ಅಧಿವೇಶನದ ಮೊದಲ ದಿನ ಸದನದೊಳಗೆ ಶಾಸಕರ ಗೈರು ಪ್ರದರ್ಶನ, ಹೊರಗಡೆ ರೈತರ ಪ್ರತಿಭಟನಾ ಪ್ರದರ್ಶನ, ಅದ್ಧೂರಿ ಮದುವೆಗಳಿಗೆ ಹೋಗದಂತೆ ಮು.ಮಂ ಕಿವಿಮಾತು

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಬಹುತೇಕ ಶಾಸಕರು ಗೈರಾಗಿದ್ದ ಪರಿಣಾಮ ಖಾಲಿ ಖಾಲಿಯಾಗಿದ್ದ ವಿಧಾನಸಭಾ ಆವರಣ.

ಡಿಜಿಟಲ್ ಕನ್ನಡ ಟೀಮ್:

ನೋಟು ಬದಲಾವಣೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ರೈತರಿಗೆ ಸಮಸ್ಯೆಯಾಗುತ್ತಿದೆ ಎಂಬ ಆರೋಪ ಮಾಡಲು ಸಾಕಷ್ಟು ರಾಜಕೀಯ ನಾಯಕರು ಮುಂದಾಗಿದ್ದಾರೆ. ಆದರೆ ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನ ಮಾತ್ರ ಜ್ವಲಂತ ಸಮಸ್ಯೆ ಚರ್ಚೆಗಿಂತ ಮದುವೆ ಊಟವೇ ಮುಖ್ಯವಾಗಿದ್ದು ಬಹಳ ಸ್ಪಷ್ಟವಾಗಿತ್ತು.

ಒಂದು ಕಡೆ ರೈತರು ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಸದನದಲ್ಲಿ ಶಾಸಕರೇ ಹಾಜರಾಗಿರಲಿಲ್ಲ. ಹೆಚ್ಚು ಜನ ಪ್ರತಿನಿಧಿಗಳಿಲ್ಲದೆ ಸದನದ ಆವರಣ ಖಾಲಿ ಖಾಲಿ ಹೊಡೆಯುತ್ತಿತ್ತು. ಹೀಗಾಗಿ ರಾಜ್ಯದ ವಿವಿಧ ಸಮಸ್ಯೆಗಳ ಚರ್ಚೆಯ ನಿರೀಕ್ಷೆ ಹುಟ್ಟಿಸಿದ್ದ ಚಳಿಗಾಲದ ಅಧಿವೇಶನ ಆರಂಭದಲ್ಲೇ ನಿರಾಸೆ ಮೂಡಿಸಿದೆ.

ರಾಜ್ಯಕ್ಕೆ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದ್ದು, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ಕೋಟಿ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಶಾಸಕರೇ ಬಾರದಿರುವುದು ವಿಪರ್ಯಾಸದ ಸಂಗತಿ. ಮಾಧ್ಯಮಗಳ ವರದಿ ಪ್ರಕಾರ ಗೋಕಾಕ್ ನಲ್ಲಿ ಸಚಿವ ಸತೀಶ್ ಜಾರಕಿಹೋಳಿ ಅವರ ಪುತ್ರನ ವಿವಾಹದ ಹಿನ್ನೆಲೆಯಲ್ಲಿ ಈ ಶಾಸಕರು ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರೆ.

ಅಧಿವೇಶನಕ್ಕೆ ಶಾಸಕರೇ ಬಾರದಿರುವ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ‘ಇವರಿಗೆ ರಾಜ್ಯದ ಜನತೆಯ ಕುರಿತು ಕಾಳಜಿಯೇ ಇಲ್ಲದಂತಾಗಿದೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿಭಟಿಸಿದ ರೈತರ ಬಂಧನ

ವಿಧಾನ ಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಕಬ್ಬು, ತೆಂಗು, ಅಡಿಕೆ, ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು, ಬರ ಪರಿಹಾರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಮಹದಾಯಿ ಸಮಸ್ಯೆ ಬಗೆಹರಿಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತ ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ಇನ್ನು ಪ್ರತಿಭಟನೆಗಾಗಿ 50 ಕ್ಕೂ ಹೆಚ್ಚು ವಾಹನಗಳಲ್ಲಿ ಬೆಳಗಾವಿಗೆ ಆಗಮಿಸುತ್ತಿದ್ದ ರೈತರನ್ನು ಪೊಲೀಸರು ವಿವಿಧೆಡೆಗಳಲ್ಲಿ ಬಂಧಿಸಿದರು. ಈ ಬಂಧನದ ಕ್ರಮವನ್ನು ರೈತರು ತೀವ್ರವಾಗಿ ಖಂಡಿಸಿದ್ದು, ‘ರಾಜ್ಯ ಪೊಲೀಸರು ಬಲಪ್ರಯೋಗಿಸಿ ನಮ್ಮ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ನಮ್ಮ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ನಮ್ಮನ್ನು ಕಳ್ಳರಂತೆ ಬಂಧಿಸುತ್ತಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು. ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ರೈತರನ್ನು ಬಂಧಿಸಿರುವ ಕ್ರಮ ಖಂಡನೀಯ. ಚಳವಳಿ ನಮ್ಮ ಹಕ್ಕು. ನಮ್ಮ ಬೇಡಿಕೆಗಳ ಈಡೇರಿಕೆಗೆ ಚಳವಳಿ ನಡೆಸುವುದೇ ನಮ್ಮ ಮಾರ್ಗ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ‘ಯಾರೇ ಕಾನೂನು ಕೈಗೆತ್ತಿಕೊಂಡರೂ ಅವರ ವಿರುದ್ಧ ಕಾನೂನಿ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂಬ ಉದ್ದೇಶದಿಂದ ರೈತರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಸ್ಪಷ್ಟೀಕರಣ ಕೊಟ್ಟರು.

