ಡೊನಾಲ್ಡ್ ಟ್ರಂಪ್ ಅದೇನೇ ಭಾಷಣ ಬಿಗಿದರೂ ಭಾರತೀಯ ಮೂಲದ ಪ್ರತಿಭೆಗಳನ್ನು ಕಡೆಗಣಿಸಲಾರ, ಭಾರತಕ್ಕೆ ಅನುಕೂಲವಾಗಲಿದೆ ನಿಕ್ಕಿ ಹ್ಯಾಲೆಯನ್ನು ವಿಶ್ವಸಂಸ್ಥೆ ಪ್ರತಿನಿಧಿಯನ್ನಾಗಿಸುವ ನಿರ್ಧಾರ

South Carolina Gov. Nikki Haley acknowledges members in the balcony during her State of the State address to the joint session of the legislature Jan. 21, 2015, at the Statehouse in Columbia, S.C. (AP Photo/Richard Shiro)

ಡಿಜಿಟಲ್ ಕನ್ನಡ ಟೀಮ್:

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಭಾರತಕ್ಕೆ ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ಸಿಗಬಹುದು? ಅಮೆರಿಕದಲ್ಲಿ ಭಾರತೀಯರ ಉದ್ಯೋಗಕ್ಕೆ ಕತ್ತರಿ ಬೀಳುವುದೇ? ಎಂಬೆಲ್ಲಾ ಚರ್ಚೆ ಹುಟ್ಟುಕೊಂಡಿವೆ. ಇಂತಹ ಆತಂಕದ ಚರ್ಚೆಗಳ ನಡುವೆ ಡೊನಾಲ್ಡ್ ಟ್ರಂಪ್ ಭಾರತೀಯ ಮೂಲದ ನಿಕ್ಕಿ ಹ್ಯಾಲೆಯನ್ನು ವಿಶ್ವಸಂಸ್ಥೆಯ ಅಮೆರಿಕ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿರೋದು ಭಾರತದ ಪಾಲಿಗೆ ಮಹತ್ವದ ನಿರ್ಧಾರವಾಗಿದೆ.

ಇಲ್ಲಿ ಗಮನಿಸಬೇಕಾಗಿರುವ ಪ್ರಮುಖ ಅಂಶ ಎಂದರೆ ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಭಾರತೀಯರು ಪಡೆದುಕೊಳ್ಳುತ್ತಿರುವ ಉದ್ಯೋಗವನ್ನು ಅಮೆರಿಕನ್ನರಿಗೇ ಸಿಗುವಂತೆ ಮಾಡುತ್ತೇನೆ ಎಂಬ ಟ್ರಂಪ್ ಮಾತು ಜಾರಿಗೆ ತರುವುದು ಅಷ್ಟು ಸುಲಭವಲ್ಲ ಎಂಬುದು. ಭಾರತವನ್ನು ಸಂಪೂರ್ಣವಾಗಿ ಪಕ್ಕಕ್ಕಿರಿಸಿ ಅಮೆರಿಕವನ್ನು ಮುನ್ನಡೆಸುವುದು ಒಂದು ರೀತಿಯ ಸಾಹಸವೇ ಸರಿ. ಅದಕ್ಕೆ ಪುಷ್ಟಿ ನೀಡುತ್ತದೆ ನಿಕ್ಕಿ ಹ್ಯಾಲೆ ಅವರ ಈ ನೇಮಕ.

44 ವರ್ಷದ ನಿಕ್ಕಿ ಹ್ಯಾಲೆ, ಅಮೆರಿಕದ ಆಡಳಿತದಲ್ಲಿ ಕ್ಯಾಬಿನೆಟ್ ಸ್ಥಾನ ಪಡೆದ ಮೊದಲ ಭಾರತೀಯ ಮೂಲದ ಪ್ರಜೆ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಅಮೃತಸರ ಮೂಲದ ಸಿಖ್ ದಂಪತಿಗಳ ಪುತ್ರಿ ನಿಕ್ಕಿ ಹ್ಯಾಲೆ. ಈಕೆ ಕೇವಲ ಭಾರತೀಯ ಮೂಲದವಳು ಎಂಬ ಮಾತ್ರಕ್ಕೆ ಈ ನಿರ್ಧಾರ ಭಾರತದ ಪಾಲಿಗೆ ಪ್ರಮುಖವಾಗಿಲ್ಲ. ಈ ನಿರ್ಧಾರ ಭಾರತಕ್ಕೆ ಮಹತ್ವವಾಗಲು ಬೇರೆಯದೇ ಕಾರಣವಿದೆ.

