ಪ್ರಯತ್ನದ ಪ್ರಕ್ರಿಯೆಯಲ್ಲಿ ಕುದಿದ ಮೇಲಷ್ಟೇ ಯಶಸ್ಸಿನ ಪರಿಮಳ, ಮಹದೇವ ಪ್ರಸಾದರ ಕಾಫಿ ಉದ್ಯಮದ ಬದುಕು ಹೇಳುತ್ತಿರುವ ಪಾಠ!

authors-rangaswamyಜುಲೈ 7 , 1972. ಮಂಡ್ಯ ಜಿಲ್ಲೆಯ  ಮಳುವಳ್ಳಿ ಸಮೀಪದ ಕ್ಯಾತನಹಳ್ಳಿಯಲ್ಲಿ ಮಹದೇವಪ್ಪ ಹಾಗು ಪ್ರೇಮ ದಂಪತಿಗಳಿಗೆ ಪುತ್ರನ ಜನನದ ಸಂತಸದ ದಿನ. ತಮ್ಮ ಪುತ್ರನಿಗೆ ಮಹದೇವ ಪ್ರಸಾದ್  ಎಂದು ನಾಮಕರಣ ಮಾಡಿದಾಗ ಮುಂದೊಂದು ದಿನ ಈತ MDP ಎನ್ನುವ ಹೆಸರಿನಲ್ಲಿ ಈ ಜಗತ್ತಿನಲ್ಲಿ ತನ್ನದೆ ಆದ ಜಾಗ ಸೃಷ್ಟಿಸಿಕೊಳ್ಳುವ ಮತ್ತು ಸಾವಿರಾರು ಜನರಿಗೆ ಆಸರೆ ಕೊಡುವ ಮಟ್ಟಿಗೆ ಬೆಳೆಯುತ್ತಾರೆ ಎನ್ನುವ ಯಾವುದೇ ಸುಳಿವು ಹೊಂದಿರದ ತಂದೆ, ಶಾಲೆಯಲ್ಲಿ ಉಪಾಧ್ಯಾಯಕ ವೃತ್ತಿಯಲ್ಲಿ ಜೀವನ ಸವೆಸಿದವರು. ಪ್ರೇಮ ಅವರದು ತುಂಬು ಸಂಸಾರವನ್ನ ಚೊಕ್ಕವಾಗಿ ನೆಡೆಸಿಕೊಂಡು ಹೋಗುವ ಕಾಯಕ.

ತಂದೆಯೇನೋ ಎಲ್ಲಾ ಮಕ್ಕಳಿಗೆ ಅಕ್ಷರ ಕಲಿಸುವ ಕಾಯಕದಲ್ಲಿ ತೊಡಗಿಕೊಂಡವರು. ಆದರೆ ಬಾಲಕ ಮಹಾದೇವ ಪ್ರಸಾದ್ ಗೆ ಶಾಲೆಗೇ ಹೋಗುವುದರಲ್ಲಿ ಅಲ್ಲಿನ ಬಿಗು ವಾತಾವರಣದ ಕಲಿಕೆಯ ಕ್ರಮದಲ್ಲಿ ಮನಸ್ಸು ಅಷ್ಟು ಹೊಂದಲಿಲ್ಲ. ಹೀಗಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ, ಆಸಕ್ತಿ ಏನೇ ಇರಲಿ ಅದುವರೆವಿಗೂ ಯಾವುದರಲ್ಲೂ ಗೆಲುವನ್ನು ಕಂಡಿರದ, ಸೇರಿದ್ದ ಕೆಲಸವನ್ನು ಬಿಟ್ಟು ಬಂದಿದ್ದ  ಮಹಾದೇವ ಪ್ರಸಾದ್ ಅವರನ್ನ  ‘ನಿನ್ನ ಕೈಲಿ ಏನೂ ಮಾಡಲು ಸಾಧ್ಯವಿಲ್ಲ ‘ ಎಂದು ಜರಿದವರೆ ಹೆಚ್ಚು.

