ಪಾಕಿಸ್ತಾನ ಮತ್ತು ಪ್ರತಿಪಕ್ಷಗಳನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸಿ ಮೋದಿ ಹೂಡುತ್ತಿರುವ ಚುನಾವಣಾ ದಾಳ, ಪಾರ್ಲಿಮೆಂಟ್ ಬಿಟ್ಟು ಪಂಜಾಬಿನಲ್ಲಿ ಮಾತಾಡಿದ್ದರ ಆಳ-ಅಗಲ

ಡಿಜಿಟಲ್ ಕನ್ನಡ ಟೀಮ್:

ಉರಿಯ ಸೇನಾ ನೆಲೆಯ ಮೇಲೆ ಪಾಕ್ ಉಗ್ರರ ದಾಳಿಯ ಬೆನ್ನಲ್ಲೇ ಸಿಂಧೂ ನದಿ ನೀರು ಒಪ್ಪಂದವನ್ನು ಮರುಪರಿಶೀಲನೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ ಮಾಡಿದ್ದು ಎಲ್ಲರಿಗೂ ತಿಳಿದಿರೋ ವಿಷಯ. ಈಗ ಅದೇ ಸಿಂಧು ನದಿ ಒಪ್ಪಂದದ ಕಾರ್ಡನ್ನು ಪಂಜಾಬ್ ಚುನಾವಣೆಗೆ ಬಳಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ರಾಜಕೀಯ ನಡೆ ತೋರಿದ್ದಾರೆ.

ಪಂಜಾಬಿನ ಭಟಿಂದಾದಲ್ಲಿ ನಿರ್ಮಾಣವಾಗುತ್ತಿರುವ ಎಐಐಎಂ ಆಸ್ಪತ್ರೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿ, ಈ ವೇದಿಕೆಯನ್ನು 2017ರ ಪಂಜಾಬ್ ಚುನಾವಣೆಗೆ ರಣತಂತ್ರ ರೂಪಿಸುವ ವೇದಿಕೆಯನ್ನಾಗಿ ಬಳಸಿಕೊಂಡರು. ಈ ಕಾರ್ಯಕ್ರಮದಲ್ಲಿ ಪಂಜಾಬ್ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಇಲ್ಲಿನ ರೈತರಿಗೆ ನೀರು ದೊರಕಿಸಿಕೊಡುವ ಬಗ್ಗೆ ಕೊಟ್ಟ ಭರವಸೆ ಹೀಗಿತ್ತು…

‘ಭಾರತೀಯ ರೈತರ ಹಕ್ಕಾಗಿರುವ ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ. ಆ ಮೂಲಕ ಸಮುದ್ರ ಸೇರುತ್ತಿದೆ. ಇತ್ತ ನಮ್ಮ ರೈತರು ಕೃಷಿ ಚಟುವಟಿಕೆಗೆ ಅಗತ್ಯವಾದ ನೀರಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಸಿಂಧು ನದಿಯ ನೀರನ್ನು ಜಮ್ಮು-ಕಾಶ್ಮೀರ ಮತ್ತು ಪಂಜಾಬ್ ರಾಜ್ಯಗಳಿಗೆ ಅತಿಹೆಚ್ಚಾಗಿ ಬಳಸಿಕೊಳ್ಳುವುದಕ್ಕೆ ನಾವು ಕಾರ್ಯತಂತ್ರ ಹಾಕಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ರೈತರಿಗೆ ಅಗತ್ಯವಾದ ನೀರನ್ನು ಪೂರೈಸಲು ನಮ್ಮಿಂದಾಗುವ ಎಲ್ಲ ರೀತಿಯ ಪ್ರಯತ್ನ ನಡೆಸುತ್ತೇವೆ. ನನಗೆ ಚುನಾವಣೆ ಮುಖ್ಯವಲ್ಲ. ನಮ್ಮ ರೈತರಿಗೆ ಅಗತ್ಯ ನೀರು ಒದಗಿಸುವುದು ನನ್ನ ಪ್ರಮುಖ ಗುರಿ’

