ಭಾರತದ ಮೂವರು ಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಕ್ ಸೇನೆ, ತಕ್ಕ ಶಾಸ್ತಿ ಮಾಡದೇ ಬಿಡಲ್ಲ ಎಂದಿದೆ ಭಾರತೀಯ ಸೇನೆ

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕ್ ಸೈನಿಕರ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದೆ. ಮಂಗಳವಾರ ಮಧ್ಯಾಹ್ನ ಪಾಕಿಸ್ತಾನ ಸೇನಾ ಕಮಾಂಡೊಗಳು ಮೂವರು ಭಾರತೀಯ ಸೈನಿಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಸೈನಿಕನ ಶಿರಚ್ಛೇದ ಮಾಡಲಾಗಿದೆ.

ಈ ಬಗ್ಗೆ ಸೇನಾ ಮುಖ್ಯಸ್ಥರು ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಅವರಿಗೆ ಮಾಹಿತಿ ನೀಡಿದ್ದು, ಸೇನೆಗೆ ತಕ್ಕ ಉತ್ತರ ನೀಡುವಂತೆಯೂ ಸೂಚನೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ಪಾಕಿಸ್ತಾನ ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಇಂತಹ ಉದ್ಧಟತನ ಪ್ರದರ್ಶಿಸಿದೆ.

ಕಾಶ್ಮೀರದ ಮಚಲ್ ಪ್ರದೇಶದಲ್ಲಿರುವ ಗಡಿ ನಿಯಂತ್ರಣಾ ರೇಖೆ ಬಳಿ ಪಾಕಿಸ್ತಾನ ಸೇನೆ ಈ ಕೃತ್ಯ ಎಸಗಿದೆ. ಇದರಿಂದ ಭಾರತೀಯ ಸೇನೆ ಕೆಂಡಾಮಂಡಲವಾಗಿದ್ದು, ‘ಪಾಕಿಸ್ತಾನದ ಈ ದಾಳಿಗೆ ಭಾರತ ತಕ್ಕ ಪ್ರತೀಕಾರ ತೀರಿಸಿಕೊಳ್ಳಲಿದೆ. ಇದಕ್ಕೆ ನಾವು ಅವರಿಗೆ ತಕ್ಕ ಉತ್ತರ ನೀಡಲಿದ್ದೇವೆ’ ಎಂದು ಭಾರತೀಯ ಸೇನೆ  ಪ್ರಕಟಿಸಿದೆ.

ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಗಡಿ ಪಡೆಯು ಈ ಕೃತ್ಯ ನಡೆಸಿ ಪರಾರಿಯಾಗಿದೆ. ಕಳೆದ ತಿಂಗಳು ಉಗ್ರರು ಪಾಕಿಸ್ತಾನದ ಸೇನೆಯ ಗುಂಡಿನ ದಾಳಿಯ ರಕ್ಷಣೆಯಲ್ಲಿ ಭಾರತೀಯ ಸಿಪಾಯಿ ಮಂದೀಪ್ ಸಿಂಗ್ ಮೇಲೆ ಇದೇ ರೀತಿ ದಾಳಿ ಮಾಡಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗಿದ್ದರು.

ಇಬ್ಬರು ಉಗ್ರರ ಹತ್ಯೆ…

ಮತ್ತೊಂದೆಡೆ ಜಮ್ಮು ಕಾಶ್ಮೀರದ ಬಂಡಿಪೋರಾ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ಪೊಲೀಸರು ಮಂಗಳವಾರ ಬೆಳಗಿನ ಜಾವ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರಿದ್ದ ಜಾಗವನ್ನು ಪತ್ತೆ ಹಚ್ಚಿದ ಭದ್ರತಾ ಪಡೆ ಎಲ್ಲ ಕಡೆಗಳಿಂದಲೂ ಸುತ್ತುವರಿದು ಗುಂಡಿನ ದಾಳಿ ನಡೆಸಿತು. ಪರಿಣಾಮ ಉಗ್ರರಿಗೆ ತಪ್ಪಿಸಿಕೊಳ್ಳುವ ಅವಕಾಶವಿಲ್ಲದೆ ಭಾರತ ಸೇನೆಯ ಗುಂಡಿಗೆ ಸತ್ತರು. ಇವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಚ್ಚರಿ ಎಂಬಂತೆ ಉಗ್ರರ ಬಳಿ ₹ 2000 ಮುಖಬೆಲೆಯ ಹೊಸ ನೋಟು ಸಹ ಸಿಕ್ಕಿದೆ. ದೇಶದ ಜನರು ಬ್ಯಾಂಕುಗಳ ಮುಂದೆ ಇನ್ನು ಕ್ಯೂನಲ್ಲಿ ನಿಂತು ಹೊಸ ನೋಟುಗಳನ್ನು ಪಡೆಯುತ್ತಿರುವಾಗ ಉಗ್ರರಿಗೆ ಅದಾಗಲೇ ಹೊಸ ನೋಟುಗಳು ಹೇಗೆ ತಲುಪಿವೆ, ಕಣಿವೆಯ ನಾಗರಿಕರೊಂದಿಗೆ ಅವರು ಹೊಂದಿರುವ ಸಂಪರ್ಕ ಎಷ್ಟು ಗುರುತರವಾದದ್ದು ಎಂಬ ಪ್ರಶ್ನೆಗಳು ಮೂಡಿವೆ.

Leave a Reply