ತೊಲಗಿತು ನಳಂದಾಕ್ಕೆ ತಗುಲಿದ್ದ ಅಮರ್ತ್ಯಾ ಸೇನ್ ಎಂಬ ‘ನೊಬೆಲ್’ ಗ್ರಹಣ, ಇನ್ನಾದರೂ ಸಿಗುವುದೇ ಕಲಾಂ ಕನಸಿಗೆ ನಿಜ ಪ್ರಜ್ವಲನ?

 

ಚೈತನ್ಯ ಹೆಗಡೆ

ಈ ದೇಶದ ಚರಿತ್ರೆಯ ಶೈಕ್ಷಣಿಕ ಮೇರುಕಾಲವನ್ನು ಮರುಕಳಿಸುವ ಉದ್ದೇಶದಿಂದ 2010ರಲ್ಲಿ ಸಂಸತ್ತಿನ ಮಸೂದೆ ಮೂಲಕ ಅಸ್ತಿತ್ವಕ್ಕೆ ಬಂದಿದ್ದ ನಳಂದಾ ವಿಶ್ವವಿದ್ಯಾಲಯಕ್ಕೆ ಹಿಡಿದಿದ್ದ ಗ್ರಹಣ ಕೊನೆಗೊಳ್ಳುತ್ತಿದೆ. ತಾನು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಎಂಬ ಅರ್ಹತೆಯನ್ನೇ ಮುಂದಿರಿಸಿಕೊಂಡು, ನಯಾಪೈಸೆ ಕೆಲಸ ಮಾಡದೇ, ಒಂಬತ್ತು ವರ್ಷಗಳಿಂದ ಸ್ಥಾಪಕ ಚಾನ್ಸೆಲರ್ ಹುದ್ದೆಯಲ್ಲಿದ್ದ ಅಮರ್ತ್ಯಾ ಸೇನ್ ಅವಧಿ ಕೊನೆಗೊಂಡಿದೆ.

ನಳಂದಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಬದಲಾವಣೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಒಪ್ಪಿಗೆ ನೀಡಿದ್ದಾರೆ. ಅದರೊಂದಿಗೆ ಅಮರ್ತ್ಯಾ ಸೇನ್ ಹಾಗೂ ಸುಗತಾ ಬೋಸ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ.

ಈ ವಿಶ್ವವಿದ್ಯಾಲಯ ಅಭಿವೃದ್ಧಿಗಾಗಿ 2010ರಲ್ಲಿ ನಳಂದಾ ವಿಶ್ವವಿದ್ಯಾಲಯ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಇದರ ಉಸ್ತುವಾರಿಯನ್ನು ನೀಡಲಾಗಿತ್ತು. ಬೇರೆ ದೇಶಗಳು, ಅದರಲ್ಲೂ ಆಗ್ನೇಯ ಏಷ್ಯದ ಬೌದ್ಧ ರಾಷ್ಟ್ರಗಳ ಸಹಭಾಗಿತ್ವ ಇರುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿರುವುದರಿಂದ ವಿದೇಶ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಸೇರಿಸಲಾಗಿದೆ. ಯುಪಿಎ ಅವಧಿಯಲ್ಲಿ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರ ಕನಸಿನ ಕೂಸಾಗಿ ಅವತರಿಸಿದ ನಳಂದಾ ಯೋಜನೆ ಅದು.

ಆದರೆ ವಿಪರ್ಯಾಸವೆಂದರೆ ಮುಖ್ಯ ಹುದ್ದೆಯಲ್ಲಿದ್ದವರು ಕೇವಲ ರಾಜಕೀಯ ಹೇಳಿಕೆಗಳನ್ನು ಕೊಟ್ಟುಕೊಂಡು, ತಮ್ಮ ಸ್ನೇಹ ಬಳಗವನ್ನು ಉದ್ಯೋಗದಲ್ಲಿ ತುಂಬಿಸಿಕೊಳ್ಳುವುದಕ್ಕೆ ಮಾತ್ರವೇ ಸೀಮಿತರಾಗಿದ್ದರಿಂದ ನಳಂದಾ ವಿಶ್ವವಿದ್ಯಾಲಯ ಮೈತುಂಬಿಕೊಳ್ಳಲೇ ಇಲ್ಲ.