ಹೀಗೆ ದಿಕ್ಕುದೆಸೆ ಇಲ್ಲದೆ ಜೀವನ ನೆಡೆಸುತ್ತಿದ್ದ ಮಹದೇವ್ ಪ್ರಸಾದ್ ಒಂದು ವರ್ಷ Coffee Board ನಲ್ಲಿ ತರಬೇತಿಗೆ ಸೇರುತ್ತಾರೆ. ನಂತರ ಪ್ರಿಸ್ಟೀನ್ ನ್ಯೂಟ್ರಿಷನ್ ಎಂಬ ಸಂಸ್ಥೆಯಲ್ಲಿ ಕಾಫಿ ಗುಣಮಟ್ಟ ನಿರ್ವಾಹಕ ಹುದ್ದೆಗೆ ಸೇರಿಕೊಳ್ಳುತ್ತಾರೆ. ಈ ಮಧ್ಯೆ ಮದುವೆ ಕೂಡ ಆಗುತ್ತದೆ. ಬೇರೆ ಯಾರೋ ಸಾಮಾನ್ಯನಾಗಿದ್ದರೆ ಬದುಕು ಒಂದು ಹಂತಕ್ಕೆ ಬಂತು ಎಂದು ಖುಷಿಯಾಗಿರುತ್ತಿದರೋ ಏನೋ. ಆದರೆ ಪ್ರಸಾದ್ ಅವರಿಗೆ ಒಂದು ಉದ್ಯಮವನ್ನು ಸ್ಥಾಪಿಸಬೇಕೆಂಬ ತುಡಿತ ಮನಸ್ಸಿನಲ್ಲಿ ಇದ್ದೇ ಇತ್ತು. ಆದರೆ ವ್ಯವಸಾಯ ಮತ್ತು ಉಪಾಧ್ಯಾಯ ವೃತ್ತಿಯನ್ನು ನೋಡಿಕೊಂಡು ಬೆಳೆದ ಅವರಿಗೆ, ವ್ಯಾಪಾರದ ಅನುಭವ ಸ್ವಲ್ಪವು ಇರಲಿಲ್ಲ. ಬಾಡಿಗೆ ಕಟ್ಟಲೂ ಆಗದೆ ಮಾವನ ಮನೆಯಲ್ಲಿಯೇ ಉಳಿದಿದ್ದ ಇವರ ಬಳಿ  ವ್ಯಾಪಾರಕ್ಕೆ ಬಂಡವಾಳ ಎಲ್ಲಿಂದ ಬರಬೇಕು?

ಸಣ್ಣದಾಗಿಯಾದರು ಸರಿ ವ್ಯಾಪಾರವನ್ನು ಮಾಡಿ ಅನುಭವ ಪಡೆಯಲೇಬೇಕೆನ್ನುವ ನಿರ್ಧಾರ ಒಂದು ದಿನ ಕೆಲಸಕ್ಕೆ  ರಾಜಿನಾಮೆ ಕೊಡಿಸುತ್ತೆ. ಕಾಫಿಪುಡಿ ಮಾರಿ ಒಂದಷ್ಟು ಹಣ ಗಳಿಸುವುದು ಉಳಿದ ಹಣವನ್ನ  ಹಿಂದುರಿಗಿಸುವಂತ  ಕಾಫಿ ಪುಡಿ ಮಾರುವ ಕಾರ್ಖಾನೆಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅವರ ಆ ದಿನಗಳ ಅನುಭವವನ್ನ ಅವರದೇ ಮಾತುಗಳಲ್ಲಿ ಕೇಳಿ-

