ಉಪ ಚುನಾವಣೆಗಳಲ್ಲಿ ಅರಳಿತು ಕಮಲ, ನೋಟು ರದ್ದತಿಯಿಂದ ಸಂಕಷ್ಟಕ್ಕೀಡಾದ ಸಾಮಾನ್ಯರು ಮೋದಿಗೆ ಬುದ್ಧಿ ಕಲಿಸ್ತಾರೆ ಎಂಬ ವಾದವೀಗ ವಿಲವಿಲ!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರದ ನೋಟು ರದ್ದತಿಯ ನಿರ್ಧಾರವನ್ನು ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಒಟ್ಟಾಗಿ ವಿರೋಧಿಸುತ್ತಿವೆ. ಅಷ್ಟೇ ಅಲ್ಲದೆ ಪೂರ್ವ ತಯಾರಿ ಇಲ್ಲದೆ ತೆಗೆದುಕೊಂಡ ಈ ನಿರ್ಧಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇಂತಹ ಮಹತ್ವದ ಸಂದರ್ಭದಲ್ಲಿ ನಡೆದ 6 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿಧಾನಸಭೆ ಮತ್ತು ಲೋಕಸಭೆಯ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜನರ ವಿಶ್ವಾಸ ಗಳಿಸಿ ಬೀಗುತ್ತಿದೆ.

ತನ್ನ ಆಳ್ವಿಕೆಯ ನೆಲವಾದ ಮಧ್ಯಪ್ರದೇಶ ಮತ್ತು ಅಸ್ಸಾಂಗಳಲ್ಲಿ ಬಿಜೆಪಿ ಸ್ಥಾನ ಉಳಿಸಿಕೊಂಡಿರುವುದಲ್ಲದೇ ಈಶಾನ್ಯ ರಾಜ್ಯದಲ್ಲಿ ತನ್ನ ಮತ ಪ್ರಮಾಣ ಹೆಚ್ಚಾಗುತ್ತಿರುವುದನ್ನೂ ಸಾಬೀತು ಮಾಡಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ಸಿನ ಚುನಾವಣಾ ಸಾಧನೆ ಹೀನಾಯವಾಗಿ ಕುಸಿದಿದೆ.

ಮಧ್ಯ ಪ್ರದೇಶದ ವಿಧಾನಸಭಾ ಕ್ಷೇತ್ರವಾದ ನೆಪನಗರ್ ಹಾಗೂ ಲೋಕಸಭೆಯ ಶಹದೊಲ್ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಂಪಾದಿಸಿದೆ. ಶಹದೊಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಗ್ಯಾನ್ ಸಿಂಗ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಹಿಮಾದ್ರಿ ಸಿಂಗ್ ಅವರನ್ನು 58,000 ಮತಗಳ ಅಂತರದಲ್ಲಿ ಮಣಿಸಿದ್ದಾರೆ. ಇನ್ನು ನೆಪನಗರ್ ಕ್ಷೇತ್ರದ ಬಿಜೆಪಿ ಶಾಸಕ ರಾಜೇಂದ್ರ ದಾದು ಅಪಘಾತದಲ್ಲಿ ಮೃತಪಟ್ಟಿದ್ದರ ಪರಿಣಾಮ ಇಲ್ಲಿ ಉಪ ಚುನಾವಣೆ ಎದುರಾಗಿತ್ತು. ಇಲ್ಲಿ ದಾದು ಅವರ ಪುತ್ರಿ ಮಂಜು ದಾದು ಬಿಜೆಪಿ ಪರ ಸ್ಪರ್ಧಿಸಿ 42,000 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂತರ್ ಸಿಂಗ್ ವಿರುದ್ಧ ಜಯಿಸಿದ್ದಾರೆ.

