ನೋಟು ಬದಲಾವಣೆ ಪರ್ವದಲ್ಲಿ ‘ನಂಬಿ ಕೆಟ್ಟವರಿಲ್ಲವೋ’ ಎಂಬ ಸಮಾಧಾನವೇ ಒಳಿತು

author-geetha‘ಈ ಐನೂರು ಸಾವಿರ ರುಪಾಯಿಯ ನೋಟುಗಳು ತಿರುಗಿ ಬರುತ್ತವಂತೆ. ಈಗ ಎಲ್ಲಾ ಕೊಟ್ಟವರು ಕೈ ಕೈ ಹಿಸುಕಿಕೊಳ್ಳಬೇಕು.’

‘ಎರಡು ಸಾವಿರ ರುಪಾಯಿಯ ನೋಟು ಸುಮ್ಮನೆ ಡೈವರ್ಷನ್ ಸೃಷ್ಟಿಸಲು ಮಾಡಿದ್ದಂತೆ… ಅದೂ ಇರಲ್ಲ ಮುಂದೆ! ಬೇರೆ ಇನ್ನೊಂದು ಪ್ಲಾನ್ ಇದೆಯಂತೆ..’

‘ಎರಡು ಸಾವಿರದ ನೋಟಿನಲ್ಲಿ ಮೋದಿ ಭಾಷಣ ಕೇಳಿಸುತ್ತದಂತೆ… ಅವರನ್ನು ಕೂಡ ನೋಡಬಹುದಂತೆ..’

‘ಎರಡು ಸಾವಿರದ ನೋಟು ಬಣ್ಣ ಬಿಡುತ್ತದಂತೆ…’

‘ಇಲ್ಲಿ ಆ ನೋಟು ಬಿಡುಗಡೆಯಾದ ಸಂಜೆಗೇ ಚೈನಾದಿಂದ ಆ ನೋಟಿನ ಹೊರಮೈ ಒಳಮೈ ಇದ್ದ ಪರ್ಸ್ ಮಾರುಕಟ್ಟೆಗೆ ಬಂದಿದೆ ಗೊತ್ತಾ?’

‘ನೂರಿಪ್ಪತ್ತು ಜನ ಸತ್ತರಂತೆ… ಲೈನಿನಲ್ಲಿ ನಿಂತು, ಬಸವಳಿದು ಬಿದ್ದು ಸತ್ತರಂತೆ. ಅವರ ಸಾವಿಗೆ ಯಾರು ಹೊಣೆ?’

‘ಇದೊಂದು ಅತ್ಯುತ್ತಮ ನಡೆ. ನಾವೆಲ್ಲರು ಬೆಂಬಲಿಸಲೇ ಬೇಕು. ಕಪ್ಪು ಹಣ ಎಲ್ಲಾ ಹರಿದು ಬರ್ತಾ ಇದೆ ಸರ್ಕಾರಕ್ಕೆ. ನಾವು ಬೆಂಬಲಿಸದೆ, ಈ ನಡೆ ವಿಫಲವಾದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.’

‘ಕಪ್ಪು ಹಣ ಹರಿದು ಬಂದಾಕ್ಷಣ ಭ್ರಷ್ಟಾಚಾರ ಹೇಗೆ ನಿರ್ಮೂಲನೆಯಾಗುತ್ತೆ? ಭ್ರಷ್ಟರು ಮತ್ತಷ್ಟು ಹಣ ಮಾಡಿಕೊಳ್ಳುವುದು ಹೇಗೆಂದು ಪ್ಲಾನ್ ಮಾಡುತ್ತಾರೆ.’

‘ಹಾಗೆಂದು ಸುಮ್ಮನೆ ಇದ್ದರೆ ವ್ಯವಸ್ಥೆ ಬದಲಾಗುವುದು ಹೇಗೆ? ಪ್ರಯತ್ನ ಇರಬೇಕಲ್ಲವೇ? ಏನು ಮಾಡದೆ ಇದ್ದರೆ ಮಾಡುತ್ತಿಲ್ಲ… ಏನು ಮಾಡಿಲ್ಲ ಎಂದು ಆಡಿಕೊಳ್ಳುತ್ತೀರಿ. ಮಾಡಿದರೆ ತಪ್ಪು ಹುಡುಕುತ್ತೀರಿ. ಏನು ಮಾಡಬೇಕಿತ್ತು ಎಂದು ಹೇಳಿ ನೋಡುವ…’

