ನೌಕಾ ಪಡೆ ಸೇರಿತು ‘ಐಎನ್ಎಸ್ ಚೆನ್ನೈ’ ಯುದ್ಧ ಹಡಗು, ಸ್ವದೇಶಿ ನಿರ್ಮಿತ ಅತ್ಯಂತ ದೊಡ್ಡ ಹಡಗಿನ ವಿಶೇಷತೆಗಳೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ನೌಕಾ ಪಡೆಗೆ ಈಗ ಹೊಸ ಅಸ್ತ್ರವೊಂದು ಸೇರ್ಪಡೆಯಾಗಿದೆ. ಅದೇ ‘ಐಎನ್ಎಸ್ ಚೈನ್ನೈ’ ಯುದ್ಧ ಹಡಗು. ಸೋಮವಾರ ಮುಂಬೈನಲ್ಲಿ ಕೇಂದ್ರ ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಅವರು ಐಎನ್ಎಸ್ ಚೆನ್ನೈ ಅನ್ನು ಸೇವೆಗೆ ಅರ್ಪಿಸಿದರು.

ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಾಣವಾದ ಈ ಹಡಗು ಪೂರ್ಣ ಪ್ರಮಾಣದ ಸ್ವದೇಶಿ ಹಡಗಾಗಿದೆ. ಅಲ್ಲದೆ ಈವರೆಗೂ ಭಾರತದಲ್ಲಿ ನಿರ್ಮಿತವಾದ ಹಡಗಿನ ಪೈಕಿ ಐಎನ್ಎಸ್ ಚೆನ್ನೈ ಅತಿ ದೊಡ್ಡ ಹಡಗು ಎಂಬ ಹಿರಿಮೆಯನ್ನು ಹೊಂದಿದೆ. ಈ ಯುದ್ಧ ಹಡಗು ನೌಕಾ ಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಈ ಯುದ್ಧ ಹಡಗಿನ ಪ್ರಮುಖ ಮಾಹಿತಿಗಳು ಹೀಗಿವೆ.

  • ಈ ಹಡಗಿನಲ್ಲಿ ಡೆಕಾಯ್ ತಂತ್ರಜ್ಞಾನವಿದ್ದು ಇದು ಕ್ಷಿಪಣಿ ದಾಳಿಯ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ. ಆ ಮೂಲಕ ಎದುರಾಳಿಯ ಕ್ಷಿಪಣಿಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿರುವ ರಕ್ಷಾ ಕವಚ ಇದಾಗಿದೆ.
  • ಈ ಹಡಗಿನಲ್ಲಿ ಎರಡು ಬಹುಪಯೋಗಿ ಯುದ್ಧ ಹೆಲಿಕಾಪ್ಟರ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಈ ಯುದ್ಧ ಹಡಗು 164 ಮೀಟರ್ ಉದ್ಧವಿದ್ದು, ಸುಮಾರು 7500 ಟನ್ ತೂಕ ಹೊಂದಿದೆ. ಅಲ್ಲದೆ ಪ್ರತಿ ಗಂಟೆಗೆ 55 ಕಿ.ಮೀ ದೂರ ಸಾಗುವ ಸಾಮರ್ಥ್ಯ ಹೊಂದಿದೆ. ನೌಕಾಪಡೆಯು 2027 ವೇಳೆಗೆ 200 ಯುದ್ಧ ಹಡಗು 600 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ ಗಳನ್ನು ಹೊಂದುವ ಗುರಿ ಇಟ್ಟುಕೊಂಡಿದೆ.
  • ಈ ಯುದ್ಧ ಹಡಗು ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ಬರಾಕ್-8 ದೂರವ್ಯಾಪಿ ಕ್ಷಿಪಣಿಯನ್ನು ಹೊಂದಿದೆ. ಸಮುದ್ರದ ಒಳಗೂ ಯುದ್ಧ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಈ ಐಎನ್ಎಸ್ ಚೆನ್ನೈ ಯುದ್ಧ ಹಡಗು, ಎದುರಾಳಿಗಳು ಜಲಾಂತರ್ಗಾಮಿ ಮತ್ತು ಶಸ್ತ್ರಾಸ್ತ್ರವನ್ನು ಪತ್ತೆ ಹಚ್ಚುವ ಸೆನ್ಸಾರ್ ತಂತ್ರಜ್ಞಾನ ಹೊಂದಿದೆ. ಜತೆಗೆ ಜಲಾಂತರ್ಗಾಮಿ ಕ್ಷಿಪಣಿ ಉಡಾವಣೆ, ರಾಕೆಟ್ ಲಾಂಚರ್ ಗಳನ್ನು ಹೊಂದಿದೆ.
  • ಈ ಯುದ್ಧ ಹಡಗು ಎಟಿಎಂ ಆಧಾರಿತ ಹಡಗು ದತ್ತಾಂಶ ಮಾಹಿತಿ ಸೇರಿದಂತೆ ಇತರೆ ಅತ್ಯುತ್ತಮ ಡಿಜಿಟಲ್ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಸ್ವಯಂ ಚಾಲಿತ ಆಕ್ಸಿಲರಿ ಕಂಟ್ರೋಲ್ ಸಿಸ್ಟಮ್ ವ್ಯವಸ್ಥೆ ಹೊಂದಿದೆ.

ಮುಂಬೈನ ಮ್ಯಾಜಗಾನ್ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್ ನಲ್ಲಿ ಈ ಯುದ್ಧ ಹಡಗು ನಿರ್ಮಾಣವಾಗಿದ್ದು, ಐಎನ್ ಎಸ್ ಚೆನ್ನೈ ಯುದ್ಧ ಹಡಗು ಕ್ಷಿಪಣಿ ಧ್ವಂಸ ಉದ್ದೇಶಿತ ಪ್ರಾಜೆಕ್ಟ್ 15ಎ ಶ್ರೇಣಿಯ ಮೂರನೇ ಹಾಗೂ ಕಡೇಯ ಹಡಗಾಗಿದೆ. ಈ ಹಿಂದೆ ಐಎನ್ಎಸ್ ಕೊಲ್ಕತಾ ಎಂಬ ಯುದ್ಧ ಹಡಗನ್ನು 2014ರ ಆಗಸ್ಟ್ 16ರಂದು ಸೇವೆಗೆ ಅರ್ಪಣೆ ಮಾಡಲಾಗಿತ್ತು, ಇನ್ನು ಕಳೆದ ವರ್ಷ ಸೆ.30ರಂದು ಐಎನ್ಎಸ್ ಕೊಚ್ಚಿ ಯುದ್ಧ ಹಡಗನ್ನು ಲೋಕಾರ್ಪಣೆ ಮಾಡಲಾಗಿತ್ತು.

Leave a Reply