ರೆಡ್ಡಿಗೆ ಶಾಕ್ ಕೊಟ್ಟ ಐಟಿ ಅಧಿಕಾರಿಗಳು, ಬಿತ್ತನೆ ಬೀಜ ಖರೀದಿಗೆ ಹಳೆ ನೋಟು ಓಕೆ, ಸದನದ ಸಮಯ ನುಂಗುತ್ತಿದೆ ನೋಟು ರದ್ದತಿ ವಿಷಯ, ಪಾಕ್ ಕದನ ವಿರಾಮ ಉಲ್ಲಂಘನೆಗೆ ಓರ್ವ ಯೋಧ ಬಲಿ, ಬಿಸಿಸಿಐ ಬಾಸ್ ಗಳಿಗೆ ಲೋಧಾ ಸಮಿತಿಯಿಂದ ಮತ್ತೆ ಬರೆ

ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿಯೇ ಕೇಂದ್ರ ಸರ್ಕಾರ ‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2014’ ಅಂಗೀಕರಿಸಬೇಕು ಎಂದು ಒತ್ತಾಯಸಿ ಅಂಗವಿಕಲರ ಸಂಘ-ಸಂಸ್ಥೆಗಳು ಹಾಗೂ ಪೋಷಕರು ಸೋಮವಾರ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಜನಾರ್ದನ ರೆಡ್ಡಿ ಕಚೇರಿ ಮೇಲೆ ಐಟಿ ದಾಳಿ

ಮೊನ್ನೆಯಷ್ಟೇ ತಮ್ಮ ಪುತ್ರಿಯ ವಿವಾಹವನ್ನು ವೈಭವಯುತವಾಗಿ ಮಾಡಿ ಇಡೀ ದೇಶದ ಗಮನವನ್ನೇ ಸೆಳೆದಿದ್ದ ಗಣಿ ದಣಿ ಜನಾರ್ದನ ರೆಡ್ಡಿಗೆ ಸೋಮವಾರ ಐಟಿ ಅಧಿಕಾರಿಗಳು ಶಾಕ್ ಕೊಟ್ಟರು. ಬಳ್ಳಾರಿಯಲ್ಲಿರುವ ರೆಡ್ಡಿ ಒಡೆತನದ ಒಎಂಸಿ ಹಾಗೂ ಎಎಂಸಿ ಕಚೇರಿಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ತಮ್ಮ ಮಗಳ ಮದುವೆಗೆ ರೆಡ್ಡಿ ಸುಮಾರು ₹ 500 ಕೋಟಿ ವೆಚ್ಚ ಮಾಡಿದ್ದಾರೆ ಎಂದು ಆರೋಪಿಸಿ ಆರ್ ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ದೂರು ದಾಖಲಿಸಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಜನಾರ್ದನ ರೆಡ್ಡಿ ಅವರ ಎಲ್ಲ ಆಸ್ತಿ, ಬ್ಯಾಂಕು ಖಾತೆಯನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿತ್ತು. ಹಾಗಿದ್ದ ಮೇಲೆ ಮಗಳ ಮದುವೆಯನ್ನು ಇಷ್ಟು ಅದ್ಧೂರಿಯಾಗಿ ಮಾಡಲು ರೆಡ್ಡಿ ಬಳಿ ಅಷ್ಟೊಂದು ಹಣ ಹೇಗೆ ಬಂತು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಹೀಗಾಗಿ ಈ ಹಣದ ಬಗ್ಗೆ ತನಿಖೆಯಾಗಬೇಕು ಎಂದು ನರಸಿಂಹ ಮೂರ್ತಿ ದೂರು ದಾಖಲಿಸಿದ್ದರು.

