ಎಲ್ಲಾ ಸರಿ… ಸಂಗ್ರಹಿಸಿದ ₹500- 1000 ನೋಟುಗಳ ಮುಕ್ತಿಗೆ ರಿಸರ್ವ್ ಬ್ಯಾಂಕ್ ಏನು ಮಾಡಲಿದೆ?


author-ananthramuಭಾರತದ 125 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 70ಕೋಟಿ ಜನರ ಬಾಯಲ್ಲಿ ಕಳೆದ ಒಂದು ವಾರದಿಂದ 500-1000 ರೂಪಾಯಿ ನೋಟುಗಳ ಹೆಸರು ಕನಿಷ್ಠ ಐದು ಬಾರಿಯಾದರೂ ಬಂದಿರುತ್ತದೆ. ಕಿಮ್ಮತ್ತು ಇಲ್ಲ ಎನಿಸಿಕೊಂಡಿದ್ದ ನೂರು ರೂಪಾಯಿಗೆ ಈಗ ರಾಜಮರ್ಯಾದೆ ಬಂದಿದೆ. ನಿತ್ಯ ಬದುಕಿಗೆ ಬೇಕಾದ್ದು 10, 20, 50, 100ರ ನೋಟೆ ವಿನಾ 500, 1000 ಅಲ್ಲ. ಅವೆಲ್ಲ ವ್ಯವಹಾರಕ್ಕೆ. ಮಾಧ್ಯಮಗಳು ಬಹುವಾಗಿ ಚರ್ಚಿಸುತ್ತಿರುವುದು ಕಿಮ್ಮತ್ತು ಕಳೆದುಕೊಂಡ ದೊಡ್ಡ ನೋಟುಗಳ ಬಗ್ಗೆಯೇ. ಈಗಲೂ ದೇಶದ ಜನ ಬ್ಯಾಂಕಿನಲ್ಲಿ ಕ್ಯೂ ನಿಂತಿದ್ದಾರೆ. ಆದರೆ ಮೊದಲಿನ ಆತುರವಿಲ್ಲ. ತಾತ್ಕಾಲಿಕ ತೊಂದರೆಗಳಿಗೆ ತುತ್ತಾಗಿ ತರಹೇವಾರಿ ಮಾತನಾಡಿಕೊಳ್ಳುತ್ತಿದ್ದರೂ ಪ್ರಜ್ಞಾವಂತ ಮಧ್ಯಮ ವರ್ಗದ ಜನ `ಈ ತಾಪತ್ರಯ ಎಷ್ಟು ದಿನ ಇದ್ದೀತು? ತಡೆದುಕೊಳ್ಳೋಣ’ ಎನ್ನುತ್ತ ಪ್ರಧಾನಿ ಮೋದಿಯವರ ಈ ನಡೆಯನ್ನು ಮೆಚ್ಚುತ್ತಿರುವವರೇ ಹೆಚ್ಚು. `ನಮಗಂತೂ ಕಪ್ಪು ಹಣ ಇಟ್ಟವರನ್ನು ಬಲಿ ಹಾಕಲು ಆಗುತ್ತಿರಲಿಲ್ಲ. ಸರ್ಕಾರವಾದರೂ ಧೈರ್ಯತೋರಿತಲ್ಲ’ ಎಂದು ಜನ ಬಹಿರಂಗವಾಗಿಯೇ ಮಾತನಾಡಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಕೃತ ಸಣ್ಣ ಬ್ಯಾಂಕುಗಳಲ್ಲೆ ದಿನಕ್ಕೆ ಮೂರು ಕೋಟಿಗೂ ಹೆಚ್ಚು ಜಮಾಗೊಳ್ಳುತ್ತಿರುವುದು ನಿಜ. ಬ್ಯಾಂಕಿನಲ್ಲಿ ಎಕ್ಸ್’ಚೇಂಜ್ ಸಿಗುವವರೆಗೂ ದುಡ್ಡಿದ್ದೂ ಬಡವರಾದವರೇ ಹೆಚ್ಚು. ಸರಿ, ಈ ದೊಡ್ಡ ನೋಟುಗಳು ಕೊನೆಗೆ ಏನಾಗುತ್ತವೆ? ಇದರ ಕಸ್ಟೋಡಿಯನ್ ರಿಸರ್ವ್ ಬ್ಯಾಂಕ್. ಅದರ ಮುಂದಿನ ಹೆಜ್ಜೆ ಏನು ಎಂದು ತಿಳಿಯುವ ಮೊದಲು ಕೊಳೆಯಾದ ನೋಟುಗಳು, ನಾಣ್ಯಗಳ ಬಗ್ಗೆ ಒಂದೆರಡು ವಿಚಾರಗಳು ಇಂದಿಗೆ ಪ್ರಸ್ತಾವ ಯೋಗ್ಯ.

