ಬೀಜಿಂಗ್- ಲಂಡನ್ ಒಲಿಂಪಿಕ್ಸ್ ಡೋಪಿಂಗ್ ಪರೀಕ್ಷೆಲಿ ಸಿಕ್ಕಿಬಿದ್ದವರ ಸಂಖ್ಯೆ 75, ಕ್ರೀಡಾ ಇತಿಹಾಸದ ಮಹಾಕಂಪನವಿದು

ಡಿಜಿಟಲ್ ಕನ್ನಡ ಟೀಮ್:

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 2008ರ ಬೀಜಿಂಗ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ರಕ್ತ ಹಾಗೂ ಮೂತ್ರದ ಮಾದರಿಯನ್ನು ಹೊಸ ಪರೀಕ್ಷಾ ವಿಧಾನಕ್ಕೆ ಒಳಪಡಿಸುವ ನಿರ್ಧಾರ ಹೊಸ ಸಂಚಲನ ಮೂಡಿಸಿರೋದು ಗೊತ್ತಿರುವ ವಿಚಾರ. ಆದರೆ ಈ ಪರೀಕ್ಷೆಯಿಂದ ಅನೇಕ ಸ್ಪರ್ಧಿಗಳು ಸಿಕ್ಕಿ ಬಿದ್ದಿರುವ ಪರಿಣಾಮ ಒಲಿಂಪಿಕ್ಸ್ ಇತಿಹಾಸ ಪುಟಗಳನ್ನು ತಿದ್ದುವಂತೆ ಮಾಡಿದೆ.

ಈ ಎರಡು ಆವೃತ್ತಿಗಳಿಂದ ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದಿರುವ ಒಟ್ಟು ಅಥ್ಲೀಟ್ ಗಳ ಸಂಖ್ಯೆ ಬರೋಬ್ಬರಿ 75. ಆ ಪೈಕಿ ರಷ್ಯಾ ಹಾಗೂ ಪೂರ್ವ ಯೂರೋಪಿಯನ್ ರಾಷ್ಟ್ರಗಳ ಅಥ್ಲೀಟ್ ಗಳೇ ಹೆಚ್ಚು. ಅಷ್ಟೇ ಅಲ್ಲ ಈ ಎರಡು ಒಲಿಂಪಿಕ್ಸ್ ನಿಂದ ಒಟ್ಟು 40 ಪದಕ ವಿಜೇತರು ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ಪದಕ ಪಟ್ಟಿಗಳು ಸಹಜವಾಗಿಯೇ ಬದಲಾಗುತ್ತವೆ. ಅದಕ್ಕೆ ಉತ್ತಮ ಉದಾಹರಣೆ, ಭಾರತದ ಕುಸ್ತಿಪಟು ಯೋಗೇಶ್ವರ್ ದತ್ 2012ರ ಒಲಿಂಪಿಕ್ಸ್ ನಲ್ಲಿ ಕಂಚು ಪಡೆದಿದ್ದ ಪದಕ ಬೆಳ್ಳಿಯಾಗಿ ಬದಲಾಗಿದ್ದು.

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಈವರೆಗೂ ಸಿಕ್ಕಿ ಬಿದ್ದ ಅಥ್ಲೀಟ್ ಗಳ ಪೈಕಿ ಕಳೆದ ವಾರವಷ್ಟೇ 16 ಮಂದಿಗೆ ಶಿಕ್ಷೆ ಪ್ರಕಟಿಸಿತ್ತು. ಇನ್ನು ಸೋಮವಾರ ಮತ್ತೆ 12 ಅಥ್ಲೀಟ್ ಗಳಿಗೆ ಶಿಕ್ಷೆ ವಿಧಿಸಿದೆ.

