ಇಷ್ಟಕ್ಕೂ ನೋಟು ಬದಲಾವಣೆ ನೀತಿಗೆ ಪ್ರಾಣತೆತ್ತವರ ಸಂಖ್ಯೆ ಎಷ್ಟು? ಕಾಂಗ್ರೆಸ್ ಪರ ಇದೇನಿದು ಗುಲಾಂ ನಬಿ ಆಜಾದರ ಸಾವಿನ ವ್ಯಾಪಾರ?

ಪ್ರವೀಣ್ ಕುಮಾರ್

ನೋಟು ಬದಲಾವಣೆ ಬಗ್ಗೆ ಚರ್ಚಿಸಬೇಕಿದ್ದ ಶುಕ್ರವಾರದ ಸಂಸತ್ತು ಗದ್ದಲದಲ್ಲಿ ಮುಳುಗಿದ್ದು ಎರಡು ಕಾರಣಗಳಿಂದ. ಈ ಬಗ್ಗೆ ಚರ್ಚೆಗೂ ಮೊದಲು ಪ್ರಧಾನಿ ಮಾತಾಡಬೇಕು ಎಂಬ ಪ್ರತಿಪಕ್ಷಗಳ ವಾದ. ಇನ್ನೊಂದೆಡೆ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಆಡಳಿತಾರೂಢ ಬಿಜೆಪಿ ಸದಸ್ಯರು ಆಗ್ರಹಿಸಿ ಘೋಷಣೆ ಕೂಗಿದ್ದು.

ಹಾಗಾದರೆ ಗುಲಾಂ ನಬಿ ಆಜಾದ್ ಹೇಳಿದ್ದೇನು?

‘ನೋಟು ರದ್ದತಿಯ ನಿರ್ಧಾರದಿಂದ ದೇಶದಲ್ಲಿನ ಜನರಿಗೆ ತೀವ್ರ ತೊಂದರೆಯಾಗಿದೆ. ಈಗಾಗಲೇ 40 ಮಂದಿ ಪ್ರಾಣ ಬಿಟ್ಟಿದ್ದಾರೆ. ಇತ್ತೀಚೆಗೆ ಉರಿಯಲ್ಲಿ ಪಾಕಿಸ್ತಾನದ ಉಗ್ರರಿಂದ ನಡೆದ ದಾಳಿಯಲ್ಲೂ ಇದರ ಅರ್ಧ ಪ್ರಮಾಣದಷ್ಟು ಜನ ಸತ್ತಿರಲಿಲ್ಲ. ಆದರೆ ಸರ್ಕಾರದ ಒಂದು ತಪ್ಪು ನಿರ್ಧಾರದಿಂದ ಆ ದಾಳಿಗಿಂತ ಎರಡು ಪಟ್ಟು ಜನ ಸತ್ತಿದ್ದಾರೆ. ಈ ಪೈಕಿ ರೈತರು, ಕಾರ್ಮಿಕರು, ಕಡುಬಡವರಿದ್ದಾರೆ. ಇವರ ಸಾವಿಗೆ ಯಾರು ಹೊಣೆ? ಇದಕ್ಕಾಗಿ ಯಾರನ್ನು ಶಿಕ್ಷಿಸುತ್ತಾರೆ?’

ಕಾಂಗ್ರೆಸ್ಸಿನ ಹಿರಿತಲೆ ಎಂಬ ಗೌರವದ ಗುಲಾಂ ನಬಿ ಆಜಾದ್ ಸಹ ಇಂಥ ಅತಿ ನೀಚ ಹೇಳಿಕೆಗಳನ್ನು ಸದನದಲ್ಲಿ ಒಗಾಯಿಸುತ್ತಾರೆಂದರೆ ಕಾಂಗ್ರೆಸ್ ಮತ್ತು ಒಟ್ಟಾರೆ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಅಸ್ತಿತ್ವ ಅಲ್ಲಾಡುತ್ತಿರುವ ಹತಾಶೆ ಯಾವಮಟ್ಟಿಗೆ ಕಾಡುತ್ತಿದೆ ಎಂಬುದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ.

ಗುಲಾಂ ನಬಿಯ ಹೇಳಿಕೆ ನೀಚತನದ್ದು ಎಂಬುದಕ್ಕೆ ಮುಖ್ಯವಾಗಿ ಎರಡಂಶಗಳಿವೆ.

