ಬ್ಯಾಂಕ್ ನಲ್ಲಿ ಶಾಯಿ ಕುರಿತು ಚುನಾವಣಾ ಆಯೋಗದ ಆತಂಕವೇನೋ ಸರಿ, ಆದರೆ ಬೆರಳೊಂದೇ ಅಲ್ಲವಾದ್ದರಿಂದ ಬಗೆಹರಿಯದ ಗೋಜಲೇನಲ್ಲವಿದು

Woman shows her inked finger after exchanging 500 and 1000 rupee currency notes at Central Bank of India,Mumbai on Wednesday. Express Photo By-Ganesh Shirsekar 16/11/2016

ಡಿಜಿಟಲ್ ಕನ್ನಡ ಟೀಮ್:

ನೋಟು ಬದಲಾವಣೆ ಮಾಡಿಕೊಳ್ಳುವವರ ಕೈ ಬೆರಳಿಗೆ ಶಾಯಿ ಹಚ್ಚುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಚುನಾವಣಾ ಆಯೋಗ ಪ್ರಶ್ನಿಸಿ ವಿತ್ತ ಸಚಿವಾಲಯಕ್ಕೆ ಪತ್ರ ಬರೆದಿದೆ.

ಶಾಯಿ ಹಚ್ಚುವ ಪ್ರಕ್ರಿಯೆಯನ್ನೇ ಕೈಬಿಡಬೇಕು ಎಂದು ಚುನಾವಣಾ ಆಯೋಗ ಒತ್ತಾಯಿಸಿದೆ ಎಂಬ ವರದಿಗಳು ಒಂದೆಡೆಯಾದರೆ, ಶಾಯಿ ಹಚ್ಚುವಾಗ ಸದ್ಯದಲ್ಲಿ ಹಲವು ರಾಜ್ಯಗಳಲ್ಲಿರುವ ಉಪಚುನಾವಣೆಗಳಲ್ಲಿ ಗೊಂದಲವಾಗದಂತೆ ಗಮನ ವಹಿಸಿ ಎಂದು ಸೂಚಿಸಿದೆ ಎಂಬರ್ಥದ ವರದಿಗಳು ಇನ್ನೊಂದೆಡೆ ಬರುತ್ತಿವೆ. ಬಹುಶಃ ಎರಡನೇ ಕ್ರಮವನ್ನೇ ಚುನಾವಣಾ ಆಯೋಗ ಅನುಸರಿಸಿದ್ದಿರಬಹುದು. ಏಕೆಂದರೆ ನೋಟು ನವೀಕರಣಕ್ಕೆ ಬರುವವರಿಗೆ ಶಾಯಿ ಹಾಕುವ ನಿರ್ಧಾರದಿಂದ ಬ್ಯಾಂಕುಗಳ ಮುಂದಿನ ಸಾಲಿನಲ್ಲಿ ಕಡಿತವಾಗಿರುವುದು ಬೆಳಕಿಗೆ ಬಂದಿದೆ. ಅರ್ಥಾತ್ ಈ ಮೊದಲು ಒಬ್ಬರೇ ಬೇರೆ ಬೇರೆ ಗುರುತಿನ ಚೀಟಿಗಳಲ್ಲಿ, ಯಾರ್ಯಾರ ಪರವೋ ಹಣ ವಿನಿಮಯ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಶಾಯಿ ಹಾಕುವುದೇ ಆಕ್ಷೇಪಾರ್ಹ ಎಂದು ಯಾರು ಹೇಳಲು ಸಾಧ್ಯ?

ಹಾಗಂತ ಚುನಾವಣಾ ಆಯೋಗದ ಕಾಳಜಿ ಟೊಳ್ಳೇನಲ್ಲ. ಏಕೆಂದರೆ ನವೆಂಬರ್ 19ರಂದು ಐದು ರಾಜ್ಯಗಳ ಹಲವು ಕ್ಷೇತ್ರಗಳಿಗೆ ಮರು ಚುನಾವಣೆಗಳಿವೆ. ಇಲ್ಲಿ ಗೊಂದಲಕ್ಕೆಡೆಯಿಡಬಾರದೆಂಬುದು ಅದರ ಉದ್ದೇಶ. ಆದರೆ ಸರ್ಕಾರ ಬ್ಯಾಕುಗಳಿಗೆ ನಿರ್ದೇಶಿಸಿರುವುದು ಬಲಗೈ ತೋರು ಬೆರಳಿಗೆ. ಚುನಾವಣೆಗಳಲ್ಲಿ ಎಡಗೈ ತೋರುಬೆರಳಿಗೆ ಶಾಯಿ ಬಳಿಯಲಾಗುತ್ತದೆ.

ಈ ಬಗ್ಗೆ ಸಂಬಂಧಪಟ್ಟವರಿಗೆ ಗಮನವಿರಬೇಕು ಎಂಬುದು ಅಪೇಕ್ಷಣೀಯವಾದರೂ, ಈ ವಿಚಾರವನ್ನೇ ಮುಂದಿಟ್ಟುಕೊಂಡು ನೋಟು ನವೀಕರಣ ಯೋಜನೆಯಲ್ಲಿ ಕೊಂಕು ಹುಡುಕುವ ಕೆಲಸ ಮಾತ್ರ ಆಕ್ಷೇಪಾರ್ಹ. ಹೀಗೆ ಇಂಕು ಹಾಕುವುದು ಹಣ ವಿನಿಮಯ ಮಾಡಿಕೊಳ್ಳುವವರನ್ನು ಅವಮಾನಿಸಿದಂತೆ, ಈ ಇಂಕು ಒದಗಿಸುವುದು ಒಂದೇ ಕಂಪನಿಯಾದ್ದರಿಂದ ಅದರ ಮೇಲೆ ಒತ್ತಡ ಬೀಳುತ್ತದೆ… ಈ ಬಗೆಯ ವಿಕ್ಷಿಪ್ತ ವಾದಗಳನ್ನು ನೋಟು ನವೀಕರಣದ ವಿರುದ್ಧವಿರುವ ಅನೇಕ ಮಾಧ್ಯಮಗಳು ಈಗಾಗಲೇ ಪ್ರಚಾರ ಮಾಡುತ್ತಿವೆ. ಇದೀಗ ಚುನಾವಣಾ ಆಯೋಗದ ಎಚ್ಚರಿಕೆ ಗೊಂದಲ ಪರಿಹಾರದ ನಿಟ್ಟಿನಲ್ಲಿರಬೇಕೇ ಹೊರತು, ವ್ಯಕ್ತಿಗಿರುವುದೇ ಒಂದು ಬೆರಳು ಎಂಬಂತೆ ವಿತಂಡವಾಡಕ್ಕೆಡೆಯಾದರೆ ಬಾಲಿಶವಷ್ಟೆ.

Leave a Reply