Winter Assembly

ರೈತರ ಬಂಧನಕ್ಕೆ ವಿಪಕ್ಷಗಳ ಆಕ್ರೋಶ

‘ರೈತರನ್ನು ಬಂಧಿಸಲು ಅವರೇನು ಗೂಂಡಾಗಳೇ, ರೈತರು ದೇಶದ್ರೋಹದ ಕೆಲಸ ಮಾಡಿದ್ದಾರಾ? ಇದು ತುಘಲಕ್ ಸರ್ಕಾರ, ರೈತ ವಿರೋಧಿ ಸರ್ಕಾರ…’ ಇದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸುತ್ತಿದ್ದ ರೈತರನ್ನು ಬಂಧಿಸಿದ ಕ್ರಮಕ್ಕೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ ಪರಿ.

ವಿಧಾನಮಂಡಲದ ಉಭಯ ಸದನಗಳ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಈ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದವು. ಈ ವೇಳೆ ವಿಪಕ್ಷ ಹಾಗೂ ಸರ್ಕಾರದ ನಡುವೆ ನಡೆದ ವಾಗ್ವಾದ ಹೀಗಿತ್ತು..

‘ರೈತರನ್ನು ಬಂಧಿಸಲು ಅವರೇನು ಗೂಂಡಾಗಳೇ, ಇದರಿಂದಲೇ ತಿಳಿಯುತ್ತದೆ. ನಿಮ್ಮ ಸರ್ಕಾರಕ್ಕೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ’ ಎಂದು ವ್ಯಂಗ್ಯವಾಡಿದರು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್. ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮುಂಜಾಗ್ರತಾ ಕ್ರಮವಾಗಿ ರೈತರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸ್ಪಷ್ಟನೆ ನೀಡಿದರು. ಆದರೂ ಸಹ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಆಗ ರೈತರನ್ನು ಬಿಡುಗಡೆ ಮಾಡಲು ಸೂಚನೆ ನೀಡಿದ್ದು, ಧರಣಿ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಮನವಿ ಮಾಡಿದರು. ಬಳಿಕ ಬಿಜೆಪಿ ಶಾಸಕರು ಧರಣಿ ಕೈಬಿಟ್ಟು, ಕಲಾಪದ ಚರ್ಚೆಯಲ್ಲಿ ಪಾಲ್ಗೊಂಡರು.

ಸಹೋದ್ಯೋಗಿಗಳಿಗೆ ಸಿಎಂ ಸಲಹೆ

‘ದುಬಾರಿ ಮದುವೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ…’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಚಿವರು ಹಾಗೂ ಸಹೋದ್ಯೋಗಿಗಳಿಗೆ ಕೊಟ್ಟ ಸಲಹೆ.

ವಿಧಾನ ಮಂಡಲ ಅಧಿವೇಶನಕ್ಕೂ ಮುನ್ನ ಬೆಳಗಾವಿಯ ಸರ್ಕಾರಿ ಅತಿಥಿಗೃಹದಲ್ಲಿ  ಹಿರಿಯ ಸಚಿವರೊಟ್ಟಿಗೆ ಸದನದಲ್ಲಿ ಬರಬಹುದಾದ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ, ಅವುಗಳನ್ನು ಎದುರಿಸಲು ಸಜ್ಜಾಗಬೇಕು. ಪ್ರತಿಪಕ್ಷ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಸಿಎಂ ಸಮಾಲೋಚನೆ ನಡೆಸಿದರು.

ಈ ವೇಳೆ ದುಬಾರಿ ಮದುವೆಗಳ ಬಗ್ಗೆ ಚರ್ಚೆ ನಡೆಸಿದ ಸಿಎಂ ತಮ್ಮ ಪಕ್ಷದವರಿಗೆ ಹೇಳಿದ ಮಾತುಗಳು ಹೀಗಿವೆ…