ನಾಣ್ಯವಾಗಲಿ, ನೋಟಾಗಲಿ, ಕೈಯಿಂದ ಕೈಗೆ ಅದೆಷ್ಟು ಬದಲಾಗುತ್ತವೆ ಎಂದು ಊಹಿಸಲು ಹೊರಟರೆ ಅಂಥವರು ಹುಚ್ಚರೇ ಆಗಬಹುದು. ಒಂದಂತೂ ಸತ್ಯ-ಕೈ ಬದಲಾಯಿಸಿದಷ್ಟೂ ನೋಟು, ನಾಣ್ಯ ಕಳೆಗುಂದುತ್ತವೆ. ನೋಟಾದರೆ ಕೊಳೆಯಾಗಿ ಹರಿದು ಹೋಗುವ ಸ್ಥಿತಿ ತಲಪುತ್ತದೆ. ಅದನ್ನು ತಟಾಯಿಸಬೇಕೆಂದರೆ `ಸೆಲೋಫೇನ್ ಸರ್ಜರಿ’ ಮಾಡಬೇಕು. ನಿಮಗೂ ಒಂದಲ್ಲ ಒಂದು ಸಮಯದಲ್ಲಿ ಇಂಥ ನೋಟು ಕೈಸೇರಿರುತ್ತದೆ. ಆದಷ್ಟೂ ತೀರ ಕಳಪೆ ನೋಟನ್ನು ಮೊದಲು ತಟಾಯಿಸಬೇಕೆಂದು ನೀವೂ ಹಾತೊರೆಯುತ್ತೀರಿ. ಹರಿದು ಹೋದ ನೋಟನ್ನು ಬ್ಯಾಂಕುಗಳು ಬದಲಾಯಿಸಿಕೊಡುತ್ತವೆ.

ಹೈದರಾಬಾದಿನ ಅಪೊಲೋ ಆಸ್ಪತ್ರೆ ಮತ್ತು ಮೆಡಿಕಲ್ ಇನ್‍ಸ್ಟಿಟ್ಯೂಟಿನ ಸೂಕ್ಷ್ಮ ಜೀವಿ ವಿಜ್ಞಾನ ವಿಭಾಗದ ತಜ್ಞರು ಇತ್ತೀಚೆಗೆ ಆ ಆಸ್ಪತ್ರೆಯ ಆವರಣದಲ್ಲೇ 10, 20, 50, 100 ರೂಪಾಯಿಗಳ ನೋಟುಗಳನ್ನು ಪರೀಕ್ಷಿಸಿದಾಗ ಹೌಹಾರಿದ್ದರು. ಕ್ಷಯ, ನ್ಯುಮೋನಿಯ, ಟಾನ್ಸಿಲೈಟಿಸ್, ಪೆಪ್ಟಿಕ್ ಅಲ್ಸರ್, ಗ್ಯಾಸ್ಟ್ರೋ ಎಂಟರೈಟಿಸ್, ಗಂಟಲು ಬೇನೆ ತರುವ, ಸೂಕ್ಷ್ಮಜೀವಿಗಳೂ ಧಾರಾಳವಾಗಿ ನೋಟಿನ ಮೇಲೆ ನೆಲೆಯಾಗಿ ಸಂತಾನವೃದ್ಧಿಸುತ್ತಿರುವುದನ್ನು ಗಮನಿಸಿದ್ದರು. ಕೆಮ್ಮಿದಾಗ, ಸೀನಿದಾಗ, ಮುಟ್ಟಿದಾಗ ರೋಗಕಾರಕ ಸೂಕ್ಷ್ಮಜೀವಿಗಳು ಹೊರಬಂದು ನೀವು ಹಿಡಿದಿರುವ ನೋಟೋ ಅಥವಾ ನಾಣ್ಯದ ಮೇಲೋ ಜಮಾಯಿಸುತ್ತವೆ ಎಂಬುದನ್ನು ಕೇಳಿದಾಗ ಜನ ಕೂಡ ತಾತ್ಕಾಲಿಕವಾಗಿ ಗಾಬರಿಯಾದರು. ಅನಂತರ ಮಾಮೂಲಿ ಸ್ಥಿತಿಗೆ ಬಂದರು.

