ಸತತ ಎರಡು ವರ್ಷ ಅಮೆರಿಕದ ಜಿಎಸ್ಎಂಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಏಕೈಕ ದಕ್ಷಿಣ ಭಾರತದ ಕ್ರೀಡಾ ಸಾಧಕಿ ಪವಿತ್ರಾ ಚಂದ್ರ, ಕ್ರೀಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಅವರಿಟ್ಟ ಹೆಜ್ಜೆ ವಿಭಿನ್ನ

ಡಿಜಿಟಲ್ ಕನ್ನಡ ಟೀಮ್:

ಕ್ರೀಡೆ… ಕೇವಲ ಮನರಂಜನೆ ಹಾಗೂ ಉದ್ಯಮ ಮಾತ್ರವಲ್ಲ, ಸಮಾಜದ ಬದಲಾವಣೆಯ ಪ್ರಮುಖ ಸಾಧನ. ಹೀಗಾಗಿ ಕ್ರೀಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮುಖ. ಪುರುಷರ ಕ್ರೀಡೆಗೆ ನೀಡುವಷ್ಟೇ ಪ್ರೋತ್ಸಾಹ ಮಹಿಳಾ ಕ್ರೀಡೆಗೂ ನೀಡಬೇಕು ಎಂಬ ಉದ್ದೇಶದಿಂದ ಅಮೆರಿಕ ಸರ್ಕಾರ 2012ರಿಂದ ಪ್ರತಿ ವರ್ಷ ‘ಗ್ಲೋಬಲ್ ಸ್ಪೋರ್ಟ್ಸ್ ಮೆಂಟರಿಂಗ್ ಪ್ರೋಗ್ರಾಂ’ (ಜಿಎಸ್ಎಂಪಿ) ಕಾರ್ಯಕ್ರಮವನ್ನು ನಡೆಸುತ್ತದೆ. ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಸತತ ಎರಡನೇ ವರ್ಷ ಭಾಗವಹಿಸಿದ ಕೀರ್ತಿ ಭಾರತ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಮಾಜಿ ಆಟಗಾರ್ತಿ ಹಾಗೂ ಕರ್ನಾಟಕದವರೇ ಆದ ಪವಿತ್ರಾ ಚಂದ್ರ ಅವರದು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ದಕ್ಷಿಣ ಭಾರತದ ಕ್ರೀಡಾ ಸಾಧಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಪವಿತ್ರಾ ಚಂದ್ರ. ಕಳೆದ ವರ್ಷದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿ ಪಡೆದ ಪವಿತ್ರಾ ಅವರು, ನಂತರ ಬಿ7 ಸಂಸ್ಥೆಯ ಮೂಲಕ ಕ್ರೀಡೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಅವರ ಈ ಪರಿಶ್ರಮವನ್ನು ಪರಿಗಣಿಸಿ ಈ ಬಾರಿಯೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅಷ್ಟೇ ಅಲ್ಲದೆ, ಲಾಸ್ ಏಂಜಲೀಸ್ ನಲ್ಲಿ ನಡೆದ ಇಎಸ್ಪಿಎನ್ ಡಬ್ಲ್ಯೂ ಸಮಾವೇಶದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು.

ಏನಿದು ಜಿಎಸ್ಎಂಪಿ?