ಮೊದಲ ಆಡಳಿತ ಮಂಡಳಿಯಲ್ಲಿ ಅಮರ್ತ್ಯಾ ಸೇನ್ ಚಾನ್ಸೆಲರ್ ಆಗಿ ಹಾಗೂ ಹಾರ್ವರ್ಡ್ ಪ್ರೊಫೆಸರ್ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದರಾದ ಸುಗತಾ ಬೋಸ್ ಹಾಗೂ ಇತರೆ ದೇಶಗಳ ಪ್ರತಿನಿಧಿಗಳಿದ್ದರು.

ಇದೀಗ ರಾಷ್ಟ್ರಪತಿಗಳು ಕಾಯ್ದೆಬದ್ಧವಾಗಿ ಮಾಡಿರುವ ಆಡಳಿತ ಮಂಡಳಿ ಮರು ರಚನೆಯಲ್ಲಿ ಅಮರ್ತ್ಯಾ ಶಿಷ್ಯಕೋಟಿಗೆ ಮುಕ್ತಿ ನೀಡಲಾಗಿದ್ದು, ಕುಲಪತಿಯಾಗಿರುವ ಅಮರ್ತ್ಯರ ಮುದ್ದಿನ ಗೋಪಾ ಸಭರ್ವಾಲ್ ಸಹ ಅವಧಿ ಮುಗಿದ ಹಿನ್ನೆಲೆಯಲ್ಲಿ ನಿರ್ಗಮಿಸಬೇಕಿದೆ.

ಕೆನಡಾದ ಮ್ಯಾಕ್ಗಿಲ್ ವಿಶ್ವವಿದ್ಯಾಲಯದ ಧಾರ್ಮಿಕ ಅಧ್ಯಯನ ವಿಭಾಗದ ಪ್ರೊಫೆಸರ್ ಅರವಿಂದ ಶರ್ಮ, ಇಂಡಿಯನ್ ಕಲ್ಚರ್ ಫಾರ್ ಕಲ್ಚರ್ ರಿಲೇಷನ್ಸ್ ವಿಭಾಗದ ಲೋಕೇಶ್ ಚಂದ್ರ, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯ ಹೊಸ ಆಡಳಿತ ಮಂಡಳಿಯ ಭಾಗವಾಗಿದ್ದಾರೆ. ಇವರ ಕಾರ್ಯಕ್ಷಮತೆಯನ್ನು ಮುಂದಿನ ದಿನಗಳಲ್ಲಿ ಅಳೆಯಬೇಕಿದೆ. ಆದರೆ ಈ ಹಿಂದಿನ ಗ್ರಹಣ ಕಳೆದಿದೆ ಎನ್ನಲಿಕ್ಕೆ ಹಲವು ಕಾರಣಗಳಿವೆ. ಅವೆಂದರೆ-