  • ನೋಟು ಬದಲಾವಣೆ ಸಂಬಂಧ 40 ಮಂದಿ ಪ್ರಾಣ ತೆತ್ತಿದ್ದಾರೆ ಎಂಬ ಮಾತೇ ತಲೆಬುಡವಿಲ್ಲದ್ದು. ಹೇಗೆ ಈ ಹಿಂದೆ ಚರ್ಚುಗಳಲ್ಲಾದ ಕಳ್ಳತನದ ಪ್ರಕರಣಗಳಿಗೆಲ್ಲ ಹಿಂದು ಕಾರ್ಯಕರ್ತರು ಕಾರಣ ಎಂಬ ಸುಳ್ಳು ಲೇಪ ಹಚ್ಚಿ ಅಸಹಿಷ್ಣುತೆ ಬೊಬ್ಬೆ ಹಬ್ಬಿಸಲಾಯಿತೋ, ನೋಟು ಬದಲಾವಣೆ ಪರ್ವದಲ್ಲೂ ಅಂಥದ್ದೇ ಪ್ರಯತ್ನಗಳು ಆಗುತ್ತಿವೆ. ಈ ನಲ್ವತ್ತರ ಅಂಕಿ ಎಲ್ಲಿಂದ ತಂದಿರಿ ಎಂದರೆ ಯಾರಲ್ಲೂ ಸ್ಪಷ್ಟ ಉತ್ತರವಿಲ್ಲ. ಹಫಿಂಗ್ಟನ್ ಪೋಸ್ಟ್ ನ ಮೋದಿ ದ್ವೇಷದ ಸಂಪಾದಕ ಶಿವಂ ವಿಜ್ ಮಾಡಿದ್ದೇನೆಂದರೆ, ನೋಟು ಬದಲಾವಣೆ ನೀತಿ ಘೋಷಣೆ ನಂತರ ಆದ ಪ್ರಮುಖ ಸಾವುಗಳನ್ನೆಲ್ಲ ಪಟ್ಟಿ ಮಾಡಿ ಅದಕ್ಕೆ ಸರ್ಕಾರದ ನೀತಿಯೇ ಕಾರಣ ಎಂದು ಯಾವ ಆಧಾರಗಳಿಲ್ಲದೇ ಬರೆದಿದ್ದು. ಇದನ್ನು ಹಲವರು ಕಾಪಿ ಮಾಡಿದರು. ಗುಲಾಂ ನಬಿ ಸದನದಲ್ಲೇ ಬೆಂಕಿ ಹೊತ್ತಿಸಿದರು.
  • ಎಲ್ಲಿಯ ಉರಿ ಘಟನೆ, ಎಲ್ಲಿಯ ನೋಟು ಬದಲಾವಣೆ? ಮೋದಿ ದ್ವೇಷಕ್ಕೆ ಅಂಥ ತರ್ಕಗಳೇನೂ ಬೇಕಿಲ್ಲ. ವೈರಿ ರಾಷ್ಟ್ರ ಪಾಕಿಸ್ತಾನವನ್ನು ನಾವು ಸಹಿಸಿಕೊಳ್ಳುತ್ತೇವೆ. ಆದರೆ ಪ್ರಧಾನಿ ನರೇಂದ್ರ ಮೋದಿಯನ್ನಲ್ಲ ಎಂಬ ಕಾಂಗ್ರೆಸ್ಸಿನ ನಿರ್ಲಜ್ಜ ನಿಲುವನ್ನು ಗುಲಾಂ ನಬಿ ಜಾಹೀರುಗೊಳಿಸಿದ್ದಾರೆ.

ಈ ಅಂಶಗಳನ್ನು ಗಮನಿಸುತ್ತ, ಬ್ಯಾಂಕ್ ಸರದಿಯೆದುರು ಸಾವು ಎಂಬ ಬೊಬ್ಬೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ. ಏಕೆಂದರೆ ಈ ಆತಂಕಕಾರಿ, ಪ್ರಚೋದನಾತ್ಮಕ ರೋಚಕ ಸುಳ್ಳನ್ನು ಮುಂದುವರಿಸುವುದಕ್ಕೆ ಪ್ರತಿಪಕ್ಷ ಹಾಗೂ ಮಾಧ್ಯಮದ ಒಂದು ವರ್ಗ ಸಿದ್ಧವಾಗಿದೆ. ಒಪಿಂಡಿಯಾ ಅಭಿಪ್ರಾಯ ತಾಣದಲ್ಲಿ ರೂಪಾ ಸುಬ್ರಹ್ಮಣ್ಯ ಅವರ ಬರಹವು ಹೇಗೆ ನತದೃಷ್ಟ ಸಾವುಗಳನ್ನೆಲ್ಲ ನೋಟು ಬದಲಾವಣೆ ಜತೆ ಸಮೀಕರಿಸಲಾಗುತ್ತಿದೆ ಎಂಬುದನ್ನು ತೆರೆದಿಡುತ್ತದೆ.

