ನೋಟು ರದ್ದತಿ ಅನುಷ್ಠಾನದಲ್ಲಾಗುತ್ತಿದೆ ಜನರ ಲೂಟಿ- ತಾವು ಪ್ರಧಾನಿಯಾಗಿದ್ದಾಗ ಕೊಳ್ಳೆ ಕಾರ್ಯಗಳ ಬಗ್ಗೆ ದಿವ್ಯಮೌನದಲ್ಲಿದ್ದವರ ಮನಮೋಹಕ ಮಾತುಗಾರಿಕೆ!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮಾತನಾಡಿದರು ಎಂಬುದು ಗುರುವಾರದ ಬ್ರೇಕಿಂಗ್ ನ್ಯೂಸ್.

ಕೇಂದ್ರ ಸರ್ಕಾರದ ನೋಟು ರದ್ದು ನೀತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಸುತ್ತ ತಿರುಗುವುದನ್ನು ಬಿಟ್ಟು, ಈ ಬಾರಿ ಒಳ್ಳೆಯ ಆಶ್ಚರ್ಯಕರ ಏಟನ್ನೇ ನೀಡಿತು. ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞರೂ ಆಗಿರುವ ಮನಮೋಹನ ಸಿಂಗ್ ಅವರನ್ನು ಮಾತಿಗಿಳಿಸುವ ಮೂಲಕ ಸರ್ಕಾರದ ವಿರುದ್ಧದ ಕದನವನ್ನು ರಂಗೇರಿಸಿದ್ದು ಸುಳ್ಳಲ್ಲ.

ಮನಮೋಹನ ಸಿಂಗ್ ಅವರೂ ಭರ್ಜರಿಯಾಗಿಯೇ ಮಾತನಾಡಿದ್ದು ಸುಳ್ಳಲ್ಲ. ಹತ್ತು ವರ್ಷಗಳ ಯುಪಿಎ ಆಡಳಿತದ ಉತ್ತರಾರ್ಧದಲ್ಲಿ ದಿನಕ್ಕೊಂದರಂತೆ ಲೂಟಿ- ಹಗರಣಗಳ ಅಧ್ಯಾಯ ತೆರೆದುಕೊಳ್ಳುತ್ತಿದ್ದರೂ ಮಾತಾಡದಿದ್ದ ಅಂದಿನ ಪ್ರಧಾನಿ, ಅವೆಲ್ಲ ಮೌನಗಳಿಗೆ ಕಂದಾಯ ಕಟ್ಟುವಂತೆ ಇಂದು ಮಾತಾಡಿದರು. ನೋಟು ಅಮಾನ್ಯ ಪ್ರಕ್ರಿಯೆಯೇ ಒಂದು ಸಂಘಟಿತ ಲೂಟಿ ಹಾಗೂ ದೇಶವನ್ನು ಕಾನೂನಿನ ಹೆಸರಲ್ಲೇ ಕೊಳ್ಳೆ ಹೊಡೆಯುತ್ತಿರುವ ವಿಧಾನ ಎಂದು ವರ್ಣಿಸುವುದಕ್ಕೂ ಅವರು ಹಿಂದೆಗೆಯಲಿಲ್ಲ.

ಕೇಂದ್ರ ಸರ್ಕಾರವನ್ನು ಅತಿಯಾಗಿಯೇ ತರಾಟೆಗೆ ತೆಗೆದುಕೊಂಡ ಮನಮೋಹನ ಸಿಂಗ್ ಮಾತುಗಳಲ್ಲಿ ಕಾಂಗ್ರೆಸ್ಸಿನ ಎಂದಿನ ‘ಆದರೆ..’ ಕಾರ್ಯತಂತ್ರವಿತ್ತು. ನಾವೇನೂ ನೋಟು ರದ್ಧತಿಯ ವಿರುದ್ಧವಾಗಿಲ್ಲ, ಆದರೆ… ಎಂದೇ ಕಾಂಗ್ರೆಸ್ಸಿನ ವಾದ ಶುರುವಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ವಾದವೂ ಈ ಬಿಂದುವಿನಿಂದಲೇ ಶುರುವಾಯಿತು.

