ಯುವಜನರ ದೇಶವೆಂದು ಕರೆಸಿಕೊಳ್ಳುವುದು ರೋಚಕ ಅನುಭೂತಿ, ಆದರೆ ಎದುರಿಸಲೇಬೇಕಾದ ವೃದ್ಧಾಪ್ಯಕ್ಕೆ ಬೇಕಲ್ಲವೇ ಸಹಾನುಭೂತಿ

author-ananthramuಆಸ್ಟ್ರೇಲಿಯದ ಪರ್ಥ್ ನಲ್ಲಿ ಇತ್ತೀಚೆಗೆ ನಡೆದ ಇಪ್ಪತ್ತೆರಡನೆಯ `ವಲ್ರ್ಡ್ ಮಾಸ್ಟರ್ಸ್ ಅಥ್ಲಿಟಿಕ್ ಚಾಂಪಿಯನ್ ಶಿಪ್’ ಸ್ಪರ್ಧೆಯಲ್ಲಿ ಐದು ಕಿಲೋ ಮೀಟರ್, ಹತ್ತು ಕಿಲೋ ಮೀಟರ್ ಮತ್ತು ಇಪ್ಪತ್ತು ಕಿಲೋ ಮೀಟರ್ ಮ್ಯಾರಥಾನಿನ ಎಲ್ಲದರಲ್ಲೂ ಚಿನ್ನದ ಪದಕವನ್ನು ಗೆದ್ದ ವಿಶಾಖಪಟ್ಟಣದ ವಲ್ಲಭ ಜೋಯಿಸುಲ ಶ್ರೀರಾಮುಲು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈತ ಸೈನ್ಯದಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ಇದೀಗ ವಿಶಾಖಪಟ್ಟಣದಲ್ಲಿ ನೆಲೆಸಿದ್ದಾರೆ. ಇದರಲ್ಲೇನು ವಿಶೇಷ? ಹೌದು ಇದೆ. ಇವರ ವಯಸ್ಸು ಬರೋಬ್ಬರಿ 93. ಕಳೆದ ಎರಡು ವರ್ಷಗಳಿಂದ ತಾಲೀಮು ನಡೆಸಿದ್ದರಂತೆ. ಇದು ಅಪರೂಪದ ರೆಕಾರ್ಡ್, ಬಿಡಿ. ಎಲ್ಲರಿಗೂ ಸಾಧ್ಯವಾಗದ ಸಾಧನೆ. ವಯಸ್ಸು ಅಡ್ಡ ಬರಲಿಲ್ಲ ಎಂಬುದೇ ಅವರ ಹೆಚ್ಚುಗಾರಿಕೆ.

ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರಿಗೀಗ 90 ವಯಸ್ಸು. ಅವರ ಇತ್ತೀಚೆಗಷ್ಟೇ ಹೇಳಿಕೆ ಕೊಟ್ಟಿದ್ದರು. `ನಾನು 90 ವರ್ಷಗಳ ಬದುಕಿನ ಹಿನ್ನೋಟವನ್ನು ನೋಡಿದಾಗ, ನನ್ನದು ರೋಚಕಮಯ, ಸವಾಲಿನ ಬದುಕು ಎನ್ನಿಸಿದೆ. ನನ್ನನ್ನು ಬದುಕು ಎತ್ತಲೋ ಕೊಂಡೊಯ್ದಿತ್ತು. ಆದರೆ ಸಾಹಸದ ಬದುಕನ್ನು ಬಾಳಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಾರ್ಥಕದ ಬದುಕು.’