‘ಗಣಿ ಧಣಿ ಜನಾರ್ದನ ರೆಡ್ಡಿ ಐದು ನೂರು ಕೋಟಿ ವೆಚ್ಚ ಮಾಡಿ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದಾರೆ. ಇಂತಹ ಅದ್ದೂರಿ ಮದುವೆ ಅಗತ್ಯವಿತ್ತೆ. ಇದೇ ಕಾರಣಕ್ಕೆ ನಾನು ಆ ಮದುವೆಯಲ್ಲಿ ಭಾಗವಹಿಸಲಿಲ್ಲ. ರಮೇಶ್ ಜಾರಕಿಹೊಳಿ ಕೂಡ ಭಾರೀ ಅದ್ದೂರಿಯಾಗಿಯೇ ಮದುವೆ ಮಾಡುತ್ತಿದ್ದಾರೆ. ಈ ಮದುವೆಗೂ ನಾನು ಭಾಗವಹಿಸುವುದಿಲ್ಲ. ಬೇರೆಯವರಿಗೆ ಬುದ್ಧಿವಾದ ಹೇಳುವ ನಾವು ನಮ್ಮ ಪಕ್ಷದವರೇ ವೈಭವದ ಮದುವೆಗಳನ್ನು ಮಾಡಿದರೆ, ಅಂತಹ ಸಮಾರಂಭಗಳಲ್ಲಿ ಭಾಗವಹಿಸುವುದು ಎಷ್ಟರ ಮಟ್ಟಿಗೆ ಸರಿ.’

ಯಾರೇನೇ ಹೇಳಿದರೂ ಅಲ್ಲಿ ನಡೆಯುವುದು ದುಬಾರಿ ವಿವಾಹವೇ. ಹೀಗಾಗಿ ನೈತಿಕವಾಗಿ ಅಲ್ಲಿಗೆ ಹೋಗುವುದು ನನಗೆ ಸರಿ ಎನ್ನಿಸುತ್ತಿಲ್ಲ. ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ಒಂದು ನಿಲುವು ತೆಗೆದುಕೊಂಡಿದೆ. ಪಕ್ಷದ ತತ್ವ ಹಾಗೂ ಸಿದ್ದಾಂತವನ್ನು ಗಮನದಲ್ಲಿಟ್ಟುಕೊಂಡು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ನಾನಂತೂ ಹೋಗುವುದಿಲ್ಲ. ನೀವೂ ಹೋಗಬೇಡಿ. ಕೆಲವರು ವೈಯಕ್ತಿಕ ವಿಶ್ವಾಸದ ಅನಿವಾರ್ಯತೆಗಾಗಿ ಹೋಗಬೇಕು ಎನ್ನುವುದಾದರೆ ಅದು ನಿಮಗೆ ಬಿಟ್ಟ ವಿಷಯ. ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದ ದುಬಾರಿ ವಿವಾಹದ ಕುರಿತು ನಾವೇ ಟೀಕೆ ಮಾಡಿದ್ದೇವೆ. ರಾಜ್ಯದ ಜನ ಕಷ್ಟದಲ್ಲಿರುವಾಗ ಇಂತಹ ದುಬಾರಿ ಮದುವೆಗಳು ಅವರ ಭಾವನೆಯನ್ನು ಕೆರಳಿಸುತ್ತವೆ. ಹಾಗೆಯೇ ನೋವುಣ್ಣುವಂತೆ ಮಾಡುತ್ತವೆ. ಜನಪ್ರತಿನಿಧಿಗಳಾಗಿ ನಾವು ಇದಕ್ಕೆ ಅವಕಾಶ ನೀಡುವುದು ಸರಿಯಲ್ಲ.’

‘2018 ರಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಪ್ರತಿಪಕ್ಷ ಬಿಜೆಪಿ ಎಲ್ಲಾ ವಿಷಯಗಳಲ್ಲೂ ರಾಜಕೀಯ ಮಾಡಲು ಹೊರಡುತ್ತಿವೆ. ಸದನದಲ್ಲಿ ಇಂತಹ ವಿಚಾರಗಳನ್ನು ಮುಂದಿಟ್ಟುಕೊಳ್ಳುವುದರ ಜೊತೆಗೆ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ವಿಚಾರವನ್ನು ಪ್ರಸ್ತಾಪಿಸಿ, ರಾಜಕೀಯ ಮಾಡಲಿದ್ದಾರೆ. ಇದನ್ನು ಎದುರಿಸಲು ಸಜ್ಜಾಗಿ’ ಎಂದು ಅನೌಪಚಾರಿಕ ಸಭೆಯಲ್ಲಿ ಸಚಿವರಾದ ಟಿ.ಬಿ.ಜಯಚಂದ್ರ, ಕಾಗೋಡು ತಿಮ್ಮಪ್ಪ, ಎಚ್.ಕೆ. ಪಾಟೀಲ್, ಆರ.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಸೇರಿದಂತೆ ಹಿರಿಯ ಸಚಿವರಿಗೆ ಹೇಳಿದರು..

ಮೃತರಿಗೆ ಸಂತಾಪ

ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಜಿ.ಬಸವಣ್ಯಪ್ಪ, ಮಾಜಿ ಶಾಸಕ ಎಸ್.ಕೆ.ದಾಸಪ್ಪ, ಹಿರಿಯ ಪತ್ರಕರ್ತ ಗಿರೀಶ್ ನಿಕ್ಕಂ ಹಾಗೂ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ ಮಡಿದ ಪ್ರಯಾಣಿಕರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು, ಸಂತಾಪ ಸೂಚಕ ನಿರ್ಣಯ ಮಂಡಿಸಿದರು.

Leave a Reply