ಕೇಂದ್ರ ನೆರವು ನೀಡಿದರೆ ಮಾತ್ರ ಸಾಲ ಮನ್ನಾ ಅಂದ್ರು ಮುಮಂ, ವಿಪಕ್ಷಗಳ ಪ್ರತಿಭಟನೆಗೆ ಬಲಿಯಾದ ಸಂಸತ್ ಕಲಾಪ, ಡಾಲರ್ ಮುಂದೆ ಐತಿಹಾಸಿಕ ಕುಸಿತ ಕಂಡ ರುಪಾಯಿ ಮೌಲ್ಯ

ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕಿದ ಹಳೆಯ ₹ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬುಧವಾರ ಎಣಿಕೆ ಮಾಡುತ್ತಿರುವ ದೃಶ್ಯ.

ಡಿಜಿಟಲ್ ಕನ್ನಡ ಟೀಮ್:

‘ಕೇಂದ್ರದಿಂದ ಶೇ.50 ರಷ್ಟು ನೆರವು ಸಿಗದಿದ್ದರೆ ಸಾಲ ಮನ್ನಾ ಸಾಧ್ಯವೇ ಇಲ್ಲ…’ ಇದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದ ಮಾತು. ಕಾಲಪದಲ್ಲಿ ರೈತರ ಸಮಸ್ಯೆ ಹಾಗೂ ಸಾಲ ಮನ್ನಾ ವಿಷಯ ಪ್ರಸ್ತಾಪದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದಿಷ್ಟು:

‘ರಾಜ್ಯದಲ್ಲಿ ಬರ ಪರಿಹಾರ ಮತ್ತು ರೈತರ ಸಾಲ ಮನ್ನಾ ಮಾಡುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಡ ಹಾಕಲು ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯುತ್ತೇನೆ. ಕೇಂದ್ರ ಸರ್ಕಾರ ಸಹಕಾರ ನೀಡಿದರೆ ಮಾತ್ರ ಸಾಲ ಮನ್ನಾ ಸಾಧ್ಯ. ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ನೋಟು ಬದಲಾವಣೆ ನಿರ್ಧಾರದಿಂದ ಸರ್ಕಾರಕ್ಕೆ 3 ಸಾವಿರ ಕೋಟಿ ಹೆಚ್ಚುವರಿಯಾಗಿ ಹೊರೆ ಬೀಳಲಿದೆ. ಆದರೆ ಕೇಂದ್ರಕ್ಕೆ 2-3 ಲಕ್ಷ ಕೋಟಿ ಆದಾಯ ಬಂದಿದೆ. ನಮಗೆ ನಷ್ಟವಾಗಿದೆ ಈ ಸಂದರ್ಭದಲ್ಲಿ ಸಾಲ ಮನ್ನಾ ಮಾಡಿ ಎಂದರೆ ಕಷ್ಟವಾಗುತ್ತದೆ. ಕೇಂದ್ರ ಶೇ.50 ರಷ್ಟು ಸಹಾಯ ಮಾಡಿದರೆ ಸಾಲ ಮನ್ನಾ ಮಾಡಬಹುದು.’

ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸಭಾತ್ಯಾಗ ಮಾಡಿದವು.

