ನೋಟು ಅಮಾನ್ಯ ವಿರೋಧಿಸಿ ಪ್ರತಿಪಕ್ಷಗಳ ರಾಷ್ಟ್ರವ್ಯಾಪಿ ಬಂದ್ ಗೆ ರಾಜ್ಯ ಸರ್ಕಾರದ ಬೆಂಬಲ, ಸಮಾಜ ಕಲ್ಯಾಣ ಸಚಿವರ ವಿರುದ್ಧ ಕಾಂಗ್ರೆಸ್ಸಿನ ಹಿಂದುಳಿದ ವರ್ಗದ ಶಾಸಕರಿಂದಲೇ ದೂರು, ಬೆಳಗಾವಿ ಅಧಿವೇಶನದ ಪ್ರಮುಖಾಂಶಗಳು…

ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಆಯೋಜಿಸಲಾಗಿದ್ದ ವೈಜ್ಞಾನಿಕ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು…

ಡಿಜಿಟಲ್ ಕನ್ನಡ ಟೀಮ್:

28ರ ಬಂದ್ ಗೆ ರಾಜ್ಯ ಸರ್ಕಾರ ಬೆಂಬಲ

ಕೇಂದ್ರದ ನೋಟು ರದ್ದತಿ ನಿರ್ಧಾರವನ್ನು ಪ್ರತಿಭಟಿಸಿ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ನವೆಂಬರ್ 28ರಂದು ಕರೆದಿರುವ ರಾಷ್ಟ್ರವ್ಯಾಪಿ ಬಂದ್ ಗೆ ರಾಜ್ಯ ಸರ್ಕಾರ ಬೆಂಬಲ ಸೂಚಿಸಿದೆ. ಪರಿಣಾಮ ಅಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನಕ್ಕೂ ರಜೆ ಘೋಷಿಸಲಾಗಿದೆ. ಆ ದಿನದ ಅಧಿವೇಶನವನ್ನು ಡಿ.3ರ ಶನಿವಾರದಂದು ನಡೆಸಲು ಸಭಾಧ್ಯಕ್ಷ ಕೆ.ಬಿ ಕೋಳಿವಾಡ ಅವರು ಕಲಾಪ ವ್ಯವಹಾರ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಸರ್ಕಾರದ ಪ್ರೋತ್ಸಾಹದ ಪರಿಣಾಮ ಸೋಮವಾರ ಸಾರ್ವಜನಿಕ ಸಾರಿಗೆ ರಸ್ತೆಗಿಳಿಯುವುದು ಅನುಮಾನವಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿರೋಧ ವ್ಯಕ್ತಪಡಿಸಿ ಸಭೆಯಿಂದ ಹೊರ ಬಂದಿವೆ. ಶಾಸಕರ ಭದ್ರತೆಗೆ ಧಕ್ಕೆಯಾಗಬಾರದು ಎಂಬ ಉದ್ದೇಶಕ್ಕೆ ಸದನ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಸಭಾಧ್ಯಕ್ಷರು ತಿಳಿಸಿದ್ದಾರೆ.

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಪಕ್ಷದ ಶಾಸಕರು ಹಾಗೂ ಇತರೆ ರಾಜ್ಯ ನಾಯಕರಿಗೆ ಸುತ್ತೋಲೆ ಹೊರಡಿಸಿ ತಮ್ಮ ಕ್ಷೇತ್ರದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಬೇಕು. ಸರ್ಕಾರದ ನಿರ್ಧಾರದಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ಜನರಿಗೆ ವಿವರಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಇತ್ತ ಮಂಡ್ಯದಲ್ಲಿ ಸ್ಥಳೀಯ ಕಾಂಗ್ರೆಸ್ ಸಹ ಬಂದ್ ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ಕರೆದಿತ್ತು. ಆದರೆ ಆ ಬಗ್ಗೆ ಚರ್ಚೆಗಿಂತ ಹೆಚ್ಚಾಗಿ ಕಾರ್ಯಕರ್ತರು ತಮ್ಮನ್ನು ಸಿದ್ದರಾಮಯ್ಯ ಕಡೆಗಮಿಸುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದೆ ರಮ್ಯ ಎದುರಲ್ಲೇ ರಂಪ ಮಾಡಿಕೊಂಡ ಘಟನೆಯೂ ನಡೆದಿದೆ.