old-notes

ಕೊಳಕು ನೋಟುಗಳು, ಹರಿದವು, ಕಿತ್ತುಹೋದವು ಭಾರತೀಯ ರಿಸರ್ವ್ ಬ್ಯಾಂಕಿಗೆ ಬೇರೆ ಬೇರೆ ಬ್ಯಾಂಕಿನ ಶಾಖೆಗಳಿಂದ ನಿತ್ಯವೂ ಬರುತ್ತವೆ. ಹಾಗೆಯೇ ಅವಕ್ಕೆ ನಿತ್ಯ ಮೋಕ್ಷ ಇಲ್ಲಿಯೇ. ಇದನ್ನೇ ಬಹು ನಾಜೂಕಾದ ಪದ `ಶ್ರೆಡ್ಡಿಂಗ್’ ಎನ್ನುವುದು(ಚಿಂದಿ ಮಾಡುವುದು). ಆದರೆ ಆ ಮೊದಲು ಕಟ್ಟಿನಲ್ಲಿ ಖೋಟಾ ನೋಟುಗಳು ಇವೆಯೇ ಎಂಬ ಬಗ್ಗೆ ರಿಸರ್ವ್ ಬ್ಯಾಂಕಿನ ತಜ್ಞರು ನಿಗಾ ಇಟ್ಟೇ ಇಡುತ್ತಾರೆ. ಈಗಿನ ಸ್ಥಿತಿಯೆಂದರೆ 500 ಮತ್ತು 1000 ರೂಪಾಯಿ ನೋಟು ಹೆಚ್ಚೇನೂ ಮಲಿನವಾಗಿಲ್ಲ. ಆದರೆ ಕಿಮ್ಮತ್ತು ಕಳೆದುಕೊಂಡಂತಿವೆ. (ಡಿಸೆಂಬರ್ 31ರವರೆಗೆ ಅವಕ್ಕೂ ಜೀವದಾನವಿದೆ).

