ನೋಟು ಬದಲಾವಣೆಯ ಪರ್ವದಲ್ಲಿರುವಾಗಲೇ ಜಾಕಿರ್ ನಾಯಕ್ ನಟ್ಟು ಬೋಲ್ಟ್ ಟೈಟ್ ಮಾಡುತ್ತಿದೆ ಕೇಂದ್ರ ಸರ್ಕಾರ

ಡಿಜಿಟಲ್ ಕನ್ನಡ ಟೀಮ್:

ಮೊನ್ನೆ ಮೊನ್ನೆಯಷ್ಟೇ ವಿವಾದಿತ ಇಸ್ಲಾಂ ಪ್ರಚಾರಕ ಜಾಕೀರ್ ನಾಯಕ್ ಅವರ ಎನ್ಜಿಒ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್ ಎಫ್) ಅನ್ನು 5 ವರ್ಷಗಳ ಕಾಲ ನಿಷೇಧಿಸಿದ್ದ ಕೇಂದ್ರ ಸರ್ಕಾರ, ಈ ಸಂಸ್ಥೆ ವಿರುದ್ಧ ಈಗ ಮತ್ತಷ್ಟು ಬಿಗಿ ನಿಲುವು ತಾಳಿದೆ. ಅದೇನಂದ್ರೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ಶನಿವಾರ ವಿವಾದಿತ ಇಸ್ಲಾಂ ಪ್ರಚಾರಕ ಜಾಕೀರ್ ನಾಯಕ್ ಅವರ ಎನ್ಜಿಒ ಸಂಸ್ಥೆ ಮೇಲೆ ದಿಢೀರ್ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಆ ಮೂಲಕ ದೇಶದೆಲ್ಲೆಡೆ ನೋಟು ಬದಲಾವಣೆಯದ್ದೇ ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಜಾಕಿರ್ ನಾಯಕ್ ಅವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಕಳೆದ ಮಂಗಳವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಯೋತ್ಪಾದನೆ ಕೃತ್ಯಕ್ಕೆ ಪ್ರೋತ್ಸಾಹ ನೀಡುವ ಆರೋಪ ಹೊತ್ತಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯನ್ನು ಕಾನೂನು ಬಾಹೀರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಯುಪಿ) ಅಡಿಯಲ್ಲಿ 5 ವರ್ಷಗಳ ಕಾಲ ನಿಷೇಧಿಸಲು ತೀರ್ಮಾನಿಸಿತು. ಸರ್ಕಾರ ಇಷ್ಟಕ್ಕೆ ತನ್ನ ಕ್ರಮ ನಿಲ್ಲಿಸಿಲ್ಲ. ಅದರ ಮುಂದುವರಿದ ಭಾಗವಾಗಿ ಶುಕ್ರವಾರ ರಾತ್ರಿ ಭಯೋತ್ಪಾದನಾ ನಿಗ್ರಹ ಹಾಗೂ ಐಪಿಸಿ 153-ಎ ಕಾಯ್ದೆ ಅಡಿಯಲ್ಲಿ ಜಾಕಿರ್ ಅವರ ವಿರುದ್ಧ ಎನ್ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡರು. ಇದರ ಬೆನ್ನಲ್ಲೆ ಶನಿವಾರ ಬೆಳಗ್ಗೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈನಲ್ಲಿರುವ ಜಾಕಿರ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ನಿನ 10 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಕಳೆದ ಜುಲೈ1ರಂದು ಢಾಕಾದಲ್ಲಿರುವ ಕೆಫೆಯೊಂದರ ಮೇಲೆ ದಾಳಿ ಮಾಡಿದ ಉಗ್ರರ ಪೈಕಿ ಕೆಲವರು ಜಾಕಿರ್ ನಾಯಕ್ ಅವರ ಮಾತಿನಿಂದ ಸ್ಫೂರ್ತಿಯಾಗಿದ್ದರು ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಸರ್ಕಾರ ಇವರ ಎನ್ಜಿಒ, ಭಾಷಣ ಕಾರ್ಯಕ್ರಮ ಹಾಗೂ ಇವರೇ ನಡೆಸಿಕೊಡುವ ಪೀಸ್ ಟಿವಿ ಕಾರ್ಯಕ್ರಮಗಳನ್ನು ಪರಿಶೀಲಿಸಲು ಆರಂಭಿಸಿತು. ಇದರ ಬೆನ್ನಲ್ಲೇ ಜಾಕಿರ್ ನಾಯಕ್ ಅವರ ವಿರುದ್ಧ ಭಯೋತ್ಪಾದನೆ ಪ್ರಚೋದಿತ ಆರೋಪಗಳು ಒಂದೊಂದಾಗೆ ಬೆಳಕಿಗೆ ಬಂದವು.

