ವಿವಾದಗಳಿಂದಲೇ ಸುದ್ದಿಯಾಗುತ್ತಿರೋ ಭಾರತೀಯ ಪನೋರಮಾ ತನ್ನ ಉದ್ದೇಶದಿಂದ ದೂರ ಸರಿಯುತ್ತಿದೆಯೆ?

author-ssreedhra-murthyಗೋವಾದಲ್ಲಿ ನಡೆಯುತ್ತಿರುವ 47ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಈ ವರ್ಷದ ಪನೋರಾಮಾ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಕನ್ನಡಿಗ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಅವರು ‘ಹಿಂದಿ ಚಿತ್ರಗಳು ಸ್ಪರ್ಧೆಯಿಂದ ವಿನಾಯತಿ ಪಡೆದು ನೇರವಾದ ಆಯ್ಕೆಯನ್ನು ಪಡೆಯುತ್ತಿರುವ ಬಗ್ಗೆ’ ಆಕ್ಷೇಪವನ್ನು ಎತ್ತಿದ್ದರು. ಇಷ್ಟು ವರ್ಷ ಪಿಸುಮಾತಿಗೆ ಸೀಮಿತವಾಗಿದ್ದ ಆಕ್ಷೇಪ ಈಗ ಅಧ್ಯಕ್ಷರ ಬಾಯಿಂದ ಬಂದ ಕಾರಣ ಹೆಚ್ಚಿನ ಮಹತ್ವ ಪಡೆಯಿತು. ಅದರಲ್ಲೂ ಈ ವರ್ಷ ಆಯ್ಕೆಯಾಗಿರುವ ಸುಲ್ತಾನ್, ಏರ್‍ ಲಿಫ್ಟ್, ಬಾಜಿರಾವ್ ಮಸ್ತಾನಿ ಚಿತ್ರಗಳು ಮೂಲತಃ ವ್ಯಾಪಾರಿ ನೆಲೆಯಿಂದ ಬಂದವುಗಳಾಗಿದ್ದರಿಂದ ಪ್ರಕ್ರಿಯೆಯ ಸ್ವರೂಪ ಅನುಮಾನ ಹುಟ್ಟಿಸಿತು. ‘ಈ ಚಿತ್ರಗಳು ಆಯ್ಕೆಯಾಗ ಬಹುದಾದರೆ ಕಬಾಲಿ ಏಕೆ ಆಯ್ಕೆಯಾಗಬಾರದು’ ಎನ್ನುವ ಬಾಬು ಅವರ ಆಕ್ಷೇಪಣೆ ಸಮರ್ಥನೀಯವೇ ಆಗಿದೆ. ಆದರೆ ಅವರ ಇನ್ನೊಂದು ಆಕ್ಷೇಪಣೆ ‘ಪನೋರಮಾದಲ್ಲಿ ದಕ್ಷಿಣ ಭಾರತದ ಚಿತ್ರಗಳಿಗೆ ಮಹತ್ವ ದೊರೆಯುತ್ತಿಲ್ಲ’ ಎನ್ನುವುದು ಸರಿಯಲ್ಲವೇನೋ. ಏಕೆಂದರೆ ಮೊದಲಿಂದಲೂ ಪನೋರಮಾದಲ್ಲಿ ಕನ್ನಡ, ಮಲೆಯಾಳಂ ಚಿತ್ರಗಳು ಸಿಂಹಪಾಲನ್ನು ಪಡೆಯುತ್ತಲೇ ಬಂದಿವೆ. ಎಷ್ಟರ ಮಟ್ಟಿಗೆ ಎಂದರೆ 1978ರಲ್ಲಿ ಹನ್ನೊಂದು ಕನ್ನಡ ಚಿತ್ರಗಳು ಪನೋರಮಾಕ್ಕೆ ಆಯ್ಕೆಯಾಗಿರುವುದು ಒಂದು ದಾಖಲೆಯಾಗಿ ಉಳಿದಿದೆ. ಹಂಸಗೀತೆ, ಚಂಡಮಾರುತ, ಪಲ್ಲವಿ, ಘಟಶ್ರಾದ್ದ, ಕನಕಾಂಬರ, ಋಷ್ಯಶೃಂಗ, ಕಾಕನ ಕೋಟೆ, ಕೋಕಿಲ, ಹುಲಿ ಬಂತು ಹುಲಿ, ಗೀಜಗನ ಗೂಡು, ಕನ್ನೇಶ್ವರ ರಾಮ ಆ ವರ್ಷ ಪನೋರಮಾದಲ್ಲಿ ಪ್ರದರ್ಶಿತವಾದ ಕನ್ನಡ ಚಿತ್ರಗಳು. ಅಲ್ಲಿಂದ ಸತತವಾಗಿ 3-4 ಕನ್ನಡ ಚಿತ್ರಗಳು ಪನೋರಮಾಕ್ಕೆ ಆಯ್ಕೆಯಾಗುತ್ತಲೇ ಬಂದಿವೆ. ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ, ಟಿ.ಎಸ್.ನಾಗಾಭರಣ ಅವರ ಬಹುತೇಕ ಚಿತ್ರಗಳು ಪನೋರಮಾದಲ್ಲಿ ಕಾಣಿಸಿಕೊಂಡಿವೆ. ಆದರೆ ಕ್ರಮೇಣ ಈ ಸಂಖ್ಯೆ ಕಡಿಮೆಯಾಗುತ್ತಾ ಬಂದು. 2008ರ ನಂತರ ಒಂದು ಕನ್ನಡ ಚಿತ್ರ ಕೂಡ ಆಯ್ಕೆಯಾಗುವುದು ಕಷ್ಟವೆನ್ನುವ ಸ್ಥಿತಿ ಬಂದಿತು. ಈ ವರ್ಷ ಮೂರು ಚಿತ್ರಗಳು ಆಯ್ಕೆಯಾಗಿ ಮತ್ತೆ ಇತಿಹಾಸ ಮರುಕಳಿಸಬಹುದಾದ ಸಾಧ್ಯತೆಗಳು ಗೋಚರವಾಗುತ್ತಿವೆ.

ಇನ್ನೊಂದು ಕಡೆ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಕುರಿತೇ ಕೆಲವು ಆಕ್ಷೇಪಗಳು ಕೇಳಿ ಬಂದಿವೆ. ಪನೋರಮಾ ಎನ್ನುವುದು ಕೇವಲ ಪ್ರಶಸ್ತಿಗೆ ಸ್ಪರ್ಧೆ ನಡೆಸುವ ವಿಭಾಗ ಮಾತ್ರವಲ್ಲ. ಈ ವಿಭಾಗದಲ್ಲಿ ಭಾಗವಹಿಸಿದ ಚಿತ್ರಗಳನ್ನು ಭಾರತೀಯ ಚಿತ್ರೋತ್ಸವ ಸಮಿತಿ ಉತ್ಸವಗಳ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಪ್ರರ್ದಶಿಸಿ ಆಸಕ್ತರಿಗೆ ತಲುಪಿಸುತ್ತದೆ. ಈ ಯೋಜನೆ ರೂಪುಗೊಂಡಿದ್ದೇ ಪರ್ಯಾಯ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸಲು. ಇಲ್ಲಿನ ಆಯ್ಕೆಯ ಮಾನದಂಡ ಚಲನಚಿತ್ರ ಎನ್ನವ ಮಾಧ್ಯಮವನ್ನು ಚಿತ್ರ ಹೇಗೆ ಬೆಳೆಸಿದೆ ಎನ್ನುವುದಾಗ ಬೇಕೆ ಹೊರತು ಗಲ್ಲಾ ಪೆಟ್ಟಿಗೆಯಲ್ಲಿ ಎಂತಹ ಸಾಧನೆ ಮಾಡಿದೆ ಎನ್ನುವುದಲ್ಲ ಎಂಬ ಆಕ್ಷೇಪಣೆಯನ್ನು ಪ್ರಮುಖ ನಿರ್ದೇಶಕರಾದ ಆಡೂರು ಗೋಪಾಲಕೃಷ್ಣ ಮತ್ತು ಬುದ್ದದೇವ ದಾಸಗುಪ್ತ ಎತ್ತಿದ್ದಾರೆ. ಸ್ಪರ್ಧೆಯಲ್ಲಿರುವ ಚಿತ್ರಗಳ ಪಟ್ಟಿಯನ್ನು ನೋಡಿದಾಗ ಈ ಆಕ್ಷೇಪಣೆಯಲ್ಲಿ ಕೆಲಮಟ್ಟಿಗಿನ ಸತ್ಯಾಂಶವಿದೆ ಎನ್ನಿಸುತ್ತದೆ. ಕನ್ನಡದ ಮಟ್ಟಿಗೆ ಕೂಡ ಸ್ಪರ್ಧೆಯಲ್ಲಿದ್ದ ಪ್ರಯೋಗಶೀಲ ಚಿತ್ರಗಳಾದ ‘ಗಾಳಿ ಮತ್ತು ಬೀಜ’ ರಾಮ ರಾಮರೇ ‘ಸಂತೆಯಲ್ಲಿ ನಿಂತ ಕಬೀರ’ಗಳಿಗೆ ಅವಕಾಶ ಸಿಗ ಬಹುದಾಗಿತ್ತು. ನಿಯಮಾವಳಿ 8.6ರ ಅನ್ವಯ ನೇರ ಪ್ರವೇಶ ಪಡೆದಿರುವ ಚಿತ್ರ ‘ಬಾಹುಬಲಿ’ ಎನ್ನುವುದನ್ನು ಗಮನಿಸಿದಾಗ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಗ್ರಹಿಕೆಯೇ ಇಲ್ಲಿ ಮುಂದುವರೆದಿರುವಂತೆ ಕಾಣುತ್ತದೆ. ಇದರಿಂದ ಕ್ರಮೇಣ ಭಾರತದಲ್ಲಿ ಚಲನಚಿತ್ರ ತನ್ನ ಪ್ರಯೋಗಶೀಲತೆಯನ್ನೇ ಕಳೆದುಕೊಳ್ಳಲು ಕಾರಣವಾಗುವ ಅಪಾಯವಿದೆ. ಇವತ್ತು ಚಲನಚಿತ್ರೋತ್ಸವಗಳಲ್ಲಿ ಕೂಡ ಫಿಲಂ ಬಜಾರ್‍ಗಳು ಕಾಣಿಸಿಕೊಳ್ಳುತ್ತಿವೆ. ವ್ಯಾಪಾರವೇ ಅಂತಿಮ ಉದ್ದೇಶವಾಗಿ ಬಿಟ್ಟರೆ. ಚಲನಚಿತ್ರ ತನ್ನ ಕಲಾತ್ಮಕ ಅಯಾಮಗಳನ್ನು ಕಳೆದುಕೊಂಡು ಸರಕಾಗಿ ಬಿಡಬಲ್ಲದು.