ಈ ವರ್ಷದ ಮಾರ್ಚ್ ತಿಂಗಳಲ್ಲೇ ನಮ್ಮ ದೇಶದಲ್ಲಿ 500 ರೂಪಾಯಿಯ 15,707 ದಶಲಕ್ಷ ನೋಟುಗಳು 1000 ರೂಪಾಯಿಯ 6,320 ದಶಲಕ್ಷ ನೋಟುಗಳು ಚಲಾವಣೆಯಲ್ಲಿದ್ದುವೆಂದು `ಎಕಾನಾಮಿಕ್ಸ್ ಟೈಮ್ಸ್’ ವರದಿಮಾಡಿದೆ. ಈ ಅಪಮೌಲ್ಯವಾದ ನೋಟುಗಳನ್ನು ರಿಸರ್ವ್ ಬ್ಯಾಂಕ್ ನಿಭಾಯಿಸಲು ಈಗಾಗಲೇ ತಯಾರಿ ನಡೆಸಿದೆ. ನೋಟುಗಳನ್ನು ಸುಡುವುದು ಶ್ರಮದ ಕೆಲಸ. ಜೊತೆಗೆ ವಾಯುಮಾಲಿನ್ಯವಾಗುತ್ತದೆಂಬ ಕಾರಣವೂ ಉಂಟು. 2001ರವರೆಗೂ ರಿಸರ್ವ್‍ಬ್ಯಾಂಕ್ ಸುಡುವ ಪದ್ಧತಿಯನ್ನೇ ರೂಢಿಸಿಕೊಂಡಿತ್ತು; ಖೋಟಾ ನೋಟುಗಳಿಲ್ಲವೆಂದು ಇದರಲ್ಲೂ ಖಾತರಿಪಡಿಸಿಕೊಂಡು ರಿಸರ್ವ್ ಬ್ಯಾಂಕಿನ ಒಂದು ವಿಭಾಗವಾದ ‘Currency Verification and Processing System’ – C.V.P.S. ಗಂಟೆಗೆ 60,000 ಕರೆನ್ಸಿ ನೋಟುಗಳನ್ನು ಎಣಿಸಬಲ್ಲದು. ಅದರಲ್ಲಿ ಈ ವ್ಯವಸ್ಥೆ ಉಂಟು. ಇಲ್ಲಿ ಕತ್ತರಿಸಿದ ನೋಟುಗಳನ್ನು ಇಟ್ಟಿಗೆ ರೂಪಕ್ಕೆ ತರುತ್ತದೆ. ಸಾಮಾನ್ಯವಾಗಿ ಇಂಥ ಒಂದೊಂದು ನೂರು ಗ್ರಾಂ ತೂಕವಿರಬಹುದು. ಇದನ್ನೇ `Briquette’ ಎನ್ನುವುದು (ಇದು ಫ್ರೆಂಚ್ ಪದ, ಇಟ್ಟಿಗೆ ಎಂಬ ಅರ್ಥ ಇದೆ). ಅನಂತರ ಅವನ್ನು ಟೆಂಡರ್ ಮೂಲಕ ಸರಕಾರಿ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಕುಲುಮೆಗಳಿಗೆ ಬೇಕಾಗುವ ಬೆಂಕಿಗೆ ಇವು ಉರುವಲಾಗುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ನೆಲಭರ್ತಿಗೂ ಇವನ್ನು ಬಳಸುವುದುಂಟು. ಇನ್ನು ಕೆಲವು ಸಂದರ್ಭಗಳಲ್ಲಿ ಕ್ಯಾಲೆಂಡರ್ ತಯಾರಿಸಲು, ಫೈಲ್ ತಯಾರಿಸಲು ಈ ನೋಟುಇಟ್ಟಿಗೆಗಳನ್ನೇ ಬಳಸುವುದೂ ಉಂಟು.

note-bricks1

ಇಲ್ಲಿ ಇನ್ನೂ ಒಂದು ವಿಚಾರವನ್ನು ಮನಗಾಣಿಸಬೇಕು. ಹೆಚ್ಚು ಕೊಳೆಯಾದ ನೋಟುಗಳನ್ನು ಚೂರು ಮಾಡಿದ ಮೇಲೆ ರೀಸೈಕಲ್ ಕೂಡ ಮಾಡಬಹುದು. ಅಂದಹಾಗೆ ಯಾವುದೇ ಬಗೆಯ ನೋಟುಗಳನ್ನು ತಯಾರಿಸುವುದು ಪೇಪರ್‍ನಿಂದ ಎಂಬುದು ನಮ್ಮ ಸಾಮಾನ್ಯ ತಿಳಿವಳಿಕೆ. ವಿಶೇಷ ಕಾಗದದಿಂದ ಎಂದು ಇನ್ನೂ ಖಚಿತವಾಗಿ ನಂಬುತ್ತೇವೆ. ಭಾರತದಲ್ಲಿ ಕರೆನ್ಸಿ ನೋಟುಗಳನ್ನು ತಯಾರಿಸುವುದು ಪಲ್ಪ್’ನಿಂದ. ಅದಕ್ಕೆ ಹತ್ತಿ ಸೇರಿಸುತ್ತಾರೆ, ಬಾಲ್ಸಮ್ ಎಂಬ ಒಂದು ಬಗೆಯ ಅಂಟು ಸೇರಿಸುತ್ತಾರೆ, ಬಟ್ಟೆ ಎಳೆಗಳನ್ನು ಸೇರಿಸುತ್ತಾರೆ. ಹಾಗಿರದಿದ್ದಲ್ಲಿ ನೋಟುಗಳು ಬಾಳಿಕೆ ಬರುತ್ತಿರಲಿಲ್ಲ.

