ಕಮ್ಯುನಿಸ್ಟ್ ವಿಚಾರಧಾರೆ ವಿರೋಧಿಸುವವರೂ ನಿರ್ಲಕ್ಷಿಸಲಾಗದ ಕೌತುಕ, ಅಮೆರಿಕದ ಜಾಗತಿಕ ಆಟಕ್ಕೆ ವಿರುದ್ಧವಾಗಿ ಕ್ಯೂಬಾ ಎಂಬ ಪುಟ್ಟ ರಾಷ್ಟ್ರವನ್ನು ಕ್ಯಾಸ್ಟ್ರೊ ಮುನ್ನಡೆಸಿದ ಕಥಾನಕ

ಡಿಜಿಟಲ್ ಕನ್ನಡ ವಿಶೇಷ:

ಕ್ಯೂಬಾ ನಾಯಕ ಫಿಡೆಲ್ ಕ್ಯಾಸ್ಟ್ರೊ ತನ್ನ 90ರ ಪ್ರಾಯದಲ್ಲಿ ತೀರಿಕೊಂಡಿರುವ ಈ ಸಂದರ್ಭದಲ್ಲಿ ಈ ಎಡಪಂಥ ಇನ್ನೊಂದು ಎಂಬೆಲ್ಲ ಚೌಕಟ್ಟಿನಿಂದ ಹೊರಬಂದು ಒಂದು ಗೌರವ ಸಲ್ಲಿಸಲೇಬೇಕಾಗಿದೆ.

ವಿಶ್ವವನ್ನೇ ತನ್ನ ಬಂಡವಾಳ ಮಾರ್ಗ ಹಾಗೂ ಮಿಲಿಟರಿ ಬಲಗಳಿಂದ ಆವರಿಸಿಕೊಂಡ ಅಮೆರಿಕವನ್ನು ಕ್ಯೂಬಾ ಎಂಬ ಅತಿ ಪುಟ್ಟ ರಾಷ್ಟ್ರವೊಂದು ಹೊಸ್ತಿಲಿಗೂ ಬಿಟ್ಟುಕೊಳ್ಳದಂತೆ ಎದುರಿಸುವುದು ಸಾಧ್ಯವಾಯಿತೆಂದರೆ ಅಲ್ಲಿ ಫಿಡೆಲ್ ಕ್ಯಾಸ್ಟ್ರೊ ಧಾಡಸಿತನದ ನಾಯಕತ್ವವಿದೆ. ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯಗಳಲ್ಲೆಲ್ಲ ತನಗಾಗದ ರಾಜಕೀಯ ನಾಯಕತ್ವವನ್ನು ಏನಕೇನ ಬದಲಿಸುತ್ತಲೇ ಬಂದಿದೆ ಅಮೆರಿಕ ಎಂಬುದು ಚರಿತ್ರೆ ಹೇಳುವ ಸತ್ಯ. ಇಂತಿಪ್ಪ ಅಮೆರಿಕದ 638 ಅಧಿಕೃತ ಹತ್ಯೆ ಪ್ರಯತ್ನಗಳನ್ನು ಮೆಟ್ಟಿ ನಿಂತನಲ್ಲ, ಸಿಗಾರಿಗೆ ವಿಷ ತುಂಬಿ ಸಾಯಿಸುವುದರ ಯತ್ನದಿಂದ ಹಿಡಿದು ಅಮೆರಿಕದ ಎಲ್ಲ ಕುತಂತ್ರಗಳೂ ಪಲ್ಟಿ ಹೊಡೆದವಲ್ಲ… ಇದನ್ನು ಧೀಮಂತಿಕೆಯಲ್ಲ ಎಂದು ತಳ್ಳಿಹಾಕುವುದಾದರೂ ಹೇಗೆ?