ಬ್ಯಾಂಕ್ ಸರದಿಗಾಗಿ ನಿಂತಿದ್ದ 96ರ ವ್ಯಕ್ತಿ ಮೃತ ಎಂದು ಮಂಗಳೂರಿನ ವಿದ್ಯಮಾನವೊಂದನ್ನು ಟೈಮ್ಸ್ ಆಫ್ ಇಂಡಿಯಾ ಜಾಲತಾಣ ವರದಿ ಮಾಡಿದೆ. ಅದೇ ವರದಿಯಲ್ಲೇ ಮೃತರ ಮಗ ಹೀಗೆ ಹೇಳುತ್ತಾರೆ- ‘ಬ್ಯಾಂಕ್ ವ್ಯವಹಾರಕ್ಕೂ ತಂದೆಯ ಸಾವಿಗೂ ಸಂಬಂಧವಿಲ್ಲ. ಅವರು ಹಿರಿಯ ನಾಗರಿಕರು. ಅಲ್ಲಿನ ಅಧಿಕಾರಿಗಳು ಯಾವತ್ತೂ ಇವರನ್ನು ಕಾಯಿಸಿದವರಲ್ಲ.’ ಎಂದು.

ಮುಲುಂದ್ ನಲ್ಲಿ ಬ್ಯಾಂಕಿಗೆ ಹೋದಾಗಲೇ ಹೃದಯಾಘಾತವಾಗಿ ಮೃತರಾದ 73 ವರ್ಷದ ವಿಶ್ವನಾಥ ವರ್ತಕ ಎಂಬುವವರ ದುರ್ಘಟನೆಯನ್ನೂ ಹೀಗೆಯೇ ವರ್ಣಿಸಲಾಯಿತು. ಆದರೆ ಅವರ ಕುಟುಂಬ, ‘ಕಳೆದ 20 ವರ್ಷಗಳಿಂದ ಅವರಿಗೆ ವಿಪರೀತ ರಕ್ತದೊತ್ತಡ ಇತ್ತು. ಬ್ಯಾಂಕ್ ಮೆಟ್ಟಿಲೇರುತ್ತಿರುವಾಗಲೇ ಅವರಿಗೆ ತಲೆಸುತ್ತು ಬಂದು ಕಾಲುಗಳು ನಡುಗಿ ಕುಸಿದಿದ್ದಾರೆ. ಆ ಸಮಯದಲ್ಲಿ ಬ್ಯಾಂಕಿನೆದುರು ಸರತಿ ಸಾಲಿರಲಿಲ್ಲ.’

ಬ್ಯಾಂಕ್ ಗಳೆದುರಿನ ಸಾವು ಅಂತ ಬರೆಯುತ್ತಿರುವುದರಲ್ಲಿ ವಿಚಿತ್ರ ವಿವರಗಳಿವೆ. ಉದಾಹರಣೆಗೆ, ಯಾರೋ ಒಬ್ಬಾಕೆ ತನ್ನ ಗಂಡನಿಗೆ ಕಿಚಾಯಿಸಿದಳಂತೆ- ಎಟಿಎಂ ಎದುರು ನಿಂತು ಹಣ ತರುವ ತಾಕತ್ತೂ ನಿನಗಿಲ್ಲ ಅಂತ. ಅದಕ್ಕಾತ ಆತ್ಮಹತ್ಯೆ ಮಾಡಿಕೊಂಡನಂತೆ. ಇದಕ್ಕೆ ಮೋದಿ ಉತ್ತರ ಕೊಡಬೇಕು ಹಾಗೂ ನೋಟು ಬದಲಾವಣೆ ನೀತಿ ತಪ್ಪು ಎನ್ನುವುದಕ್ಕೆ ಇದನ್ನು ಉದಾಹರಣೆಯಾಗಿ ಬಳಸಬೇಕು!

