ವಿಧಾನ ಮಂಡಲ ಚಳಿಗಾಲ ಅಧಿವೇಶನದ ಎರಡನೇ ದಿನ ಏನೇನಾಯ್ತು?, ಪ್ರಧಾನಿ ಸಂಸತ್ತಲ್ಲಿ ಮಾತಾಡಲೆಂದ ಪ್ರತಿಪಕ್ಷಗಳು- ಆ್ಯಪ್ ನಲ್ಲೇ ಮಾತಾಡುವ ಮಾರ್ಗದತ್ತ ಮೋದಿ, ಭಾಸ್ಕರ್ರಾವ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ಬಾಲಮುರಳಿಕೃಷ್ಣ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ವಿಧಾನ ಮಂಡಲ ಚಳಿಗಾಲದ ಅಧಿವೇಶನದ ಎರಡನೇ ದಿನ ಸ್ವಲ್ಪ ಗಂಭೀರ ಚರ್ಚೆಗಳು ನಡೆದವು. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಗಳವಾರ ಚರ್ಚೆ, ಭರವಸೆಗಳು ಹಾಗೂ ಹೋರಾಟಗಳು ಕಂಡು ಬಂದವು. ಎರಡನೇ ದಿನ ಅಧಿವೇಶನದಲ್ಲಿ ನಡೆದ ಪ್ರಮುಖ ಅಂಶಗಳು ಹೀಗಿವೆ…

  • ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಉದ್ದೇಶದಿಂದ ರಾಜ್ಯದಲ್ಲಿ ಹೊಸದಾಗಿ 900 ಮದ್ಯದ ಅಂಗಡಿ ತೆರೆಯಲು ಸರ್ಕಾರ ನಿರ್ಧರಿಸಿರುವುದಾಗಿ ಅಬಕಾರಿ ಸಚಿವ ಎಚ್.ವೈ ಮೇಟಿ ಅವರು ಅಧಿಕೃತವಾಗಿ ಪ್ರಕಟಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಜ್ಯದ ಜನರಿಗೆ ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿ ಸರ್ಕಾರ ಮದ್ಯ ನೀಡಲು ಮುಂದಾಗುತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕುಡುಕರಿಗೆ ಇಂತಿಷ್ಟು ಕುಡಿಯಿರಿ ಎಂದು ನಿರ್ದೇಶನ ನೀಡಿಲ್ಲ. ಯಾವ ವರ್ತಕರಿಗೂ ಇಂತಿಷ್ಟೇ ಮದ್ಯ ಮಾರಾಟ ಮಾಡಬೇಕು ಎಂದು ಸೂಚನೆ ನೀಡಿಲ್ಲ ಎಂದು ಹೇಳಿದರು.
  • ಕಾವೇರಿ, ಮಹದಾಯಿ ನೀರಿನ ವಿಚಾರವಾಗಿ ನಡೆದ ಹೋರಾಟದ ಸಂದರ್ಭದಲ್ಲಿ ರೈತರು ಮತ್ತು ಕನ್ನಡ ಪರ ಹೋರಾಟಗಾರರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಗೃಹ ಸಚಿವ ಪರಮೇಶವ್ರ್ ಅವರು ಭರವಸೆ ಕೊಟ್ಟರು. ಪ್ರಶ್ನೋತ್ತರ ವೇಳೆ ಪಿ.ರಾಜು ಅವರು ಈ ವಿಚಾರ ಪ್ರಸ್ತಾಪ ಮಾಡಿದರಲ್ಲದೇ, ರೈತರ ಮೇಲೆ ಐಪಿಸಿ 436, 307, 353, 308, 309 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಡಕಾಯತಿ ಆರೋಪದಲ್ಲಿ ಜೀವಾವಧಿ ಶಿಕ್ಷೆಯಾಗುವ 397ರ ಕಾಯ್ದೆಯನ್ನು ಇವರ ಮೇಲೆ ಹೇರಲಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.
  • ಈಗಾಗಲೇ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರ ನೆರವಿಗೆ ನಿಲ್ಲುವ ಸಲುವಾಗಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಬರದ ಪರಿಸ್ಥಿತಿ ಜತೆಗೆ ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ರೈತರಿಂದ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಸಾಲ ತೀರಿಸಲಾಗದೇ 1500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
  • ಸದ್ಯ ಕೃಷಿ ಇಲಾಖೆಯಲ್ಲಿರುವ 607 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಕೆ.ಪ್ರತಾಪ ಚಂದ್ರಶೆಟ್ಟಿ ಅವರು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಕೃಷಿಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಯಾವಯಾವ ಜಿಲ್ಲೆಯಲ್ಲಿ ಹುದ್ದೆ ಖಾಲಿ ಇವೆ ಎಂಬುದರ ಮೇಲೆ ಆದ್ಯತೆ ನೀಡಲಾಗುವುದು ಎಂದರು.
  • ಅಕ್ರಮ-ಸಕ್ರಮ ಹಾಗೂ ಬಗರ್ ಹುಕುಂ ಸಾಗುವಳಿ ಮಂಜೂರಾತಿ ನಂತರ ಬಾಕಿ ಉಲಿದ ಭೂಮಿಯನ್ನು ವಸತಿ ಇಲ್ಲದವರಿಗೆ ಮತ್ತು ಭೂರಹಿತರಿಗೆ ಹಂಚಿಕೆ ಮಾಡುವ ಕುರಿತು ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಶೂನ್ಯವೇಳೆಯಲ್ಲಿ ಸ್ವಯಂ ಪ್ರೇರಿತರಾಗಿ ವಿಷಯ ಪ್ರಸ್ತಾಪಿಸಿದ ಸಿಎಂ, ಭೂರಹಿತರನ್ನು ಹಿಡುವಳಿದಾರರನ್ನಾಗಿ ಮಾಡುವ ಗುರಿ ನಮ್ಮದು ಎಂದು ಹೇಳಿದರು.
  • ಲಂಬಾಣಿ ತಾಂಡ್ಯಗಳು ಹಾಗೂ ಅನಧಿಕೃತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಆಡಳಿತ ಪಕ್ಷದ ಶಾಸಕರೇ ವಿಧಾನಸಭೆಯಲ್ಲಿ ಧರಣಿ ನಡೆಸಿದ ಪ್ರಸಂಗವೂ ನಡೆಯಿತು. ಪ್ರಶ್ನೋತ್ತರ ಕಲಾಪ ಮುಗಿದ ನಂತರ ತಾಂಡ್ಯಗಲ ವಿಷಯ ಪ್ರಸ್ತಾಪಕ್ಕೆ ಕಾಂಗ್ರೆಸ್ ಶಾಸಕ ಶಿವಮೂರ್ತಿ ಅವರು ಪ್ರಯತ್ನಿಸಿದರು. ಅದಕ್ಕೆ ಅವಕಾಶ ಸಿಗದೇ ಇದ್ದಾಗ, ‘ನಾನು ಈ ಸದನಕ್ಕೆ ಬಂದು ಮೂರು ವರ್ಷವಾಗಿದೆ. ಲಂಬಾಣಿ ತಾಂಡ್ಯಗಳು, ಹಾಡಿಗಳು, ಹಟ್ಟಿಗಳು ಖಾಸಗಿ ಮತ್ತು ಅರಣ್ಯ ಜಮೀನುಗಳಲ್ಲಿವೆ. ಅವನ್ನು ಅನಧಿಕೃತ ಎಂದು ಸರ್ಕಾರ ತೀರ್ಮಾನಿಸಿ ಮೂಲಸೌಲಭ್ಯ ಕಲ್ಪಿಸಿಲ್ಲ’ ಎಂದು ಆಕ್ರೋಶಿತರಾದರು.
  • ಬಾಂಗ್ಲಾ ಅಕ್ರಮ ವಲಸಿಗರ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ 52 ಜನರನ್ನು ಗಡಿಪಾರು ಮಾಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ವಿಧಾನ ಸಭೆಯಲ್ಲಿ ಮಾಹಿತಿ ಕೊಟ್ಟರು.