‘ಕಾಫಿಯನ್ನು ಸ್ಕೂಟರ್ ನಲ್ಲಿ ತುಂಬಿಕೊಂಡು, ಬೆಂಗಳೂರಿನ ಸಣ್ಣ ಪುಟ್ಟ ಹೋಟೆಲ್ ,ಸ್ಟಾರ್ ಹೋಟೆಲ್, ಕ್ಯಾಟರರ್ಗಳ ಬಳಿ ಬಿಡದೇ ಸುತ್ತಿದೆ. ಮೊದ ಮೊದಲು ಯಾರು ಕೂಡ ತೆಗೆದುಕೊಳ್ಳುತ್ತಿರಲಿಲ್ಲ. ನನ್ನ ಒತ್ತಾಯವನ್ನು ತಾಳಲಾರದೆ ಕೆಲವರು ತೆಗೆದುಕೊಳ್ಳಲು ಶುರುಮಾಡಿದರು. ಈ ಹಂತದಲ್ಲಿಯೇ ವ್ಯಾಪಾರದ ಸ್ವಲ್ಪ ಅನುಭವ ಮತ್ತು ಅಪಾರವಾದ ತಾಳ್ಮೆ ಕಲಿಸಿ ಕೊಟ್ಟಿತ್ತು ಪರಿಸ್ಥಿತಿ.

ಅಂದು ಸಾಫ್ಟ್ವೇರ್ ಕಂಪನಿಗಳಲ್ಲಿ  filter coffee ಅಗತ್ಯತೆ ನನಗೆ ಅರ್ಥವಾಗಿತ್ತು. ಏಕೆಂದರೆ ಆ ದಿನಗಳಲ್ಲಿ vending machine coffee ಮಾತ್ರ ಚಾಲ್ತಿಯಲ್ಲಿತ್ತು,

ಸರಿ ಭಾರಿ ಅನುಭವಸ್ತರಂತೆ ಒಂದು ಬ್ರೊಚೆರ್  ವ್ಯವಸ್ಥೆ ಮಾಡಿಕೊಂಡು, ITPL ನಲ್ಲಿರುವ Genesys computer ಎಂಬ ಸಂಸ್ಥೆಯಲ್ಲಿ ಅವಕಾಶ ಗಿಟ್ಟಿಸಿದೆ. ಆಗ ಅಲ್ಲಿ ಕೇವಲ 200 ಉದ್ಯೋಗಿಗಳು. ಕಾಫಿ ಮತ್ತು ಟೀ ಯನ್ನು ತಯಾರಿಸಿ ಟೇಬಲ್ ಸೇವೆಯನ್ನು ಒದಗಿಸಬೇಕು.

 ಕಾಫಿ ಬಗ್ಗೆ ಜ್ಞಾನವಿದ್ದರೂ  ವ್ಯವಹಾರಿಕ ಜ್ಞಾನದ ಕೊರತೆ. ಸರಿ ಉಮೇಶ್ ಹಾಗು ಇನ್ನೂ ಇಬ್ಬರನ್ನು ಸೇರಿಸಿಕೊಂಡು, ಸಾಲ ಮತ್ತು ಕೂಡಿಟ್ಟ ಹಣದಲ್ಲೇ ಬೇಕಾದ ಸಾಮಾನುಗಳನ್ನು ವ್ಯವಸ್ಥೆ ಮಾಡಿಕೊಂಡೆವು,ಅವರು ಹೇಳಿದ ದಿವಸ, ಬೆಳಗ್ಗೆ 5 ಘಂಟೆಗೆ ಎದ್ದು , ಅಂದು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ, ವಿಜಯನಗರದದಿಂದ ITPL ತಲುಪಿದೆವು.

ಆದರೆ ನಮಗಾರಿಗೂ ಅಷ್ಟು ಜನಕ್ಕೆ ಕಾಫೀ ಅಥವಾ ಟೀ ಮಾಡುವ ಅನುಭವವಿರಲಿಲ್ಲ. ತಪ್ಪಾದ ಪಾತ್ರೆಯಲ್ಲಿ ಟೀ ತಯಾರಿಸಿದ ಕಾರಣ, ತಳ ಹತ್ತಿಬಿಟ್ಟಿತ್ತು. food court ಪೂರ ಸುಟ್ಟ ವಾಸನೆ. ಸಂಬಂಧ ಪಟ್ಟವರು ನಮ್ಮನ್ನು ಬೈದು, ನಾವು ಕೊಡುವ ಸೇವೆಯನ್ನು ನಿಲ್ಲಿಸಿ ಮನೆಗೆ ಕಳುಹಿಸಿದ್ದರು. ಮೊದಲನೇ ಪ್ರಯತ್ನದಲ್ಲಿ ಸೋಲು ಅನುಭವಿಸಿದ್ದೆವು!