ಆ ಪೈಕಿ ಇದೇ ವರ್ಷ ಮುಂಬೈ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕೆಲ ಯುವಕರು ಮನೆ ಬಿಟ್ಟು ಹೋಗಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಸೇರಿದ್ದು, ಈ ಯುವಕರು ಉಗ್ರ ಸಂಘಟನೆಗೆ ಸೇರಲು ಜಾಕೀರ್ ನಾಯಕ್ ಅವರ ಮಾತುಗಳೇ ಸ್ಫೂರ್ತಿ. ಜಾಕಿರ್ ನಾಯಕ್ ಅವರ ಎನ್ಜಿಒ ಹಾಗೂ ಅಂತಾರಾಷ್ಟ್ರೀಯ ಇಸ್ಲಾಂ ವಾಹಿನಿ ಪೀಸ್ ಟಿವಿ ನಡುವೆ ಸಂಪರ್ಕವಿದ್ದು, ಆ ಮೂಲಕ ಭಯೋತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಪ್ರಮುಖವಾಗಿವೆ.

ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ‘ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ನಿನ ಮುಖ್ಯಸ್ಥ ಜಾಕಿರ್ ನಾಯಕ್ ಹಲವು ಬಾರಿ ಉದ್ರೇಕದ ಭಾಷಣಗಳನ್ನು ಮಾಡಿದ್ದು, ಆ ಮೂಲಕ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಿದ್ದಾರೆ. ಪೀಸ್ ಟಿವಿಯಲ್ಲಿ ಪ್ರಸಾರ ಮಾಡಲಾಗಿರುವ ಹಲವಾರು ಕಾರ್ಯಕ್ರಮಗಳು ಪ್ರಶ್ನಾರ್ಹವಾಗಿದ್ದು ಅವುಗಳನ್ನು ಭಾರತದಲ್ಲೇ ನಿರ್ಮಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಜಾಕಿರ್ ಅವರು ‘ಮುಸಲ್ಮಾನರು ಉಗ್ರರಾಗಬೇಕು’ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂಬ ಆರೋಪವಿದೆ.’

ಇತ್ತ ಮಹಾರಾಷ್ಟ್ರ ಪೊಲೀಸರು ಸಹ ಯುವಕರನ್ನು ಇಸ್ಲಾಮಿಕ್ ಉಗ್ರ ಸಂಘಟನೆಗಳಿಗೆ ಸೇರುವಂತೆ ಮಾಡಿರುವ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ನಿಗೆ ವಿದೇಶದಿಂದ ಹರಿದು ಬಂದಿರುವ ಹಣದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಮಾಡಲಿದೆ.

ಈ ಎಲ್ಲ ಬೆಳವಣಿಗೆಗಳ ಮೂಲಕ ಜಾಕಿರ್ ನಾಯಕ್ ವಿರುದ್ಧ ಕೇಂದ್ರ ಸರ್ಕಾರ ಬಿಗಿ ನಿಲುವು ತಾಳಿದ್ದು, ಜಾಕಿರ್ ನಾಯಕ್ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ. ಈ ಎನ್ಐಎ ಅಧಿಕಾರಿಗಳು ಎನ್ಜಿಒ ಮೇಲೆ ದಾಳಿ ನಡೆಸಿದ ಬೆನ್ನಲ್ಲೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಜಾಕಿರ್ ನಾಯಕ್ ವಿರುದ್ಧ ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದು, ವಿಚಾರಣೆಗೆ ಹಾಜರಾಗುವುದು ಬಿಟ್ಟರೆ ಜಾಕಿರ್ ನಾಯಕ್ ಮುಂದೆ ಬೇರೆ ಯಾವುದೇ ಮಾರ್ಗವಿಲ್ಲ.

Leave a Reply