರೆ ಒಂದು ಸೀರೆಗೆ… ಗಂಡನ ಸಂಪಾದನೆ ಜೋರಾಗಿದ್ದರೆ.. ಹೆಚ್ಚು ಲೆಕ್ಕ ಕೇಳದ ಗಂಡನಿದ್ದರೆ ಚೂರು ಪಾರು ಬಂಗಾರಕ್ಕೆ. ನನ್ನ ಮನಸ್ಸಿನ ಆಳದಲ್ಲಿ ಕೂತಿರುವ ಒಂದು ವಿಷಯ. ಹೆಂಗಸಿನ ಉಳಿತಾಯ ಹಾಸ್ಯಕ್ಕೆ ಕಾರಣವಾಗಿರುವುದಕ್ಕೆ.. ನನ್ನ ಮನಸ್ಸಿನ ಆಳದಿಂದ ಮೇಲೆದ್ದು ಬಂದಿದೆ.

ನಮ್ಮ ತಂದೆಗೆ ಬಟ್ಟೆಗೆ ದುಡ್ಡು ಹಾಕುವುದೆಂದರೆ ದುಡ್ಡನ್ನು ಪೋಲು ಮಾಡಿದಂತೆ ಲೆಕ್ಕ. ನನ್ನ ಮದುವೆಯಲ್ಲಿ ತವರು ಮನೆಯ ಎರಡು ಸೀರೆಗೆ ಎರಡು ಸಾವಿರ ಮಂಜೂರು ಮಾಡಿದ್ದರು. ಸರಿ ದೊಡ್ಡ ಸೀರೆ ಎಂದು ಸಾವಿರದ ಆರು ನೂರು ಕೊಟ್ಟು ಕೊಂಡಿದ್ದಾಯಿತು. ಇನ್ನೊಂದು, ನಾನೂರು ರುಪಾಯಿಯ ಸೀರೆ. ಮುಗಿತು ಶಾಪಿಂಗು. ಧಾರೆಗೆ ನಾನೂರು ರುಪಾಯಿಯ ಬಿಳಿ ಸೀರೆ… ಉಡಕ್ಕಿ ಇಟ್ಟಾಗ ದೊಡ್ಡ ಸೀರೆ.. ರಿಸೆಪ್ಷನ್ನಿಗೆ ಅತ್ತೆ ಮನೆಯವರು ಕೊಡುವ ದೊಡ್ಡ ಸೀರೆ ಉಡುವುದು ಎಂದು ತೀರ್ಮಾನಿಸಿ ಆಯಿತು.

ನಮ್ಮತ್ತೆ ಮನೆಯವರು ಬೇರೆಯೇ ರಿಸೆಪ್ಷನ್ ಏರ್ಪಡಿಸಿ (ನಮ್ಮ ತಂದೆಗೆ ಹೆಚ್ಚು ಬರ್ಡನ್ ಆಗಬಾರದು ಎಂದು) ವ್ಯವಸ್ಥೆ ಮಾಡಿಬಿಟ್ಟರು. ನಾನು ಕೊಡುವ ಸೀರೆ ನಮ್ಮ ರಿಸೆಪ್ಷನ್ನಿಗೆ ಉಟ್ಟುಕೋ ಎಂದರು. ಈಗ ಉಡಕ್ಕಿ ಸೀರೆ ಅರತಕ್ಷತೆಗೆ ಭಡ್ತಿ ಪಡೆದು.. ಉಡಕ್ಕಿಗೆ ಹೊಸ ಸೀರೆಯಿಲ್ಲದಂತೆ ಆಯಿತು. ಮದುವೆಗೆ ಜನವೆಷ್ಟು, ತೆಂಗಿನ ಕಾಯಿ ಎಲ್ಲಿಂದ ತರಿಸುವುದು, ಛತ್ರಕ್ಕೆ ಮುಂಗಡವೆಷ್ಟು ಎನ್ನುವ ಭರಾಟೆಯಲ್ಲಿ ಇದ್ದ ಅಪ್ಪನಿಗೆ ಸೀರೆಯ ವಿಷಯ ಹೇಳಲೂ ಸಾಧ್ಯವಿರಲಿಲ್ಲ. ಆಗ ಹೊರಬಂದದ್ದು ಅಮ್ಮನ ಸಾಸಿವೆ ಡಬ್ಬಿಯ ಉಳಿತಾಯ. ನನಗೆ ಮುನ್ನೂರು ರುಪಾಯಿಯ ಇನ್ನೊಂದು ಸೀರೆ!