ಹೀಗೆ ಮೋದಿ ನೀರಿನ ವಿಷಯವನ್ನೇ ಮುಂದಿನ ಚುನಾವಣೆಯ ಬ್ರಹ್ಮಾಸ್ತ್ರವನ್ನಾಗಿ ಪ್ರಯೋಗಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಪಂಜಾಬ್ ಸಾಕಷ್ಟು ಕೃಷಿಯ ಮೇಲೆ ಅವಲಂಬಿತವಾಗಿರುವ ರಾಜ್ಯ. ಸದ್ಯದ ಪರಿಸ್ಥಿತಿಯಲ್ಲಿ ಪಂಜಾಬ್ ರಾಜ್ಯವನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ನೀರಿನ ಕೊರತೆ. ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಯಮುನಾ ನದಿ ನೀರನ್ನು ಕಾಲುವೆ ಮೂಲಕ ಹರಿಸುವ ವಿಚಾರವೂ ಪ್ರಸ್ತಾಪವಾಗಿತ್ತು. ಆದರೆ ಇದಕ್ಕೆ ಪಂಜಾಬಿನಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಆ ಯೋಜನೆಯನ್ನು ಪ್ರಸ್ತಾವಿಕ ಹಂತದಲ್ಲೇ ಕೈಬಿಡಲಾಗಿದೆ.

ಇಂತಹ ಸಂದರ್ಭದಲ್ಲಿ ಮೋದಿ ಪಂಜಾಬ್ ಮತದಾರರ ಮನಸಿನಲ್ಲಿ ನೀರಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸಿಂಧೂ ನದಿ ಒಪ್ಪಂದ ಮರುಪರಿಶೀಲನೆ ಎಂಬ ಆಸೆಯೊಂದನ್ನು ಬಿತ್ತಿದ್ದಾರೆ. ನೀರು ದೊರಕಿಸುವ ವಿಷಯವೂ ಆದಂತಾಯಿತು, ಪಾಕಿಸ್ತಾನಕ್ಕೆ ತಿರುಗೇಟು ಕೊಡುತ್ತಿರುವ ಭಾವನೆಯನ್ನೂ ಮೂಡಿಸಿದಂತಾಯಿತು. ಗಡಿರಾಜ್ಯವಾಗಿರುವ ಪಂಜಾಬಿನಲ್ಲಿ ಇಂಥ ಭಾವನೆ ಚೆನ್ನಾಗಿಯೇ ಕೆಲಸ ಮಾಡೀತು.

ಇಂಥ ಭಾವನಾತ್ಮಕ ಬಿರುಸನ್ನು ತರುತ್ತಿರುವುದಕ್ಕೂ ಕಾರಣವಿದೆ.

ಪಂಜಾಬ್ ನಲ್ಲಿ ಸದ್ಯ ಅಧಿಕಾರದ ಚುಕ್ಕಾಣಿ ಹಿಡಿರುವುದು ಅಕಾಲಿ ದಳ ಮತ್ತು ಭಾರತೀಯ ಜನತಾ ಪಾರ್ಟಿಯ ಮೈತ್ರಿಕೂಟ. ಹೀಗಿದ್ದರೂ ಈ ಬಾರಿ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಮೈತ್ರಿ ಜಯ ಗಳಿಸುವುದು ಸ್ವಲ್ಪ ಕಠಿಣ ಗುರಿಯಾಗಿದೆ. ಕಾರಣ, ಪಂಜಾಬ್ ನಲ್ಲಿ ವ್ಯಾಪಕವಾಗಿ ಕಾಡುತ್ತಿರುವ ಡ್ರಗ್ಸ್ ಮಾಫಿಯಾಗೆ ಅಕಾಲಿ ದಳ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪವಿದೆ. ಇದು ಪಂಜಾಬ್ ಮತದಾರನಲ್ಲಿ ಆಡಳಿತ ವಿರೋಧಿ ಅಲೆ ಮೂಡುವಂತೆ ಮಾಡಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪಂಜಾಬ್ ಮತದಾರನ ಮನಸ್ಥಿತಿಯನ್ನು ಬದಲಾಯಿಸುವುದು ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ. ಹೀಗಾಗಿ ಮೋದಿ ನೀರಿನ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದಾರೆ.