ಜಿಮ್ಮಿ ಕಾರ್ಟರ್ ಹೇಳಿದಂತೆ ಜಗತ್ತಿನ ಎಲ್ಲ ಹಿರಿಯರು ಘೋಷಿಸಲು ಸಾಧ್ಯವಿಲ್ಲ. ಅವರ ಹಿನ್ನೆಲೆ, ಪರಿಸರ ಮತ್ತು ಸಾಗಿದ ಪಥ ಭಿನ್ನವಾದ್ದು. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ಮತ್ತು ಹೆಲ್ಪೇಜ್ ಇಂಡಿಯಾ ಜಂಟಿಯಾಗಿ ಬಿಡುಗಡೆಮಾಡಿರುವ ವರದಿಯೊಂದು ವಿಸ್ಮಯ ಮತ್ತು ಗಾಬರಿಯನ್ನು ಏಕಕಾಲಕ್ಕೆ ಹುಟ್ಟಿಸುತ್ತದೆ. ಭಾರತದಲ್ಲಿ 90 ದಶಲಕ್ಷ ವೃದ್ಧರಿದ್ದಾರೆ. 2050ರ ವೇಳೆಗೆ ವೃದ್ಧರ ಸಂಖ್ಯೆ ನಮ್ಮಲ್ಲೇ 173 ದಶಲಕ್ಷ ಮುಟ್ಟಲಿದೆ. ಈ ಪೈಕಿ ಸದ್ಯದಲ್ಲಿ 30 ದಶಲಕ್ಷ ವೃದ್ಧರು ಒಂಟಿ ಬಾಳು ಬಾಳುತ್ತಿದ್ದಾರೆ. ಅವರಲ್ಲೂ ಶೇ.90 ಮಂದಿ ಹೊಟ್ಟೆಪಾಡಿಗಾಗಿ ಈ ಬಾಳಸಂಜೆಯಲ್ಲೂ ದುಡಿಯಬೇಕು. ಸಿಂಗಪುರದಲ್ಲಿ 126 ಮಂದಿ ವೃದ್ಧರು ಒಂದೇ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎನ್ನುವುದು ಅತ್ಮಹತ್ಯಾ ತಡೆಗೆ ಹೋರಾಡುತ್ತಿರುವ ಕ್ರಿಸ್ಟಿನ್ ವಾಂಗ್ ಅವರ ಅಳಲು. ಏಕತಾನತೆ ಸಹಿಸದೆ, ಮನೆಯವರ ಪ್ರೀತಿಗೆ ಹೊರತಾಗಿ, ವೃದ್ಧಾಪ್ಯದ ರೋಗಗಳಿಗೆ ಬಲಿಯಾಗಿ ಈ ವೃದ್ಧರು ಅಂಥ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಎನ್ನುವುದನ್ನು ನೋವಿನಿಂದಲೇ ವ್ಯಕ್ತಪಡಿಸುತ್ತಾರೆ.

ಇದೇ ತಿಂಗಳ 25ರಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಟಾಟಾ ಸಭಾಂಗಣದಲ್ಲಿ ಮುಕ್ತಾಯವಾದ ಮೂರು ದಿನದ ಅಂತಾರಾಷ್ಟ್ರೀಯ ಗೋಷ್ಠಿ ಚರ್ಚಿಸಿದ್ದು `ಬದಲಾಗುತ್ತಿರುವ ಪ್ರಪಂಚದಲ್ಲಿ ಆರೋಗ್ಯಕರ ವೃದ್ಧಾಪ್ಯ’ ಎಂಬ ವಿಚಾರವನ್ನು. ಇದರಲ್ಲಿ ಜಗತ್ತಿನ ಉನ್ನತ ಸಂಶೋಧಕರು 200 ಮಂದಿ ಪಾಲ್ಗೊಂಡಿದ್ದರು. ವೃದ್ಧರ ಮರೆವುರೋಗ-ಡಿಮೆನ್ಷಿಯ ಜಗತ್ತನ್ನೆ ಬಾಧಿಸುತ್ತಿದೆ. ಐದು ವರ್ಷಗಳ ಹಿಂದೆ 35.6 ದಶಲಕ್ಷ ಹಿರಿಯರು ಈ ಬಾಧೆಯನ್ನು ಅನುಭವಿಸಿದರು. 2050ರ ವೇಳೆಗೆ 115 ದಶಲಕ್ಷ ವೃದ್ಧರು ಇದಕ್ಕೆ ಬಲಿಯಾಗುತ್ತಾರೆ. ಈ ಜಾಗತಿಕ ಸಮಸ್ಯೆಯನ್ನು ನಿಭಾಯಿಸುವಲ್ಲಿ ವೈದ್ಯಕೀಯದ ಪಾತ್ರವೇನು? ಆಪ್ತಸಲಹೆಗಾರರ ಕಾರ್ಯವೇನು? ಔಷಧಿ ವ್ಯಾಪಾರಿಗಳ ಗುರಿಯೇನು? ಮನೆಯವರು ಹೇಗೆ ನಡೆದುಕೊಳ್ಳಬೇಕು? ಎಂಬ ಬಗ್ಗೆ ದೀರ್ಘ ಚರ್ಚೆಯಾಗಿದೆ. ಕುಟುಂಬದ ಮೇಲೆ, ಸಮಾಜ, ವಿಶೇಷವಾಗಿ ಆರ್ಥಿಕ ಪರಿಸ್ಥಿತಿಯ ಮೇಲೆ ಇದರ ಪ್ರತಿಕೂಲ ಪರಿಣಾಮವೇನು ಎಂಬುದೇ ಕಳವಳ ತರುವ ಪ್ರಶ್ನೆಯಾಗಿ ಕಾಡುತ್ತಿದೆ. ಪ್ರತಿವರ್ಷ ಹೊಸತಾಗಿ ಸುಮಾರು ಎಂಟು ಮಿಲಿಯನ್ ವಯೋವೃದ್ಧರು ಮರೆವು ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂಬುದು ಸಮೀಕ್ಷೆ ಹೊರಗೆಡವಿರುವ ಆತಂಕದ ಸಂಖ್ಯೆ.