ಆರ್ಥಿಕ ತಜ್ಞರು, ಬ್ಯಾಂಕ್ ಯೂನಿಯನ್ನಿನ ಮುಖಂಡರು ಈ ಯೋಜನೆಯ Loopholes ಗಳ ದೀರ್ಘ ಲೇಖನಗಳನ್ನು ಬರೆದಿದ್ದಾರೆ…

‘ಈ ಯೋಜನೆ ಅತ್ಯಂತ ದಿಟ್ಟ ಯೋಜನೆ ಎಂದು ವಿದೇಶೀ ಪತ್ರಿಕೆಗಳು ಹೊಗಳಿವೆ.’

‘ಆರ್ಥಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ.’

‘ಇದುವರೆಗೆ ತೆರಿಗೆಯೇ ಕಟ್ಟದೆ ಓಡಾಡಿಕೊಂಡಿದ್ದವರು ಈಗ ತೆರಿಗೆದಾರರಾಗುತ್ತಾರೆ.’

‘ನೀವು ಒಳಿತನ್ನು ನೋಡುವುದೇ ಇಲ್ಲ…’

‘ನೀವು ಯೋಜನೆಯಲ್ಲಿ ಇರುವ ಕೆಡುಕನ್ನು ನೋಡುವುದೇ ಇಲ್ಲ..’

‘ದೇಶದ ಒಳಿತಿಗೆ ಕೊಂಚ ಕಷ್ಟಪಟ್ಟರೆ ತಪ್ಪೇನಿಲ್ಲ… ಯೋಧರನ್ನು ನೋಡಿ..’

‘ಇನ್ನೂ ಹೆಚ್ಚಿನ ನೋಟುಗಳನ್ನು ಮುದ್ರಿಸ ಬೇಕಿತ್ತು. Operation succeful.. but patient died. ಅಂತ ಗಾದೆಯಿದೆಯಲ್ಲ ಹಾಗಾಯಿತು.’

ದೃಶ್ಯ ಮಾಧ್ಯಮ, ಪ್ರಿಂಟ್ (ಅಕ್ಷರ) ಮಾಧ್ಯಮ… ಎಲ್ಲಾ ಕಡೆಯೂ ಇದೇ ಚರ್ಚೆ. ಫೇಸ್ ಬುಕ್, ವಾಟ್ಸ್ ಅಪ್ ನಲ್ಲಿಯೂ ಇದೇ ವಿಷಯ, ಗುಂಪುಗಾರಿಕೆ, ಚರ್ಚೆ.

ಚರ್ಚೆ ಎನ್ನುವುದಕ್ಕಿಂಥ ಜಗಳ ಅನ್ನಬಹುದು. ಮುಂಚೆಯೇ ಇರುವ ಪಕ್ಷಗಳು, ಗುಂಪುಗಳು… ಪ್ರಧಾನಿ ಏನು ಮಾಡಿದರೂ ಬೆಂಬಲಿಸುವ, ಹಾಡಿ ಹೊಗಳುವ ಒಂದು ಗುಂಪು. ಪ್ರಧಾನಿ ಏನೇ ಮಾಡಿದರೂ ತಪ್ಪು ಹುಡುಕುವ, ಬೈದು ಹೀಗೆಳೆಯುವ ಇನ್ನೊಂದು ಗುಂಪು… ಸತ್ಯ ಇವೆರಡರ ನಡುವೆ ಇರಬೇಕು.

ಟಿವಿಯಲ್ಲಿ ಸುದ್ದಿ ನೋಡಿದರೆ, ಪತ್ರಿಕೆಗಳಲ್ಲಿ ಕೆಲವು ಲೇಖನಗಳನ್ನು ಓದಿದರೆ ಗಾಬರಿಯೇ ಆಗುತ್ತದೆ. ನಂಬಬೇಕೇ? ಬೇಡವೇ? ಯಾವುದು ಸತ್ಯ? ಯಾವುದು ಸುಳ್ಳು? ಬುದ್ಧಿವಂತರ, ಪ್ರಾಜ್ಞರು ಸುಳ್ಳು ಹೇಳಲು ಪ್ರಾರಂಭಿಸಿದರೆ ಸಾಮಾನ್ಯರಿಗೆ ಬಹಳ ಕಷ್ಟ.