ಅಸ್ಸಾಂನಲ್ಲಿ ಆಡಳಿತರೂಢ ಬಿಜೆಪಿ ಅಭ್ಯರ್ಥಿ ಪ್ರಧಾನ್ ಬೌರಾ ತಮ್ಮ ಪ್ರತಿಸ್ಫರ್ಧಿ ಕಾಂಗ್ರೆಸ್ ನ ಹೇಮಾ ಪ್ರಸಾಂಗ ಪೆಗು ವಿರುದ್ಧ 1.42 ಲಕ್ಷ ಮತಗಳ ಅಂತರದ ಮುನ್ನಡೆಯಲ್ಲಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಖಲಿಖೊ ಪೌಲ್ ಅವರ ಮೂರನೇ ಪತ್ನಿ ದಾಸಾಂಗ್ಲೂ ಪೌಲ್ ಪಕ್ಷೇತ್ರ ಅಭ್ಯರ್ಥಿ ಯೊಂಪಿ ಕ್ರಿ ವಿರುದ್ಧ ಸ್ಪರ್ಧಿಸಿದ್ದು ಫಲಿತಾಂಶ ಬಾಕಿ ಇದೆ. ಮುಖ್ಯಮಂತ್ರಿಯಾಗುತ್ತಲೇ ಸೊನೊವಾಲ್ ತೆರವುಗೊಳಿಸಿದ್ದ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಹೆಚ್ಚಿನ ಅಂತರದಲ್ಲಿ ದಾಪುಗಾಲಿಟ್ಟಿತು.

ಅರುಣಾಚಲದಲ್ಲಿ ಸಹ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುಂದಿದ್ದಾರೆ.

ಈಶಾನ್ಯ ಭಾಗದ ತ್ರಿಪುರಾದಲ್ಲಿನ ಎರಡು ಕ್ಷೇತ್ರಗಳನ್ನು ಆಡಳಿತ ಪಕ್ಷವಾಗಿರೋ ಸಿಪಿಐಎಂ ಗೆದ್ದುಕೊಂಡಿದೆ. ಬರ್ಜಾಲ ಮತ್ತು ಖೊವಾಯ್ ಕ್ಷೇತ್ರಗಳಲ್ಲಿ ಸಿಪಿಐಎಂ ನಿರೀಕ್ಷೆಯಂತೆ ಜಯ ಸಾಧಿಸಿದೆ. ಇಲ್ಲಿ ಬಿಜೆಪಿಗೆ ಜಯದ ನಿರೀಕ್ಷೆಯೇ ಇರಲಿಲ್ಲವಾದ್ದರಿಂದ ಹಿನ್ನಡೆ ಪ್ರಶ್ನೆ ಇಲ್ಲ. ಆದರೆ ಎಡಪಕ್ಷದ ಗೆಲುವಿನ ಅಂತರವನ್ನು ಗಣನೀಯವಾಗಿ ಕುಗ್ಗಿಸಿರುವುದು ಹಾಗೂ ಕಾಂಗ್ರೆಸ್ ಅನ್ನು ಲೆಕ್ಕಕ್ಕೇ ಇಲ್ಲದಷ್ಟು ದೂರ ತಳ್ಳಿರುವುದು ಇಲ್ಲಿ ಬಿಜೆಪಿ ಸಾಧನೆ. ಬರ್ಜಾಲ ಕ್ಷೇತ್ರದ ಫಲಿತಾಂಶದಲ್ಲಿ ಸಿಪಿಐಎಂ ಅಭ್ಯರ್ಥಿ ಝುಮು ಸರ್ಕಾರ್ 15,769 ಮತಗಳನ್ನು ಪಡೆದು, ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ(12,395)ಯನ್ನು 3,374 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ ಎಂಬುದು ಗಮನಾರ್ಹ. ಉಳಿದಂತೆ ಈ ಕ್ಷೇತ್ರದಲ್ಲಿ ಟಿಎಂಸಿ 5,629 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಕೇವಲ 804 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರೋ ಅಂಶ ಎಂದರೆ, ಕಳೆದ ಬಾರಿ ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದು ಕಾಂಗ್ರೆಸ್ ಪಕ್ಷದ ಜಿತೇಂದ್ರ ಸರ್ಕಾರ್. ಹೀಗಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದಿರಲಿ, ಎರಡನೇ ಸ್ಥಾನವನ್ನು ಪಡೆಯಲು ವಿಫಲವಾಗಿದೆ. ಎಡಪಂಥಿಯರ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿ ಕಡಿಮೆ ಅಂತರದಿಂದ ಸೋಲನುಭವಿಸಿದ್ದರೂ ಕಾಂಗ್ರೆಸ್ ಹಾಗೂ ಟಿಎಂಸಿ ಪಕ್ಷವನ್ನು ಭಾರಿ ಅಂತರದಿಂದ ಹಿಂದಿಕ್ಕಿರುವುದು ಪಕ್ಷಕ್ಕೆ ಸಕಾರಾತ್ಮಕ ಬೆಳವಣಿಗೆಯೇ ಸರಿ. ಅದರೊಂದಿಗೆ ದೇಶದಲ್ಲಿ ಕಾಂಗ್ರೆಸ್ ಪತನದ ಸರಣಿ ಮುಂದುವರಿದಂತಾಗಿದೆ. ಖೊವಾಯ್ ಕ್ಷೇತ್ರವನ್ನು ಗಮನಿಸೋದಾದ್ರೆ, ಇಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಿರಲಿಲ್ಲ. ಉಳಿದಂತೆ ಸಿಪಿಐಎಂನ ಬಿಸ್ವಜಿತ್ ದತ್ ಟಿಎಂಸಿ ಅಭ್ಯರ್ಥಿ ಮನೋಜ್ ದಾಸ್ ಅವರನ್ನು 16,047 ಮತಗಳ ಅಂತರದಲ್ಲಿ ಮಣಿಸಿದ್ದಾರೆ.

