ಚಿತ್ರರಂಗಕ್ಕೆ ಕೂಡ ಗುಣಾತ್ಮಕ ಕೊಡುಗೆ ನೀಡಿದ್ದ  ಡಾ. ಎಂ. ಬಾಲಮುರಳಿಕೃಷ್ಣ

 

ಎನ್.ಎಸ್.ಶ್ರೀಧರ ಮೂರ್ತಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜರಾದ ಡಾ.ಎಂ.ಬಾಲಮುರಳಿಕೃಷ್ಣ ಅವರ ನಿಧನದೊಂದಿಗೆ ಒಂದು ಯುಗ ಮುಕ್ತಾಯವಾಗಿದೆ. ಸಾಧನೆಯ ಮೇರು ಪರ್ವತವಾಗಿದ್ದ ಅವರು ಪಾಂಡಿತ್ಯದಂತೆ ಪ್ರಯೋಗಶೀಲತೆಗೂ ಹೆಸರಾದವರು. ಯಾವ ಕ್ಷೇತ್ರವನ್ನೂ ಅವರು ದೂರ ಮಾಡಿರಲಿಲ್ಲ. ಚಿತ್ರರಂಗದತ್ತ ಕೂಡ ವಿಶೇಷ ಒಲವನ್ನು ಹೊಂದಿದ್ದರು.

ಬಾಲಮುರಳಿ ಕೃಷ್ಣ ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಕೊನೆಗೆ ಕಲಾವಿದರಾಗಿ ಕೂಡ ಚಿತ್ರರಂಗದೊಂದಿಗೆ ಸಂಬಂಧವನ್ನು ಹೊಂದಿದ್ದರು.   32 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಅವರು 432 ಅಪರೂಪದ ಪ್ರಯೋಗಶೀಲ ಚಿತ್ರಗೀತೆಗಳನ್ನು ಸೃಷ್ಟಿಸಿದ್ದಾರೆ. ಹೆಮ್ಮೆಯ ಸಂಗತಿ ಎಂದರೆ ಅವರಿಗೆ ಬಂದಿರುವ ಎರಡೂ ರಾಷ್ಟ್ರಪ್ರಶಸ್ತಿಗಳನ್ನು ತಂದು ಕೊಟ್ಟಿರುವುದು ಕನ್ನಡ ಚಿತ್ರರಂಗವೇ. ‘ಹಂಸಗೀತೆ’ ಚಿತ್ರಕ್ಕೆ ಗಾಯಕರಾಗಿ ‘ಮಧ್ವಾಚಾರ್ಯ’ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಅವರು ಈ ಗೌರವನ್ನು ಪಡೆದಿದ್ದರು.

ಆಂದ್ರಪ್ರದೇಶದ ಗೋದಾವರಿ ಜಿಲ್ಲೆಯ ಶಂಕರ ಗುಪ್ತಮ್ ಗ್ರಾಮದಲ್ಲಿ 1930ರ ಜುಲೈ ಆರರಂದು ಜನಿಸಿದ ಅವರ ನಿಜವಾದ ಹೆಸರು ಮುರಳಿಕೃಷ್ಣ. ಬಾಲಪ್ರತಿಭೆಯಾದ ಕಾರಣ ಸೇರಿಕೊಂಡ ವಿಶೇಷಣ ಜೀವನ ಪೂರ್ತಿ ಉಳಿದುಕೊಂಡಿತು. ತಂದೆ ಪಟ್ಟಾಭಿ ರಾಮಯ್ಯ ಕೂಡ ಕೊಳಲು ಮತ್ತು ವೀಣೆಯ ವಾದನದಲ್ಲಿ ಪರಿಣಿತರೇ. ಏಳನೇ ವಯಸ್ಸಿಗೆ ಮೂರು ಗಂಟೆಗಳ ಕಚೇರಿ ನೀಡಿ ಎಲ್ಲರನ್ನೂ ಬೆರಗುಗೊಳಿಸಿದ್ದ ಬಾಲಮುರಳಿಕೃಷ್ಣ ಅವರು ಹದಿನೈದನೇ ವಯಸ್ಸಿಗೆ 72 ಮೇಳಕರ್ತರಾಗಗಳನ್ನೂ ಸುಲಲಿತವಾಗಿ ಹಾಡ ಬಲ್ಲವರಾಗಿದ್ದರು. ತಾವು ಸ್ವರಸಂಯೋಜಿಸಿದ ಚಿತ್ರಗಳಲ್ಲಿ ಎಲ್ಲಾ ಮೇಳಕರ್ತರಾಗಗಳನ್ನೂ ಬಳಸಿದ ಹೆಗ್ಗಳಿಕೆ ಅವರದು. ಸದಾ ಪ್ರಯೋಗಶೀಲರಾದ ಅವರು ಗಣಪತಿ, ಮಹತಿ, ಲವಂಗಿ ಮೊದಲಾದ ಹನ್ನೆರಡು ಹೊಸ ರಾಗಗಳನ್ನೂ ಸೃಷ್ಟಿಸಿದ್ದಾರೆ. ಮೃದಂಗ, ಕಂಜರ, ವೀಣೆ, ಪಿಟೀಲು ಸೇರಿದಂತೆ ಹದಿನಾಲ್ಕು ವಾದ್ಯಗಳನ್ನು ನುಡಿಸ ಬಲ್ಲವರಾಗಿದ್ದ ಅವರು 25 ಸಾವಿರಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಹತ್ತು ಭಾಷೆಗಳಲ್ಲಿ ಪರಿಣತಿಯನ್ನು ಪಡೆದಿದ್ದ ಅವರು ಫ್ರೆಂಚ್ ಭಾಷೆಯಲ್ಲೂ ಪಾಂಡಿತ್ಯವನ್ನು ಹೊಂದಿದ್ದರು.