ಹೀಗೆ ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತ ಪರಿಸ್ಥಿತಿಯಲ್ಲಿ ಸಾಹಸ ಮಾಡಿದ ಹಲವರು ಸಾಕಪ್ಪ ಎಂದು ಬೇರೆಡೆ ಮುಖ ಮಾಡುತ್ತಿದ್ದರೋ ಏನೋ? ಆದರೆ ಮಹದೇವ್ ಪ್ರಸಾದ್ ಇಂತಹ ಸೋಲುಗಳಿಗೆ ನಗುವನ್ನೇ ಉತ್ತರವಾಗಿಸಿಕೊಂಡವರು. ಪ್ರಯತ್ನವೇ ಜೀವನ ಎಂದು ನಂಬಿದವರು. ಅವರವರ  ನಂಬಿಕೆ ಅವರನ್ನ ಕಾಯುತ್ತೆ ಎನ್ನುವುದು ಸುಳ್ಳಲ್ಲ ಎನ್ನುವುದಕ್ಕೆ ಮಹಾದೇವ ಪ್ರಸಾದ್ ಉತ್ತಮ ಉದಾಹರಣೆ.

ತಿದ್ದಿನಡೆದರೆ ಗೆಲುವಿದೆ…..

ಗೆದ್ದಾಗ ಹಾರ, ತುರಾಯಿ, ಹಣ, ಸ್ನೇಹಿತರು, ಬೇಡವೆಂದರು ಸಾಲ ಕೊಡುತ್ತೇವೆ ಎಂದು ಮುಂದೆ ಬರುವ ಬ್ಯಾಂಕುಗಳು, ಏನುಂಟು ಏನಿಲ್ಲ. ಆದರೆ ಸೋಲು ಹಾಗಲ್ಲ. ಸೋಲಿನಲ್ಲಿ ಮಾತ್ರ ಮನುಷ್ಯ ಒಬ್ಬಂಟಿ. ಆಗ ಜೊತೆಗಿರಬೇಕಾಗುವುದು  ಸಂಯಮ ಮತ್ತು ಮಾನಸಿಕ ಶಕ್ತಿ. ಜಗತ್ತು ಏನಾದರೂ ಹೇಳಿಕೊಳ್ಳಲಿ ನಾನು ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸ.

