ನೋಟು ರದ್ದತಿ ಪ್ರತಿಪಾದಿಸಿದ ಅರ್ಥಕ್ರಾಂತಿ ವಿಚಾರವಾದಿಗಳು ಸರ್ಕಾರದ ನಿರ್ಧಾರದಿಂದ ತೃಪ್ತರಾಗಿದ್ದಾರಾ?

ಡಿಜಿಟಲ್ ಕನ್ನಡ ಟೀಮ್:

ಅನಿಲ್ ಬೊಕಿಲ್… ನೋಟು ರದ್ಧತಿಯ ನಂತರ ಮಾಧ್ಯಮಗಳಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವ ವ್ಯಕ್ತಿ. ₹500 ಮತ್ತು 1000 ನೋಟುಗಳ ರದ್ದತಿಯನ್ನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಂತಹ ವ್ಯಕ್ತಿ ಬೊಕಿಲ್. ಈಗ ಸರ್ಕಾರ ನೋಟು ರದ್ದತಿ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಅರ್ಥಕ್ರಾಂತಿ ವಿಚಾರವಾದಿ ಕುರಿತು ಸಹಜವಾಗಿಯೇ ಚರ್ಚೆಯಾಗುತ್ತಿದೆ.

ಪ್ರಸ್ತುತ ಸಂದರ್ಭದಲ್ಲಿ ಈ ವ್ಯಕ್ತಿಯ ಕುರಿತಾದ ಚರ್ಚೆ ಪ್ರಾಮುಖ್ಯತೆ ಪಡೆಯಲು ಕಾರಣವಿದೆ. ಅದೇನಂದ್ರೆ, 2013ರ ಜುಲೈನಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೊಕಿಲ್ ಅವರನ್ನು ಭೇಟಿ ಮಾಡಿದ್ದರು. ಅರ್ಥಕ್ರಾಂತಿಯ ವಿಚಾರಗಳನ್ನು ಇಟ್ಟುಕೊಂಡು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಬೊಕಿಲ್ ಮೋದಿ ಅವರಿಂದ 10 ನಿಮಿಷಗಳ ಕಾಲ ಭೇಟಿಗೆ ಅವಕಾಶ ಪಡೆದಿದ್ದರು. ಆದರೆ ಇವರ ಸವಿಸ್ತಾರ ಅರ್ಥಕ್ರಾಂತಿಯ ಕುರಿತಾದ ವಿಷಯವನ್ನು ಕೇಳಿದ ಮೋದಿ 10 ನಿಮಿಷಗಳ ಕಾಲದ ಭೇಟಿಯನ್ನು 90 ನಿಮಿಷಗಳವರೆಗೂ ವಿಸ್ತರಿಸಿದ್ದರು. ಈ ಚರ್ಚೆಯ ವೇಳೆ ಬೊಕಿಲ್ ನೋಟು ರದ್ದತಿಯ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸದ್ಯ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೇ ನೋಟು ರದ್ದತಿ ತೀರ್ಮಾನದಿಂದ ಅನಿಲ್ ಬೊಕಿಲ್ ಹಾಗೂ ಇತರೆ ಅರ್ಥಕ್ರಾಂತಿ ವಿಚಾರವಾದಿಗಳು ಸಂಪೂರ್ಣವಾಗಿ ತೃಪ್ತರಾಗಿದ್ದಾರಾ ಎಂಬ ಪ್ರಶ್ನೆ ಹುಟ್ಟೋದು ಸಹಜ. ಆದರೆ ಈ ಪ್ರಶ್ನೆಗೆ ಸಿಗುವ ಉತ್ತರ ‘ಅಷ್ಟೇನೂ ಇಲ್ಲ’ ಎಂದು. ಹಾಗಾದರೆ ಅರ್ಥಕ್ರಾಂತಿ ಪ್ರತಿಪಾದನೆಗೂ ಹಾಗೂ ಸದ್ಯ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೂ ಇರುವ ವ್ಯತ್ಯಾಸವಾದರೂ ಏನು? ಈ ಬಗ್ಗೆ ಅರ್ಥಕ್ರಾಂತಿ ವಿಚಾರವಾದಿಗಳು ಹೇಳುವ ಪ್ರಮುಖ ಅಂಶಗಳೇನು ಎಂಬುದು ಇಲ್ಲಿದೆ ನೋಡಿ…