ಬಿತ್ತನೆ ಬೀಜ ಖರೀದಿಗೆ ಹಳೆ ನೋಟು ಬಳಕೆ

ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ ರೈತರು ಬಿತ್ತನೆ ಬೀಜ ಖರೀದಿ ಮಾಡಲು ಹಳೇಯ ₹ 500 ಮತ್ತು 1000 ನೋಟುಗಳನ್ನು ಬಳಸಬಹುದಾಗಿದೆ. ದೇಶದ ಹಲವು ಪ್ರದೇಶಗಳಲ್ಲಿ ರಾಬಿ ಕೃಷಿಯ ಋತು ಆರಂಭವಾಗುತ್ತಿದ್ದು ಈ ಪರಿಸ್ಥಿತಿಯಲ್ಲಿ ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ತೊಗೆದುಕೊಂಡಿದೆ. ಇನ್ನು ದೇಶದ ವಿವಿಧೆಡೆಗಳಲ್ಲಿ ಹೊಸ ನೋಟುಗಳ ಕೊರತೆಯನ್ನು ತ್ವರಿತವಾಗಿ ನೀಗಿಸಲು ಸರ್ಕಾರ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಹಾಗೂ ವಿಮಾನಗಳನ್ನು ಬಳಕೆ ಮಾಡಿಕೊಂಡಿದೆ. ಆ ಮೂಲಕ ತ್ವರಿತವಾಗಿ ಹೊಸ ನೋಟುಗಳನ್ನು ರವಾನಿಸಲು ತಗಲುತಿದ್ದ 21 ದಿನಗಳ ಕಾಲವನ್ನು 6 ದಿನಕ್ಕೆ ಇಳಿಸಿಕೊಂಡಿದೆ.

ಸದನದ ಸಮಯ ನುಂಗುತ್ತಿದೆ ನೋಟು ರದ್ದತಿ ವಿಷಯ

ಹಳೇ ನೋಟು ರದ್ದತಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಸಮರ ಸಾರಲು ನಿರ್ಧರಿಸಿರುವ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆಗೆ ಮುಂದಾಗಿವೆ. ಪರಿಣಾಮ ಈ ಪ್ರತಿಭಟನೆಗಳು ಚಳಿಗಾಲ ಅಧಿವೇಶನದ ಸಮಯವನ್ನು ಸಂಪೂರ್ಣವಾಗಿ ನುಂಗುಹಾಕುತ್ತಿವೆ.

ಸೋಮವಾರವೂ ಲೋಕಸಭೆ ಹಾಗೂ ರಾಜ್ಯಸಭೆಗಳ ಸಮಯ ವಿರೋಧ ಪಕ್ಷಗಳ ಪ್ರತಿಭಟನೆಗೆ ಸೀಮಿತವಾಗಿತ್ತು. ಪ್ರಧಾನ ಮಂತ್ರಿ ಉಪಸ್ಥಿತಿ ಬೇಕು, ನೋಟು ರದ್ಧತಿ ವಿಷಯವಾಗಿ ಚರ್ಚೆಗೆ ಅವಕಾಶ ನೀಡಬೇಕು ಎಂಬ ಪಟ್ಟು ಹಿಡಿದು ಪ್ರತಿ ಪಕ್ಷಗಳು ಸದನದಲ್ಲಿ ಪ್ರತಿಭಟನೆಗೆ ಮುಂದಾಗಿವೆ.

ಕಾಂಗ್ರೆಸ್, ತ್ರಿಣಮೂಲ ಕಾಂಗ್ರೆಸ್, ಜೆಡಿಯು, ಬಿಎಸ್ಪಿ, ಸಿಪಿಐಎಂ, ಸಿಪಿಐ, ಎನ್ ಸಿಪಿ, ಆರ್ ಜೆಡಿ, ಜೆಎಂಎಂ, ಹಾಗೂ ಡಿಎಂಕೆ ಸೇರಿದಂತೆ ಒಟ್ಟು 10 ವಿರೋಧ ಪಕ್ಷಗಳು ಸರ್ಕಾರದ ನಿರ್ಧಾರವನ್ನು ಸಂಸತ್ತಿನ ಒಳಗೆ ಹಾಗೂ ಹೊರಗೆ ಒಟ್ಟಾಗಿ ವಿರೋಧಿಸಲು ನಿರ್ಧರಿಸಿವೆ. ಈ ಪಕ್ಷಗಳ ನಾಯಕರು ನಡೆಸಿದ ಸಭೆಯಲ್ಲಿ ‘ಈ ವಿಷಯದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲ ನಾಯಕರು ಒಟ್ಟಾಗಿ ನಿಲ್ಲಬೇಕು’ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಅದರೊಂದಿಗೆ ಇದೇ ರೀತಿ ಪ್ರತಿಭಟನೆಗಳ ಮೂಲಕ ಕಲಾಪಕ್ಕೆ ಅಡ್ಡಿ ಪಡಿಸಿ ಸರ್ಕಾರದ ಮೇಲೆ ಒತ್ತಡ ಹೇರುವುದು ವಿರೋಧ ಪಕ್ಷಗಳ ಕಾರ್ಯತಂತ್ರವಾಗಿರೋದು ಸ್ಪಷ್ಟವಾಗಿದೆ.

