ಸಾಲ ಮನ್ನಾ ಮಾಡದ ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸಿಗರಿಂದಲೇ ಅತೃಪ್ತಿ, ಕೇಂದ್ರ ಮನ್ನಾ ಮಾಡಿದ್ರೆ ನಾವೂ ಮಾಡೋಣ ಅಂದ್ರು ಸಿಎಂ, ವಿಪಕ್ಷಗಳ ಪ್ರತಿಭಟನೆಗೆ ಸಂಸತ್ ಕಲಾಪ ಬಲಿ, ಬಿಬಿಎಂಪಿ ಉಪಚುನಾವಣೆ: ಬಿಜೆಪಿಗೆ ಜಯ

ಪಾಕಿಸ್ತಾನ ಸೇನೆಯಿಂದ ಮಂಗಳವಾರ ಮೃತಪಟ್ಟಿದ್ದ ಮೂವರು ಭಾರತೀಯ ಯೋಧರಾದ ಜೆನರಲ್ ಮನೋಜ್ ಕುಮಾರ್, ಪ್ರಭು ಸಿಂಗ್ ಮತ್ತು ಶಶಾಂಕ್ ಕುಮಾರ್ ಸಿಂಗ್ ಅವರಿಗೆ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಬುಧವಾರ ಅಂತಿಮ ನಮನ ಸಲ್ಲಿಸಿತು. (ಟ್ವಿಟರ್ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ರೈತರ ಸಾಲ ಮನ್ನಾ ಮಾಡಿ ಎಂದು ಕಾಂಗ್ರೆಸ್ ಶಾಸಕರಿಂದಲೇ ಒತ್ತಾಯ

ಭೀಕರ ಬರಗಾಲದಿಂದ ತತ್ತರಿಸಿರುವ ರೈತರ ನೆರವಿಗೆ ಧಾವಿಸಿ ಎಂದು ಆಢಳಿತ ಪಕ್ಷ ಕಾಂಗ್ರೆಸ್ ಶಾಸಕರೇ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಬುಧವಾರ ಪಕ್ಷದ ಶಾಸಕಾಂಗ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕರೇ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ರು. ಶಾಸಕರು ಸರ್ಕಾರವನ್ನು ಒತ್ತಾಯಿಸಿದ ಪರಿ ವಿರೋಧ ಪಕ್ಷದ ಸದಸ್ಯರನ್ನು ಮಾಚಿಸುಂತಿತ್ತು. ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಹೀಗಿತ್ತು…

‘ಗಾಮೀಣ ಭಾಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಕನಿಷ್ಠ ₹ 25 ಸಾವಿರ ಸಾಲವನ್ನಾದರೂ ಮನ್ನಾ ಮಾಡಬೇಕು. ವಿಧಾನಸಭೆಯಲ್ಲಿ ಯೋಜನೆಗಳ ಜಾರಿಗೊಳಿಸುತ್ತೀರಿ, ಇಲಾಖಾ ಪರಿಶೀಲನಾ ಸಭೆ ಮಾಡುತ್ತೀರಿ, ಅನುದಾನ ಬಿಡುಗಡೆ ಮಾಡುತ್ತೀರಿ ನಿಜ. ಆದರೆ ಈ ಎಲ್ಲ ಆದೇಶಗಳು ವಿಧಾನ ಸೌಧವನ್ನು ದಾಟಿ ಜನರನ್ನು ಮಾತ್ರ ತಲುಪುತ್ತಿಲ್ಲ. ಹೀಗಾಗಿ ಕೇವಲ ಪ್ರಚಾರಕ್ಕಾಗಿ ಸರ್ಕಾರ ಯೋಜನೆಗಳನ್ನು ಪ್ರಕಟಿಸುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.’

‘ಸರ್ಕಾರದ ಕಾರ್ಯಕ್ರಮಗಳನ್ನು ಅಧಿಕಾರಿಗಳು ಜನರಿಗೆ ತಲುಪಿಸುತ್ತಿಲ್ಲ. ನಮ್ಮ ಮಾತಿರಲಿ, ಸಚಿವರ ಮಾತಿಗೂ ಬೆಲೆ ಕೊಡದ ಅಧಿಕಾರಿಗಳಿದ್ದಾರೆ. ಇವರನ್ನು ಇಟ್ಟುಕೊಂಡು ಆಡಳಿತ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದರಲ್ಲಿ ಅನುಮಾನವೇ ಇಲ್ಲ. ಸೂಕ್ತ ಅನುದಾನ ಇಲ್ಲದೆ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಹೀಗಾಗಿ ತಕ್ಷಣವೇ ಎಲ್ಲಾ ಕ್ಷೇತ್ರಗಳಿಗೂ ಸ್ವಲ್ಪ ಹಣ ಬಿಡುಗಡೆ ಮಾಡಿ.’