  • ನೋಟು ಅಮಾನ್ಯ ಮಾಡುವುದು ಕಾಳಧನ, ಉಗ್ರರಿಗೆ ಹಣ, ಖೋಟಾ ನೋಟು ಇವೆಲ್ಲವನ್ನೂ ತಡೆಯಲು ಇರುವ ಮಾರ್ಗ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಈ ಉದ್ದೇಶಗಳ ಬಗ್ಗೆ ನನಗೇನೂ ತಕರಾರಿಲ್ಲ. ಆದರೆ ಯೋಜನೆ ಅನುಷ್ಠಾನವು ಅತಿ ಅವ್ಯವಸ್ಥೆಯಿಂದ ಕೂಡಿದೆ ಎಂಬ ಬಗ್ಗೆ ದೇಶದಲ್ಲಿ ಎರಡು ಮಾತಿಲ್ಲ.
  • ಸಣ್ಣ ಅವಧಿಗೆ ತಾಪತ್ರಯಗಳಾದರೂ ದೀರ್ಘ ನಡಿಗೆಯಲ್ಲಿ ಒಳ್ಳೆಯದಾಗಲಿದೆ ಎಂಬುವವರಿಗೆ ನಾನು ಅರ್ಥಶಾಸ್ತ್ರಜ್ಞ ಕೇಯ್ನ್ ಮಾತನ್ನು ನೆನಪಿಸಲು ಇಚ್ಛಿಸುತ್ತೇನೆ. ‘ಈ ದೀರ್ಘ ನಡೆ ಮುಗಿಯುವ ಹೊತ್ತಿಗೆ ನಾವೆಲ್ಲ ಸತ್ತಿರುತ್ತೇವೆ.’
  • ಐವತ್ತು ದಿನದ ಮಟ್ಟಿಗೆ ಕಾಯಿರಿ ಎನ್ನುತ್ತಿದ್ದಾರೆ ಪ್ರಧಾನಿ. ಆದರೆ ಬಡವರು ಮತ್ತು ವಂಚಿತ ವರ್ಗಕ್ಕೆ 50 ದಿನ ದೊಡ್ಡ ಅವಧಿ. ಈಗಾಗಲೇ ಎಟಿಎಂ ಮತ್ತು ಬ್ಯಾಂಕುಗಳ ಹೊರಗೆ ನಿಂತು 60-65 ಮಂದಿ ಮೃತರಾಗಿದ್ದಾರೆ. ಇವೆಲ್ಲ ಆದ ನಂತರವೂ ನೋಟು ಅಮಾನ್ಯದ ಫಲ ಏನು ಸಿಗಲಿದೆಯೆಂಬುದು ನಮಗ್ಯಾರಿಗೂ ಖಾತ್ರಿ ಇಲ್ಲ.
  • ಈಗಿನ ವಿದ್ಯಮಾನದಿಂದ ನಮ್ಮ ಜನರಿಗೆ ಕರೆನ್ಸಿ ಮೇಲಿನ ನಂಬಿಕೆಯೇ ಹೊರಟುಹೋಗಬಹುದು. ತಮ್ಮದೇ ಹಣವನ್ನು ಬ್ಯಾಂಕುಗಳಿಂದ ತಿರುಗಿ ಪಡೆದುಕೊಳ್ಳುವುದಕ್ಕೆ ನಿಯಂತ್ರಣ ಹೇರಿರುವ ಜಗತ್ತಿನ ಯಾವುದಾದರೂ ಒಂದು ದೇಶದ ಉದಾಹರಣೆ ಇದೆಯೇ?
  • ನೋಟು ಅಮಾನ್ಯ ನೀತಿ ಕೃಷಿ ಕ್ಷೇತ್ರ ಹಾಗೂ ಸಣ್ಣ ಕೈಗಾರಿಕೆಗಳ ಮೇಲೆ ಉಂಟುಮಾಡಿರುವ ದುಷ್ಪರಿಣಾಮವೇ ಸಾಕು ಇದನ್ನು ವಿರೋಧಿಸುವುದಕ್ಕೆ. ನನ್ನ ಅಭಿಪ್ರಾಯದಲ್ಲಿ ಇದು ಕೃಷಿ, ಸಣ್ಣ ಉದ್ದಿಮೆ ಮತ್ತು ಅನೌಪಚಾರಿಕ ಕ್ಷೇತ್ರಗಳ ಬೆಳವಣಿಗೆಯನ್ನು ಕುಗ್ಗಿಸಿ ಜಿಡಿಪಿ ದರವನ್ನು ಶೇ. 2ರಷ್ಟು ಕುಗ್ಗಿಸಲಿದೆ. ಇವನ್ನೆಲ್ಲ ತಡೆದು ಸಾಮಾನ್ಯರ ಕಷ್ಟಗಳನ್ನು ತಗ್ಗಿಸುವುದಕ್ಕೆ ಪ್ರಧಾನಿ ರಚನಾತ್ಮಕ ಪ್ರಸ್ತಾವವನ್ನು ಇಡಬೇಕು.
  • ಬ್ಯಾಂಕುಗಳಲ್ಲಿ ದಿನಕ್ಕೊಂದು ನಿಯಮದ ತಿದ್ದುಪಡಿ ಆಗುತ್ತಿರುವುದು ಪ್ರಧಾನಿ ಕಾರ್ಯಾಲಯ, ವಿತ್ತ ಸಚಿವಾಲಯ, ಆರ್ಬಿಐ ಇವೆಲ್ಲ ಕೆಟ್ಟ ಸ್ಥಿತಿಯಲ್ಲಿರುವುದನ್ನು ತೋರಿಸುತ್ತದೆ.

Leave a Reply