ನೋಟು ಬದಲಾವಣೆಯ ಅಸ್ತ್ರ ಕನ್ನಡ ಚಿತ್ರರಂಗದ ಸ್ವರೂಪವನ್ನು ಬದಲಾಯಿಸಬಲ್ಲದೆ?

author-ssreedhra-murthyಈಗ ದೇಶದೆಲ್ಲೆಡೆ ಐದು ನೂರು, ಸಾವಿರ ರೂಪಾಯಿಗಳ ರದ್ದತಿಯದೇ ಸುದ್ದಿ. ಜನರೆಲ್ಲಾ ನೋಟು ಬದಲಾಯಿಸಿ ಕೊಳ್ಳಲು ಸರತಿ ಸಾಲಿನಲ್ಲಿ  ನಿಂತಿರುವಾಗ ಯಾವ ಕ್ಷೇತ್ರದಲ್ಲಿ ತಾನೆ ಸಹಜವಾದ ಚಟುವಟಿಕೆಗಳು ನಡೆಯಲು ಸಾಧ್ಯ. ಅದರಲ್ಲಂತೂ ಕಾಳಧನದ ಹರಿವಿನ ತಾಣ ಎಂಬ ಕುಖ್ಯಾತಿಯನ್ನೂ ಪಡೆದಿರುವ  ಚಿತ್ರರಂಗದಲ್ಲಿ!  ಕಳೆದ ಐದು ವರ್ಷಗಳಲ್ಲಿ ಹಂತ ಹಂತವಾಗಿ ಕನ್ನಡ ಚಿತ್ರರಂಗದ ಸಂಖ್ಯೆ ಎರಡು ಪಟ್ಟಾಗಿ ನಂತರ ಮೂರು ಪಟ್ಟು ಹೆಚ್ಚಾಗಿದ್ದಕ್ಕೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಂಡ ಬಂದ ಚಟುವಟಿಕೆಗಳಿಂದ ಬಂದ ಹಣದ ಹರಿವು ಎನ್ನುವುದೇನು ರಹಸ್ಯವಾಗಿ ಉಳಿದಿಲ್ಲ. ಇವತ್ತಿಗೂ ಚಿತ್ರರಂಗದ ಶೇ 70ರಷ್ಟು ವ್ಯವಹಾರಗಳು ನಡೆಯುವುದು ಹಣದ ಮೂಲಕವೇ. ಅನ್‍ಲೈನ್‍ ವ್ಯವಹಾರ ಎನ್ನುವುದು  ಎಲ್ಲೂ ವಿರಳವಾಗಿ ಕಾಣಿಸಿದೆ. ಇದರಿಂದ ಬಿದ್ದಿರುವ ಬದಲಾವಣೆಯ ಹೊಡತಕ್ಕೆ ಚಿತ್ರರಂಗ ತತ್ತರಿಸುತ್ತಿರುವುದು ಸಹಜವೇ ಆಗಿದೆ.

ಇದರ ಪರಿಣಾಮ ಮೊದಲು ಕಾಣಿಸಿಕೊಂಡಿದ್ದು ಚಿತ್ರ ಪ್ರದರ್ಶನದಲ್ಲಿ.  ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಂತೂ ಐದುನೂರು ಸಾವಿರ ರೂಪಾಯಿಗಳ ರದ್ದತಿ ಸುದ್ದಿ ಬರುತ್ತಿದಂತೆ ಶೇ 90ರಷ್ಟು ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರ ಉಳಿದರು. ಆದರೆ ಅನ್‍ ಲೈನ್ ಬುಕಿಂಗ್‍ನಲ್ಲಿ ಕೇವಲ ಶೇ 6ರಷ್ಟು ಏರಿಕೆ ಮಾತ್ರ ಕಂಡು ಬಂದಿತು. ಮಲ್ಟಿಪ್ಲಕ್ಸ್‍ನಲ್ಲಿ ಮೊದಲಿಂದಲೂ ಡಿಜಿಟಲ್ ವ್ಯವಸ್ಥೆಯೇ ಇದ್ದರೂ ಆ ಚಿತ್ರಮಂದಿರಗಳು ಎಂದಿಗೂ ಕನ್ನಡ ಚಿತ್ರಗಳಿಗೆ ಮಹತ್ವ ನೀಡದಿದ್ದರಿಂದ ಪರಿಣಾಮ ತೀವ್ರವಾಗಿಯೇ ಆಯಿತು. ನವಂಬರ್‍ 11ರ ಶುಕ್ರವಾರ ಯಾವ ಕನ್ನಡ ಚಿತ್ರಗಳೂ ತೆರೆ ಕಾಣಲಿಲ್ಲ. ಈ ವಾರ ಬಿಡುಗಡೆ ಕಾಣುತ್ತಿರುವ ಪವನ್ ಒಡೆಯರ್ ನಿರ್ದೇಶನದ ‘ನಟರಾಜ ಸರ್ವೀಸ್’ಚಿತ್ರ ಪ್ರದರ್ಶನದಲ್ಲಿ ‘ಹಳೆ ಐದುನೂರು ಸಾವಿರ ರೂಪಾಯಿಗಳನ್ನು ತೆಗೆದು ಕೊಳ್ಳಲಾಗುವುದು’ ಎಂದು ಪ್ರಕಟಿಸಲಾಗಿತ್ತು. ನಂತರ ಹಾಗೆ ಮಾಡಲು ಕಾನೂನಿನ ಅನುಮತಿ ಇಲ್ಲ ಎನ್ನುವುದು ಅರ್ಥವಾಗಿ ಈ ಪ್ರಕಟಣೆಯನ್ನು ಹಿಂಪಡೆಯಲಾಯಿತು ಎಂದರೆ ಹತಾಶೆಯ ಪ್ರಮಾಣವನ್ನು ಊಹಿಸ ಬಹುದು.

ಇನ್ನು ನಿರ್ಮಾಣದ ಹಂತದಲ್ಲಿರುವ ಚಿತ್ರಗಳಿಗೂ ಇದರ ಬಿಸಿ ತಟ್ಟಿದೆ. ಚಿತ್ರರಂಗದಲ್ಲಿ ಮೇಕಪ್, ಕೇಟರಿಂಗ್, ಲೈಟಿಂಗ್ ಸೇರಿದಂತೆ ಚಿತ್ರ ನಿರ್ಮಾಣದಲ್ಲಿ 22 ವಿಭಾಗದಲ್ಲಿ ದಿನಗೂಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಇಲ್ಲೆಲ್ಲಾ ರೂ 600ರಿಂದ 1,500ರೂಪಾಯಿವರೆಗೆ ದಿನಗೂಲಿಗೆ ಅವರು ದುಡಿಯುತ್ತಾರೆ. ಇವರಿಗೆಲ್ಲಾ ನಗದಿನಲ್ಲೇ ಪಾವತಿ ನಡೆಯುತ್ತಿತ್ತು. ನೋಟು ಬದಲಾವಣೆಯ ನೇರ ಪರಿಣಾಮ ಬಿದ್ದಿರುವುದು ಇವರ ಮೇಲೆಯೆ. ಇದಕ್ಕೆ ಈಗಾಗಲೇ ಪರಿಹಾರ ಕಂಡು ಕೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ‘ಚಕ್ರವರ್ತಿ’ ಚಿತ್ರದ ನಿರ್ಮಾಪಕ ಅಣ್ಣಾಜಿ ನಾಗರಾಜ್ ಚೆಕ್ ಮೂಲಕ ಹಣ ಪಾವತಿಸುವ ಪ್ರಯತ್ನ ಮಾಡಿದ್ದರೆ ‘ಟಗರು’ಚಿತ್ರದ ನಿರ್ಮಾಪಕ ಶ್ರೀಕಾಂತ್ ವಾರದ ಪಾವತಿಯ ಮೂಲಕ ಇದನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ಇವೆಲ್ಲವೂ ಪರಿಹಾರವಾಗ ಬಹುದಾದ ಸಮಸ್ಯೆಗಳು. ವಿತರಣೆ, ಜಾಹಿರಾತಿನಲ್ಲಿ ಕೂಡ ನಗದಿನಲ್ಲೇ ಹೆಚ್ಚಿನ ಪಾವತಿ ನಡೆಯುತ್ತಿದ್ದರಿಂದ ದೊಡ್ಡಪ್ರಮಾಣದಲ್ಲೇ ಹಿನ್ನೆಡೆ ಉಂಟಾಗಿದೆ. ಆದರೆ ಮುಖ್ಯ ಪ್ರಶ್ನೆ ಇರುವುದು ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಮೊದಲಿನಂತೆಯೇ ಹಣದ ಹರಿವು ಇರುತ್ತದೆಯೇ ಎನ್ನುವುದು. ನಗದಿನಲ್ಲೇ ವ್ಯವಹಾರ ನಡೆಯುತ್ತಿತ್ತು ಎಂದ ಮಾತ್ರಕ್ಕೆ ಚಿತ್ರರಂಗದಲ್ಲಿರುವುದೆಲ್ಲವೂ ಕಪ್ಪುಹಣವೇ ಎಂದು ನಿರ್ಧರಿಸುವುದು ಸರಿಯಲ್ಲ. ಇದಕ್ಕೆ ಉದ್ಯಮದ ಅನಿವಾರ್ಯತೆ, ತೆರಿಗೆ ಉಳಿತಾಯ ಸೇರಿ ಹಲವು ಕಾರಣಗಳಿವೆ. ಚಿತ್ರರಂಗದಲ್ಲಿನ ಕಪ್ಪುಹಣದ ಪ್ರಮಾಣ ಶೇ 25-30ರಷ್ಟು ಎನ್ನುವುದು ಅಂದಾಜು. ಅಷ್ಟರ ಮಟ್ಟಿಗೆ ಚಿತ್ರಗಳ ಸಂಖ್ಯೆ ಕಡಿಮೆಯಾಗಬಹುದು. ಉಳಿದ ಕಡೆಗಳ ಹೊಂದಾಣಿಕೆಗೆ ಸಮಯ ಹಿಡಿಯಬಹುದು. ಹೀಗಾಗಿ ಒಂದು ವರ್ಷದ ವೇಳೆಗೆ ಚಿತ್ರರಂಗ ಮೊದಲಿನ ಸ್ಥಿತಿಗೆ ಬರಬಹುದು ಎನ್ನುವುದು ನಿರೀಕ್ಷೆ.

ಮುಂದಿನ ಮಾರ್ಚಿ ವೇಳೆಗೆ 10 ಲಕ್ಷ ಕೋಟಿ ಕಪ್ಪು ಹಣ  ಈ ಕ್ರಮದಿಂದ ಮುಖ್ಯವಾಹಿನಿಗೆ ಬರಬಹುದು ಎನ್ನುವ ನಿರೀಕ್ಷೆ ಇದೆ. ಹೀಗಾದ ನಂತರವೇ ಆರ್ಥಿಕ ಸ್ಥಿತಿಯ ಸ್ಪಷ್ಟರೂಪ ಸಿಗುವುದು ಸಾಧ್ಯ. ಆದರೆ ಈ ವೇಳೆಯಲ್ಲಿ ಡಿಜಿಟಲ್ ವ್ಯವಹಾರವನ್ನೇ ಸಂಪೂರ್ಣ ಬಳಸುತ್ತಿರುವ ಕಾರ್ಪೋರೇಟ್ ವಲಯ ಗಮನಾರ್ಹ ಹಿಡಿತವನ್ನು ಆರ್ಥಿಕ ವ್ಯವಸ್ಥೆಯ ಮೇಲೆ ಸಾಧಿಸಲಿದೆ. ನಂತರ ಸಮೀಕರಣಗಳೂ ಕೂಡ ಬದಲಾಗಲಿವೆ. ಇದರ ಪರಿಣಾಮ ಚಿತ್ರರಂಗದ ಮೇಲೆ ಕೂಡ ಆಗಬಲ್ಲದೆ? ಎನ್ನುವುದಕ್ಕೆ ಸರಳವಾದ ಉತ್ತರ ಇಲ್ಲ. ಸಧ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ಕಾರ್ಪೋರೇಟ್ ಸಂಸ್ಥೆಗಳು ಹಿಡಿತವನ್ನು ಸಾಧಿಸಿಲ್ಲ. ಆದರೆ ಹೀಗಾಗ ಬಾರದು ಎನ್ನುವುದಕ್ಕೇನು ಆಧಾರವಿಲ್ಲ. ರಿಲಯನ್ಸ್ ಎಂಟರಟೈನ್‍ಮೆಂಟ್‍ನಿಂದ ಎಂ.ಎಸ್.