ನಿಜ, ಎಲ್ಲರೂ ಒಪ್ಪಿಕೊಳ್ಳುವ ಸಂಗತಿ ಇದೆ. ಬಾಲ್ಯ, ಯೌವನ, ವೃದ್ಧಾಪ್ಯ ಅಂತಿಮವಾಗಿ ಸಾವು ಪ್ರಕೃತಿಯ ನಿಯಮ. ಎಲ್ಲ ಅಂಗಾಂಗಗಳು, ಎಲ್ಲ ಕಾಲದಲ್ಲೂ ಕೆಲಸಮಾಡಲಾರವು. ವಯಸ್ಸು ಅಂಚಿಗೆ ಹೋಗುತ್ತಿದ್ದಾಗ ಬೌದ್ಧಿಕ ಸಾಮರ್ಥ್ಯ ಕುಗ್ಗುತ್ತದೆ. ತರ್ಕ, ವಿವೇಚನೆ, ಚಿಂತನೆ, ನೆನಪು ಇವು ನಿಧಾನಕ್ಕೆ ಕುಗ್ಗುತ್ತವೆ. ಇದನ್ನು ತಡೆಯುವ ಸಾಧ್ಯತೆ ಇಲ್ಲ. ಡಿಮೆನ್ಷಿಯ ಏಕೆ ಬರುತ್ತದೆ ಎನ್ನುವುದನ್ನು ವೈದ್ಯಕೀಯ ಕ್ಷೇತ್ರ ವಿಶ್ಲೇಷಿಸಿದೆ. ಮಿದುಳಿನ ಗಾತ್ರ ಚಿಕ್ಕದಾಗುತ್ತ ಬರುತ್ತದೆ, ಸ್ಕ್ಯಾನಿಂಗ್ ನಲ್ಲೇ ಇದನ್ನು ಕಾಣಬಹುದು. ಮಿದುಳಿನ ನರಕೋಶಗಳು ಕ್ಷೀಣಿಸುತ್ತವೆ (ಅವು ಮರುಹುಟ್ಟು ಪಡೆಯುವುದಿಲ್ಲ). ಹಾಗೆಯೇ ನರವಾಹಕ ಅಸಿಟೈಲ್ ಕೋಲಿನ್ ಪ್ರಮಾಣವೂ ಕಡಿಮೆಯಾಗುತ್ತದೆ. ಆಲ್ಜಿಮರ್ಸ್ ಕಾಯಿಲೆ ಕೂಡ ನರಸಂಬಂಧಿ ಕಾಯಿಲೆಯೇ. ಕೈ ತಹಬಂದಿಗೆ ಬಾರದಷ್ಟು ನಡುಗುತ್ತವೆ, ಮೂರ್ಛೆ ಬರಬಹುದು, ಇದೂ ಕೂಡ ವೃದ್ಧಾಪ್ಯದಲ್ಲಿ ತೀವ್ರವಾಗಿಯೇ ಬಾಧಿಸುತ್ತದೆ. ಇನ್ನು ರಕ್ತದೊತ್ತಡ ಮತ್ತು ಮಧುಮೇಹ ಕಿರಿಯರಲ್ಲೇ ಕಾಡುತ್ತಿದೆಯೆಂದರೆ ವೃದ್ಧಾಪ್ಯದಲ್ಲಿ ಅದು ತರುವ ಪಜೀತಿ ಒಂದಲ್ಲ. ಈ ಕಾರಣದಿಂದಾಗಿಯೇ ತೀರ ವಯಸ್ಸಾದ ಬಹುಮಂದಿ ಹಿರಿಯರು `ಯಾರಿಗೂ ಭಾರವಾಗದ ಹಾಗೆ ನಿದ್ದೆಯಲ್ಲೇ ಪ್ರಾಣಹೋಗಲಿ’ ಎಂದು ಬೇಡಿಕೊಳ್ಳುವುದನ್ನು ನೀವು ಕೇಳಿರುತ್ತೀರಿ.