‘ಸಣ್ಣ ಮತ್ತು ಮಧ್ಯಮ ರೈತರು ಸಹಕಾರಿ ಸಂಸ್ಥೆಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಿದರೆ, ಸರ್ಕಾರಕ್ಕೂ ಒಳ್ಳೆ ಹೆಸರು ಬರುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರೈತರು ನಮ್ಮ ಪಕ್ಷದ ಕೈ ಹಿಡಿಯಲಿದ್ದಾರೆ.’

ಹೀಗೆ ಶಾಸಕರು ಗ್ರಾಮೀಣ ಭಾಗದ ಜನರ ಕಷ್ಟ ಸುಖಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿರುವಾಗ ಸಿಎಂ ಮಾತನಾಡಿದರು. ‘ಈ ಬಗ್ಗೆ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಸದನದಲ್ಲೇ ನಿರ್ಣಯ ಪ್ರಕಟಿಸುತ್ತೇನೆ. ರೈತರು ಕೃಷಿ ಪತ್ತಿನ ಬ್ಯಾಂಕುಗಳಲ್ಲಿ ₹ 10 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ರಾಷ್ಟ್ರೀಕೃತ ಬ್ಯಾಕುಗಳ ಸಾಲವೂ ಸೇರಿದತೆ ಇದರ ಒಟ್ಟು ಮೊತ್ತ 35 ಸಾವಿರ ಕೋಟಿಯಾಗಲಿದೆ. ಹೀಗಾಗಿ ಕೇವಲ ಸಹಕಾರಿ ಬ್ಯಾಂಕುಗಳ ಸಾಲ ಮಂನ್ನಾ ಮಾಡಿದರೆ ಕೇವಲ ಶೇ. 20 ರಷ್ಟು ರೈತರಿಗೆ ಮಾತ್ರ ಅನುಕೂಲವಾಗುತ್ತದೆ. ರಾಜ್ಯದ ಸಮಸ್ಯೆಯನ್ನು ಕೇಂದ್ರ ಸರ್ಕಾರ ಅರಿತು ಶೇ.50 ರಷ್ಟು ಸಾಲ ಮನ್ನಾ ಮಾಡಿದರೆ ರಾಜ್ಯ ಸರ್ಕಾರವೂ ಉಳಿದ ಶೇ.50 ರಷ್ಟು ಸಾಲ ಮನ್ನಾ ಮಾಡಹುದು’ ಎಂದರು.

ಉಳಿದಂತೆ ಇಂದಿನ ಅಧಿವೇಶನದಲ್ಲಿ ನಡೆದ ಪ್ರಮುಖ ವಿದ್ಯಮಾನಗಳು…

– ಬಯಲು ಸೀಮೆಯ ಭಾಗಗಳಿಗೆ ಎತ್ತಿನಹೊಳೆ ಯೋಜನೆ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಬಗ್ಗೆ ವಾದ ಪ್ರತಿವಾದಕ್ಕೆ ವಿಧಾನ ಪರಿಷತ್ ವೇದಿಕೆಯಾಯ್ತು. ಪ್ರಶ್ನೋತ್ತರ ಕಲಾಪದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಈ ಯೋಜನೆಯಿಂದ ಕರಾವಳಿ ಭಾಗದ ಜನರಿಗೆ ತೊಂದರೆಯಾಗಲಿದೆ ಎಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, ‘ಯೋಜನೆಗೆ ಗುದ್ದಲಿ ಪೂಜೆ ಮಾಡಿದ್ದು ಬಿಜೆಪಿ ಸರ್ಕಾರ. ಈಗ ಅದನ್ನು ನಾವು ಕಾರ್ಯರೂಪಕ್ಕೆ ತರುತ್ತಿದ್ದೇವೆ.’ ಎನ್ನುತ್ತಿದ್ದಂತೆ ಕರಾವಳಿ ಭಾಗದ ಗಣೇಶ್ ಕಾರ್ಣಿಕ್ ಸೇರಿದಂತೆ ಇತರರು ಯೋಜನೆ ಕೈಬಿಡುವಂತೆ ಆಗ್ರಹಿಸದರು. ಈ ವೇಳೆ ಕಾಂಗ್ರೆಸ್ ನಾಯಕರಾದ ಉಗ್ರಪ್ಪ ಈ ಯೋಜನೆ ಬಗ್ಗೆ ಬಿಜೆಪಿ ಪರವೋ ವಿರೋಧವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದಾಗ ಮಾತಿನಚಕಮಕಿ ನಡೆಯಿತು.