ಈಗ ನೆನೆಸಿಕೊಂಡರೂ ನನಗೆ ಹೃದಯ ತುಂಬಿ ಬರುತ್ತದೆ.

ಇನ್ನೆಲ್ಲೋ… ಇನ್ನೂರು ರುಪಾಯಿ ಉಡುಗೊರೆ ಸಾಕು ಎಂದಾಗ ಅದಕ್ಕೆ ಇನೈವತ್ತು ಸೇರಿಸಿ ಅಪ್ಪನ ದೊಡ್ಡಸ್ಥಿಕೆ ಎತ್ತಿ ಹಿಡಿಯಲು ಪ್ರಯತ್ನ ಪಡುತ್ತಿದ್ದರು ಅಮ್ಮ.

ಇತ್ತೀಚೆಗೆ ಕೂಡ ನನ್ನ ಸ್ನೇಹಿತರೊಬ್ಬರ ಪತ್ನಿ, ಮಗಳ ಮದುವೆಯ ಸಮಯದಲ್ಲಿ ಸಾಸಿವೆ ಡಬ್ಬಿಯ ಉಳಿತಾಯದ ಹಣದಲ್ಲಿ ಕೊಂಡ ಬಂಗಾರ ಕೊಟ್ಟಿದ್ದು ಕೂಡ ನಾ ಕಂಡ ಸತ್ಯ. ತನ್ನ ಗಂಡ, ತನ್ನ ಮನೆ, ತನ್ನ ಮಕ್ಕಳು… ಎಂಬ ಅಭಿಮಾನ ‘ತಾನು’ ಎಂಬ ಅಭಿಮಾನಕ್ಕಿಂಥ ದೊಡ್ಡದು ಗೃಹಿಣಿಗೆ.

ಅದು ತಪ್ಪೋ ಸರಿಯೋ… ಇರಬೇಕೋ ಇರಬಾರದೋ… ಎಂಬುದು ಇಲ್ಲಿಯ ಪ್ರಶ್ನೆಯಲ್ಲ.

ಹೆಂಗಸರ ಉಳಿತಾಯದ ಹಣದ ಬಗೆಯ ಜೋಕುಗಳ ಬಗ್ಗೆ ನನ್ನ ವಿರೋಧವಿದೆ. ಮುಚ್ಚಿಡಲು, ಬಚ್ಚಿಡಲು ನೂರು ರುಪಾಯಿಗಳ ನೋಟಿಗಿಂಥ ಸಾವಿರ, ಐನೂರರ ನೋಟು ಸಲೀಸು… ಎಂದು ಸಾಸಿವೆ ಡಬ್ಬಿಯಲ್ಲಿ, ಹೂಬತ್ತಿಯ ಡಬ್ಬಿಯಲ್ಲಿ, ಸೀರೆಯ ಮಡಿಕೆಯಲ್ಲಿ… ಹಳೆ ಚಾಕೊಲೇಟ್ ಡಬ್ಬಿಯಲ್ಲಿ ಮುಚ್ಚಿಟ್ಟ ನೋಟುಗಳು… ಬದಲಾಗಿ (ಗಂಡನಿಗೆ ಗೊತ್ತಾಗದಂತೆ!) ಎರಡು ಸಾವಿರದ ನೋಟುಗಳಾಗಿ ಆಕೆಗೆ ದಕ್ಕಲಿ… ಅದು ಕಪ್ಪುಹಣವಲ್ಲ… ಅವುಗಳನ್ನು ಆಕೆ ಧೈರ್ಯವಾಗಿ ಹೋಗಿ ಬದಲಾಯಿಸಲಿ. ಅವಳು ಉಳಿಸಿರುವ ಹಣ ಅವಳದೇ.