  • ಮೋದಿ ಉತ್ತಮ ನಾಯಕ ನಿಜ. ಆದರೆ, ಸದ್ಯ ತೆಗೆದುಕೊಂಡಿರುವ ನೋಟು ಬದಲಾವಣೆ ನಮ್ಮ ಸಲಹೆಯಲ್ಲ. ನಾವು ದೊಡ್ಡ ಮೊತ್ತದ ನೋಟುಗಳನ್ನು ರದ್ದು ಮಾಡಿ ಎಂದು ಹೇಳಿದ್ದೆವು. ಆದರೆ, ಹೊಸ ನೋಟುಗಳನ್ನು ಬದಲಿಯಾಗಿಸುವಂತೆ ಹೇಳಿರಲಿಲ್ಲ.
  • ದೇಶದ ಶೇ.85 ರಷ್ಟು ನಗದು ₹500 ಮತ್ತು 1000 ನೋಟುಗಳಲ್ಲೇ ಇವೆ. ಸರ್ಕಾರ ಈ ಎಲ್ಲಾ ನೋಟುಗಳನ್ನು ಒಟ್ಟಿಗೆ ಬ್ಯಾನ್ ಮಾಡಬಾರದಿತ್ತು. ಈ ನಿಟ್ಟಿನಲ್ಲಿ ಅರ್ಥಕ್ರಾಂತಿಯ ಯೋಚನೆಯೇ ಬೇರೆ.
  • ಸದ್ಯ ದೇಶದಲ್ಲಿರುವ ತೆರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದು ಮಾಡಿ ಕೇವಲ ಸರಕು ಸೇವೆಗಳನ್ನು ಮಾತ್ರ ವಿಧಿಸಬೇಕು ಎಂಬುದು ನಮ್ಮ ಸಲಹೆ. ಸದ್ಯ ಇರುವ ನೇರ ಹಾಗೂ ಪರೋಕ್ಷ ತೆರಿಗೆಯನ್ನು ಬ್ಯಾಂಕಿನ ವಹಿವಾಟು ತೆರಿಗೆ (ಬಿಟಿಟಿ)ಗೆ ಬದಲಿಸಬೇಕಿತ್ತು. ಬಿಬಿಟಿ ಜಾರಿಯಾಗಿದ್ದರೆ, ಸದ್ಯ ಬ್ಯಾಂಕು ಖಾತೆ ಹೊಂದಿರುವವರೆ ಸಾಕಷ್ಟು ಸರ್ಕಾರದ ಬೊಕ್ಕಸಕ್ಕೆ ಹಣ ಆದಾಯ ನೀಡುತ್ತಿದ್ದರು.
  • ಬಡವರ ಬಳಿ ಹೆಚ್ಚಿನ ಹಣ ಇರುವುದಿಲ್ಲ ಹೀಗಾಗಿ ಅವರು ಬ್ಯಾಂಕಿನ ಖಾತೆ ಹೊಂದಿರುವುದಿಲ್ಲ. ಹೀಗಾಗಿ ₹50 ಗಿಂತ ಹೆಚ್ಚಿನ ಮುಖಬೆಲೆ ನೋಟುಗಳನ್ನು ಬಳಸದೇ ಇದ್ದರೆ, ಹೆಚ್ಚು ಹಣವಿರುವವರು ಬ್ಯಾಂಕಿನ ಮೂಲಕ ವ್ಯವಹಾರ ಮಾಡುತ್ತಾರೆ. ಇನ್ನು ಬಡವರು ಕಡಿಮೆ ಮೌಲ್ಯದ ಹಣದಲ್ಲೇ ವ್ಯವಹಾರ ನಡೆಸಲು ಯಾವುದೇ ತೊಂದರೆ ಇರುವುದಿಲ್ಲ.
  • ಅರ್ಥಕ್ರಾಂತಿಯು  ಬಡ್ಡಿದರವನ್ನು ಕಡಿಮೆ ಮಾಡಲು ಎದುರು ನೋಡುತ್ತದೆ. ಬಂಡವಾಳ ಸಂಗ್ರಹವು ಹಂಚಿಕೆಯಾಗಬೇಕು ಎಂಬುದು ಇದರ ಧ್ಯೇಯ.
  • ದೇಶದ ಶೇ.70 ರಷ್ಟು ಜನರು ನಿತ್ಯ 1.90 ಅಮೆರಿಕನ್ ಡಾಲರ್ ನಷ್ಟು ದುಡಿಯುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಕೇವಲ 3-4 ರಷ್ಟು ಜನರು ಮಾತ್ರ ತೆರಿಗೆ ಕಟ್ಟುತ್ತಿದ್ದಾರೆ.
  • ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕಳ್ಳನೋಟುಗಳನ್ನು ಎದುರಿಸುವುದಕ್ಕೆ ಈಗಿನ ಕ್ರಮ ಸಶಕ್ತವಾಗಿದೆ. ಆದರೆ ಹೆಚ್ಚಿನ ಮೊತ್ತದ ಮುಖಬೆಲೆ ನೋಟುಗಳನ್ನು ಮತ್ತೆ ಪರಿಚಯಿಸಿರುವುದರಿಂದ ಕಪ್ಪುಹಣವು ಶೇಖರವಾಗುವುದನ್ನು ತಡೆಯಲು ಇದೇನೂ ಪರಿಣಾಮಕಾರಿ ಅಲ್ಲ ಎಂಬುದು ಬೊಕಿಲ್ ಪ್ರತಿಪಾದನೆ.

Leave a Reply