ಕ್ರೀಡಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಇಚ್ಛಿಸುವವರಿಗೆ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಒಂದು ಕಾರ್ಯಕ್ರಮ ಈ ಜಿಎಸ್ಎಂಪಿ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವದ ಅನೇಕ ರಾಷ್ಟ್ರಗಳಿಂದ ಕ್ರೀಡಾ ಕ್ಷೇತ್ರದ ಹಿನ್ನೆಲೆಯುಳ್ಳ ನೂರಾರು ಮಹಿಳೆಯರು ಭಾಗವಹಿಸಿ ತರಬೇತಿ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲಿ ಹಲವು ಪ್ರಕ್ರಿಯೆಗಳ ನಂತರ ನೂರಾರು ಆಕಾಂಕ್ಷಿಗಳ ಪೈಕಿ ಅಂತಿಮವಾಗಿ 16 ಮಂದಿಯನ್ನು ಆಯ್ಕೆ ಮಾಡಲಾಗುವುದು. ಹೀಗೆ ಆಯ್ಕೆಯಾದವರು ತಮ್ಮ ದೇಶದಲ್ಲಿ ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸುವಂತೆ ಮಾಡಲು ಹೇಗೆಲ್ಲಾ ಕೆಲಸ ಮಾಡಬಹುದು ಎಂಬುದರ ಬಗ್ಗೆ ಒಂದೂವರೆ ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ತರಬೇತಿ ಮುಕ್ತಾಯವಾದ ನಂತರ ಈ 16 ಕ್ರೀಡಾ ನಾಯಕಿಯರು ತಮ್ಮ ಮುಂದಿನ ಕಾರ್ಯ ಯೋಜನೆಗಳ ಬಗೆಗಿನ ರೂಪುರೇಷೆಗಳನ್ನು ನೀಡಬೇಕು. ಈ ರೀತಿಯಾಗಿ ಮಹಿಳೆಯರ ಕ್ರೀಡೆಗೆ ಉತ್ತೇಜನ ನೀಡುವ ಈ ವಿಭಿನ್ನ ಕಾರ್ಯಕ್ರಮವನ್ನು ಆರಂಭಿಸಿದವರು ಬೇರಾರು ಅಲ್ಲ ಅದು ಹಿಲರಿ ಕ್ಲಿಂಟನ್.

b7-min

ಕಳೆದ ವರ್ಷ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿ ಪಡೆದಿದ್ದ ಪವಿತ್ರಾ ಚಂದ್ರ ಅವರು ಬಿ7 ಸಂಸ್ಥೆಯ ಮೂಲಕ ಮಹಿಳೆಯರು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವಂತೆ ಮಾಡಲು ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಬಂದಿದ್ದಾರೆ. ಆ ಪೈಕಿ ಪ್ರಮುಖ ಹೆಜ್ಜೆಗಳು ಹೀಗಿವೆ…

ವರ್ಷಪೂರ್ತಿ 7-16 ವರ್ಷದೊಳಗಿನ ಮಕ್ಕಳಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡಲಾಗುವುದು. ಕೇವಲ ಬಾಸ್ಕೆಟ್ ಬಾಲ್ ತರಬೇತಿ ನೀಡುವುದು ಮಾತ್ರವಲ್ಲದೆ, ಅವರ ಮಾನಸಿಕ ಸ್ಥಿತಿ ಸುಧಾರಣೆ ಸೇರಿದಂತೆ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಮಾರ್ಗದರ್ಶನ ನೀಡಲಾಗುವುದು. ಅವರಿಗೆ ದೈಹಿಕ ಸಾಮರ್ಥ್ಯ ಹಾಗೂ ವೈಜ್ಞಾನಿಕ ಪರೀಕ್ಷೆಗಲ ಮೂಲಕ ಅವರ ಸಾಮರ್ಥ್ಯ ಹೆಚ್ಚಿಸಲಾಗುವುದು. ಜತೆಗೆ 2 ತಿಂಗಳ ಕಾಲ ಅಕಾಡಮಿ ಮಟ್ಟದಲ್ಲೇ ಲೀಗ್ ಪಂದ್ಯಗಳನ್ನು ನಡೆಸಲಾಗುವುದು. ಜತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಪೋಷಕರು ಯಾವ ರೀತಿ ಪ್ರೋತ್ಸಾಹ ನೀಡಬೇಕು, ಅವರ ಫಿಟ್ನೆಸ್ ಗಾಗಿ ಯಾವ ರೀತಿ ಕಾಳಜಿ ವಹಿಸಬೇಕು ಎಂಬುದರ ಬಗ್ಗೆ ಪೋಷಕರಿಗೆ ಮಾರ್ಗದರ್ಶನ. ಪೋಷಕರು ಕ್ರೀಡೆಯ ಆನಂದವನ್ನು ಅನುಭವಿಸಲು ಅವರಿಗೂ ಪಂದ್ಯಗಳ ಆಯೋಜನೆ. ಮಕ್ಕಳಿಗೆ ಕ್ರೀಡಾ ಸಾಧಕರ ಪರಿಚಯ ಮಾಡಿ ಅವರ ಶ್ರಮ ಹಾಗೂ ಯಶಸ್ಸಿನ ಬಗ್ಗೆ ಮಾಹಿತಿ ನೀಡಿ ಅವರಿಗೆ ಸ್ಫೂರ್ತಿ ನೀಡುವುದು. ಜತೆಗೆ ಮಹಿಳೆಯರ ಭಾಗವಹಿಸುವಿಕೆಗಾಗಿ 30 ವರ್ಷಕ್ಕೂ ಮೇಲ್ಪಟ್ಟರಿಗಾಗಿ ವಿಶೇಷ ಕ್ಯಾಂಪ್ ಆಯೋಜನೆ. ಹೀಗೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದೆ ಬಿ7.

