ವಿಜಯ್ ಮಲ್ಯ ಸಾಲವನ್ನು ಮನ್ನಾ ಮಾಡಿಬಿಟ್ಟರಂತೆ ಹೌದೇ? ಆಕ್ರೋಶಕ್ಕೆ ಬೀಳುವ ಮುನ್ನ ನೀವು ಓದಿಕೊಳ್ಳಬೇಕಾದ ವಿವರವಿದು…

 

 

ಡಿಜಿಟಲ್ ಕನ್ನಡ ವಿಶೇಷ

ಮೋದಿ ಸರಕಾರ ನವೆಂಬರ್ 8 ರ ರಾತ್ರಿ ಹಳೆ ಐನೂರು ಹಾಗು ಸಾವಿರ ನೋಟುಗಳ ರದ್ದು ಮಾಡಿ ಹೊಸ ನೋಟುಗಳ ಚಲಾವಣೆಗೆ ತಂದ ನಂತರ ಎಷ್ಟೊಂದು ಕಸ ಸೃಷ್ಟಿಯಾಗುತ್ತಿದೆ ಗೊತ್ತೇ? ಎರಡು ಸಾವಿರದ ನೋಟಿನಲ್ಲಿ ಜಿಪಿಎಸ್ ಚಿಪ್ ಇರುತ್ತೆ ಎನ್ನುವುದು ದೇಶದ ಉದ್ದಗಲ ಹರಡಿಬಿಟ್ಟಿತು. ವಾಟ್ಸ್ಅಪ್ ಫೇಸ್ಬುಕ್ ಟ್ವಿಟ್ಟರ್ ಗಳಲ್ಲಿ ಜನ ಇದನ್ನ ಧಾರಾಳವಾಗಿ ಹಂಚಿದರು. ಅಂತ ಒಂದು ಜಿಪಿಎಸ್ ಚಿಪ್ ತಯಾರಿಕೆಗೆ ಎರಡುಸಾವಿರಕ್ಕೂ ಹೆಚ್ಚು ಖರ್ಚಾಗುತ್ತೆ, ಇದು ಹೇಗೆ ಸಾಧ್ಯ ಎಂದು ಯೋಚಿಸಿದವರು ಅದನ್ನ ಬಾಯಿ ಬಿಟ್ಟು ಹೇಳಲಾಗದ ಸ್ಥಿತಿ ಇತ್ತು.

ಈಗ ಇನ್ನೊಂದು ಅಂತಹುದೇ ವಿಷಯ ಹಬ್ಬಿದೆ. ಮೋದಿ ಸರಕಾರ ಘೋಷಿಸದೆ ಉಳಿದ ಕಾಲಧನದ ಸಹಾಯದಿಂದ ನೂರಕ್ಕೂ ಹೆಚ್ಚು ಸುಸ್ತಿದಾರರ ಸಾಲವನ್ನ ಮನ್ನಾ ಮಾಡಲಿದೆ ಎನ್ನುವ ಸುದ್ದಿ ಅದು. ಮಲ್ಯನ ಸಾಲವು ಅದರಲ್ಲಿ ಸೇರಿದೆ ಎನ್ನುವುದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ. ನಿತ್ಯವೂ ದುಡಿದರೂ ತಿಂಗಳ ಕೊನೆಗೆ ಏದುಸಿರು ಬಿಡುವ ಬಡವ, ಮೋದಿ ಸರಕಾರ ಕಾಲಧನಿಕರಿಗೆ ಕೊಟ್ಟ ಛಡಿಯೇಟಿನಿಂದ ಖುಷಿಯಾಗಿದ್ದ . ಅವನ ಖುಷಿ ಕಸಿಯಲು, ಸರಕಾರದ ಜನಪ್ರಿಯತೆಗೆ ಬ್ರೇಕ್ ಹಾಕಲು  ಯಾರೋ(?) ಸೃಷ್ಟಿಸಿದ  ಹುನ್ನಾರವಿದು.

ನಿನ್ನೆಯಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್ಗಳಿಗೂ ತಮ್ಮ ಬ್ಯಾಲೆನ್ಸ್ ಶೀಟ್ ಸ್ವಚ್ಛ ಮಾಡಿಕೊಳ್ಳುವಂತೆ ತಾಕೀತು ಮಾಡಿದೆ. ಇದು ಹಿಂದಿನ ಗವರ್ನರ್ ರಘುರಾಮ ರಾಜನ್  ಜಾರಿಗೆ ತಂದಿದ್ದ ಸ್ವಚ್ಛ ಬ್ಯಾಲೆನ್ಸ್ ಶೀಟ್ ಅಭಿಯಾನದ ಮುಂದುವರಿಕೆ ಅಷ್ಟೇ.