ಪ್ರತಿಪಕ್ಷಗಳ ಗದ್ದಲಕ್ಕೆ ಕಿವಿಗೊಡದ ಪ್ರಧಾನಿ ಹಿಡಿದಿರುವ ಆ್ಯಪ್ ಮಾರ್ಗ

ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ನೋಟು ಬದಲಾವಣೆಯಂಥ ದೊಡ್ಡ ನಿರ್ಧಾರದ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದರೆ, ಅತ್ತ ಪ್ರಧಾನಿ ಮಾತ್ರ ತಮ್ಮ ನರೇಂದ್ರ ಮೋದಿ ಆ್ಯಪ್ ಮೂಲಕ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿ ತಮ್ಮ ಬಿಗಿ ನಿಲುವನ್ನು ಮುಂದುವರಿಸಿದ್ದಾರೆ. ಪರಿಣಾಮ, ಸಂಸತ್ ಕಲಾಪವು ಗೊಂದಲದಲ್ಲೇ ದಿನ ದೂಡಿದೆ.

ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸಂಸತ್ತಿಗೆ ಉತ್ತರ ನೀಡದಿದ್ದರೆ ಅದು ನಿಂದನೆಯಾಗುತ್ತದೆ ಎಂಬುದು ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಎಚ್ಚರಿಕೆ. ಟಿವಿಗಳಲ್ಲಿ, ಕೋಲ್ಡ್ ಪ್ಲೋನಂಥ ಕಾರ್ಯಕ್ರಮಗಳಲ್ಲಿ ಮಾತನಾಡುವ ಪ್ರಧಾನಿಗೆ ಸಂಸತ್ತಿನಲ್ಲಿ ಮಾತನಾಡುವುದಕ್ಕೇಕೆ ಆಗುವುದಿಲ್ಲ ಎಂಬುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆ.

‘ರಾಜ್ಯಸಭೆಯಲ್ಲಿ ಸರ್ಕಾರದ ಪರ ಉತ್ತರಿಸುವುದಕ್ಕೆ ವಿತ್ತ ಸಚಿವನಾಗಿ ಮುಂದಾದಾಗ ಪ್ರತಿಪಕ್ಷಗಳು ಸಹಕರಿಸಲಿಲ್ಲ. ಇವರಿಗೆ ಬೇಕಿರುವುದು ಚರ್ಚೆ ಅಲ್ಲ.’ ಎಂಬುದು ಅರುಣ್ ಜೇಟ್ಲಿ ಅವರ ಪ್ರತಿಕ್ರಿಯೆ.

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ನಿರೀಕ್ಷೆಯಂತೆ ಪ್ರಧಾನಿ ಮೋದಿ ಅವರ ಕ್ರಮವನ್ನು ಬೆಂಬಲಿಸಿ ಕೊಂಡಾಡಲಾಯಿತು. ‘ಕಾಳಧನ, ಖೋಟಾನೋಟು, ಉಗ್ರರಿಗೆ ಹಣ ಸಂದಾಯ ಇವನ್ನೆಲ್ಲ ಎದುರಿಸುವ ನಿಟ್ಟಿನಲ್ಲಿ ನೋಟು ಬದಲಾವಣೆ ಕೇವಲ ಒಂದು ಹೆಜ್ಜೆ. ಅತಿದೊಡ್ಡ ಹೋರಾಟವೊಂದರ ಮೊದಲ ಚರಣವಿದು’ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ, ಮುಂಬರುವ ದಿನಗಳಲ್ಲಿ ಬಿಗಿಗೊಳ್ಳಲಿರುವ ಕ್ರಮಗಳ ಸೂಚನೆಯನ್ನು ಮತ್ತೆ ಮತ್ತೆ ಗಟ್ಟಿಮಾಡಿದ್ದಾರೆ.