ಗಾಳಿ, ನೀರು, ಅನ್ನ, ವಸತಿಯಷ್ಟೇ… ನಂಬಿಕೆ, ವಿಶ್ವಾಸ ಮುಖ್ಯ. ಒಂದು ಸಮಾಜ, ಒಂದು ದೇಶ, ಒಂದು ಆರ್ಥಿಕ ವ್ಯವಸ್ಥೆಯ ಸುಭದ್ರತೆ ಆಳುವವರ ಮೇಲೆ, ಪ್ರಜೆಗಳಿಗೆ, ಜನ ಸಾಮಾನ್ಯರಿಗೆ ನಂಬಿಕೆ ಇರಬೇಕು. ಸುಳ್ಳಿನ ಬುನಾದಿಯ ಮೇಲೆ ಪ್ರಗತಿ ಸಾಧ್ಯವಿಲ್ಲ.

ಹಾಗೆಯೇ ಪ್ರಗತಿಗಾಗಿ ರೂಪಿಸುವ ಯೋಜನೆಯ ಭಾದಕಗಳನ್ನೇ ಎತ್ತಿ ಆಡಿ, ಹಂಗಿಸಿ… ಜನ ನಂಬಿಕೆ ಕಳೆದುಕೊಳ್ಳುವಂತೆ ಮಾಡುವ ಬದಲು ಆ ಭಾದಕಗಳನ್ನು ನಿವಾರಿಸಿಕೊಳ್ಳುವುದರ ಬಗ್ಗೆ ಸಲಹೆ ಸೂಚನೆಗಳನ್ನು ಕೊಡಬಹುದಲ್ಲವೇ?

ನಮ್ಮ ದೇಶದ ಎರಡು ದೊಡ್ಡ ತಾಪತ್ರಯವೆಂದರೆ ನಮ್ಮ ಜನಸಂಖ್ಯೆ ಹಾಗೂ ಭ್ರಷ್ಟಾಚಾರ. ಜನಸಂಖ್ಯೆಯ ನಿಗ್ರಹ, ಭ್ರಷ್ಟಾಚಾರದ ನಿರ್ಮೂಲನೆಯಾದರೆ… ನಮ್ಮ ಮುಕ್ಕಾಲು ತಾಪತ್ರಯಗಳು ನಿವಾರಣೆಯಾದಂತೆ.

ಚುನಾವಣೆಗೆ ನಿಂತಾಗ ಹೋರಾಡಲಿ… ಗೆಲ್ಲುವುದಕ್ಕೆ ಹರಸಾಹಸ ಮಾಡಲಿ… ಒಬ್ಬರ ವಿರುದ್ಧ ಒಬ್ಬರು ಮಾತನಾಡಲಿ ಆದರೆ ಚುನಾವಣೆ ಮುಗಿದು ಒಬ್ಬರು ಗೆದ್ದ ಮೇಲೆ.. ಗೆದ್ದವರು, ಸೋತವರು ಇಬ್ಬರೂ ಜನರಿಗಾಗಿ ಕೆಲಸ ಮಾಡಬೇಕು.

ಭ್ರಷ್ಟಾಚಾರ ಇಲ್ಲದೆ ಹೋಗದೆ, ಸ್ವಹಿತ ಮುಖ್ಯವಲ್ಲದೆ ಹೋದರೆ ಮಾತ್ರ ಅದು ಸಾಧ್ಯ. ಐನೂರೋ, ಸಾವಿರವೋ ಪಡೆದು ಭ್ರಷ್ಟನಿಗೆ ಮತ ಚಲಾಯಿಸಿದರೆ… ಗೆದ್ದ ಆ ಭ್ರಷ್ಟ ಅವನು ಖರ್ಚು ಮಾಡಿದ ದುಡ್ಡು ಸಂಪಾದಿಸಲು ಲೂಟಿಗೆ ನಿಲ್ಲುತ್ತಾರೆ.

ಪ್ರಜಾಪ್ರಭುತ್ವ ನಾವು ಆರಿಸಿಕೊಂಡ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಸಾಧಕ ಭಾದಕಗಳಿವೆ. ಭಾದಕಗಳನ್ನು ನಿವಾರಿಸುತ್ತಾ, ಸಾಧಕಗಳನ್ನು ಪುಷ್ಠಿಗೊಳಿಸುತ್ತಾ ನಾವು ಮುಂದುವರಿಯಬೇಕು.