1957ರಲ್ಲಿ ‘ಸತಿ ಸಾವಿತ್ರಿ’ಚಿತ್ರದ ಮೂಲಕ ಗಾಯಕರಾಗಿ ಚಿತ್ರರಂಗಕ್ಕೆ ಬಂದ ಬಾಲಮುರುಳಿಕೃಷ್ಣ 1967ರಲ್ಲಿ ಎ.ವಿ.ಎಂನವರ ಭಕ್ತ ಪ್ರಹ್ಲಾದ’ಚಿತ್ರದಲ್ಲಿ ನಾರದನಾಗಿ ಅಭಿನಯಿಸುವ ಮೂಲಕ ತೆರೆಯ ಮೇಲೆ ಬಂದರು. 18 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಕನ್ನಡದಲ್ಲಿ ‘ಸಂಧ್ಯರಾಗ’ಚಿತ್ರದ ಸಂಗೀತ ನಿರ್ದೇಶಕರಾಗಿ ಅವರು ಗಮನ ಸೆಳೆದರು. ಈ ಚಿತ್ರದಲ್ಲಿ ಅವರಿಗೆ ಪ್ರಿಯವಾದ ಪೂರ್ವಿ ಕಲ್ಯಾಣಿ ರಾಗದಲ್ಲಿ ಸಂಯೋಜಿತವಾಗಿರುವ ‘ನಂಬಿದೆ ನಿನ್ನ ನಾದದೇವತೆಯೇ’ ವಿಭಿನ್ನವಾಗಿ ಮೂಡಿ ಬಂದಿತು. ಈ ಗೀತೆ ಅವರ ಕಂಠಸಿರಿಯಲ್ಲಿ ಮಾತ್ರವಲ್ಲದೆ ಭೀಮಸೇನ ಜೋಷಿ ಮತ್ತು ಎಸ್.ಜಾನಕಿಯವರ ಕಂಠದಲ್ಲೂ ಮೂಡಿ ಬಂದಿರುವುದು ಇನ್ನೊಂದು ವಿಶೇಷ. ಅವರು ಹಾಡಿದ ಸ್ವರ್ಣಗೌರಿ ಚಿತ್ರದ ‘ನಟವರ ಗಂಗಾಧರ’ ಬಹಳ ಜನಪ್ರಿಯ ವಾಯಿತು. ‘ಹಣ್ಣೆಲೆ ಚಿಗುರಿದಾಗ’ಚಿತ್ರದ ‘ಹಾಲಲಿ ಮಿಂದವಳು ದಂತದ ಮೈಯವಳೋ’ದಂತಹ ಶಾಸ್ತ್ರೀಯ ನೆಲೆಯ ಪ್ರೇಮಗೀತೆಯನ್ನೂ ಬಾಲಮುರಳಿಕೃಷ್ಣ ಹಾಡಿದ್ದಾರೆ. ಬಿಡುಗಡೆಯಾಗದ ‘ಗಾನಯೋಗಿ ರಾಮಣ್ಣ’ಚಿತ್ರದ ‘ಕೇಳನೋ ಹರಿ ತಾಳನೋ’ ‘ನಾ ನಿನ್ನ ಧ್ಯಾನದೊಳಗಿರಲು’ ಮೊದಲಾದ ಗೀತೆಗಳು ಅವರ ಕಲಾತ್ಮಕ ಪ್ರಸ್ತುತಿಗೆ ಉದಾಹರಣೆಗಳಾಗಿವೆ ಎನ್ನಬಹುದು. ಋತುಗಾನ ಚಿತ್ರದ ಶೀರ್ಷಿಕೆ ಗೀತೆ ‘ಋತುಗಾನ ನವ ಋತುಗಾನ’ ಇನ್ನೊಂದು ವಿಭಿನ್ನವಾದ ಗೀತೆ. ಶ್ರೀಪುರಂದರ ದಾಸರು, ಅಮ್ಮ. ಸುಬ್ಬಾಶಾಸ್ತ್ರಿ ಚಿತ್ರಗಳಲ್ಲಿ ಕೂಡ ಅವರು ಹಾಡಿದ್ದಾರೆ. ‘ಮುತ್ತಿನ ಹಾರ’ಚಿತ್ರದ ‘ದೇವರು ಹೊಸೆದ ಮುತ್ತಿನ ಹಾರ’ಗೀತೆಯನ್ನು ಹಂಸಲೇಖ ಅವರ ಸ್ವರಸಂಯೋಜನೆಯಲ್ಲಿ ಬಾಲಮುರುಳಿ ಕೃಷ್ಣ ಅವರು ಹಾಡಿದ್ದರು. ಶಾಸ್ತ್ರಿಯ ನೆಲೆಯೊಂದಿಗೆ ಜನಪದ ಗುಣವೂ ಬೆರೆತಂತ ಸಂಯೋಜನೆಯನ್ನು ಅವರು ಭಾವಪೂರ್ಣವಾಗಿ ಹಾಡಿದ್ದರು.