ಅದೇನಂದ್ರೆ, ವಿಶ್ವ ಸಂಸ್ಥೆ ಭದ್ರತಾ ಸಮಿತಿಯಲ್ಲಿ ಭಾರತ ಖಾಯಂ ಸದಸ್ಯತ್ವ ಪಡೆಯಬೇಕೆಂದು 2010ರಿಂದಲೂ ಬೆಂಬಲಿಸುತ್ತಲೇ ಬಂದವರು ನಿಕ್ಕಿ ಹ್ಯಾಲೆ. 2010ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ನವದೆಹಲಿಗೆ ಪ್ರವಾಸ ಮಾಡುವ ಹಲವು ವಾರಗಳ ಮುನ್ನವೇ ನಿಕ್ಕಿ ಹ್ಯಾಲೆ, ಭಾರತವು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಖಾಯಂ ಸ್ಥಾನ ಪಡೆಯಬೇಕು ಎಂಬ ಅಂಶವನ್ನು ಪ್ರಸ್ತಾಪಿಸಿದ್ದರು ಹಾಗೂ ತಮ್ಮ ವಾದಕ್ಕೆ ಬದ್ಧರಾಗಿದ್ದರು ಕೂಡ. ಹೀಗಾಗಿ ಈಕೆ ವಿಶ್ವಸಂಸ್ಥೆಯ ಅಮೆರಿಕ ಪ್ರತಿನಿಧಿಯಾಗಿರೋದು ಭಾರತಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಲಿದೆ. ಅಮೆರಿಕ ನೂತನ ಅಧ್ಯಕ್ಷರ ನಡೆಯನ್ನು ಅವಲೋಕಿಸುತ್ತಿರುವ ಭಾರತದ ಅಧಿಕಾರಿಗಳು ಈ ನಿರ್ಧಾರವನ್ನು ವ್ಯಾಖ್ಯಾನಿಸುವುದು ಹೀಗೆ… ‘ಈ ನಿರ್ಧಾರದಿಂದ ಅಮೆರಿಕ ಭವಿಷ್ಯದಲ್ಲಿ ಭಾರತಕ್ಕೆ ಉತ್ತಮ ರೀತಿಯ ಸಹಕರಾರವನ್ನು ನೀಡಲಿದೆ ಎಂಬುದಕ್ಕೆ ಸೂಚನೆ.’

ನಿಕ್ಕಿ ಹ್ಯಾಲೆ ಅವರ ಆಯ್ಕೆಯಿಂದ ಅಮೆರಿಕ ಆಡಳಿತದಲ್ಲಿ ಭಾರತೀಯ ಮೂಲದ ರಾಜಕಾರಣಿಗಳು ಹೆಚ್ಚಿನ ಪ್ರಾಶಸ್ತ್ಯ ಪಡೆಯುತ್ತಿರುವುದಕ್ಕೂ ಸಾಕ್ಷಿಯಾಗಿದೆ. ಅಧ್ಯಕ್ಷೀಯ ಆಡಳಿತ ವ್ಯವಸ್ಥೆಯಲ್ಲಿ ಅಮೆರಿಕದ ಗೃಹ ಕಾರ್ಯದರ್ಶಿಯ ನಂತರ ವಿಶ್ವಸಂಸ್ಥೆ ಪ್ರತಿನಿಧಿ ಹುದ್ದೆ ಅತ್ಯಂತ ಪ್ರಮುಖ ಹಾಗೂ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಸ್ಥಾನಕ್ಕೆ ಭಾರತದ ಪರ ಧ್ವನಿ ಎತ್ತುವ ನಿಕ್ಕಿ ಹ್ಯಾಲೆ ಆಯ್ಕೆಯಾಗಿರುವುದನ್ನು ಭಾರತ ಸ್ವಾಗತಿಸಲಿದೆ.

ನಿಕ್ಕಿ ಹ್ಯಾಲೆ ಭಾರತ ಸರ್ಕಾರದ ಜತೆಗೂ ಉತ್ತಮ ಸಂಪರ್ಕ ಹೊಂದಿದ್ದಾರೆ. 2014ರ ಸೆಪ್ಟೆಂಬರ್ ನಲ್ಲಿ ಮೋದಿ ಅಮೆರಿಕ ಪ್ರವಾಸ ಮಾಡಿದ ನಂತರ ನಿಕ್ಕಿ ಹ್ಯಾಲೆ ಅವರು ಎರಡು ಬಾರಿ ಮೋದಿ ಅವರನ್ನು ಭೇಟಿ ಮಾಡಿ ಉಭಯ ದೇಶಗಳ ಸಂಬಂಧ ವೃದ್ಧಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ಗಟ್ಟಿಯಾಗಿಸುವ ನಿಟ್ಟಿನಲ್ಲಿ ಒಬಾಮಾ 2014ರಲ್ಲಿ ಭಾರತದ ಅಮೆರಿಕ ರಾಯಭಾರಿಯನ್ನಾಗಿ ಭಾರತ ಮೂಲದವರೇ ಆದ ರಿಚರ್ಡ್ ವರ್ಮಾ ಅವರನ್ನು ನೇಮಕ ಮಾಡಿದ್ದರು. ಈಗ ಟ್ರಂಪ್ ಅವರ ನಿರ್ಧಾರ ನವದೆಹಲಿ ಮತ್ತು ವಾಶಿಂಗ್ಟನ್ ನಡುವಣ ಸ್ನೇಹ ಸೇತುವೆಯನ್ನು ಮತ್ತಷ್ಟು ಗಟ್ಟಿಯಾಗಿಸಲಿದೆ ಎಂಬುದು ಪಂಡಿತರ ಬಣ್ಣನೆ.

Leave a Reply