  • ಮೂಲತಃ ನಳಂದಾದ ಕನಸು ಬಿತ್ತಿದ್ದ ಅಬ್ದುಲ್ ಕಲಾಂ ಅವರು 2006ರಲ್ಲಿ ಇದರ ಮೊದಲ ಸಂದರ್ಶಕರಾಗಿ ಭೇಟಿ ನೀಡುವುದಕ್ಕೆ ನಿರಾಕರಿಸಿ ಟಿಪ್ಪಣಿಯನ್ನೇ ಬರೆದಿದ್ದರು. ನಳಂದದಂಥ ವಿಶ್ವವಿದ್ಯಾಲಯಕ್ಕೆ ಅದೇ ಕೆಲಸಕ್ಕೆ ಸಮಯ ವ್ಯಯಿಸುವವರು ಮುಖ್ಯಸ್ಥರಾಗಬೇಕೇ ಹೊರತು ಬೇರೆ ಹತ್ತೆಂಟು ಕಾರ್ಯಗಳನ್ನು ಇರಿಸಿಕೊಂಡವರಲ್ಲ ಎಂದು ಅಮರ್ತ್ಯಾ ಸೇನ್ ಬಗ್ಗೆ ಕಲಾಂ ಅತೃಪ್ತಿ ವ್ಯಕ್ತಪಡಿಸಿದ್ದರು.
  • ದೆಹಲಿಯ ಲೇಡಿ ಶ್ರೀರಾಂ ಕಾಲೇಜಿನಲ್ಲಿ ಕೇವಲ ರೀಡರ್ ಹುದ್ದೆಯಲ್ಲಿದ್ದ ಗೋಪಾ ಸಭರ್ವಾಲರನ್ನು ಪರಿಚಯಸ್ತೆ ಎಂಬ ಒಂದೇ ಕಾರಣಕ್ಕೆ ನಳಂದಾದ ಕುಲಪತಿ ಆಗಿಸಿದ ಕುಖ್ಯಾತಿ ಅಮರ್ತ್ಯಾ ಸೇನ್ ರಿಗೆ ಸಲ್ಲುತ್ತದೆ. ಬರೋಬ್ಬರಿ ತಿಂಗಳಿಗೆ 5 ಲಕ್ಷ ರುಪಾಯಿ ಸಂಬಳ ತೆಗೆದುಕೊಳ್ಳುತ್ತಿದ್ದ ಗೋಪಾ, ರಾಜ್ಗೀರ್ ನಲ್ಲಿ 450 ಎಕರೆ ಜಾಗದಲ್ಲಿ ಸ್ಥಾಪನೆಯಾಗಿರುವ ಕ್ಯಾಂಪಸ್ಸಿಗೂ ಬರದೇ ದೆಹಲಿ ಹೊರವಲಯದಿಂದಲೇ ಕಾರ್ಯ ನಿರ್ವಹಿಸುತ್ತಿದ್ದರು.
  • ತಾನು ಮನಮೋಹನ ಸಿಂಗ್ ಅವರ ಸ್ನೇಹಿತ ಎಂದು ಗುರುತಿಸಿಕೊಂಡಿದ್ದ ಅಮರ್ತ್ಯಾ ಸೇನ್, ಸೋನಿಯಾ ಗಾಂಧಿ ಚಿಂತನಕೂಟದ ಪ್ರಮುಖರಾಗಿದ್ದರು. ಅದರಲ್ಲೇನೂ ತಪ್ಪಿಲ್ಲ. ಆದರೆ ಕೆಲಸದ ಕ್ರಮ ಅರ್ಹತೆಯಾಗಬೇಕೇ ಹೊರತು ಈ ಸ್ನೇಹವಷ್ಟೇ ಅಲ್ಲವಲ್ಲ. ಉಪಿಂದರ್ ಸಿಂಗ್, ಅಂಜಾನ್ ಶರ್ಮ, ಗೋಪಾ, ನಯನ್ಜೋತ್ ಲಾಹಿರಿ ಇವರೆಲ್ಲರೂ ದೆಹಲಿಯಲ್ಲಿ ಸಹವರ್ತಿಗಳಾಗಿದ್ದವರು. ಇದೇ ಕಾರಣಕ್ಕೆ ಅಮರ್ತ್ಯಾ ಸೇನ್ ಇವರನ್ನೆಲ್ಲ ಗುಂಪುಗೂಡಿಸಿಕೊಂಡರು. ಪರಿಣಾಮ, ಒಂಬತ್ತು ವರ್ಷಗಳ ಅವಧಿಯಲ್ಲಿ ತೆರಿಗೆ ಹಣ ವ್ಯಯಿಸಿದ್ದಲ್ಲದೇ ಮತ್ತೇನೂ ಬೆಳವಣಿಗೆಯೇ ಆಗಲಿಲ್ಲ.