ಹಾಗೆಯೇ ಈ demonetization ದುಡ್ಡು ಎಲ್ಲರ ಬಳಿಯೂ ಇದೆ. ಅನ್ಯಾಯವಾಗಿ ದುಡಿದು ಮುಚ್ಚಿಟ್ಟುಕೊಂಡ ದುಡ್ಡಿಗಷ್ಟೇ ಕುತ್ತು. ನ್ಯಾಯವಾಗಿ ದುಡಿದ ದುಡ್ಡು ಬ್ಯಾಂಕಿಗೆ ಕಟ್ಟಿ ಹೊಸ ದುಡ್ಡು ಪಡೆಯಬಹುದು.. ಹೆಚ್ಚೇ ಇದ್ದರೆ ತೆರಿಗೆ ಕಟ್ಟಬೇಕು. ತೆರಿಗೆಯೇ ಕಟ್ಟದೆ ಇರುವವರು ಎಷ್ಟು ಮಂದಿ ಈ ದೇಶದಲ್ಲಿ ಎಂಬ ಅಂಕಿ ಅಂಶ ತಿಳಿದರೆ ತೆರಿಗೆ ಕಟ್ಟುತ್ತಿರುವವರು ನಿರಾಶರಾಗಿ ತೆರಿಗೆಯನ್ನು evade ಮಾಡಬಹುದೇ ಎಂದು ಪ್ಲಾನ್ ಮಾಡುತ್ತಾರೆ.

ಎಲ್ಲರಿಗಾಗಿದ್ದು ನಮಗೂ ಎಂದಾದರೆ ಒಪ್ಪಿಕೊಳ್ಳುವುದು ಸುಲಭ. ಸುಳ್ಳು ಸುದ್ದಿ ಹಬ್ಬಿಸಿ, ಹಾದಿ ತಪ್ಪಿಸಿ ಸಾಧಿಸುವುದೇನು? executionನಲ್ಲಿ ತಪ್ಪಾಗಿದ್ದರೆ ಒಪ್ಪಿಕೊಂಡು, ತಿದ್ದಿಕೊಂಡು ಮುಂದುವರಿದರೆ ತಪ್ಪೇನು? ಒಟ್ಟಿನಲ್ಲಿ ದೇಶಕ್ಕೆ ಒಳಿತಾಗಬೇಕು. ಜನರಿಗೆ ನೆಮ್ಮದಿಯಿರಬೇಕು ಅಷ್ಟೇ ಅಲ್ಲವೇ? ಆಳುವ ಪಕ್ಷ, ವಿರೋಧ ಪಕ್ಷ ಇಬ್ಬರಿಗೂ ಬೇಕಾಗಿರುವುದು ಅದೇ ಅಲ್ಲವೇ? ಕೊನೆ ಒಂದೇ, ಹಾದಿ ಬೇರೆ ಅಷ್ಟೇ.

I want to believe.. ನಂಬಬೇಕು. ‘ನಂಬಿ ಕೆಟ್ಟವರಿಲ್ಲವೋ’ ಎಂಬುದರ ಜೊತೆ ಜೊತೆಗೆ ‘ನಂಬಿದವರಿಗೆ ಮಾತ್ರ ಮೋಸ ಮಾಡಲು ಸಾಧ್ಯ’ ಎಂಬ ಗಾದೆಯೂ ನೆನಪಿಗೆ ಬರುತ್ತದೆ.

ಆದರೆ ನಂಬದೇ ಬದುಕುವುದು ಹೇಗೆ? ನಾವು ಗಾಂಧಿಯನ್ನು ನಂಬಿದೆವು. ನೆಹರೂ ಅವರನ್ನು ನಂಬಿದೆವು. ಇಂದಿರಾಗಾಂಧಿಯನ್ನು ನಂಬಿದೆವು, ಅವರ ಮಗ ರಾಜೀವ್ ಗಾಂಧಿಯನ್ನೂ ನಂಬಿದೆವು. ಈಗ ಮೋದಿಯನ್ನು ನಂಬಿದ್ದೇವೆ. ಒಳಿತಾಗುತ್ತದೆ ಎಂದು ಸರದಿಸಾಲಿನಲ್ಲಿ ನಿಂತಿದ್ದೇವೆ. ಬಿಸಿಲು, ನಂವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಶೆಖೆ! ಆದರೂ ಒಳಿತಾಗುತ್ತದೆ ಎಂದು ನಂಬುತ್ತೇವೆ.

Leave a Reply