ವಿಶಾಖಪಟ್ಟಣದಲ್ಲಿ ಆಂಗ್ಲರನ್ನು ಆಳಿದ ಟೀಂ ಇಂಡಿಯಾ, 246 ರನ್ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ

ಡಿಜಿಟಲ್ ಕನ್ನಡ ಟೀಮ್:

ಸ್ಪಿನ್ ಬ್ರಹ್ಮಾಸ್ತ್ರವನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಮೇಲೆ ದಿಗ್ಬಂಧನ ಹಾಕುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಆ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಸರಣಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಭಾರತ ತಂಡಕ್ಕೆ ಅತ್ಯುತ್ತಮ ಸವಾಲು ನೀಡಿ ಡ್ರಾ ಫಲಿತಾಂಶ ಪಡೆದಿದ್ದ ಆಂಗ್ಲರ ಪಡೆ, ಈ ಪಂದ್ಯದಲ್ಲಿ ಸಂಪೂರ್ಣವಾಗಿ ಮಂಡಿಯೂರಿತು. ಪರಿಣಾಮ ಭಾರತ 246 ರನ್ ಗಳ ಭರ್ಜರಿ ಅಂತರದಲ್ಲಿ ಜಯ ಸಾಧಿಸಿತು.

ವಿಶಾಖಪಟ್ಟಣದ ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪ್ರತಿ ಹಂತದಲ್ಲೂ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಪ್ರಾಬಲ್ಯ ಮೆರೆದಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ಮೊದಲ ಇನಿಂಗ್ಸ್ ನಲ್ಲಿ 455 ರನ್ ಗಳ ಉತ್ತಮ ಮೊತ್ತ ಪೇರಿಸಿತ್ತು. ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ 255 ರನ್ ಗಳಿಗೆ ಆಲೌಟ್ ಆಗಿ 200 ರನ್ ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್ ನಲ್ಲಿ ಭಾರತದ ಬ್ಯಾಟ್ಸ್ ಮನ್ ಗಳು ಕೇವಲ 204 ರನ್ ಗಳನಷ್ಟೇ ದಾಖಲಿಸಿದರೂ ಮೊದಲ ಇನಿಂಗ್ಸ್ ಮುನ್ನಡೆ ಸೇರಿದಂತೆ 404 ರನ್ ಗಳ ಕಠಿಣ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ 158 ರನ್ ಗಳಿಗೆ ಆಲೌಟ್ ಆಗಿ ಸುಲಭವಾಗಿ ಸೋಲೊಪ್ಪಿಕೊಂಡಿತು.

ಪಂದ್ಯದ ನಾಲ್ಕನೇ ದಿನವಾದ ಭಾನುವಾರ 87 ರನ್ ಗಳಿಗೆ 2 ವಿಕೆಟ್ ಪಡೆದಿದ್ದ ಇಂಗ್ಲೆಂಡ್, ಅಂತಿಮ ದಿನವಾದ ಸೋಮವಾರ ಭಾರತದ ಸ್ಪಿನ್ ಮೋಡಿಯನ್ನು ಅರಿಯಲು ಸಾಧ್ಯವಾಗಲೇ ಇಲ್ಲ. ಇಂಗ್ಲೆಂಡ್ ತಂಡದ ಪರ ನಾಯಕ ಅಲಸ್ಟೇರ್ ಕುಕ್ (54) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ ಮನ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಭಾರತದ ಪರ ಆರ್ ಅಶ್ವಿನ್ ಮತ್ತು ಜಯಂತ್ ಯಾದವ್ ತಲಾ 3, ಶಮಿ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದರು. ಇನ್ನು ಟೀಂ ಇಂಡಿಯಾ ಪರ ಎರಡೂ ಇನಿಂಗ್ಸ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ (167, 81) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 455 (ಕೊಹ್ಲಿ 167, ಪೂಜಾರ 119, ಅಶ್ವಿನ್ 58, ಮೊಯೀನ್ ಅಲಿ 98ಕ್ಕೆ3, ಜೇಮ್ಸ್ 62ಕ್ಕೆ 3)

ಇಂಗ್ಲೆಂಡ್ ಮೊದಲ ಇನಿಂಗ್ಸ್ 255 (ಬೆನ್ ಸ್ಟೋಕ್ಸ್ 70, ರೂಟ್ 53, ಬೇರ್ ಸ್ಟೋ 53, ಆರ್.ಅಶ್ವಿನ್ 67ಕ್ಕೆ 5, ಶಮಿ 28ಕ್ಕೆ 1)

ಭಾರತ ಎರಡನೇ ಇನಿಂಗ್ಸ್ 204 (ಕೊಹ್ಲಿ 81, ಜಯಂತ್ ಅಜೇಯ 27, ರಹಾನೆ 26, ರಶೀದ್ 82ಕ್ಕೆ 4, ಬ್ರಾಡ್ 33ಕ್ಕೆ 4)

ಇಂಗ್ಲೆಂಡ್ ಎರಡನೇ ಇನಿಂಗ್ಸ್ 158 (ಕುಕ್ 54, ಬೇರ್ ಸ್ಟೋ 34, ರೂಟ್ 25, ಜಯಂತ್ 30ಕ್ಕೆ 3, ಅಶ್ವಿನ್ 52ಕ್ಕೆ 3)

Leave a Reply