ಇತರ ದೇಶಗಳಲ್ಲೂ ಹರಿದು ಚೂರಾದ ತೀರ ಮಲಿನವಾದ ಕರೆನ್ಸಿ ನೋಟುಗಳನ್ನು ಮೊದಮೊದಲು ಸುಡುತ್ತಿದ್ದರು. ಬ್ಯಾಂಕ್ ಆಫ್ ಇಂಗ್ಲೆಂಡ್ ಚಳಿಗಾಲದಲ್ಲಿ ಬ್ಯಾಂಕಿನ ಒಳಾಂಗಣವನ್ನು ಬೆಚ್ಚಗಿಡಲು ಇಂಥ ನೋಟು ಇಟ್ಟಿಗೆಗಳನ್ನು ಸುಟ್ಟು ಕಾಯಿಸಿಕೊಳ್ಳುತ್ತಿತ್ತು. ಇದು ಕಳೆದ 90ರ ದಶಕದವರೆಗೂ ಜಾರಿಯಲ್ಲಿತ್ತು. 2000ದ ನಂತರ ಇದರ ಧೋರಣೆ ಬದಲಾಗಿ ರೀಸೈಕ್ಲಿಂಗ್ ಮಾಡಿ ಹಳೆಯ ನೋಟುಗಳ ಪುಡಿಗಳನ್ನು ಗೊಬ್ಬರವಾಗಿ ಹೊಲದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿತು. ಅಮೆರಿಕದ ಫೆಡರಲ್ ಬ್ಯಾಂಕ್ ಚಿಕ್ಕ ಚಿಕ್ಕ ಸ್ಮರಣಿಕೆಗಳನ್ನು ಮಾಡಿ (ಸಾವೆನೀರ್) ಮಾರಾಟ ಮಾಡುತ್ತದೆ. ರೀಸೈಕಲ್ ಮಾಡಿದ ಪೇಪರ್‍ಗಳನ್ನು ಕಲಾವಿದರಿಗೂ ನೀಡುವುದುಂಟು. 2012ರಲ್ಲಿ ಹಂಗೇರಿ ಬ್ಯಾಂಕ್ ಚಳಿಗಾಲದಲ್ಲಿ ಬಡವರು ಬೆಚ್ಚಗಿರಲಿ ಎಂದು ನೋಟುಇಟ್ಟಿಗೆಯನ್ನು ಬಡವರಿಗೆ ಹಂಚಿತ್ತು. ಮನುಷ್ಯ ಸತ್ತೊಡನೆ `ಬಾಡಿ’ ಎಂದು ಪರಿಗಣಿಸುತ್ತೇವೆ. ನೋಟುಗಳ ಕಥೆಯೂ ಇಷ್ಟೇ.  ಛಿದ್ರವಾಗಿ ನೆಲಸೇರಿದರೆ ಅವು ಬ್ಯಾಕ್ಟೀರಿಯಾಗಳಿಗೆ ತಿನಿಸಾಗುತ್ತವೆ.

note-brick

Leave a Reply