.”ನಾನು ಅದಕ್ಕೆ ನಿನಗೆ ಹೇಳಿದ್ದು, ನಿನ್ನ ಕೈಯಲ್ಲಿ ಆಗಲ್ಲ ಎಂದು, ವ್ಯಾಪಾರ ನಿನ್ನಿಂದ ಸಾಧ್ಯವಿಲ್ಲ, ಸುಮ್ಮನೆ ಕೆಲಸಕ್ಕೆ ಹೋಗಿದ್ದರೆ ಆಗುತ್ತಿರಲಿಲ್ಲವ,? ಊರಿನವರಿಗೆಲ್ಲಾ ಒಂದು ದಾರಿಯಾದರೆ ನಿನ್ನದೇ ಒಂದು ದಾರಿ”, ಇಂತಹ ಮಾತುಗಳು ಸೋತಾಗ ಎಲ್ಲರೂ ಕೇಳುವ ಮಾತು ಪ್ರಸಾದ್ ಅವರಿಗೂ ಇದು ಆಯಿತು. ಇಂತಹ ಮಾತುಗಳಿಗೆ ಕಿವಿಗೊಡದೆ ಮರಳಿಯತ್ನವ ಮಾಡು ಎನ್ನುವಂತೆ Accenture ನಲ್ಲಿ ಅವಕಾಶವನ್ನು ಕೇಳಿಕೊಂಡು ಹೋಗುತ್ತಾರೆ. ಅಲ್ಲಿ , ಸುರೇಶ್ ಮೆನನ್ ಎಂಬುವವರನ್ನು ಭೇಟಿಯದಾಗ, “ಬೆಂಗಳೂರಿನಲ್ಲಿ ಈಗಾಗಲೇ ಬೇರೆಯವರು ಇದ್ದಾರೆ. ಮುಂಬೈನಲ್ಲಿ ಅವಕಾಶವನ್ನು ಕೊಡುತ್ತೇನೆ ಹೋಗುತ್ತೀರ? ಹೋಗುವುದಾದರೆ ಮುಂದಿನ ತಿಂಗಳು 20 ನೇ ತಾರೀಕು ಕೊನೆದಿನ.  ನಿಮ್ಮ ಒಪ್ಪಿಗೆಯನ್ನು ತಕ್ಷಣ ತಿಳಿಸಬೇಕು” ಎಂದು ಹೇಳುತ್ತಾರೆ. ಹಿಂದಿನ ಪ್ರಯತ್ನಗಳ ಸೋಲು, ಕೈಯಲ್ಲಿ ದುಡ್ಡಿಲ್ಲ , ಸೋತವರ ಜತೆ ಜನ ಬೆಂಬಲವೂ ಇಲ್ಲ! ಇಷ್ಟೆಲ್ಲಾ  ನೋವು ನೆಗೆಟಿವ್ ಮಧ್ಯೆ ಮಹಾದೇವ ಪ್ರಸಾದ್ ಐದೇ ನಿಮಿಷದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ‘ಯಸ್ ಮುಂಬೈ ಗೆ ಹೋಗಲು ರೆಡಿ ‘ ಎಂದು ಹೇಳಿ ಬರುತ್ತಾರೆ. ಇವರ ಒಡನಾಡಿ ಪ್ರದೀಪ್ ಯಾಕೆ ಒಪ್ಪಿಕೊಂಡಿರಿ ಇದು ನಮ್ಮಿಂದ ಸಾಧ್ಯವೇ ? ಮುಂಬೈ ನಲ್ಲಿ ಭಾಷೆ ಗೊತ್ತಿಲ್ಲ , ಜನ ಗೊತ್ತಿಲ್ಲ , ಅಲ್ಲಿನ ತೆರಿಗೆ , ಲೆಕ್ಕಾಚಾರದ ಅರಿವಿಲ್ಲ ಎಂದಾಗ , ಮಹದೇವ್ ಪ್ರಸಾದ್ ಹೇಳಿದ್ದು ಒಂದೇ ಮಾತು ‘ ದೇವರಿದ್ದಾನೆ ಬನ್ನಿ ‘.

ಜುಲೈ 18 , 2005ರಲ್ಲಿ ಹೀಗೆ ಪ್ರಥಮ ‘ಎಂಡಿಪಿ ಕಾಫೀ ಹೌಸ್ ‘ ಶುರುವಾಗುತ್ತೆ.  ‘ಪ್ರಥಮ ಔಟ್ಲೆಟ್ ಶುರುವಾಗಿ 11 ವರ್ಷ ಆಯ್ತು. ಖುಷಿಯ ವಿಷಯವೆಂದರೆ ಇಂದಿಗೂ ಆ ಔಟ್ಲೆಟ್ ಜಾಗ ಕೂಡ ಬದಲಾಗಿಲ್ಲ. ಅಲ್ಲಿಯೇ ಇದೆ. ಅಲ್ಲದೆ ಇದುವರೆಗೆ ನಾವು ತೆಗೆದಿರುವ ಯಾವುದೇ ಔಟ್ಲೆಟ್ ಮುಚ್ಚುವ ಪ್ರಮೇಯವೇ ಒದಗಿಬಂದಿಲ್ಲ ‘ ಎಂದು ನನ್ನೆದುರು ಕೂತು ಹೇಳುತಿದ್ದ ಮಹಾದೇವ ಪ್ರಸಾದ್ ಅವರ ಧ್ವನಿಯಲ್ಲಿ ಒಂಚೂರು ಅಹಮಿಕೆ ಕೇಳಲಿಲ್ಲ , ಮುಖದಲ್ಲಿ ಸಂತೃಪ್ತಿಯ ಭಾವ ಹೊರಸೂಸುತಿತ್ತು.