ಬೀಜಿಂಗ್ ಹಾಗೂ ಲಂಡನ್ ಕ್ರೀಡಾಕೂಟಗಳಲ್ಲಿ ಅಥ್ಲೀಟ್ ಗಳಿಂದ ಅಚ್ಚರಿಯ ಫಲಿತಾಂಶಗಳು ಹೊರಬಂದಿದ್ದವು. ಅದರಲ್ಲೂ ರಷ್ಯಾ ಹಾಗೂ ಇತರೆ ದೇಶದ ಸ್ಪರ್ಧಿಗಳು ಎರಡು ಹಾಗೂ ಎರಡಕ್ಕಿಂತ ಹೆಚ್ಚಿನ ಪದಕಗಳನ್ನು ಬಾಚಿಕೊಂಡಿದ್ದರು. ಈಗ ಮಾಡಲಾಗಿರುವ ಮರುಪರೀಕ್ಷೆಯಲ್ಲಿ 40ಕ್ಕೂ ಹೆಚ್ಚು ಪದಕ ವಿಜೇತರು ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವ ಪರಿಣಾಮ ಆ ಪದಕ ವಿಜೇತ ಸ್ಪರ್ಧೆಗಳಲ್ಲಿ ಕಡಿಮೆ ಅಂತರದಲ್ಲಿ ಪದಕ ವಂಚಿತರಾದವರೂ ಈಗ ಪದಕಕ್ಕೆ ಬಡ್ತಿ ಪಡೆಯುವ ನಿರೀಕ್ಷೆ ಇದೆ. ಕೆಲವು ಸ್ಪರ್ಧೆಗಳಲ್ಲಿ ಅಗ್ರ ಮೂರು ಸ್ಥಾನ ಪಡೆದ ಅಥ್ಲೀಟ್ ಗಳು ಸಿಕ್ಕಿ ಬಿದ್ದಿರುವುದರಿಂದ 6ನೇ ಸ್ಥಾನ ಪಡೆದ ಅಥ್ಲೀಟ್ ಸಹ ಪದಕ ಪಡೆಯಲಿದ್ದಾರೆ ಎಂದು ಐಒಸಿ ಮೂಲಗಳು ಮಾಹಿತಿ ನೀಡಿವೆ.

ಈ ಹೊಸ ಪರೀಕ್ಷಾ ವಿಧಾನ ಕೇವಲ ಫಲಿತಾಂಶ ಹಾಗೂ ಪದಕದ ಪಟ್ಟಿಯ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಕ್ರೀಡೆ ಹಾಗೂ ಒಲಿಂಪಿಕ್ಸ್ ಕ್ರೀಡಾಕೂಟದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ. ಮೋಸದಾಟ ಹಾಗೂ ಡೋಪಿಂಗ್ ನಂತಹ ಪ್ರಕರಣಗಳು ಸದ್ಯ ಕ್ರೀಡೆಗೆ ಮಾರಕವಾಗಿ ಪರಿಗಣಿಸುತ್ತಿರುವ ಪ್ರಮುಖ ಅಂಶಗಳು. ಪದೇ ಪದೇ ಡೋಪಿಂಗ್ ಪ್ರಕರಣಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಷ್ಠಿತ ಟೂರ್ನಿಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲಿವೆ ಎಂಬುದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ  ದೊಡ್ಡ ಆತಂಕ. ಹೀಗಾಗಿ ಕಳ್ಳಾಟ ಹಾಗೂ ವಂಚನೆಯ ಮೂಲಕ ಪದಕ ಗೆದ್ದವರನ್ನು ಪತ್ತೆ ಹಚ್ಚಿ ಶಿಕ್ಷಿಸುವುದರಿಂದ ಮುಂದಿನ ದಿನಗಳಲ್ಲಿ ಬರುವ ಸ್ಪರ್ಧಿಗಳಿಗೆ ಎಚ್ಚರಿಕೆ ರವಾನಿಸುವುದು ಹಾಗೂ ಅಭಿಮಾನಿಗಳ ವಿಶ್ವಾಸ ಮತ್ತೆ ಸಂಪಾದಿಸುವುದು ಐಒಸಿ ಈ ಪ್ರಯತ್ನದ ಉದ್ದೇಶವಾಗಿದೆ.

Leave a Reply