ಸತ್ಯು ಅವರ ‘ಇಜ್ಜೋಡು’ ನಿರ್ಮಾಣವಾದಾಗ ಇಂತಹ ಬೆಳವಣಿಗೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಆ ಸಂಸ್ಥೆ ಉಳಿಯಲಿಲ್ಲ. ಈಗ ‘ಜಿಯೂ ಮೂವೀಸ್‍’ ಎಂಬ ಸಂಸ್ಥೆಯನ್ನು ರಿಲಯನ್ಸ್ ಆರಂಭಿಸಿದೆ. ಪ್ರತಿಷ್ಠಿತ ಮುಂಬೈ ಅಂತರರಾಷ್ಟ್ರೀಯ ಚಿತ್ರೋತ್ಸವದ ಜವಾಬ್ದಾರಿಯನ್ನು ಅದು ಪಡೆದುಕೊಂಡಿದೆ. ಇದು ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಮೊದಲ ಹೆಜ್ಜೆ ಎಂದೇ ಬಾಲಿವುಡ್‍ನ ಪರಿಣಿತರು ವ್ಯಾಖ್ಯಾನಿಸುತ್ತಿದ್ದಾರೆ. ಈಗಾಗಲೇ ಐದು ಕನ್ನಡ ಚಿತ್ರಗಳ ನಿರ್ಮಾಣದತ್ತ ‘ಜಿಯೂ ಮೂವೀಸ್‍’ ಪ್ರಯತ್ನಗಳು ಆರಂಭವಾಗಿವೆ. ಇದರಿಂದ ಇನ್ನಷ್ಟು ಕಾರ್ಪೋರೇಟ್ ಸಂಸ್ಥೆಗಳು ಚಿತ್ರರಂಗದ ಕಡೆ ಬರಲು ಪ್ರೇರಣೆ ದೊರೆಯ ಬಹುದು. ಬಾಲಿವುಡ್‍ನಲ್ಲಾಗಲೇ ಹಾಲಿವುಡ್‍ನ ನಿರ್ಮಾಣ ಸಂಸ್ಥೆಗಳು ಕಾಲಿಡುವ ಪ್ರಸ್ತಾಪಗಳು ಬಂದಿವೆ. ಆರ್ಥಿಕ ರಂಗದ ಒಳಗುಟ್ಟುಗಳನ್ನು ಬಲ್ಲ ಕಾರ್ಪೋರೇಟ್‍ ಸಂಸ್ಥೆಗಳು ಕಾಲೂರಲು ಹೆಚ್ಚಿನ ಸಮಯ ಬೇಕಾಗಿಲ್ಲ. ಹಣ ರದ್ದತಿಯ ಪೆಟ್ಟಿನಿಂದ ಚೇತರಿಸಿಕೊಂಡು ಗಾಂಧಿನಗರದ ನಿರ್ಮಾಪಕರು ಮತ್ತೆ ತಮ್ಮ ಚಟುವಟಿಕೆಗಳನ್ನು ಆರಂಭಿಸುವದರೊಳಗಾಗಿ ಬದಲಾವಣೆ ಸಂಭವಿಸಿದರೆ ಚಿತ್ರರಂಗದ ಸ್ವರೂಪವೇ ಬದಲಾಗಲಿದೆ. ಈಗಾಗಲೇ ಸಿಂಗಲ್ ಸ್ಕೀನ್ ಥಿಯೇಟರ್‍ಗಳು ಮರೆಯಾಗುತ್ತಿವೆ. ಡಿಜಿಟಲ್ ತಂತ್ರಜ್ಞಾನ ಚಿತ್ರರಂಗದ ಎಲ್ಲಾ ನೆಲೆಗಳನ್ನೂ ಆಕ್ರಮಿಸಿಕೊಳ್ಳುತ್ತಿದೆ. ಆಧುನಿಕತೆಯ  ಹೆಜ್ಜೆಗುರುತುಗಳನ್ನು ಹಿಡಿಯವುದು ದಶಕಗಟ್ಟಲೆ ಉದ್ಯಮದಲ್ಲಿರುವ  ನಿರ್ಮಾಣ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ ಹೀಗಾಗಿ ನೋಟು ಬದಲಾವಣೆಯ ಪರಿಣಾಮ ಶುದ್ದೀಕರಣಕ್ಕೆ ಕಾರಣವಾಗಬಲ್ಲದೋ ಕಾರ್ಪೋರೇಟ್ ವಲಯದ ಅಧಿಪತ್ಯಕ್ಕೆ ಅವಕಾಶ ಮಾಡಿಕೊಡುವುದೋ ಊಹಿಸುವುದು ಕಷ್ಟ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ನಾಳೆಗಳು ಕುತೂಹಲಕರವಾಗಿವೆ.

Leave a Reply