ಈ ವರ್ಷದ ಪನೋರಮಾದಲ್ಲಿ ಇದೇ ಮೊದಲ ಸಲ ಸೆನ್ಸಾರ್ ಆಗದ ಚಿತ್ರಗಳಿಗೂ ಅವಕಾಶ ಕಲ್ಪಿಸಲಾಗಿದೆ. ಈ ನಿಯಮಾವಳಿ ಅನ್ವಯ ನಾಗಾಭರಣ ಅವರ ‘ಅಲ್ಲಮ’ಚಿತ್ರ ಪ್ರವೇಶ ಪಡೆದಿದೆ. ಶ್ಯಾಂ ಬೆನಗಲ್ ಸಮಿತಿ ವರದಿ ಜಾರಿಗೆ ಬಂದರೆ ಸೆನ್ಸಾರ್ ಮಂಡಳಿ ತನ್ನ ಶಕ್ತಿಯನ್ನು ಕಳೆದುಕೊಂಡು ಸರ್ಟಿಫಿಕೇಟ್ ನೀಡಲು ಸೀಮಿತವಾಗಲಿದೆ. ಇಂತಹ ಸಾಧ್ಯತೆಯ ಆರಂಭದ ಸುಳಿವನ್ನೂ ಇಲ್ಲಿ ಕಾಣ ಬಹುದು. ಇಲ್ಲಿರುವ ತೊಡಕು ಎಂದರೆ ಪನೋರಮಾದ ಆಯ್ಕೆ ನಿರ್ದಿಷ್ಟ ಕಾಲಾವಧಿಯಲ್ಲಿ ನಿರ್ಮಿತವಾದ ಚಿತ್ರಗಳಿಗೆ ಸೀಮಿತವಾಗಿರುತ್ತದೆ. ಸೆನ್ಸಾರ್ ಎನ್ನುವುದು ಚಿತ್ರ ಸಿದ್ದವಾದ ದಿನಾಂಕವನ್ನು ಖಚಿತವಾಗಿ ದಾಖಲಿಸುತ್ತದೆ. ಇಂತಹ ಸಂದರ್ಭದಲ್ಲಿ ಮಾನದಂಡ ಯಾವುದು ಎನ್ನುವ ಪ್ರಶ್ನೆ ಈಗಾಗಲೇ ಕೇಳಿ ಬಂದಿದೆ. ಇದಕ್ಕೆ ಉತ್ತರ ಕಂಡುಕೊಳ್ಳ ಬೇಕಾದ ಹೊಣೆಗಾರಿಕೆ ಈಗ ಚಿತ್ರೋತ್ಸವ ಸಮಿತಿಯ ಮೇಲಿದೆ.

ಅಂತರರಾಷ್ಟ್ರೀಯ ಚಿತ್ರೋತ್ಸವಗಳ ನಿಜವಾದ ಉದ್ದೇಶ ಚಲನ ಚಿತ್ರ ಮಾಧ್ಯಮದ ಕುರಿತು ಗಂಭೀರವಾಗಿ ಚಿಂತಿಸ ಬಲ್ಲ ಅಭ್ಯಾಸಿಗಳನ್ನು ಹುಟ್ಟು ಹಾಕುವುದು. ಮಾಧ್ಯಮದಲ್ಲಿನ ಗುಣಾತ್ಮಕತೆಯನ್ನು ಹೆಚ್ಚಿಸುವುದು. ಇತ್ತೀಚಿನ ದಿನಗಳಲ್ಲಿ ಈ ಉದ್ದೇಶದಿಂದ ಚಿತ್ರೋತ್ಸವಗಳು ದೂರ ಸರಿಯುತ್ತಿರುವ ಅಪಾಯ ಕಾಣುತ್ತಿದೆ. ವ್ಯಾಪಾರಿ ಚಿತ್ರಗಳಿಂದ ಬಂದವರನ್ನು ಪ್ರಮುಖ ಸ್ಥಾನದಲ್ಲಿ ಇರಿಸುವ ಸರ್ಕಾರದ ರಾಜಕೀಯ ಹಿನ್ನೆಲೆಯ ನಿಲುವು ಇದಕ್ಕೆ ಕಾರಣ ಎನ್ನುವ ನೇರವಾದ ಆಕ್ಷೇಪವನ್ನೂ ಕೂಡ ಆಡೂರು ಗೋಪಾಲಕೃಷ್ಣ ಮಾಡಿದ್ದಾರೆ. ಇದು ಪನೋರಮಾಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಇವತ್ತು ಮತಪೆಟ್ಟಿಗೆಯ ರಾಜಕೀಯ ಸಾಂಸ್ಕೃತಿಕ ಕ್ಷೇತ್ರವನ್ನೂ ಸಂಪೂರ್ಣವಾಗಿ ಆಕ್ರಮಿಸಿರುವಾಗ ಚಲನಚಿತ್ರವಾದರೂ ಅದಕ್ಕೆ ಅಪವಾದವಾಗುವುದು ಹೇಗೆ?

Leave a Reply