ಉಳಿದಂತೆ ಅಧಿವೇಶನದ ಪ್ರಮುಖ ಅಂಶಗಳು…

  • ರಾಜ್ಯದಲ್ಲಿನ ತಜ್ಞ ವೈದ್ಯರ ಕೊರತೆ ನೀಗಿಸಲು ಈಗಿರುವ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಹೆಚ್ಚುವರಿಯಾಗಿ ಡಿಪ್ಲೊಮೋ ಪದವಿ ಕಲಿಕೆಗೆ ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ಪ್ರಸ್ತಾಪವಾದ ನಂತರ, ‘ವಿವಿಧ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ತಜ್ಞ ವೈದ್ಯರು ಸರ್ಕಾರಿ ಸೇವೆಯಲ್ಲಿ ಕಾರ್ಯ ನಿರ್ವಹಿಸಲು ಮುಂದೆ ಬರುತ್ತಿಲ್ಲ. ಅವರಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಈಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರಿಗೆ ಹೆಚ್ಚುವರಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡುತ್ತೇವೆ’ ಎಂದರು.
  • ದರೋಡೆ, ಅತ್ಯಾಚಾರದಂತಹ ಕಾನೂನು ವಿರೋಧಿ ಕೃತ್ಯಗಳನ್ನು ಯಾರೇ ನಡೆಸಿದರು ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಗೃಹ ಸಚಿವ ಪರಮೇಶ್ವರ್. ರಾಜ್ಯದಲ್ಲಿ ಕೊಲೆ, ದರೋಡೆ ನಡೆಯುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಸಮಾಜಘಾತುಕ ಶಕ್ತಿ ಹತ್ತಿಕ್ಕಲು ಸರ್ಕಾರ ಬದ್ಧವಾಗಿದೆ. ಈ ಕೃತ್ಯಗಳನ್ನು ಯಾರೇ ಮಾಡಿ ಅದು ಆರೆಸ್ಸೆಸ್ ನವರಾಗಲಿ ಅಥವಾ ಕಾಂಗ್ರೆಸ್ ನವರಾಗಲಿ ಕಠಿಣ ಶಿಕ್ಷೆ ಖಚಿತ ಎಂದರು. ರಾಜ್ಯದ 6 ಕಡೆ ಮಹಿಳಾ ದೌರ್ಜನ್ಯ ತಡೆ ಘಟಕ ಸ್ಥಾಪಿಸಲಾಗಿದೆ, ಇದೇ ರೀತಿ ನಗರ ಪಾಲಿಕೆ, ಮಹಾನಗರ ಪಾಲಿಕೆ, ಶಿಕ್ಷಣ ಸಂಸ್ಥೆ, ಮಾರುಕಟ್ಟೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
  • ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಅಗತ್ಯ ಇರುವ 5564 ಹುದ್ದೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಭರ್ತಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾಹಿತಿ ನೀಡಿದರು. 460 ಚಿತ್ರಕಲಾ ಶಿಕ್ಷಕರು, 588 ವಾರ್ಡನ್ ಗಳು, 455 ಎಫ್ಡಿಎಗಳು, 3027 ಶಿಕ್ಷಕರು, 406 ನೃತ್ಯ ಶಿಕ್ಷಕರು, 246 ಸಂಗೀತ ಶಿಕ್ಷಕರು ಸೇರಿ ಒಟ್ಟು 5564 ಹುದ್ದೆಗೆ ನೇಮಕಾತಿ ಮಾಡಲು ಕೆಪಿಎಸ್ಸಿಗೆ ಶಿಫಾರಸ್ಸು ಮಾಡಲಾಗಿದೆ.
  • ಆಧಾರ್ ಸಂಖ್ಯೆ ನೋಂದಣಿ ಮಾಡದ ಪಡಿತರ ಕಾರ್ಡುಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವುದನ್ನು ನಿಲ್ಲಿಸಿಲ್ಲ ಹಾಗೂ ಯಾವುದೇ ಕಾರ್ಡುಗಳನ್ನು ರದ್ದುಪಡಿಸಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ. ರಾಜ್ಯದಲ್ಲಿ 3 ಕೋಟಿ 12 ಲಕ್ಷ ಪಡಿತರ ಚೀಟಿಗಳಿದ್ದು, ಆ ಪೈಕಿ 3 ಕೋಟಿ 9 ಲಕ್ಷ ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆ ನೋಂದಣಿ ಮಾಡಲಾಗಿದೆ ಎಂದರು.
  • ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡುವ ಸಂಬಂಧ ಮುಂದಿನ ಬಜೆಟ್ ನಲ್ಲಿ ಹೊಸ ವೇತನ ಆಯೋಗ ರಚನೆ ಮಾಡುವುದಾಗಿ ಸಿಎಂ ವಿಧಾನ ಸಭೆಯಲ್ಲಿ ಪ್ರಕಟಿಸಿದರು. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಹಲವು ದಿನಗಳಿಂದ ಬೇಡಿಕೆ ಇದೆ. 2017ರ ಬಜೆಟ್ ನಲ್ಲಿ ಹೊಸ ವೇತನ ಆಯೋಗದ ಘೋಷಣೆ ಮಾಡಲಾಗುವುದು ಎಂದರು.
  • 2018ರ ಬಜೆಟ್ ಅನ್ನು ನಾನೇ ಮಂಡನೆ ಮಾಡುತ್ತೇನೆ. ಆನಂತರ ಚುನಾವಣೆಗೆ ಹೋಗಿ ಮತ್ತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಪ್ರಶ್ನೋತ್ತರ ವೇಳೆ ಚುನಾವಣೆ ದೃಷ್ಟಿಕೋನದಲ್ಲಿ ವೇತನ ಆಯೋಗ ರಚನೆ ಬೇಡ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ‘ಬಿಜೆಪಿ, ಜೆಡಿಎಸ್ ಎಷ್ಟೇ ತಿಪ್ಪರಲಾಗ ಹಾಕಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ನೇತೃತ್ವದ ನನ್ನ ಸರ್ಕಾರವೇ ಬರಲಿದೆ’ ಎಂದರು.