ನಿಜ. ಅಮೆರಿಕದ ಹಿತಾಸಕ್ತಿಗೆ ಬೀಳದಂತೆ ಕ್ಯೂಬಾವನ್ನು ಹಿಡಿದಿಟ್ಟ ನಾಯಕ ಫಿಡೆಲ್ ಕ್ಯಾಸ್ಟ್ರೊ. ತಾನು ಮಾರ್ಕ್ಸಿಸ್ಟ್- ಲೆನನಿಸ್ಟ್ ಸಿದ್ಧಾಂತವಾದಿ ಎಂದೇ ಹೇಳಿಕೊಂಡು ಬಂದರೂ ಅನೇಕ ಎಡಪಂಥೀಯ ರಾಷ್ಟ್ರಗಳಲ್ಲಾದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ತನ್ನವರನ್ನೇ ಕೊಲ್ಲಲಿಲ್ಲ. ಸರ್ವಾಧಿಕಾರಿ ಆಳ್ವಿಕೆಯಲ್ಲಿರುವಂತೆ ಎಲ್ಲ ನಿಯಂತ್ರಣಗಳಿದ್ದವು. ವಿದೇಶಿಯರಿಗೆ ಕ್ಯೂಬನ್ನರೊಂದಿಗೆ ಬೆರೆಯಗೊಡಲಿಲ್ಲ. ಅಮೆರಿಕವನ್ನು ಎದುರಿಸಿದ್ದೇನೋ ಹೌದಾದರೂ ಅದರಾಚೆಗೆ ತನ್ನ ದೇಶಕ್ಕೊಂದು ಅರ್ಥವ್ಯವಸ್ಥೆ ಎಂಬುದನ್ನು ಕಂಡುಕೊಳ್ಳಲಿಲ್ಲ. ಈ ಆರ್ಥಿಕ ವೈಫಲ್ಯವೇ ಈಗ ಕೊನೆಯಲ್ಲಿ ಅಮೆರಿಕದೊಂದಿಗೆ ಸ್ನೇಹ ಬೆಳೆಸುವಂತೆ ಮಾಡಿತು. ಇವೆಲ್ಲ ವಾಸ್ತವಗಳು.

ಆದರೆ, ಅಮೆರಿಕ ಆರೇಳು ದಶಕಗಳ ಹಿಂದೆ ತಾನು ನುಗ್ಗಿದ ಕಡೆಗಳಲ್ಲೆಲ್ಲ ಅವ್ಯವಸ್ಥೆಯನ್ನೇ ನಿರ್ಮಿಸಿದ್ದು ಬಿಟ್ಟರೆ ಯಾರ ಉದ್ಧಾರವನ್ನೂ ಮಾಡಲಿಲ್ಲ ಎಂಬಂಶ ಗಣನೆಗೆ ತೆಗೆದುಕೊಂಡಾಗ ಮಾತ್ರ ನಮಗೆ ಫಿಡೆಲ್ ಕ್ಯಾಸ್ಟ್ರೊನ ಪ್ರತಿರೋಧದ ಮಹತ್ವ ಎದುರಾಗುತ್ತದೆ. ಸದ್ದಾಂ ಹುಸೇನ್ ಜಗತ್ತಿಗೆ ಮಹಾ ಅಪಾಯಕಾರಿ ಎಂದು ಬಿಂಬಿಸಿ, ಅಲ್ಲಿ ಸಮೂಹನಾಶಕ ಶಸ್ತ್ರಗಳಿವೆ ಎಂದು ಕತೆಕಟ್ಟಿ ಇರಾಕನ್ನು ಆಕ್ರಮಿಸಿದ ಅಮೆರಿಕ ಅಲ್ಲೇನು ನಂದನವನ ಕಟ್ಟಿತೇ? ಇವತ್ತಿನ ಸ್ಥಿತಿ ನೋಡಿದರೆ ಸದ್ದಾಂ ಪರವಾಗಿರಲಿಲ್ಲ, ಈ ಐಎಸ್ಐಎಸ್ ಬೇಡಿತ್ತು ಎಂಬ ಸ್ಥಿತಿ ಇದೆಯಲ್ಲವೇ?

ಹೀಗಾಗಿ ಕ್ಯೂಬಾ ವಿಷಯದಲ್ಲಿ ತನ್ನ ಕಾಲಘಟ್ಟದಲ್ಲಿ ಕ್ಯಾಸ್ಟ್ರೋ ಏನು ಮಾಡಿದನೋ ಅದು ತಪ್ಪು ಎಂದು ವಾದಿಸುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ಫಿಡೆಲ್ ಕ್ಯಾಸ್ಟ್ರೊ ದಾರಿಯನ್ನು ಅವಲೋಕಿಸಬೇಕಾಗುತ್ತದೆ.

