ಭಾರತ ಬಂದ್- ಆಕ್ರೋಶ ದಿವಸ ಎಂದು ಇಬ್ಭಾಗವಾದ ಪ್ರತಿಪಕ್ಷಗಳ ಒಗ್ಗಟ್ಟು, ಕೇರಳ ಹೊರತುಪಡಿಸಿದ್ರೆ ದೇಶದಾದ್ಯಂತ ರಾಜಕೀಯ ಪಕ್ಷಗಳ ಪ್ರತಿಭಟನೆಗೆ ಆಕ್ರೋಶ ಸೀಮಿತ

Former Minister and President, KPCC, Dinesh Gundu Rao with others during Protest rally against Demonetization from Town Hall to SBM circle in Bengaluru on Monday.

ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಆಕ್ರೋಶ ದಿವಸದ ಪ್ರತಿಭಟನಾ ಮೆರವಣಿಗೆ…

ಡಿಜಿಟಲ್ ಕನ್ನಡ ಟೀಮ್:

ನೋಟು ರದ್ದತಿಯ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಒಂದಾಗಿ ಪ್ರತಿಭಟನೆಗೆ ಮುಂದಾಗಿದ್ದ ವಿರೋಧ ಪಕ್ಷಗಳ ಒಗ್ಗಟ್ಟು ಇಂದು ಭಾರತ ಬಂದ್ ಹಾಗೂ ಆಕ್ರೋಶ ದಿವಸ್ ಆಚರಿಸುವ ಮೂಲಕ ಇಬ್ಬಾಗವಾಗಿರೋದು ಸಾಬೀತಾಗಿದೆ. ಸೋಮವಾರ ಕರೆಯಲಾದ ಭಾರತ ಬಂದ್ ಹಾಗೂ ಆಕ್ರೋಶ ದಿವಸ ಕೇವಲ ರಾಜಕೀಯ ಪಕ್ಷಗಳ ಪ್ರತಿಭಟನೆಗೆ ಮಾತ್ರ ಸೀಮಿತವಾಯಿತೇ ಹೊರತು ಜನರ ದಿನ ನಿತ್ಯದ ಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಬಂದ್ ಘೋಷಣೆಯಿಂದ ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್ ಗಳಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ಇನ್ನು ಕೊಲ್ಕತಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದರೂ ಅಂಗಡಿ ಮುಂಗಟ್ಟುಗಳು ಮುಚ್ಚದೇ ಯಾವುದೇ ರೀತಿಯಲ್ಲೂ ಬಿಸಿ ತಟ್ಟಿಲ್ಲ. ಈ ಎಲ್ಲಾ ನಗರಗಳಲ್ಲೂ ಶಾಲಾ ಕಾಲೇಜು, ಅಂಗಡಿ ಮುಂಗಟ್ಟು, ಸಂಚಾರ ವ್ಯವಸ್ಥೆ, ಬ್ಯಾಂಕು, ಅಂಚೆ ಕಚೇರಿ, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಹೀಗೆ ದೇಶದಾದ್ಯಂತ ಭಾರತ್ ಬಂದ್ ಗೆ ಜನಸಾಮಾನ್ಯರಿಂದ ಯಾವುದೇ ಬೆಂಬಲ ಸಿಗದ ಸಂದರ್ಭದಲ್ಲಿ ಕೇರಳ ರಾಜ್ಯ ಮಾತ್ರ ಈ ಬಂದ್ ನಿಂದಾಗಿ ಸ್ತಬ್ಧವಾಗಿತ್ತು.

ಆರಂಭದಲ್ಲಿ ಎಲ್ಲಾ ವಿರೋಧ ಪಕ್ಷಗಳು ಭಾರತ ಬಂದ್ ಗೆ ಮುಂದಾಗಿದ್ದವು. ಆದರೆ ನಂತರ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಬಿಎಸ್ಪಿ, ಆಮ್ ಆದ್ಮಿ, ಟಿಎಂಸಿ ಪಕ್ಷಗಳು ನಾವು ಭಾರತ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿ ಕೇವಲ ಆಕ್ರೋಶ ದಿವಸ ಆಚರಿಸಿ ಕೇಂದ್ರದ ನಿರ್ಧಾರವನ್ನು ವಿರೋಧಿಸುತ್ತೇವೆ ಎಂದವು. ಆದರೆ ಎಡ ಪಕ್ಷಗಳು ಮಾತ್ರ ಭಾರತ ಬಂದಿಗೆ ಕರೆ ಕೊಟ್ಟವು.

ಕೇರಳದಲ್ಲಿ ಎಡ ಪಕ್ಷ ಸಿಪಿಐಎಂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಬಂದಿಗೆ ರಾಜ್ಯ ಸರ್ಕಾರದ ಬೆಂಬಲವಿದ್ದ ಪರಿಣಾಮ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿದ್ದು, ಸಹಜ ಜನಜೀವನಕ್ಕೆ ಅಡ್ಡಿಯಾಯಿತು. ಅತ್ತ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ರಸ್ತೆಗಿಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಪ್ರತಿಭಟನಾ ಮೆರವಣಿಗೆ ಜೋರಾಗಿದ್ದರೂ ಇತರೆ ವ್ಯಾಪಾರ ವ್ಯವಹಾರಗಳಿಗೆ ಯಾವುದೇ ಧಕ್ಕೆಯಾಗಲಿಲ್ಲ.

ಇನ್ನು ಕರ್ನಾಟಕದ ವಿಚಾರಕ್ಕೆ ಬರೋದಾದ್ರೆ, ಬಂದಿನ ಯಾವುದೇ ರೀತಿಯ ಬಿಸಿ ರಾಜ್ಯವನ್ನು ತಟ್ಟಿಲ್ಲ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಚಳಿಗಾಲದ ಕಲಾಪ ಇಂದು ಇರಲಿಲ್ಲ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳನ್ನು ಮುಂದೂಡಿದ್ದು ಬಿಟ್ಟರೆ ಇನ್ಯಾವುದೇ ಬದಲಾವಣೆ ರಾಜ್ಯದಲ್ಲಿ ಕಾಣಲಿಲ್ಲ. ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಕಾ ಖರ್ಗೆ ನೇತೃತ್ವದಲ್ಲಿ ಐಟಿ ಕ್ಷೇತ್ರ ಕೇಂದ್ರಿತ ಬಿಸಿನೆಸ್ ಸಮಾವೇಶ ಸಾಂಗೋಪಸಾಂಗವಾಗಿ ನೆರವೇರಿತು.

ಇನ್ನು ತಮಿಳುನಾಡಿನಲ್ಲಿ ಡಿಎಂಕೆ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾ ಪ್ರತಿಭಟನೆ ನಡೆಸಿದರೆ, ಪಾಟ್ನಾದಲ್ಲಿ ರೈಲು ತಡೆಯಂತಹ ಪ್ರಯತ್ನಗಳಾದವು. ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರಧಾನಿ ಪ್ರತಿಕೃತಿ ದಹನ ಮಾಡಿದರು. ಜಮ್ಮುವಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಕ್ರೋಶ ದಿವಸದ ಅಂಗವಾಗಿ ಪ್ರತಿಭಟನೆ ನಡೆಸಿತು. ಒಟ್ಟಿನಲ್ಲಿ ಈ ಆಕ್ರೋಶ ದಿವಸ ಹಾಗೂ ಬಂದ್ ಕರೆಗಳು ರಾಜಕೀಯ ಪಕ್ಷಗಳ ಮಟ್ಟಿಗೆ ಮಾತ್ರ ಸೀಮಿತವಾಯಿತು. ಇಲ್ಲಿ ವಿರೋಧ ಪಕ್ಷಗಳು ಭಿನ್ನ ಹಾದಿ ಹಿಡಿದಿದ್ದು, ಸರ್ಕಾರಕ್ಕೆ ಒಂದು ರೀತಿ ತಲೆ ಬಿಸಿ ಕಡಿಮೆ ಮಾಡಿತು.

ಈ ಪ್ರತಿಭಟನೆಗಳ ಬಗ್ಗೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು. ‘ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಕಪ್ಪು ಹಣದ ವಿರುದ್ಧ ತೋರಬೇಕು. ಆದರೆ ದುರಾದೃಷ್ಟಕರ ರೀತಿಯಲ್ಲಿ ವಿರೋಧ ಪಕ್ಷಗಳು ಕಪ್ಪು ಹಣದ ವಿರುದ್ಧ ಹೋರಾಡುತ್ತಿರುವ ನಮ್ಮ ಮೇಲೆ ಆಕ್ರೋಶ ತೋರುತ್ತಿವೆ’ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಟೀಕಿಸಿದರು.

ಇನ್ನು ಬಿಹಾರದಲ್ಲಿ ಬಂದ್ ಬಿಸಿ ಯಾವುದೇ ರೀತಿಯಲ್ಲೂ ಪರಿಣಾಮ ಬೀರಲಿಲ್ಲ. ನೋಟು ರದ್ದತಿ ವಿಚಾರವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಕೇಂದ್ರ ಸರ್ಕಾರದ ಪರವಾಗಿ ನಿಂತಿರುವ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಯಾವುದೇ ಮಹತ್ವದ ರೀತಿಯಲ್ಲಿ ವಿರೋಧ ವ್ಯಕ್ತವಾಗಲಿಲ್ಲ. ನಿತೀಶ್ ಕುಮಾರ್ ಅವರ ಬೆಂಬಲವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭಾನುವಾರದ ಬೆಂಗಳೂರು ಸಮಾವೇಶದಲ್ಲೇ ಅಭಿನಂದಿಸಿದ್ದರು.

ಅತ್ತ ಸಂಸತ್ತಿನ ಉಭಯ ಸದನಗಳ ಕಲಾಪಗಳು ಮಾತ್ರ ಗದ್ದಲದಲ್ಲಿ ಮುಂದೂಡಲ್ಪಟ್ಟವು. ಪ್ರಧಾನಿ ಉಪಸ್ಥಿತಿ ಮತ್ತು ಉತ್ತರದಾಯಿತ್ವ ಇಲ್ಲದೇ ಚರ್ಚೆ ಮಾಡುವುದಿಲ್ಲ ಎಂಬುದು ಪ್ರತಿಪಕ್ಷಗಳ ಪಟ್ಟು. ಚರ್ಚೆಯಾಗಲಿ, ನಂತರ ಪ್ರಧಾನಿ ಸದನಕ್ಕೆ ಬಂದು ಉತ್ತರಿಸುತ್ತಾರೆ ಎಂಬುದು ಬಿಜೆಪಿ ನಿಲುವು. ‘ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಆಗಿರದಿದ್ದ ಸಂದರ್ಭದಲ್ಲಿ ಯಾವುದೇ ಪ್ರಜೆಗೆ ಆತನ ಹಣವನ್ನು ತೆಗೆದುಕೊಳ್ಳುವುದಕ್ಕೆ ನಿರ್ಬಂಧಿಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ’ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನ ಆನಂದ ಶರ್ಮ ಕಿಡಿಕಾರಿದರು.

Leave a Reply