ಸಂಸತ್ ಅಧಿವೇಶನದಲ್ಲಿ ಮುಂದುವರಿದ ವಿಪಕ್ಷಗಳ ಪ್ರತಿಭಟನೆ

ಈ ಬಾರಿಯ ಚಳಿಗಾಲದ ಅಧಿವೇಶನ ಸಂಪೂರ್ಣವಾಗಿ ನೋಟು ಬದಲಾವಣೆಯ ನಿರ್ಧಾರದ ವಿರೋಧಕ್ಕೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಧಿವೇಶನದ ಆರನೇ ದಿನವಾದ ಗುರುವಾರವೂ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರಿಸಿದವು. ಲೋಕಸಭೆಯಲ್ಲಿ ನಡೆದ ಪ್ರತಿಭಟನೆ ವೇಳೆ ಸಮಾಜವಾದಿ ಪಕ್ಷದ ಸಂಸದರು ಕೆಲವು ಹಾಳೆಗಳನ್ನು ಹರಿದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮೇಲೆ ಎಸೆದು ಅಗೌರವ ತೋರಿದ್ದಾರೆ. ಈ ಘಟನೆ ನಂತರ ಲೋಕಸಭೆಯಲ್ಲಿ ಯಾವುದೇ ಚರ್ಚೆಯಾಗದೇ ಕಲಾಪ ನಾಳೆಗೆ ಮುಂದೂಡಲಾಯಿತು.

ಇನ್ನು ರಾಜ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ ಆಗಮಿಸಿದರು. ಈ ವೇಳೆ ನೋಟು ಬದಲಾವಣೆ ಕುರಿತಂತೆ ಚರ್ಚೆ ನಡೆದು ಕಾಂಗ್ರೆಸ್ ನ ಮನಮೋಹನ್ ಸಿಂಗ್, ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್ ಈ ವಿಚಾರವಾಗಿ ವಾದ ಮಂಡಿಸಿದರು. ನಂತರ ಭೋಜನ ವಿರಾಮದ ಬಳಿಕ ಪ್ರಧಾನಿ ಅವರು ಲೋಕಸಭೆಯಲ್ಲಿ ಹಾಜರಾಗದ ಪರಿಣಾಮ ಮತ್ತೆ ಗದ್ದಲ ಎದ್ದಿತು. ಹೀಗಾಗಿ ಚರ್ಚೆ ಅಲ್ಲಿಗೆ ನಿಂತು ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಕಲಾಪ ಮುಂದೂಡಿದ ನಂತರ ಹೊರಗೆ ಬಂದು ಮಾಧ್ಯಮದವರ ಜತೆ ಮಾತನಾಡಿದ ಅರುಣ್ ಜೇಟ್ಲಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಈ ವೇಳೆ ಅವರು ಹೇಳಿದಿಷ್ಟು:

‘ಕಪ್ಪು ಹಣ ತಡೆಯುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಆದರೆ ಇದನ್ನು ವಿರೋಧಿಸುತ್ತಿರುವ ವಿಪಕ್ಷಗಳು ಅನಗತ್ಯ ಕಾರಣಗಳನ್ನು ಹುಡುಕಿಕೊಂಡು ಸಂಸತ್ತಿನಿಂದ ಪಲಾಯನ ಮಾಡುತ್ತಿವೆ. ಈ ವಿಚಾರವಾಗಿ ಯಾವುದೇ ಚರ್ಚೆ ನಡೆಯಬಾರದು ಎಂದು ವಿಪಕ್ಷಗಳು ತೀರ್ಮಾನಿಸಿರುವುದು ಸ್ಪಷ್ಟವಾಗಿದೆ. ಸಂಸತ್ತಿನಲ್ಲಿ 15 ಗಂಟೆಗಳ ಕಾಲ ಚರ್ಚೆ ನಡೆದರೆ ಅಷ್ಟೂ ಕಾಲ ಪ್ರಧಾನಿ ಉಪಸ್ಥಿತರಿರಲೇ ಬೇಕು ಎಂಬ ಸಂಪ್ರದಾಯವೇನಿಲ್ಲ. ಭೋಜನ ವಿರಾಮದ ವರೆಗೂ ಪ್ರಧಾನಿ ಅವರು ರಾಜ್ಯಸಭೆಯಲ್ಲಿ ಹಾಜರಾಗಿದ್ದರು. ಈ ವಿಷಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ವಿಪಕ್ಷಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಇನ್ನು ಸರ್ಕಾರದ ನಿರ್ಧಾರ ಕೆಟ್ಟದ್ದು ಎಂದು ಬಣ್ಣಿಸುವ ಕಾಂಗ್ರೆಸ್ ನಾಯಕರಿಗೆ, 2ಜಿ ಹಗರಣ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣ ಕೆಟ್ಟ ನಿರ್ಧಾರವೆನಿಸಲಿಲ್ಲ. ಅತಿ ಹೆಚ್ಚು ಕಪ್ಪುಹಣ ಸಂಗ್ರಹಗೊಂಡಿರುವುದೇ ಮನಮೋಹನ ಸಿಂಗ್ ಆಳ್ವಿಕೆಯಲ್ಲಿ’ ಎಂದರು.

ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಲಾಪದ ಸಮಯ ವಿನಾಕಾರಣ ವ್ಯರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ಕೇಂದ್ರ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಮಂಗಳೂರು ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ತನಿಖೆಗೆ ಸರ್ಕಾರ ನೇಮಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಂಗ ತನಿಖಾ ತಂಡಕ್ಕೆ ಕೊನೆಗೂ ಕಚೇರಿ ಸಿಕ್ಕಿದೆ. ಸಮಿತಿ ರಚನೆಯಾಗಿ ಐದು ತಿಂಗಳ ಬಳಿಕ ನಗರದ ಕೆ.ಜಿ ರಸ್ತೆಯ ಕಾವೇರಿ ಭವನದಲ್ಲಿ ಕಚೇರಿ ನಿಗದಿಯಾಗಿದೆ. ಈ ತನಿಖಾ ತಂಡ ಕಚೇರಿ ಪಡೆಯುವ ಮುನ್ನವೇ ಆತ್ಮಹತ್ಯೆ ಪ್ರಚೋದನೆ ಆರೋಪ ಹೊತ್ತಿದ್ದ ಕೆ.ಜೆ ಜಾರ್ಜ್ ನಿರ್ದೋಷಿಯಾಗಿ ಮಂತ್ರಿ ಮಂಡಲಕ್ಕೆ ವಾಪಸ್ಸಾಗಿದ್ದಾರೆ. ಇನ್ನು ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್, ಪ್ರಣವ್ ಮೊಹಂತಿ ದೋಷಮುಕ್ತರಾಗಿದ್ದಾರೆ.
  • ಗುರುವಾರ ಭಾರತದ ರುಪಾಯಿ ಮೌಲ್ಯ ಭಾರಿ ಕುಸಿತ ಕಂಡಿದೆ. ಗುರುವಾರ ಆರಂಭದಲ್ಲೇ ಸುಮಾರು 22 ಪೈಸೆ ಕುಸಿತ ಕಂಡಿತ್ತು. ನಂತರ ಮಧ್ಯಾಹ್ನದ ವೇಳೆಗೆ 26 ಪೈಸೆಯಷ್ಟು ಕುಸಿದ ಪರಿಣಾಮ 1 ಡಾಲರ್ ಗೆ ₹ 68.85 ರಷ್ಟು ಕುಸಿತ ಕಂಡಿತು. ಇದು ಈವರೆಗಿನ ಅತ್ಯಂತ ದೊಡ್ಡ ಕುಸಿತವಾಗಿದೆ.

Leave a Reply