1926 ರ ಆಗಸ್ಟ್ 13 ರಂದು ಜನಿಸಿದ ಫಿಡೆಲ್ ಕ್ಯಾಸ್ಟ್ರೊ ಅವರ ಜೀವನ ಹಾದಿಯೇ ಒಂದು ರೋಚಕ. ಕೇವಲ ಫಿಡೆಲ್ ಅವರ ಜೀವನ ಮಾತ್ರ ರೋಚಕವಾಗಿರದೆ ಇಡೀ ಕ್ಯೂಬಾ ದೇಶವನ್ನೇ ದಶಕಗಳ ಕಾಲ ರೋಚಕ ಹಾದಿಯಲ್ಲಿ ಮುನ್ನಡೆಸಿದ ನಾಯಕ ಫಿಡೆಲ್.

ಅಮೆರಿಕಕ್ಕೆ ತೊಡೆ ತಟ್ಟಿನಿಂತ ಕ್ಯೂಬಾದಂತಹ ಅಂಗೈ ಅಗಲದ ದೇಶ ಎಂದೋ ಕಣ್ಮರೆಯಾಗಿಬಿಡಬಹುದಿತ್ತು. ಆದರೆ ಈ ಪುಟ್ಟ ರಾಷ್ಟ್ರತೊಡೆ ತಟ್ಟಿನಿಂತ ರೋಚಕ ಕತೆಯಲ್ಲಿ ಪ್ರಮುಖ ನಾಯಕನಾಗಿ ನಿಲ್ಲುವವರು ಇದೇ ಫಿಡೆಲ್ ಕ್ಯಾಸ್ಟ್ರೋ, ಈತನ ಸಹೋದರ ರೌಲ್ ಕ್ಯಾಸ್ಟ್ರೋ ಹಾಗೂ ಚಿ ಗುವೆರಾ. ಈ ಮೂವರು ಕ್ರಾಂತಿಕಾರಿ ನಾಯಕರು ಕ್ಯೂಬಾದಲ್ಲಿ ಅಮೆರಿಕ ಸ್ಥಾಪಿಸಿದ್ಧ ಸರ್ವಾಧಿಕಾರಿ ಫ್ಲುಗೆನ್ಸಿಯಾ ಬಟಿಸ್ಟಾ ವಿರುದ್ಧ 1953ರ ಜುಲೈ 25ರಂದು ಬಂಡಾಯ ಏಳುತ್ತಾರೆ. 1959ರಲ್ಲಿ ಬಟಿಸ್ಟಾ ಅಧಿಕಾರಕ್ಕೆ ತೆರೆ ಎಳೆದು ಫಿಡೆಲ್ ಪ್ರಧಾನಿಯಾಗಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆ. ನಂತರ 1976ರಿಂದ 2008ರ ವರೆಗೂ ಅಧ್ಯಕ್ಷನಾಗಿ ದೇಶವನ್ನು ಆಳುತ್ತಾರೆ.

ಈತ ಅಧಿಕಾರಕ್ಕೆ ಬರುತ್ತಿದ್ದಂತೆ ಅಮೆರಿಕದ ವ್ಯವಹಾರಗಳಿಗೆಲ್ಲಾ ಬ್ರೇಕ್ ಹಾಕಿ, ಎಲ್ಲವನ್ನು ರಾಷ್ಟ್ರೀಕರಣಗೊಳಿಸಿ ಕ್ಯೂಬಾವನ್ನು ಕಮ್ಯುನಿಷ್ಟ್ ರಾಷ್ಟ್ರ ಎಂದು ಘೋಷಿಸುತ್ತಾರೆ. ಆಗ ಅಮೆರಿಕದ ವಕ್ರದೃಷ್ಟಿ ಫಿಡೆಲ್ ಮೇಲೆ ಬಿತ್ತು. ಈತನನ್ನು ಮುಗಿಸುವ ಸಲುವಾಗಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಅದೆಷ್ಟೇ ತಂತ್ರ ಮಾಡಿದರೂ ಫಿಡೆಲ್ ಸಿಕ್ಕಿ ಬೀಳಲಿಲ್ಲ. ಅಮೆರಿಕಕ್ಕೆ ಜಾಗತಿಕ ವೈರಿಯಾಗಿ ಬಿಂಬಿತವಾಗಿದ್ದ ಸೋವಿಯತ್ ಒಕ್ಕೂಟದ ಜತೆ ಕೈಜೋಡಿಸಿ ಅಮೆರಿಕಕ್ಕೆ ಅಮೆರಿಕಕ್ಕೆ ಸವಾಲೆಸೆದರು. ಇದರ ಪರಿಣಾಮ ಅಮೆರಿಕ ಕ್ಯೂಬಾಕ್ಕೆ ಆರ್ಥಿಕ ದಿಗ್ಬಂಧನ ಹಾಕಿತು. ಇದಕ್ಕೆ ಜಗ್ಗದ ಫಿಡೆಲ್, 1961 ರ ಶೀತಲ ಸಮರದ ಸಂದರ್ಭದಲ್ಲಿ ರಷ್ಯಾ ತನ್ನ ಅಣ್ವಸ್ತ್ರವನ್ನು ತನ್ನ ನೆಲದಲ್ಲಿ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟ ಫಿಡೆಲ್ ಅವರ ಕ್ರಾಂತಿಕಾರಿ ನಿರ್ಧಾರ ಇಡೀ ಜಗತ್ತನ್ನೇ ದಿಗ್ಬ್ರಮೆಗೊಳಿಸಿತ್ತು. ಇದು ಅಮೆರಿಕದಂತಹ ದೈತ್ಯ ರಾಷ್ಟ್ರವನ್ನು ನಡುಗಿಸಿಬಿಟ್ಟಿತ್ತು.