ಎಂ.ಎಸ್.ಸುಬ್ಬಲಕ್ಷ್ಮಿ, ವಸಂತ ಕುಮಾರಿ, ಟಿ,ಆರ್.ಮಹಾಲಿಂಗಂ, ಪಿಟೀಲು ಚೌಡಯ್ಯ ಸೇರಿದಂತೆ ಶಾಸ್ತ್ರಿಯ ಸಂಗೀತದ ದಿಗ್ಗಜರೆಲ್ಲರೂ ಚಿತ್ರರಂಗದತ್ತ ಒಲವನ್ನು ಹೊಂದಿದ್ದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಾಯನಕ್ಕೆ ಮಹತ್ವವಿದ್ದಿದ್ದರಿಂದ ಇದು ಸಹಜವೂ ಆಗಿತ್ತು. ಆದರೆ ಡಾ.ಬಾಲಮುರುಳಿ ಕೃಷ್ಣ ಅವರು ಇಲ್ಲಿಯೂ ವಿಭಿನ್ನವಾಗಿ ನಿಲ್ಲುತ್ತಾರೆ. ಅವರ ಆಸಕ್ತಿ ನಿರಂತರವಾಗಿತ್ತು. ಸರಿ ಸುಮಾರು ಅರ್ಧಶತಮಾನಗಳ ಕಾಲ ಅವರು ಸಂಗೀತ ಕ್ಷೇತ್ರದಂತೆ ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದರು. ಆ ‍ಕ್ಷೇತ್ರದ ಏರಿಳಿತಗಳಿಗೆ ತಕ್ಕಂತೆ ಪ್ರಯೋಗಶೀಲತೆಯನ್ನು ಮೆರೆದು ಗುಣಾತ್ಮಕತೆಯನ್ನು ತಂದರು.

ಬಾಲಮುರುಳಿ ಕೃಷ್ಣ ಅವರ ಚಿತ್ರರಂಗದ ಕೊಡುಗೆಯ ಬಗ್ಗೆ ಕೂಡ ವಿಶೇಷ ಚರ್ಚೆಗಳಾಗ ಬೇಕು. ಅದು ಗಾನಯೋಗಿಗೆ ನಾವು ಸಲ್ಲಿಸ ಬಹುದಾದ ನಿಜವಾದ ಶ್ರದ್ದಾಂಜಲಿ.

Leave a Reply