ವೈವಾಹಿಕ ಸಂಗಾತಿ ಅಕ್ರಮ ಸಂಬಂಧ ಹೊಂದಿದ್ದರೆ ವಿಚ್ಛೇದನ ಕೇಳಬಹುದೇ ಹೊರತು, ಏಕಾಏಕಿ ಮಾನಸಿಕ ಕಿರುಕುಳದ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ಎನ್ನಲಾಗದು: ಸುಪ್ರೀಂಕೋರ್ಟ್

ಡಿಜಿಟಲ್ ಕನ್ನಡ ಟೀಮ್:

‘ದಾಂಪತ್ಯದಲ್ಲಿ ಗಂಡಿನ ಅಕ್ರಮ ಸಂಬಂಧವಾಗಲಿ ಅಥವಾ ಹೆಂಡತಿಯ ಅನುಮಾನಾಸ್ಪದ ನಡೆಯಾಗಲಿ ಈ ಕಾರಣಗಳನ್ನಿಟ್ಟುಕೊಂಡು ವಿವಾಹ ವಿಚ್ಛೇದನ ಕೇಳಬಹುದೇ ಹೊರತು, ಆತ್ಮಹತ್ಯೆಗೆ ಪ್ರಚೋದನೆ ಎಂದು ಆರೋಪಿಸಲಾಗುವುದಿಲ್ಲ. ಈ ಬಗ್ಗೆ ನಿಖರ ನಿರ್ಧಾರಕ್ಕೆ ಬರುವುದಕ್ಕೆ ಮುಂಚೆ ಪರಿಸ್ಥಿತಿ ಅವಲೋಕಿಸಬೇಕಾಗುತ್ತದೆ.- ಇದು ಸುಪ್ರೀಂ ಕೋರ್ಟ್ ಪ್ರಕರಣವೊಂದರ ವಿಚಾರಣೆಯಲ್ಲಿ ನೀಡಿರುವ ತೀರ್ಪು.

ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜತೆಗೆ ಅಕ್ರಮ ಸಂಬಂಧಕ್ಕೆ ಕಾರಣವಾಗಿದ್ದ ಮಹಿಳೆಯೂ ತನಗೆ ಅಪಮಾನವಾದ ಹಿನ್ನೆಲೆಯಲ್ಲಿ ಪ್ರಾಣ ತ್ಯಜಿಸಿದ್ದಾಳೆ. ಈ ಪ್ರಕರಣದಲ್ಲಿ ದುರಂತ ಇಲ್ಲಿಗೆ ನಿಲ್ಲಲಿಲ್ಲ. ಅಕ್ರಮ ಸಂಬಂಧ ಹೊಂದಿದ್ದ ಆ ಗಂಡಿನ ತಾಯಿ ಹಾಗೂ ಸಹೋದರ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.

ಈ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಹೊತ್ತಿದ್ದ ವ್ಯಕ್ತಿಯ ವಿರುದ್ಧ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳ ಎಂದು ಪರಿಗಣಿಸಿ ಐಪಿಸಿ 306 (ಆತ್ಮಹತ್ಯೆಗೆ ಪ್ರೇರಣೆ) ದಾಖಲಿಸಿ, ಐಪಿಸಿ 498ಎ (ವಿವಾಹಿತೆಗೆ ಗಂಡ ಮತ್ತು ಆತನ ಕುಟುಂಬದವರಿಂದ ದೌರ್ಜನ್ಯ) ಕಾಯ್ದೆ ಅಡಿಯಲ್ಲಿ ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿತ್ತು. ಅಲ್ಲದೆ ಈ ಆರೋಪಿಗೆ 4 ವರ್ಷ ಜೈಲುವಾಸ ಶಿಕ್ಷೆ ನೀಡಿತ್ತು.

ಹೈಕೋರ್ಟ್ ತೀರ್ಪಿನ ವಿರುದ್ಧ ಈ ವ್ಯಕ್ತಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ದಾಂಪತ್ಯದಾಚೆಗೆ ಅಕ್ರಮ ಸಂಬಂಧಗಳು ಮತ್ತೊಬ್ಬರನ್ನು ಆತ್ಮಹತ್ಯೆಗೆ ಉತ್ತೇಜನ ಎಂದು ಪರಿಗಣಿಸಲಾಗುವುದಿಲ್ಲ’ ಎಂದು ಹೇಳಿದೆ. ಅಷ್ಟೇ ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಆ ವ್ಯಕ್ತಿಯ ವಿರುದ್ಧ 498 ಎ ಕಾಯ್ದೆಯಡಿ ವಿಚಾರಣೆ ನಡೆಸಿರುವುದೇ ತಪ್ಪು ಎಂದು ಅಭಿಪ್ರಾಯಪಟ್ಟಿದ್ದು ಆತನನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.

‘ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಇಟ್ಟುಕೊಂಡಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಮಾನಸಿಕ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕಿರುಕುಳ ಕೇವಲ ದೈಹಿಕ, ಮಾನಸಿಕ ಅಥವಾ ಅಸಹಜ ವರ್ತನೆಯಿಂದಲೇ ಆಗಬೇಕೆಂದಿಲ್ಲ ನಿಜ. ಆದರೆ ಇದು ಆಯಾ ಪ್ರಕರಣದ ಸನ್ನಿವೇಶ ಹಾಗೂ ಸಾಕ್ಷ್ಯಾಧಾರಗಳ ಮೇಲೆ ಅವಲಂಬಿತವಾಗುತ್ತದೆ. ಒಬ್ಬ ವ್ಯಕ್ತಿ ವಿವಾಹದ ನಂತರವೂ ಅಕ್ರಮ ಸಂಬಂಧ ಹೊಂದಿದರೆ ಎಲ್ಲಾ ಸಂದರ್ಭಗಳಲ್ಲೂ ಆ ಪ್ರಕರಣವನ್ನು 306 ಕಾಯ್ದೆ (ಆತ್ಮಹತ್ಯೆಗೆ ಪ್ರೇರಣೆ) ಅಡಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆದರೆ ಅಕ್ರಮ ಸಂಬಂಧವನ್ನು ವಿವಾಹ ವಿಚ್ಛೇದನ ನೀಡಲು ಕಾರಣವಾಗಿ ಪರಿಗಣಿಸಬಹುದು…’ ಎಂದಿದೆ ಕೋರ್ಟ್.

Leave a Reply