amartyasenಇದೀಗ ಕಾಯ್ದೆಬದ್ಧವಾಗಿಯೇ ಹೊಸ ಆಡಳಿತ ಮಂಡಳಿ ರಚನೆಯಾಗಿರುವ ಸಂದರ್ಭದಲ್ಲಿ ತಥಾಕಥಿತ ಸೆಕ್ಯುಲರ್ ಸ್ವರಗಳು ಕುಂಯ್ ಕುಂಯ್ ರಾಗವ ಹಾಡುತ್ತಿವೆ. ಅಮರ್ತ್ಯಾ ಸೇನ್, ಮೋದಿ ವಿರುದ್ಧ ಹೇಳಿಕೆ ನೀಡಿದ್ದರಿಂದಲೇ ಈ ಸ್ಥಿತಿ ಎಂಬಂತಹ ಅಭಿಪ್ರಾಯಗಳು ಮೊದಲಿನಿಂದಲೂ ವ್ಯಕ್ತವಾಗುತ್ತಿವೆ. ರಾಜಕೀಯ ವಾದಗಳು ಏನೇ ಇದ್ದರೂ ನಳಂದಾ ಎಂಬ ಅತ್ಯದ್ಭುತ ಜಾಗತಿಕ ವಿಸ್ತಾರದ ಕಲ್ಪನೆಯನ್ನು ಅರಳಿಸುವಲ್ಲಿ ಏನೊಂದೂ ಕೊಡುಗೆ ನೀಡದೇ, 81 ವರ್ಷ ಪ್ರಾಯದ ನಂತರವೂ ಕಾರ್ಯಸಾಮರ್ಥ್ಯರಹಿತರಾಗಿ ಹುದ್ದೆ ಹಪಾಹಪಿಯಲ್ಲಿದ್ದವರನ್ನು ಕೇವಲ ನೊಬೆಲ್ ಗೆದ್ದಿದ್ದಾರೆಂಬ ಮಾತ್ರಕ್ಕೆ ಸಹಿಸಿಕೊಳ್ಳುವ ಕರ್ಮ ಭಾರತಕ್ಕೇಕೆ?

11ನೇ ಶತಮಾನದ ಮುಸ್ಲಿಂ ದಾಳಿಕೋರರು ಭಾರತದ ಜಾಗತಿಕ ಹೆಮ್ಮೆಯಾಗಿದ್ದ ನಳಂದಾವನ್ನು ಬೆಂಕಿ ಹಚ್ಚಿ ನೆಲಸಮವಾಗಿಸಿದರು. ಡಾ. ಅಬ್ದುಲ್ ಕಲಾಂ ಎಂಬ ಮಹಾನ್ ಚೇತನ ನಳಂದಾವನ್ನು ಮತ್ತೆ ವೈಭವಕ್ಕೆ ತರುವ ಕನಸು ಕಂಡಿತು. ಅಮರ್ತ್ಯಾ ಗಡಣದ ಗೆದ್ದಲುಗಳು ಆ ಕನಸನ್ನು ಕುಳಿತಲ್ಲೇ ಶಿಥಿಲವಾಗಿಸಿದವು. ಇದುವೇ ನಳಂದಾದ ಸಂಕ್ಷಿಪ್ತ ಚರಿತೆ! ಇದೀಗ ಹೊಸ ಆಡಳಿತ ಮಂಡಳಿ ಚುರುಕಿನಿಂದ ಕಾರ್ಯತತ್ಪರವಾಗಿ ನಳಂದಾ ಎಂಬ ಭಾರತದ ಜಾಗತಿಕ ಹಿರಿಮೆ ಮತ್ತೆ ಮಿನುಗುವ ಕನಸಿಗೆ ಕಸುವು ತುಂಬಲಿ ಎಂಬುದೊಂದು ಅಭಿಲಾಷೆ.

Leave a Reply