– ಜಯದೇವ ಹೃದ್ರೋಗ ಸಂಸ್ಥೆ ನೆರವಿನೊಂದಿಗೆ ಪ್ರತಿ ತಾಲೂಕಿನಲ್ಲಿ 3 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರವನ್ನು ಸಭಾಧ್ಯಕ್ಷ ಕೆ.ಬಿ ಕೋಳಿವಾಡ ಅವರು ವಿಧಾನ ಸಭೆಯಲ್ಲಿ ಪ್ರಕಟಿಸಿ, ಇದಕ್ಕೆ ತಗಲುವ ಶೇ.60 ರಷ್ಟು ವೆಚ್ಚ ಅಂದರೆ ₹ 15 ಲಕ್ಷ ಸ್ಥಳೀಯ ಶಾಸಕರ ನಿಧಿಯಿಂದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

– ರಾಜ್ಯದ 12 ಜಿಲ್ಲೆಗಳ ಹೆಸರು ಬದಲಾವಣೆ ಮಾಡಲಾಗಿದ್ದು, ಅದನ್ನು ದೃಢೀಕರಿಸಲು ಇಂದು ವಿಧಾನಸಭೆಯಲ್ಲಿ ಪ್ರತ್ಯೇಕ ವಿಧೇಯಕ ಮಂಡಿಸಲಾಯಿತು. 2014ರ ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ 12 ಜಿಲ್ಲೆಗಳ ಹೆಸರು ಬದಲಾವಣೆ ಮಾಡುವ ಪ್ರಸ್ತಾವಕ್ಕೆ ಅಂಗೀಕಾರ ನೀಡಿತ್ತು. ಅದರಂತೆ ಮೈಸೂರು, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಹೊಸಪೇಟೆ, ಶಿವಮೊಗ್ಗ, ಹುಬ್ಬಳ್ಳಿ, ತುಮಕೂರು ಜಿಲ್ಲೆಗಳ ಹೆಸರನ್ನು ಸರಿಪಡಿಸಲಾಗಿದೆ. ಇನ್ನು ಬೆಳ್ಳಾರಿಯನ್ನು ಬಳ್ಳಾರಿ, ಬಿಜಾಪುರವನ್ನು ವಿಜಯಪುರ, ಬೆಳಗಾಂ ಅನ್ನು ಬೆಳಗಾವಿ, ಗುಲ್ಬರ್ಗಾವನ್ನು ಕಲಬುರಗಿ ಎಂದು ಬದಲಿಸಲಾಗಿದೆ.

– ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರು ರಾಜ್ಯದ 267 ಗ್ರಾಮಗಳಿಗೆ ಇನ್ನೂ ಸಾರಿಗೆ ಸಂಪರ್ಕ ಕಲ್ಪಿಸಿಲ್ಲ ಎಂದು ಸರ್ಕಾರದ ವಿರುದ್ಧ ತರಾಟೆಗೆ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಎಸ್ಆರ್ ಟಿಸಿಯಲ್ಲಿ ಶೇ.71ರಷ್ಟು ಸಮರ್ಪಕ ಸಾರಿಗೆ ವ್ಯವಸ್ಥೆ ಇದೆ. 8043 ಗ್ರಾಮಗಳ ಪೈಕಿ 7992 ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ರಸ್ತೆ ಸರಿ ಇಲ್ಲದ ಕಾರಣ 51 ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಒದಗಿಸಲಾಗಿಲ್ಲ ಎಂದರು.

– ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಕಾರಿಡಾರ್ (ನೈಸ್) ಯೋಜನೆಯ ಅವ್ಯವಹಾರದಲ್ಲಿ ಪಾಲುದಾರರಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಿಧಾನಮಂಡಲ ಸದನ ಸಮಿತಿ ನಾಳೆ ತನ್ನ ವರದಿಯನ್ನು ಪ್ರಕಟಿಸಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅವರ ಅಧ್ಯಕ್ಷತೆಯ ಸಮಿತಿಯು ನೈಸ್ ಯೋಜನೆಯ ಅವ್ಯವಹಾರದ ಬಗ್ಗೆ 300 ಪುಟಗಳ ವರದಿ ಸಲ್ಲಿಸಲಿದೆ.