ಫಿಡೆಲ್ ಸರ್ವಾಧಿಕಾರಿಯಾಗಿ ನಡೆಸಿದ ಆಡಳಿತದಲ್ಲಿ ಕ್ಯೂಬಾ ಮಾನವ ಹಕ್ಕು ಉಲ್ಲಂಘನೆಯ ಕಪ್ಪು ಚುಕ್ಕೆ ಹೊಂದಿದ್ದರೂ, ಇತರ ರಾಷ್ಟ್ರಗಳಿಗಿಂತ ಶಿಕ್ಷಣ, ಆರೋಗ್ಯ, ಮಹಿಳಾ ಸಮಾನತೆ ವಿಷಯಗಳಲ್ಲಿ ವಿಶ್ವಸಂಸ್ಥೆಯಿಂದ ಶಹಬ್ಬಾಶ್ ಗಿರಿ ಪಡೆದುಕೊಂಡಿತ್ತು.

2008ರಲ್ಲಿ ತನ್ನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಫಿಡೆಲ್ ತನ್ನ ಅಧಿಕಾರವನ್ನು ಸಹೋದರನಿಗೆ ಬಿಟ್ಟುಕೊಟ್ಟರು. ಕಾಲ ಬದಲಾದಂತೆ ಕ್ಯೂಬಾದ ನೀತಿಗಳು ಕ್ರಮೇಣವಾಗಿ ಬದಲಾಗುತ್ತಿವೆ. ಅದಕ್ಕೆ ಸಾಕ್ಷಿಯಾಗಿ ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕ್ಯೂಬಾ ನೆಲಕ್ಕೆ ಕಾಲಿಟ್ಟು ರೌಲ್ ಜತೆ ಮಾತುಕತೆ ನಡೆಸಿದ್ದು. ಈ ಬಗ್ಗೆ ಡಿಜಿಟಲ್ ಕನ್ನಡ ನೀಡಿದ್ದ ವಿಶ್ಲೇಷಣಾತ್ಮಕ ವರದಿ (ಇಲ್ಲಿ ನೋಡಿ) ನೀಡಿತ್ತು.

ಒಟ್ಟಿನಲ್ಲಿ ಅಮೆರಿಕದ ಮಗ್ಗುಲಲ್ಲೆ ಇದ್ದ ಈ ಪುಟ್ಟ ರಾಷ್ಟ್ರವೊಂದು ಜಾಗತಿಕ ಮಟ್ಟದ ಶಕ್ತಿಶಾಲಿ ರಾಷ್ಟ್ರ ದಶಕಗಳ ಕಾಲ ನಿದ್ದೆಗೆಡುವಂತೆ ಮಾಡಿದೆ ಎಂದರೆ ಅದಕ್ಕೆ ಕಾರಣ ಈ ಫಿಡೆಲ್ ಕ್ಯಾಸ್ಟ್ರೊ ಅವರ ಕ್ರಾಂತಿಕಾರಿ ನಾಯಕತ್ವ ಎಂಬುದರಲ್ಲಿ ಅನುಮಾನವೇ ಇಲ್ಲ.

Leave a Reply