ವೃದ್ಧಾಶ್ರಮ ಮತ್ತು ಪೋಲಿಸ್ ಸ್ಟೇಷನ್ ಇವೆರಡೂ ಹೆಚ್ಚಿದಷ್ಟೂ ಸಮಾಜದ ಆರೋಗ್ಯ ಕೆಡುತ್ತಿದೆ ಎಂಬುದರ ಸೂಚಕ. ಆದರೆ ಒಂದು ತಿದ್ದುಪಡಿ ಮಾಡಿಕೊಳ್ಳಬೇಕು. ವೃದ್ಧಾಶ್ರಮ ಸೇರುವವರೆಲ್ಲರನ್ನೂ ಮನೆಮಂದಿ ಧಿಕ್ಕರಿಸಿರುವುದಿಲ್ಲ. ಕೆಲವೊಮ್ಮೆ ಕುಟುಂಬದಲ್ಲಿ ನಿರ್ವಹಿಸಲಾಗದ ಅಸಹಾಯಕತೆಯೂ ಇರುತ್ತದೆ. ವೃದ್ಧಾಪ್ಯ ಎನ್ನುವುದು ವೈದ್ಯವಿಜ್ಞಾನದಲ್ಲಿ ಈಗ ವಿಶಿಷ್ಟ ಅಧ್ಯಯನಾಂಗವಾಗಿ ತಲೆಯೆತ್ತಿದೆ. ಬೆಂಗಳೂರಿನ ಈ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ತಜ್ಞರಲ್ಲಿ ಮಧುಮೇಹ ತಜ್ಞರಿದ್ದಾರೆ, ಹೃದಯ ತಜ್ಞರಿದ್ದಾರೆ, ಎಲುಬು ತಜ್ಞರಿದ್ದಾರೆ, ಮೂತ್ರಪಿಂಡದ ತಜ್ಞರಿದ್ದಾರೆ, ದೊಡ್ಡ ದೊಡ್ಡ ಔಷಧಿ ಕಂಪನಿಗಳ ಪ್ರತಿನಿಧಿಗಳು ಬಂದಿದ್ದಾರೆ ಎಂದರೆ ಜಾಗತಿಕವಾಗಿ ಎಲ್ಲ ದೇಶಗಳೂ ಎದುರಿಸುತ್ತಿರುವ ಸಮಸ್ಯೆಯೇ ಇದು ಎಂದು ಒಪ್ಪಿಕೊಳ್ಳಲೇಬೇಕು. ಆಧುನಿಕ ಬದುಕು ಒತ್ತಡದಲ್ಲಿಯೇ ಇರುತ್ತದೆ ಎಂಬುದು ಸತ್ಯವಾದರೂ ಈಗ ಸರಾಸರಿ ಆಯುರ್ಮಾನ ಎಲ್ಲ ದೇಶಗಳಲ್ಲೂ ಹೆಚ್ಚುತ್ತಲೇ ಇದೆ. 60ರ ದಶಕದಲ್ಲಿ ಸರಾಸರಿ ಆಯುರ್ಮಾನ 42 ಇದ್ದದ್ದು, ಈಗ ಭಾರತದಲ್ಲೇ 67ಕ್ಕೆ ಏರಿದೆ. ರೋಗ ನಿರೋಧಕ ಲಸಿಕೆಗಳು, ಪೌಷ್ಟಿಕ ಆಹಾರ ಸೇವನೆ ಜೊತೆಗೆ ಸಾಂಕ್ರಾಮಿಕ ರೋಗಗಳ ಹಾವಳಿ ಕಡಿಮೆಯಾಗಿರುವುದು ಇದಕ್ಕೆ ಕಾರಣ ಎಂದು ವಿಶ್ವಸಂಸ್ಥೆಯೇ ಒಪ್ಪಿಕೊಂಡಿದೆ. 60-70 ದಾಟಿದವರು ಈಗ ಯಾರಿಗಾದರೂ ಗೂನುಬೆನ್ನು ಇದೆಯೇ ನೋಡಿ! ದೀರ್ಘಾಯುಷ್ಯಕ್ಕೆ ಸಮನಾಗಿ ಆ ಹಂತದಲ್ಲಿ ಹೆಲ್ತ್ ಕೇರ್ ಹೆಚ್ಚಾಗಿಲ್ಲ ಎನ್ನುವುದೂ ನಿಜ. ಅಂದರೆ ವೃದ್ಧಾಪ್ಯದಲ್ಲಿ ವಿಶೇಷವಾದ ರೋಗವನ್ನು ನಿಭಾಯಿಸುವ ಹೊಣೆ ಕೂಡ ಹೆಚ್ಚುತ್ತದೆ ಎಂದಾಯ್ತು. ಆರೋಗ್ಯ ವಿಮೆ ಮಾಡಿಸಲು ಭಾರತದಲ್ಲೂ ನೂರಾರು ಕಂಪನಿಗಳು ಇದ್ದರೂ ಹಿರಿಯ ನಾಗರಿಕರಿಗೆಂದೇ ಸ್ಕೀಂಗಳು ಇದ್ದರೂ ಅವೇನೂ ಅಷ್ಟೇನೂ ಆಶಾದಾಯಕವಗಿಲ್ಲ. ಏಕೆಂದರೆ ವಿಮಾ ಸಂಸ್ಥೆಗಳು ಹಿರಿಯ ನಾಗರಿಕರಿಗೆ ಪ್ರೀಮಿಯಂ ಖಚಿತಪಡಿಸುವಾಗ, ಒಂದುವೇಳೆ ಹೃದ್ರೋಗ, ಮಧುಮೇಹ, ಮೂತ್ರಪಿಂಡದ ರೋಗವಿದ್ದರೆ, ವಿಮೆ ಜಾರಿಗೆ ಬಂದ ಮೂರು ವರ್ಷಗಳ ನಂತರವಷ್ಟೇ ವಿಮೆಯ ಸೌಕರ್ಯ ಲಭಿಸುವುದು ಎಂಬ `ಹಿಡನ್ ಅಜೆಂಡಾ’ವನ್ನು ಕೂಡ ಇಟ್ಟಿರುತ್ತಾರೆ.

ಭಾರತ ಸರ್ಕಾರದ ಸಾಮಾಜಿಕ ನ್ಯಾಯದ ಸಚಿವಾಲಯ ವೃದ್ಧರಿಗಾಗಿ ಒಂದು ನೀತಿಯನ್ನೇ ಪ್ರಕಟಿಸಿದ್ದರಿಂದಲೇ ಈಗ ಬಸ್ಸು, ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯತಿ ದರದಲ್ಲಿ ಟಿಕೆಟ್‍ಗಳು ಲಭ್ಯವಿವೆ. ಬ್ಯಾಂಕ್ ಠೇವಣಿಗಳ ಮೇಲೆ ಬಡ್ಡಿ ಹೆಚ್ಚಳ ಪಡೆಯುವ ಅವಕಾಶವಿದೆ. ಹಾಗೆಯೇ ವೃದ್ಧಾಶ್ರಮ ನಡೆಸುವುದಕ್ಕೂ ಸರ್ಕಾರ ಉತ್ತೇಜಿಸುತ್ತದೆ. ಇವೆಲ್ಲಕ್ಕಿಂತಲೂ ಬಾಳಸಂಜೆಯಲ್ಲಿರುವ ಹಿರಿಯರಿಗೆ ಬೇಕಾದ್ದು ಮನೆಯವರ ಆರೈಕೆ ಮತ್ತು ಪ್ರೀತಿ. ಮರುಕವೂ ಅಲ್ಲ, ಕರುಣೆಯೂ ಅಲ್ಲ. ಪ್ರಸಿದ್ದ ಮನೋವಿಜ್ಞಾನಿ ಡಾ. ಸಿ.ಆರ್. ಚಂದ್ರಶೇಖರ್ `ವೃದ್ಧರು ಮನಸ್ಸು ಹೀಗೇಕೆ?’ ಎನ್ನುವ ಪುಟ್ಟ ಪುಸ್ತಕದಲ್ಲಿ ವೃದ್ಧಾಪ್ಯದಲ್ಲಿ ಬರುವ ಸಂಕಟಗಳನ್ನು, ಪರಿಹಾರಗಳನ್ನೂ ವೈಜ್ಞಾನಿಕ ನೆಲೆಯಲ್ಲಿ ವಿವರಿಸಿದ್ದಾರೆ. ಅವರ ಒಂದು ಮಾತು `ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲಾರದ, ಇತರರ ಮೇಲೆ ಅವಲಂಬಿತರಾದ ವಯೋವೃದ್ಧರನ್ನು ಪ್ರೀತಿಯಿಂದ ಸಣ್ಣ ಮಕ್ಕಳನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. ಇದೊಂದೇ ಸಾಕು ಪರಿಪಾಲನೆಗೆ. ಜ್ಞಾನೋದಯಕ್ಕಾಗಿ ಯಾವ ಹೈಟೆಕ್ ಗುರುಗಳ ಬಳಿಯೂ ಹೋಗಬೇಕಾಗಿಲ್ಲ.

Leave a Reply