ಇದಕ್ಕೂ ಮೊದಲು ಪಾರ್ಲಿಮೆಂಟ್ ಹೌಸಿನ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಮೋದಿ, ನೋಟು ಅಮಾನ್ಯದ ವಿರುದ್ಧ ಧ್ವನಿ ಎತ್ತಿರುವ ಪ್ರತಿಪಕ್ಷ ಪಾಳೆಯವನ್ನೆಲ್ಲ ವಿಲನ್ ಸ್ಥಾನದಲ್ಲಿ ನಿಲ್ಲಿಸುವ ಮಾತುಗಳನ್ನಾಡಿದರು. ‘ನೋಟು ಅಮಾನ್ಯ ನೀತಿ ಅನುಷ್ಠಾನಕ್ಕೆ ಸರ್ಕಾರ ಸೂಕ್ತ ತಯಾರಿ ಮಾಡಿಕೊಂಡಿಲ್ಲ ಎಂದು ಪ್ರತಿಪಕ್ಷಗಳು ದೂರುತ್ತಿವೆ. ವಾಸ್ತವದಲ್ಲಿ ಪ್ರಶ್ನೆ ಇರುವುದು ಅದಲ್ಲ. ಯೋಜನೆ ಬಗ್ಗೆ ಮೊದಲೇ ಇವರಿಗೆ ತಿಳಿಸಿ ಅವರ ತಯಾರಿಗೆ ಅನುಕೂಲ ಮಾಡಿಕೊಡಲಿಲ್ಲ ಎಂಬ ಆಕ್ರೋಶ ಇವರದ್ದು’ ಎಂಬುದು ಮೋದಿ ಮಾತಿನ ಬಾಣ.

ಹೀಗೆ ನೋಟು ಅಮಾನ್ಯದ ವಿರುದ್ಧ ಧ್ವನಿ ಎತ್ತಿದವರನ್ನೆಲ್ಲ ಕಪ್ಪು ಹಣದ ಮಾಲೀಕರೆಂದು ಬಿಂಬಿಸುತ್ತಿರುವ ಮೋದಿ ನಡೆಗೆ ಪ್ರತಿಪಕ್ಷಗಳು ಕಿಡಿಯಾಗಿವೆ. ಇಷ್ಟಕ್ಕೂ ಪ್ರಧಾನಿ ಇವೇ ಮಾತುಗಳನ್ನು ಸಂಸತ್ತಿನಲ್ಲಿ ಏಕೆ ಆಡುತ್ತಿಲ್ಲ ಎಂಬುದು ಬಹುತೇಕರನ್ನು ಕಾಡುತ್ತಿರುವ ಪ್ರಶ್ನೆ. ‘ಪ್ರಧಾನಿ ನೋಟು ಅಮಾನ್ಯದ ಬೆನ್ನಲ್ಲೇ ನಕ್ಕರು. ನಂತರ ಗದ್ಗದಿತರೂ ಆದರು. ಹೀಗೆಲ್ಲ ಹೊರಗಡೆ ವೇದಿಕೆಗಳಲ್ಲಿ ಅಭಿವ್ಯಕ್ತಿಸುತ್ತಿರುವ ಅವರು ಸಂಸತ್ತಿನಲ್ಲೂ ಪ್ರತಿಕ್ರಿಯೆ ನೀಡಲಿ’ ಎಂದಿದ್ದಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.

ಪ್ರಧಾನಿ ಮಾತ್ರ ಭಟಿಂಡಾದ ತಮ್ಮ ಮಾತುಗಳಲ್ಲಿ ಸಹ, ‘ಇದು ಬಡವರಿಗೆ ಅನುಕೂಲವಾಗುವ ನಡೆಯೇ ಆಗಿದೆ. ಈ ಹಂತದಲ್ಲಿ ಮೊಬೈಲ್ ಫೋನ್ ಬಳಕೆದಾರರಿಗೆ ತಂತ್ರಜ್ಞಾನ ಉಪಯೋಗಿಸಿ ನಗದುರಹಿತ ವ್ಯವಹಾರ ಮಾಡುವುದಕ್ಕೆ ಯುವಕರು ಅರಿವು ಮೂಡಿಸಬೇಕು. ಜೇಬಿನ ತುಂಬ ಹಣವನ್ನಿಟ್ಟುಕೊಂಡು ವಹಿವಾಟು ಮಾಡುವ ದಿನಗಳು ಮುಗಿದವು’ ಎಂದು ಪ್ರತಿಪಾದಿಸಿದ್ದಾರೆ.

Leave a Reply