ಜೇಬಿನಲ್ಲಿ, ಪರ್ಸಿನಲ್ಲಿ ಹಣವಿಟ್ಟುಕೊಂಡು ಓಡಾಡುವ ಪೀಳಿಗೆ ಹೋಗಿ ಕಾರ್ಡಿಟ್ಟುಕೊಂಡು ವ್ಯವಹಾರ ಮಾಡುವ ಪೀಳಿಗೆ ನಗರಗಳಲ್ಲಿ ಹೆಚ್ಚು. ನಮ್ಮ ಹಳ್ಳಿಯ ಕಡೆ ಸಣ್ಣಪುಟ್ಟ ಊರುಗಳಲ್ಲಿ ಇನ್ನೂ ದುಡ್ಡಿನ ಮೂಲಕವೇ ವ್ಯವಹಾರ. ಒಬ್ಬ ಸಣ್ಣ ರೈತ, ಪುಟ್ಟ ಅಂಗಡಿಯಿಟ್ಟುಕೊಂಡ ವ್ಯಾಪಾರಿ… ಒಬ್ಬ ಟೈಲರ್…. ಮನೆಯಲ್ಲಿ ಕಲಾಕುಶಲ ಕೆಲಸ ಮಾಡುವ ಕಲೆಗಾರ… ಅವರೆಲ್ಲರ ವ್ಯವಹಾರ ಹಣದ ಮೂಲಕವೇ ನಡೆಯುತ್ತದೆ. ಉಳಿಸಿದ ಹಣ ಬ್ಯಾಂಕಿಗೆ ಹೋಗದೆ…. ಮನೆಯಲ್ಲಿಯೇ ಭದ್ರವಾಗಿ ಇಟ್ಟುಕೊಂಡಿರುವ ಸಾಧ್ಯತೆಯಿದೆ. ಅವರ್ಯಾರಿಗೂ ಅನ್ಯಾಯವಾಗಬಾರದು. ಅವರ ಉಳಿತಾಯ ಕಪ್ಪುಹಣವಲ್ಲ. ತೆರಿಗೆ ವ್ಯಾಪ್ತಿಗೂ ಬರದಿರಬಹುದು. ಆದರೆ ಅದರ ಅರಿವು ಅವರಿಗಿಲ್ಲದೆ ಇರಬಹುದು. ಜನನಾಯಕರ, ಜನ ಪ್ರತಿನಿಧಿಗಳ ಕೆಲಸ, ಹೊಣೆ ಅವರಿಗೆ ಈ ವಿಷಯವನ್ನು ಸ್ಪಷ್ಟಪಡಿಸುವುದಾಗಬೇಕು. ಎಲ್ಲಾ ಮುಖಂಡರು, ಎನ್ಜಿಓಗಳು, ಪಾರ್ಟಿಯ ಕಾರ್ಯಕರ್ತರು ಈ ಕೆಲಸ ಮಾಡಿದರೆ ಚೆನ್ನಾಗಿರುತ್ತದೆ. ಅನಾವಶ್ಯಕವಾಗಿ ಗಾಬರಿ ಆಗುವುದನ್ನು ತಪ್ಪಿಸಿ ಈ ನಿಟ್ಟಿನಲ್ಲಿ ಜನರಿಗೆ ತಿಳುವಳಿಕೆಯನ್ನು ಕೊಡುವುದಕ್ಕೆ ನಮ್ಮ ಸುದ್ದಿ ಮಾಧ್ಯಮಗಳೂ ಕೆಲಸ ಮಾಡಬೇಕು… ಬರಿದೇ.. ಉದ್ದನೆಯ ಕ್ಯೂ ತೋರಿಸುವುದರ ಬದಲು ಅಲ್ಲಿ ಸತ್ತರು, ಇಲ್ಲಿ ನೋಟು ಹರಿದು ಎಸೆದರು ಎಂಬ ಸುದ್ದಿಗಿಂಥ ಜನರನ್ನು ಸರಿಯಾಗಿ ಗೈಡ್ ಮಾಡುವ ಹೊಣೆಯನ್ನು ನಮ್ಮ ಮಾಧ್ಯಮಗಳು ಹೊರಬೇಕು. ರಂಜಿಸುವುದು ಮುಖ್ಯ ನಿಜ, ಸುದ್ದಿ ಬಿತ್ತರಿಸುವುದೂ ಮುಖ್ಯ ನಿಜವೇ.. ಆದರೆ ಈ ಸಮಾಜದಲ್ಲಿ ಅವೆರಡಕ್ಕಿಂಥ ಮುಖ್ಯ ಜನಸಮಾನ್ಯರಿಗೆ ಸರಿ ದಾರಿ ತೋರುವುದು. ಅವರು ತಮ್ಮ ಹಣವನ್ನು ತಾವೇ ಇಟ್ಟುಕೊಳ್ಳಲು ಅನುಸರಿಸಬೇಕಾದ ಸರಿದಾರಿಯನ್ನು (ಯಾರಿಗೂ ಕಮಿಷನ್ನು, ಪಾಲು ಕೊಡದೆ) ಪಾಯಿಂಟ್ ಬೈ ಪಾಯಿಂಟ್ ಹೇಳಬೇಕು.

ಹೊಣೆ ಹಿರಿದಿದೆ. ಹಾಸ್ಯಕ್ಕೆ ಮಿತಿಯಿದೆ.

Leave a Reply