ನೋಟು ಬದಲಾವಣೆ ವಿಷಯದಲ್ಲಿ ಸರ್ಕಾರ ಮತ್ತು ನ್ಯಾಯಾಂಗದ ಹಗ್ಗಜಗ್ಗಾಟ ನೋಡಿದಿರಾ?

ಡಿಜಿಟಲ್ ಕನ್ನಡ ಟೀಮ್:

ನೋಟು ರದ್ದತಿ ಕುರಿತಾಗಿ ಸರ್ಕಾರ ವರ್ಸಸ್ ನ್ಯಾಯಾಂಗ ಎಂಬ ಸಂದರ್ಭ ಸೃಷ್ಟಿಯಾಗಿದೆ. ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ಪ್ರಶ್ನಿಸಿಲ್ಲವಾದರೂ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಹಿಂದೆ ಬಿದ್ದಿಲ್ಲ.

ನಿನ್ನೆಯಷ್ಟೇ ನೋಟು ರದ್ದತಿ ಕುರಿತ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಇಂದು ಕೆಳ ಮಟ್ಟದ ನ್ಯಾಯಾಲಯಗಳಲ್ಲಿ ಈ ವಿಷಯವಾಗಿ ಸಲ್ಲಿಕೆಯಾಗುವ ಅರ್ಜಿ ವಿಚಾರಣೆಗೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದೆ. ಅಷ್ಟೇ ಅಲ್ಲದೆ… ‘ಇದೊಂದು ಗಂಭೀರದ ವಿಷಯ. ಸದ್ಯ ಜನರು ತೊಂದರೆಯನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗದಂತೆ ತಡೆಯಲು ಸಾಧ್ಯವಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಿ ಎಂದು ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ನೀವು ಹಣ ಪಡೆಯುವ ಮಿತಿಯನ್ನು ₹ 2 ಸಾವಿರಕ್ಕೆ ಇಳಿಸಿದಿರಿ. ಏಕೆ ಹೊಸ ನೋಟು ಬದಲಾವಣೆಗೆ ಕೊರತೆ ಇದೆಯೇ? ಸಮಸ್ಯೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಗಲಭೆಗಳಾಗುವ ಸಾಧ್ಯತೆಗಳಿವೆ’ ಎಂದು ಅಭಿಪ್ರಾಯಪಟ್ಟಿತು. ಇದಕ್ಕೆ ಪ್ರತಿಯಾಗಿ ಅಟಾರ್ನಿ ಜೆನರಲ್ ಮುಕುಲ್ ರೊಹಟಗಿ ಅವರು ಜನರ ಸಮಸ್ಯೆ ನಿವಾರಿಸಲು ಕೇಂದ್ರ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು. ಆಗ ಮುಕುಲ್ ಹಾಗೂ ಅವರ ಪ್ರತಿವಾದಿ ಕಪಿಲ್ ಸಿಬಲ್ ಸರ್ಕಾರದ ನಿರ್ಧಾರ ಕುರಿತು ವಾಗ್ವಾದ ನಡೆಯಿತು.

ಈ ಮಧ್ಯೆ ಮದ್ರಾಸ್ ಹೈಕೋರ್ಟಿನಲ್ಲಿ ನೋಟು ಬದಲಾವಣೆ ಕುರಿತ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೊಸದಾಗಿ ಬಿಡುಗಡೆ ಮಾಡಲಾಗಿರುವ ₹ 500 ಮೊತ್ತದ ನೋಟಿನ ಮಾಹಿತಿ ನೀಡುವಂತೆ ನ್ಯಾಯಾಲಯ ಕೇಳಿತ್ತು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಭದ್ರತಾ ಕಾರಣಗಳನ್ನು ಕೊಟ್ಟು, ಈ ಹೊಸ ನೋಟುಗಳ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಇನ್ನು ಸುಪ್ರೀಂ ಕೋರ್ಟ್ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಮಾಡಿದ್ದ ಶಿಫಾರಸ್ಸಿನ ಪಟ್ಟಿಯಲ್ಲಿ ಕೇಂದ್ರ ಸರ್ಕಾರ ನಿರಾಕರಿಸಿದ್ದ 43 ಹೆಸರನ್ನು ಸುಪ್ರೀಂ ಕೋರ್ಟ್ ಮರುಪರಿಗಣಿಸುವಂತೆ ಮತ್ತೆ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸಿದೆ. ಸುಪ್ರೀಂ ಕೋರ್ಟ್ ನೀಡಿದ್ದ 77 ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಂದ್ರ ಸರ್ಕಾರ 34 ಹೆಸರಿಗೆ ಸಮ್ಮತಿ ಸೂಚಿಸಿತ್ತು. ಈಗ ನ್ಯಾಯಾಲಯ ಸರ್ಕಾರ ನಿರಾಕರಿಸಿದ್ದ ಪಟ್ಟಿಯನ್ನು ಮತ್ತೆ ಕಳುಹಿಸಿದೆ.

Leave a Reply