– ರಾಜ್ಯದಲ್ಲಿ ಮಳೆಯ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸುನೀಲ್ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರ ಕೊಟ್ಟ ಸಿಎಂ, ಕೊಡಗು ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಪೂಜೆ ನಡೆಸಲಾಗುವುದು ಎಂದರು.

ಸಂಸತ್ ಅಧಿವೇಶನದ ಸಮಯ ಹರಣ

ಈ ಬಾರಿಯ ಚಳಿಗಾಲದ ಅಧಿವೇಶನದ ಸಮಯ ನಿರಂತರಮಾಗಿ ಹರಣವಾಗುತ್ತಿದೆ. ಪ್ರಧಾನ ಮಂತ್ರಿ ಆಗಮಿಸಬೇಕು ಎಂಬ ಪಟ್ಟಿಗೆ ನರೇಂದ್ರ ಮೋದಿ ಅವರು ಬುಧವಾರ ಅಧಿವೇಶನದಲ್ಲಿ ಭಾಗವಹಿಸಿದ್ದರು. ಆದರೂ ಸಹ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದವು. ಹೀಗಾಗಿ ಅಧಿವೇಶನದ ಐದನೇ ದಿನವೂ ಯಾವುದೇ ಚರ್ಚೆಯಾಗದೇ ಸಮಯ ವ್ಯರ್ಥವಾಗಿದೆ.

ವಿರೋಧ ಪಕ್ಷಗಳ ಒತ್ತಾಯಕ್ಕೆ ಪ್ರಧಾನಿ ಅಧಿವೇಶನಕ್ಕೆ ಆಗಮಿಸಿದರಾದರೂ ಪ್ರತಿಪಕ್ಷಗಳ ಆಗ್ರಹದಂತೆ ನೋಟು ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ತುಟಿಬಿಚ್ಚಲಿಲ್ಲ. ಇದು ಪ್ರತಿಪಕ್ಷಗಳು ಮತ್ತೆ ಪ್ರತಿಭಟನೆ ಮುಂದುವರಿಸಲು ಕಾರಣವಾಯಿತು.

ನಂತರ 13 ವಿರೋಧ ಪಕ್ಷಗಳ ಸುಮಾರು 200 ಸಂಸದರು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಜತೆಗೆ ಸರ್ಕಾರದ ನಿರ್ಧಾರ ಪ್ರತಿಭಟಿಸಿ ನವೆಂಬರ್ 28 ರಂದು ದೇಶದಾದ್ಯಂತ ಆಕ್ರೋಶ ದಿವಸ ಆಚರಿಸಲು ನಿರ್ಧರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಖಂಡಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಕಲಾಪದಲ್ಲಿ ಮೋದಿ ಅವರ ಉಪಸ್ಥಿತಿ ಸಾಲದು. ಸರ್ಕಾರದ ನಿರ್ಧಾರದ ಬಗ್ಗೆ ಅವರು ಮಾತನಾಡಬೇಕು. ನೋಟು ಬದಲಾವಣೆಯ ವಿಚಾರವಾಗಿ ಚರ್ಚೆಗೆ ಅವಕಾಶ ಮಾಡಿಕೊಟ್ಟು, ಪ್ರತಿಪಕ್ಷ ನಾಯಕರ ಮಾತನ್ನು ಕೇಳಿ ಅದಕ್ಕೆ ಅವರು ಉತ್ತರ ನೀಡಬೇಕು. ಮೋದಿ ಅವರು ಏಕೆ ಮಾತನಾಡುತ್ತಿಲ್ಲ? ಈ ವಿಚಾರದಲ್ಲಿ ಸರ್ಕಾರ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಂಡಿದ್ದೇಕೆ? ಸರ್ಕಾರದ ನಿರ್ಧಾರದಿಂದ ಶ್ರೀಮಂತರ ಸರದಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿಲ್ಲ. ಕೇವಲ ಬಡವರು ಮಾತ್ರ ಕ್ಯೂನಲ್ಲಿ ನಿಂತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ’ ಎಂದು ಟೀಕೆ ಮಾಡಿದರು. ಈ ವೇಳೆ ಲೋಕಸಭೆಯಲ್ಲಿ ಗದ್ಧಲ ಉಂಟಾಯಿತು. ಆಗ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ವಿಪಕ್ಷ ಮುಖಂಡರ ಜತೆ ಸಭೆ ನಡೆಸಿ ಕಲಾಪ ಸುಗಮವಾಗಿ ಸಾಗುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ವಿರೋಧ ಪಕ್ಷಗಳು ಸೂಕ್ತ ರೀತಿಯಲ್ಲಿ ಸ್ಪಂಧಿಸದ ಕಾರಣ, ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ರಾಹುಲ್ ‘ಸರ್ಕಾರದ ಈ ನಿರ್ಧಾರದ ಹಿಂದೆ ದೊಡ್ಡ ಹಗರಣವೇ ಅಡಗಿದೆ. ಹೀಗಾಗಿ ಈ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಸಿಪಿ)ಯ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