ಲೋಕಸಭೆಯಲ್ಲಿ ಈಗಾಗಲೇ ಎರಡು ದಿನದ ಅವಧಿ ಈ ವಿಷಯದಿಂದಾಗಿ ಹಾಳಾಗಿದ್ದು, ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಇತ್ತ ಸರ್ಕಾರವೂ ವಿರೋಧ ಪಕ್ಷಗಳ ಪಟ್ಟನ್ನು ಲೆಕ್ಕಿಸದೇ ತನ್ನ ನಿಲುವಿಗೆ ಬದ್ಧವಾಗಿದೆ. ಹೀಗಾಗಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಣ ಹಗ್ಗಜಗ್ಗಾಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ. ಇದು ಮುಂದಿನ ದಿನಗಳಲ್ಲೂ ಕಲಾಪದ ಸಮಯವನ್ನು ಹಾಳು ಮಾಡಿದರೆ ಯಾವುದೇ ಅಚ್ಚರಿ ಇಲ್ಲ.

ಕದನ ವಿರಾಮ ಉಲ್ಲಂಘನೆ: ಯೋಧ ಬಲಿ

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ರಾಜೌರಿ ಜಿಲ್ಲೆಯ ಮಂಜಕೋಟ್ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಸೋಮವಾರ ದಾಳಿ ಮಾಡಿದ ಪರಿಣಾಮ ಓರ್ವ ಗಡಿ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದು, ನಾಲ್ವರು ಸೈನಿಕರು ಹಾಗೂ ಮೂವರು ಬಿಎಸ್ಎಫ್ ಸಿಬ್ಬಂದಿಗಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ನಂತರ ಸೋಮವಾರ ಮಧ್ಯಾಹ್ನ ಮೃತ ಸೈನಿಕನಿಗೆ ಬಿಎಸ್ಎಫ್ ಅಧಿಕಾರಿಗಳು ಅಂತಿಮ ಗೌರವ ಸಲ್ಲಿಸಿದರು.

ಲೋಧಾ ಸಮಿತಿಯಿಂದ ಬಿಸಿಸಿಐಗೆ ಹೊಸ ಶಾಕ್

ಲೋಧಾ ಸಮಿತಿಯಿಂದ ಬಿಸಿಸಿಐಗೆ ಮತ್ತೊಂದು ಶಾಕ್ ಎದುರಾಗಿದೆ. ಸೋಮವಾರ ಲೋಧಾ ಸಮಿತಿ ಸುಪ್ರೀಂ ಕೋರ್ಟಿಗೆ ಮತ್ತೊಂದು ವರದಿಯನ್ನು ನೀಡಿದ್ದು, ‘ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ ಬಿಸಿಸಿಐ ತನ್ನ ಶಿಫಾರಸ್ಸುಗಳನ್ನು ಜಾರಿಗೊಳಿಸಿಲ್ಲ’ ಎಂದು ದೂರಿದೆ. ಅಷ್ಟೇ ಅಲ್ಲದೆ ಈ ವಿಷಯದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ಮಂಡಳಿಯ ಉನ್ನತ ಆಡಳಿತ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಕೋರ್ಟಿಗೆ ಸಮಿತಿ ಶಿಫಾರಸ್ಸು ಮಾಡಿದೆ. ಅಷ್ಟೇ ಅಲ್ಲ ಬಿಸಿಸಿಐನ ಅಧ್ಯಕ್ಷ ಅನುರಾಗ್ ಠಾಕೂರ್ ಅವರನ್ನು ಕಿತ್ತುಹಾಕಿ ಮಾಜಿ ಗೃಹ ಇಲಾಖೆ ಕಾರ್ಯದರ್ಶಿ ಜಿ.ಕೆ ಪಿಳ್ಳೈ ಅವರನ್ನು ಮಂಡಳಿಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಮನವಿ ಮಾಡಿದೆ.

Leave a Reply