ಚಿಲ್ಲರೆ ಇಲ್ಲದೇ 1 ರುಪಾಯಿ ನಾಣ್ಯದಲ್ಲಿ ಸಾವಿರ ಹೊಂದಿಸಿದ್ದ ತಾಯಿಯನ್ನು ತಿರಸ್ಕರಿಸಿ ವೈದ್ಯರೊಬ್ಬರು ಆಕೆಯ ಕಂದನಿಗೆ ಚಿಕಿತ್ಸೆ ನಿರಾಕರಿಸಿದರು ಎಂದು ರೋಚಕ ವರದಿಗಳಾದವು. ಆದರೆ ಪ್ರಥಮ ಮಾಹಿತಿ ವರದಿಯಲ್ಲಿ, ಆಸ್ಪತ್ರೆಯಲ್ಲಿ ಸಲಕರಣೆಗಳಿಲ್ಲದ್ದರಿಂದ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಿಲ್ಲವೆಂದು ಹೇಳಬೇಕಾಯಿತು. ಇದಕ್ಕೂ ಆಕೆ ತಂದ ನಗದಿಗೂ ಸಂಬಂಧವಿಲ್ಲ ಅಂತ ವೈದ್ಯರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಇವೆಲ್ಲದರ ಅರ್ಥ ಕೇಂದ್ರ ಸರ್ಕಾರದ ನೋಟು ಬದಲಾವಣೆ ಕಾರ್ಯದಿಂದ ಜನರಿಗೆ ಅನಾನುಕೂಲವಾಗುತ್ತಲೇ ಇಲ್ಲ ಎಂದಲ್ಲ. ಈ ಪ್ರಕ್ರಿಯೆಯ ಒತ್ತಡ ತಾಳಲಾಗದ ಕೆಲ ಸಾವುಗಳು ಇರಬಹುದು. ಅಂಥವನ್ನು ತಾರ್ಕಿಕವಾಗಿ ಮುಂದಿರಿಸಬೇಕಷ್ಟೆ. ಅದುಬಿಟ್ಟು ನೀತಿ ಜಾರಿಯಾದ ರಾತ್ರಿಯಿಂದ ಗಮನಕ್ಕೆ ಬಂದ ನತದೃಷ್ಟ ಸಾವುಗಳನ್ನೆಲ್ಲ ಇದಕ್ಕೆ ಬೆಸುಗೆ ಹಾಕಿ ಜನರಲ್ಲಿ ಆತಂಕವನ್ನೆಬ್ಬಿಸುವುದು ಸಾವಿನ ರಾಜಕಾರಣವಲ್ಲದೇ ಮತ್ತೇನು? ಇವನ್ನೆಲ್ಲ ಪಾಕಿಸ್ತಾನ ನಡೆಸಿದ ಉರಿ ಘಟನೆಗೆ ಹೋಲಿಸಿ ಆ ಪರಿಸ್ಥಿತಿಗಿಂತ ಇದು ಭೀಕರ ಎಂಬ ವಾದಕ್ಕೆ ನೀಚತನ ಎಂದಲ್ಲದೇ ಇನ್ನೇನು ಹೇಳಲು ಸಾಧ್ಯ?

ಗುಲಾಂ ನಬಿ ಆಜಾದ್ ತಾವು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದಿದ್ದಾರೆ. ಅವರ ಕ್ಷಮೆಗೆ ಆಗ್ರಹಿಸುತ್ತ ಸಮಯವನ್ನೇನೂ ವ್ಯರ್ಥಗೊಳಿಸಬೇಕಿಲ್ಲ. ಆದರೆ ಎಲ್ಲ ವಿಷಯಕ್ಕೂ ಸಾವಿನ ವ್ಯಾಪಾರಿ, ರಕ್ತದ ದಲ್ಲಾಳಿ, ಹಂತಕ ಎನ್ನುತ್ತ ನಿಜಾರ್ಥದಲ್ಲಿ ಸಾವಿನ ವ್ಯಾಪಾರ ಮಾಡುತ್ತಿರುವ ಕಾಂಗ್ರೆಸ್ ಕುಸಿದಿರುವ ಪಾತಾಳವನ್ನು ಜನ ಅರ್ಥ ಮಾಡಿಕೊಂಡರೆ ಸಾಕು.

Leave a Reply