ಉಳಿದಂತೆ ತಮಿಳುನಾಡಿನ ತಾಂಜಾವೂರ್ ಕ್ಷೇತ್ರದಲ್ಲಿ ಎಐಎಡಿಎಂಕೆ 26,483 ಮತಗಳ ಅಂತರದಲ್ಲಿ ಜಯ ಸಾಧಿಸಿದರೆ, ತಿರುಪ್ಪರಂಕುಂಡ್ರಂ ಮತ್ತು ಅರವಂಕುರಿಚಿ ಕ್ಷೇತ್ರಗಳಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳು ಜಯದ ಸಮೀಪದಲ್ಲಿದ್ದಾರೆ. ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಎಐಎಡಿಎಂಕೆ ವಿರುದ್ಧ ಗೆದ್ದುಕೊಂಡಿದ್ದಾರೆ. ಇನ್ನು ನೆಲ್ಲಿತೋಪು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.

ಪಶ್ಚಿಮ ಬಂಗಾಳದ ತಂಲೂಕ್ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ದಿಬ್ಯೆಂಡು ಅಧಿಕಾರಿ ತಮ್ಮ ಎದುರಾಳಿ ಸಿಪಿಐಎಂನ ಮಂದಿರಾ ಪಾಂಡ ವಿರುದ್ಧ 4.97 ಲಕ್ಷ ಮತಗಳಿಂದ ಜಯಿಸಿದ್ದಾರೆ. ಇನ್ನು ಮೊಂಟೇಶ್ವರ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಸೈಕತ್ ಪಂಜಾ 1.27 ಲಕ್ಷ ಮತಘಲಿಂದ ಸಿಪಿಐಎಂ ಅಭ್ಯರ್ಥಿ ಮೊಹಮದ್ ಹೊಸ್ಮಾನ್ ಗನಿ ವಿರುದ್ಧ ಗೆದ್ದಿದ್ದಾರೆ. ಇನ್ನು ಕೂಚ್ ಬೆಹರ್ ಕ್ಷೇತ್ರದಲ್ಲಿ ಟಿಎಂಸಿಯ ಪಾರ್ಥಪ್ರತಿಮ್ ಅವರು ಬಿಜೆಪಿಯ ಹೇಮಚಂದ್ರ ಬುರ್ಮನ್ ವಿರುದ್ಧ 1.2 ಲಕ್ಷ ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಒಟ್ಟಿನಲ್ಲಿ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ರದ್ದತಿಯ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ 11 ದಿನಗಳ ನಂತರ ನಡೆದ 12 ಕ್ಷೇತ್ರಗಳ ಉಪ ಚುನಾವಣೆ ಮಹತ್ವ ಪಡೆದುಕೊಂಡಿತ್ತು. ಆಡಳಿತಾರೂಢ ಪಕ್ಷಗಳು ಆಯಾ ಪ್ರದೇಶಗಳಲ್ಲಿ ತಮ್ಮ ಹಿಡಿತ ಉಳಿಸಿಕೊಂಡಿವೆ ಎಂಬುದು ಫಲಿತಾಂಶದ ಸಾರ. ಇದರ ಜತೆಯಲ್ಲೇ, ವಿರೋಧ ಪಕ್ಷಗಳ ಟೀಕೆಯಂತೆ ಮತದಾರ ಬಿಜೆಪಿ ವಿರುದ್ಧವಾಗಿ ಫಲಿತಾಂಶ ಕೊಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ.

Leave a Reply