ಸಚಿವರ ಕಾರ್ಯಕ್ಕೆ ಕಾಂಗ್ರೆಸ್ಸಿಗರಿಂದಲೇ ಅತೃಪ್ತಿ

ಸಮಾಜ ಕಲ್ಯಾಣ ಸಚಿವ ಆಜನೇಯ ಅವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ಸಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಶಾಸಕರೇ ಅತೃಪ್ತಿ ಹೊಂದಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವರ ಬಳಿ ದೂರಿದ್ದಾರೆ. ‘ಇತಿಹಾಸದಲ್ಲೇ ಮೊದಲಬಾರಿಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ವರ್ಗದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಭಾರಿ ಪ್ರಮಾಣದ ಅನುದಾನ ನೀಡಿದೆ. ಆದರೆ ಈ ಅನುದಾನವನ್ನು ಸದ್ಭಳಕೆ ಮಾಡುವಲ್ಲಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಶಾಸಕಾಂಗ ಪಕ್ಷ ಮತ್ತು ಸದನದಲ್ಲೇ ಇಲಾಖೆ ಕಾರ್ಯವೈಖರಿ ಬಗ್ಗೆ ಪ್ರಸ್ತಾಪ ಮಾಡಿದ್ದರೂ ಅದನ್ನು ಸರಿಪಡಿಸಲು ನೀವಾಗಲೀ, ಮುಖ್ಯಮಂತ್ರಿಯವರಾಗಲೀ ಮುಂದೆ ಬಂದಿಲ್ಲ. ಮುಖ್ಯಮಂತ್ರಿ ಅವರು ಸಚಿವರಿಗೆ ಸಂಪೂರ್ಣ ಅಧಿಕಾರ ನೀಡಿದ್ದರೂ ನಮ್ಮ ಜನಾಂಗದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರ್ಯಕ್ರಮ ರೂಪಿಸುವಲ್ಲಿ ಆಜನೇಯ ಅವರು ವಿಫಲರಾಗಿದ್ದಾರೆ. ಇಂತಹರಿಂದ ನೀವು ಏನನ್ನು ನಿರೀಕ್ಷಿಸುತ್ತಿದ್ದೀರಿ’ ಎಂದು ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ ನೇತೃತ್ವದ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರ ಮನವಿಯನ್ನು ಗೃಹ ಸಚಿವರು ಆಲಿಸಿದರೇ ಹೊರತು ಯಾವುದೇ ಭರವಸೆಯನ್ನು ನೀಡಲಿಲ್ಲ.

ಕೇಂದ್ರ ನೆರವು ನೀಡಿದರೆ ರಾಗಿ, ಜೋಳ ಪ್ರೋತ್ಸಾಹ ಧನ ಇನ್ನು ಹೆಚ್ಚಳ

ಸದ್ಯ ರಾಜ್ಯ ಸರ್ಕಾರ ರಾಗಿ ಮತ್ತು ಜೋಳದ ಬೆಳೆಗೆ ಉತ್ತಮ ಪ್ರೋತ್ಸಾಹಧನ ನೀಡುತ್ತಿದೆ. ಕೇಂದ್ರ ಸರ್ಕಾರ ಕನಿಷ್ಟ ಬೆಲೆಯನ್ನು ಹೆಚ್ಚಿಸಿದರೆ, ನಾವು ಪ್ರೋತ್ಸಾಹಧನವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲಿಗೆ ₹500 ಪ್ರೋತ್ಸಾಹ ಧನ ನೀಡುತ್ತಿದೆ. ಯಾವ ರಾಜ್ಯದಲ್ಲೂ ಇಷ್ಟು ನೀಡುತ್ತಿಲ್ಲ. ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಇದಕ್ಕೆ ಮುಂದಾದರೆ ರಾಜ್ಯ ಸರ್ಕಾರ ಮತ್ತಷ್ಟು ಬೆಂಬಲ ಬೆಲೆ ನೀಡಲಿದೆ ಎಂದರು.

ಉಳಿದಂತೆ ಅಧಿವೇಶನದಲ್ಲಿನ ಪ್ರಮುಖ ಹೈಲೈಟ್ಸ್…

  • ರಾಜ್ಯದಲ್ಲಿನ ವಿದ್ಯುತ್ ಕ್ಷಾಮ ನೀಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹರಿಯುತ್ತಿರುವ ನದಿಗಳಲ್ಲಿ ಕಿರು ವಿದ್ಯುತ್ ಯೋಜನೆಗಳನ್ನು ಅನುಷ್ಟಾನಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಚೆಲುವರಾಯಸ್ವಾಮಿಯವರ ಪ್ರಸ್ತಾವಕ್ಕೆ ಉತ್ತರಿಸಿದ ಡಿಕೆಶಿ, ಕಿರು ವಿದ್ಯುತ್ ಯೋಜನೆ ಸೇರಿದಂತೆ ವಿವಿಧ ಮೂಲಗಳಿಂದ ರಾಜ್ಯದಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮಕೈಗೊಳ್ಳಲಾಗಿದೆ. ಆಯ್ದ 60 ತಾಲೂಕುಗಳಲ್ಲಿ ತಲಾ 20 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
  • ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವಿಧಾನಸಭೆಯಲ್ಲಿ ಭರವಸೆ ಕೊಟ್ಟರು. ಕೇಂದ್ರ ಸರ್ಕಾರ ಸೀಮೆಎಣ್ಣೆ ಕೋಟಾದಲ್ಲಿ ಕಡಿತ ಮಾಡಿದೆ. ಜತೆಗೆ ಬೆಲೆಯಲ್ಲಿ ಹೆಚ್ಚಳ ಮಾಡಿದೆ. 10 ಲೀಟರ್ ಸೀಮೆಎಣ್ಣೆ ಖರೀದಿಸುವಬದಲಿಗೆ ಗ್ಯಾಸ್ ಸಿಲಿಂಡರ್ ಖರೀದಿಸಬಹುದು. ಇದರಿಂದ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ.

Leave a Reply