ನೋಟು ಬದಲಾವಣೆ ಬಗ್ಗೆ ಜನರ ಅಭಿಮತವನ್ನು ನೇರವಾಗಿ ಪಡೆಯುವ ಆಶಯ ತಮ್ಮದೆಂದಿರುವ ಮೋದಿ, ತಮ್ಮ ನರೇಂದ್ರಮೋದಿ ಆ್ಯಪ್ ನಲ್ಲಿ ಆ ಬಗ್ಗೆ ಸಮೀಕ್ಷೆ ಕೈಗೊಂಡು ಜನರನ್ನು ಭಾಗವಹಿಸುವಂತೆ ಕೇಳಿಕೊಂಡಿದ್ದಾರೆ. ಇಲ್ಲಿ ಅನೇಕ ಪ್ರಶ್ನೆಗಳಿದ್ದು ಅವುಗಳಿಗೆ ನೀಡಲಾಗಿರುವ ಆಯ್ಕೆಗಳ ಮುಂದೆ ಗುರುತು ಮಾಡಿ ಅಭಿಪ್ರಾಯ ದಾಖಲಿಸುವ ಅವಕಾಶವಿದೆ. ಕಾಳಧನ ಒಂದು ದೊಡ್ಡ ಸಮಸ್ಯೆ ಎಂಬುದನ್ನು ಒಪ್ಪುತ್ತೀರಾ? ನೋಟು ಬದಲಾವಣೆ ಬಗ್ಗೆ ನಿಮ್ಮ ಅನುಭವವೇನು ಎಂಬ ಪ್ರಶ್ನೆಗಳ ಜತೆಯಲ್ಲಿ, ರಾಜಕೀಯ ಗುರಿಯ ಪ್ರಶ್ನೆಗಳೂ ಸಮೀಕ್ಷಾ ಮಾದರಿಯಲ್ಲಿವೆ. ‘ಕೆಲವು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಈಗ ಕಾಳಧನ, ಭ್ರಷ್ಟಾಚಾರ, ಉಗ್ರವಾದವನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ನೀವು ಒಪ್ಪುತ್ತೀರಾ’ ಎಂಬ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂಬುದರ ಮುಂದೆ ಟಿಕ್ ಹಾಕುವ ಅವಕಾಶವಿದೆ.

ಭಾಸ್ಕರ್ ರಾವ್ ಅರ್ಜಿ ವಜಾ

ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯನ್ನಾಗಿಸಿ ವಿಶೇಷ ತನಿಖಾ ತಂಡ (ಎಸ್ಐಟಿ) ಸಲ್ಲಿಸಿರುವ ಹೆಚ್ಚುವರಿ ದೋಷಾರೋಪಣ ಪಟ್ಟಿ ರದ್ದುಗೊಳಿಸಿ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟಿನ ಈ ನಿರ್ಧಾರದಿಂದ ಭಾಸ್ಕರ್ ರಾವ್ ಅವರಿಗೆ ಸಂಕಷ್ಟ ಎದುರಾಗಿದ್ದು, ಇನ್ನು ಮುಂದೆ ಅವರು ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರಾಗುವ ಪರಿಸ್ಥಿತಿ ಎದುರಾಗಿದೆ.

ಕರ್ನಾಟಕ ಸಂಗೀತಗಾರ ಬಾಲಮುರಳಿಕೃಷ್ಣ ವಿಧಿವಶ

ಖ್ಯಾತ ಕರ್ನಾಟಕ ಸಂಗೀತಗಾರ ಎಂ.ಬಾಲಮುರಳಿಕೃಷ್ಣ ಅವರು ಮಂಗಳವಾರ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಬಾಲಮುರಳಿಕೃಷ್ಣ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಾಲಮುರಳಿ ಕೃಷ್ಣ ಅವರು ಖ್ಯಾತ ಗಾಯಕರಷ್ಟೇ ಅಲ್ಲದೆ ವೈಲಿನ್, ಮೃದಂಗ ಹಾಗೂ ಕಂಜಿರಾ ಸಂಗೀತವನ್ನು ನುಡಿಸುತ್ತಿದ್ದರು. ಅಲ್ಲದೆ ಹಿನ್ನಲೆ ಗಾಯಕರು, ಸಂಗೀತ ನಿರ್ದೇಶಕರು ಹಾಗೂ ನಟರೂ ಆಗಿ ಸಕಲಕಲಾವಲ್ಲಭ ಎನಿಸಿಕೊಂಡಿದ್ದರು. ಬಾಲಮುರಳಿಕೃಷ್ಣ ಅವರು ಭಾರತದ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮ ವಿಭೂಷಣವನ್ನು ಪಡೆದಿದ್ದಾರೆ.

Leave a Reply