mdp-mumbai

ಹಲವು ವಿಖ್ಯಾತ ಸಾಫ್ಟ್ವೇರ್ ಕಂಪೆನಿಗಳಲ್ಲಿ ‘ಎಂಡಿಪಿ ಕಾಫಿ ಹೌಸ್ ‘ ಬಹು ವಿಖ್ಯಾತವಾಗಿದೆ. ಬೆಂಗಳೂರಿನಲ್ಲಿ 25 ಶಾಖೆ,ಪುಣೆಯಲ್ಲಿ 25, ಮುಂಬೈ , ಹೈದರಾಬಾದ್ , ಭುವನೇಶ್ವವರ , ನೋಯ್ಡ , ಗುರುಗಾವ್ , ಜೈಪುರ್ , ತ್ರಿವೇಂಡ್ರಮ್ , ಮೈಸೂರ್ ಹೀಗೆ ಒಟ್ಟು ನೂರಾರು ಶಾಖೆಗಳಿವೆ. ಮುಂಬೈ ಶಾಖೆ ಆರಂಭಿಸಿದಾಗ ಎದುರಾದ ಹಲವು ಸಮಸ್ಯೆಗಳ ಪಟ್ಟಿ ಮಾಡುತ್ತಾ ಹೋದರೆ ಇಲ್ಲಿಯವರೆಗೆ ಅವರು ನಡೆದು ಬಂದ ಹಾದಿಯಲ್ಲಿನ ಸಮಸ್ಯೆಗಳದ್ದೇ ಒಂದು ಪುಸ್ತಕವಾದೀತು!

ಎಲ್ಲಾ ಕಷ್ಟ /ತೊಂದರೆಗಳ ಎದುರಿಸಲು ಮಹಾದೇವ ಪ್ರಸಾದ್ ಕಂಡು ಕೊಂಡಿರುವ ಮಂತ್ರ ಕೊಂಕು ನುಡಿಗಳಿಗೆ ಹಿಂಜರಿದು ಕುಳಿತ ಕೊಳ್ಳುದಿರುವುದು, ಭರವಸೆ ಮತ್ತು ಆತ್ಮವಿಶ್ವಾಸದಿಂದ ಮುನ್ನೆಡೆಯುವುದು, ಮುಂದೇನಿದೆ ಎನ್ನುವುದು ನಡೆದರೆ ಮಾತ್ರವೇ ತಿಳಿಯುವುದು ಎನ್ನುವುದೇ ಆಗಿದೆ.

mdp

ಎಂಡಿಪಿ ಕಾಫಿ ಹೌಸ್ ಮಾಲೀಕರೊಂದಿಗೆ ಲೇಖಕ

ಇಷ್ಟೆಲ್ಲಾ ಸಾಧನೆ ಸ್ವಪ್ರಯತ್ನದಿಂದ ಮಾಡಿರುವ ಮಹದೇವ್ ಪ್ರಸಾದ್ ಅವರಿಗೆ ಇನ್ನೂ 44ರ ಹರೆಯ. ಜಗತ್ತಿನಾದ್ಯಂತ ‘ಎಂಡಿಪಿ ಕಾಫೀ ಹೌಸ್ ‘ ಪರಿಮಳ ಪಸರಿಸಬೇಕು ಎನ್ನುವ ಬಯಕೆ ಹೊಂದಿರುವ ಇವರು ಇಂದಿಗೂ ಯಾವುದೇ ಹಮ್ಮುಬಿಮ್ಮು ಇಲ್ಲದೆ ಸಾಮಾನ್ಯ ಮಧ್ಯಮವರ್ಗದ ವ್ಯಕ್ತಿಯಂತೆ ಜೀವನ ಸಾಗಿಸುವುದು ನೋಡಿ ಇವರ ಮೇಲಿನ ಅಭಿಮಾನ ಇಮ್ಮಡಿಯಾಗುತ್ತೆ.

ನಿಮಗೂ ಹಾಗೆ ಅನ್ನಿಸಿದರೆ www.facebook.com/mdpcoffee. ಇಲ್ಲಿ ಅವರಿಗೊಂದು ಶುಭಾಶಯ ಹೇಳಿ.

Leave a Reply