ಯಾವುದೇ ಒಂದು ಸಾಲ ಅಥವಾ ಸಾಲದ ಮೇಲಿನ ಕಂತು ಕಟ್ಟಬೇಕಾದ ನಿಗದಿತ ದಿನದಿಂದ 90 ದಿನ ಆದರೂ ಕಟ್ಟದೆ ಉಳಿಯುತ್ತದೋ ಅಂತಹ ಸಾಲವನ್ನ ‘ಅನುತ್ಪಾದಕ ಆಸ್ತಿ’  ಎಂದು ವರ್ಗಿಕರಿಸಿ ಅದನ್ನ ಬ್ಯಾಲೆನ್ಸ್ ಶೀಟ್ ನಲ್ಲಿ ತೂರಿಸಲಾಗುತ್ತದೆ. ಇದನ್ನ ಇಂಗ್ಲಿಷ್ ನಲ್ಲಿ ‘ನಾನ್ ಪರ್ಫಾರ್ಮಿಂಗ್ ಅಸೆಟ್’ ಎಂದು ಕರೆಯಲಾಗುತ್ತದೆ.

ಘೋಷಿಸದೆ ಉಳಿದ ಕಾಲಧನದ ಸಹಾಯದಿಂದ ಇಂತಹ ಅನುತ್ಪಾದಕ ಸಾಲಗಳಿಗೆ ಪ್ರಾವಿಷನ್ ಮಾಡಬಹುದು ಮತ್ತು ಇಂತಹ ಸಾಲಗಳನ್ನ ಅನುತ್ಪಾದಕ ಆಸ್ತಿ ಎಂದು ಘೋಷಿಸಿದರೂ ಬ್ಯಾಂಕಿನ ಮೇಲಿನ ಗೌರವ, ನಂಬಿಕೆ ಹೋಗುವುದಿಲ್ಲ. ಏಕೆಂದರೆ ಆಕಸ್ಮಾತ್ ಸಾಲಗಾರ ಈ ಹಣ ಕೊಡದೆ ಹೋದರೂ ಬ್ಯಾಂಕು ಮುಳುಗುವುದಿಲ್ಲ. ಇದರ ಅರ್ಥ ಬ್ಯಾಂಕು ಅಥವಾ ಸರಕಾರ ಮಲ್ಯ ಅಥವಾ ಇನ್ನಿತರ ಯಾವುದೇ ಸುಸ್ತಿದಾರನ ಸಾಲ ಮನ್ನಾ ಮಾಡಿತು ಎಂದಲ್ಲ.

ಒಂದು ಸಣ್ಣ ಉದಾಹರಣೆ ಪೂರ್ಣ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ನಿಮ್ಮ ಮಿತ್ರನಿಗೆ ಸಾವಿರ ರೂಪಾಯಿ ಸಾಲ ಕೊಟ್ಟಿದ್ದೀರಿ ಅಂದುಕೊಳ್ಳಿ. ಆತ ಮುಂದಿನ ತಿಂಗಳು ಕೊಡುವುದಾಗಿ ಭರವಸೆ ಕೊಟ್ಟಿರುತ್ತಾನೆ. ನಿಮಗೆ ಆ ಹಣದ ಅವಶ್ಯಕತೆ ಇರುವುದು ಎರಡು ತಿಂಗಳ ನಂತರ ಎಂದುಕೊಳ್ಳಿ. ತಿಂಗಳ ನಂತರ ಆ ಸ್ನೇಹಿತ ನಿಮಗೆ ಹಣ ಕೊಡಲಿಲ್ಲ. ನೀವು ನಿಮ್ಮ ಖರ್ಚಿಗೆ ಬೇರೆಲ್ಲೋ ಉಳಿಸಿದ  ಹಣ ಹೊಂದಿಸಿಕೊಳ್ಳುತ್ತೀರಿ. ಅದರ ಅರ್ಥ ನಿಮ್ಮ ಸ್ನೇಹಿತ ಹಣ ಕೊಡದೆ ಮೋಸ ಮಾಡಿದರೂ ನಿಮ್ಮ ಜೀವನ ಏರುಪೇರು ಆಗಲಿಲ್ಲ ಎಂದಷ್ಟೇ. ನೀವು ಸ್ನೇಹಿತನಿಗೆ ಸಾಲ ವಾಪಸ್ಸು ಕೊಡಬೇಡ ಎಂದು ಹೇಳಿದೀರಾ?  ಆ ಸಾಲವನ್ನ ನೀವು ಆ ಸ್ನೇಹಿತ ಬದುಕಿರುವವರೆಗೆ ಹಿಂದೆ ಬಿದ್ದು ವಸೂಲಿ ಮಾಡುವ ಅವಕಾಶವಿದೆ.

ಬ್ಯಾಂಕ್ಗಳು ಮಾಡಿರುವುದು ಇದನ್ನೇ. ಮಲ್ಯ ಮತ್ತಿತರ ಸುಸ್ತಿದಾರರನ್ನ ಸದಾ ಕಾಲ ಬೆನ್ನುಹತ್ತಿ ಸಾಲ ವಾಪಸ್ಸು ಪಡೆಯುವ ಅವಕಾಶ ಇದ್ದೇ ಇದೆ. ಊಹಾಪೋಹಗಳಿಗೆ ಜನ ಕಿವಿಗೊಡುವ ಅವಶ್ಯಕತೆಯಿಲ್ಲ.

Leave a Reply