b7-1-min

ತಮ್ಮ ಸಂಸ್ಥೆಯ ಉದ್ದೇಶ ಹಾಗೂ ಕಾರ್ಯದ ಬಗ್ಗೆ ಪವಿತ್ರಾ ಚಂದ್ರ ಅವರು ಹೇಳೋದಿಷ್ಟು:

‘ನಮ್ಮ ದೇಶದಲ್ಲಿ ಕ್ರೀಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ತೀರಾ ಕಡಿಮೆ. ಸಾಮಾನ್ಯವಾಗಿ ನಾವು ಆಟದ ಮೈದಾನದಲ್ಲಿ ನೋಡಿದರೆ ಅಲ್ಲಿ ಕೇವಲ ಗಂಡು ಮಕ್ಕಳೇ ಆಡುತ್ತಿರುತ್ತಾರೆ ಹೊರತು ಹೆಣ್ಣುಮಕ್ಕಳು ಹೆಚ್ಚು ಕಾಣುವುದೇ ಇಲ್ಲ. ದೇಶದಲ್ಲಿನ ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಹಣ ಸಂಪಾದಿಸಲು ಎಂಬ ಉದ್ದೇಶಕ್ಕೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಾರೆ. ಮತ್ತೆ ಕೆಲವರು ಸ್ವಲ್ಪ ಕಾಲಾವಧಿಯ ತರಬೇತಿ ನಂತರ ಅವರು ದೊಟ್ಟ ಮಟ್ಟದ ಸಾಧನೆ ಮಾಡಬೇಕೆಂಬ ನಿರೀಕ್ಷೆ ಹೊಂದಿರುತ್ತಾರೆ. ಈ ರೀತಿಯಾದ ಋಣಾತ್ಮಕ ಆಲೋಚನೆಗಳನ್ನು ತೊಡೆದುಹಾಕಲು ನಮ್ಮ ಸಂಸ್ಥೆ ಮೂಲಕ ಪೋಷಕರಿಗೂ ಹಲವಾರು ಕಾರ್ಯಗಾರ ಮತ್ತು ಟೂರ್ನಿ ನಡೆಸುತ್ತೇವೆ. ಆಗ ಅವರು ತಮ್ಮ ಮಕ್ಕಳ ನಿಜವಾದ ಪರಿಶ್ರಮ ಏನು ಎಂಬುದರ ಬಗ್ಗೆ ತಿಳಿಯುತ್ತಾರೆ. ಅದರೊಂದಿಗೆ ಮಕ್ಕಳ ಮೇಲೆ ಒತ್ತಡ ಹೇರುವುದನ್ನು ತಪ್ಪಿಸಲಾಗುವುದು. ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಆಟವಾಡಬೇಕು. ಆಗ ಅವರಲ್ಲಿನ ಬಾಂದವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಇನ್ನು ಹಿರಿಯ ಮಹಿಳೆಯರಿಗೂ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ಇದರಿಂದ ದೊಡ್ಡವರಲ್ಲಿನ ಕ್ರೀಡಾ ಸ್ಫೂರ್ತಿಯನ್ನು ಕಂಡು ಚಿಕ್ಕ ಮಕ್ಕಳು ಉತ್ಸುಕರಾಗಿ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ.’

ಒಟ್ಟಿನಲ್ಲಿ ಕ್ರೀಡೆ ಕೇವಲ ಮನರಂಜನೆ ಹಾಗೂ ಉದ್ಯಮ ಮಾತ್ರವಲ್ಲ, ಸಮಾಜದ ಬದಲಾವಣೆಯ ಪ್ರಮುಖ ಸಾಧನ ಎಂದು ನಂಬಿರುವ ಪವಿತ್ರಾ ಚಂದ್ರ ಅವರು ಕ್ರೀಡೆಯಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

1 COMMENT

  1. It is truly commendable that Pavitra Chandra has taken a bold and innovative step to popularize among women. I wish her all the very best and hope to see a women’s basketball team representing India at an international competition soon! Pavitra, way to go onward and higher!

Leave a Reply