ಇನ್ನು ನವದೆಹಲಿಯ ಜಂತರ್ ಮಂತರ್ ನಲ್ಲಿ ಸಮಾವೇಶ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ‘ನರೇಂದ್ರ ಮೋದಿ ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ. ಈ ನಿರ್ಧಾರದಿಂದ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಈ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ. ಅವರು ಅಚ್ಚೇ ದಿನ ಹೆಸರಲ್ಲಿ ವೋಟು ಪಡೆದು ಈಗ ನೋಟು ಕಿತ್ತುಕೊಂಡಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಅವರ ಪಕ್ಷದ ಕಾರ್ಯಕರ್ತರೆ ಅವರಿಗೆ ಮತ ಹಾಕುವುದಿಲ್ಲ’ ಎಂದರು ಮಮತಾ.

ಬಿಬಿಎಂಪಿ ಉಪ ಚುನಾವಣೆ ಬಿಜೆಪಿ ಜಯ

ಬಿಬಿಎಂಪಿ ಬಿಜೆಪಿ ಸದಸ್ಯ ಮಹೇಶ್ ಬಾಬು ಅವರ ನಿಧನದಿಂದ ತೆರವಾಗಿದ್ದ ಲಕ್ಕಸಂದ್ರ ವಾರ್ಡ್ ಗೆ ನಡೆದ ಉಪ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಬಿಜೆಪಿ ಪರ ಸ್ಪರ್ಧಿಸಿದ್ದ ಮಹೇಶ್ ಬಾಬು ಅವರ ಪತ್ನಿ ಸರಳಾ ಮಹೇಶ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಿ.ಮೋಹನ್ ಬಾಬು ಅವರನ್ನು 2144 ಮತಗಳ ಅಂತರದಿಂದ ಮಣಿಸಿದರು.

ಉಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಗಳು…

  • ಜಾರ್ಖಂಡಿನಲ್ಲಿ ಭದ್ರತಾ ಪಡೆಗಳು ನಕ್ಸಲರ ಮೇಲೆ ಭರ್ಜರಿ ಬೇಟೆಯಾಡಿದ್ದು, 6 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಜತೆಗೆ ಅವರ ಬಳಿ ಇದ್ದ 600 ಬುಲೆಟ್ ಗಳು, 12ಕ್ಕೂ ಹೆಚ್ಚು ಐಇಡಿ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾರ್ಖಂಡಿನ ಲಾತೆಹರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಸಿಆರ್ ಪಿಎಫ್ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.
  • ಜಿಎಸ್ಟಿ ಮಸೂದೆಯಲ್ಲಿ ಕೆಲವು ಬದಲಾವಣೆಗಳು ಆಗಬೇಕೆಂದು ಕೆಲವು ಜಿಲ್ಲೆಗಳು ಶಿಫಾರಸ್ಸು ನೀಡಿರುವ ಹಿನ್ನೆಲೆಯಲ್ಲಿ ನವೆಂಬರ್ 25 ರಂದು ನಡೆಯಬೇಕಿದ್ದ ಜಿಎಸ್ಟಿ ಸಮಿತಿ ಸಭೆಯನ್ನು ಡಿ.2-3ಕ್ಕೆ ಮುಂದೂಡಲಾಗಿದೆ. ನವೆಂಬರ್ 25ರಂದು ಕೇಂದ್ರ ಹಾಗೂ ರಾಜ್ಯಗಳನ್ನು ಪ್ರತಿನಿಧಿಸಲಿರುವ ಅಧಿಕಾರಿಗಳು ಸಭೆ ನಡೆಸಲಿದ್ದು, ಸಿಜಿಎಸ್ಟಿ ಮತ್ತು ಐಜಿಎಸ್ಟಿ ಮತ್ತು ವಿನಾಯಿತಿ ಕಾಯ್ದೆ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

Leave a Reply